Saturday, April 11, 2020

ನೆನಪು, ಕನಸು ಮತ್ತು ನಾನು

ಇನ್ನೇನು ನಗಬೇಕು , ಅಷ್ಟರಲ್ಲಿ ಯಾರೋ  ಬಾಗಿಲು ತಟ್ಟಿದ ಸದ್ದು . ಹೊತ್ತಲ್ಲದ ಹೊತ್ತಿನಲ್ಲಿ ಯಾರು ಬಂದಿರಬಹುದು ಎಂಬ ಯೋಚನೆ ಸುಳಿದು ಹೋಯಿತು. ಬಹುಶಃ ನೆನಪು ಬಂದಿರಬೇಕು . ಹಾಗೆಂದುಕೊಂಡು ನಿಟ್ಟುಸಿರು ಬಿಟ್ಟೆ.  ಈ ನೆನಪು ಮೊದಲಿನಿಂದಲೂ  ಹೀಗೆಯೇ , ಕಾಲಿಂಗ್ ಬೆಲ್ ಒತ್ತುವ ಸೌಜನ್ಯ , ಸಂಸ್ಕಾರ  ಚೂರೂ ಇಲ್ಲ. ಹೊತ್ತಲ್ಲದ ಹೊತ್ತಿನಲ್ಲಿ ಬಂದು ಬಾಗಿಲು ಬಡಿಯುತ್ತ ನಿಂತಿರುತ್ತೆ .

ಬಾಗಿಲು ತೆರೆದೆ. ನನ್ನ ಎಣಿಕೆ ಸುಳ್ಳಾಗಲಿಲ್ಲ. ಬಂದದ್ದು ನೆನಪೇ . ಹೀಗೆ ನೆನಪು ಹೇಳದೆ ಕೇಳದೆ ಪ್ರತಿಬಾರಿ ಬಂದಾಗಲೆಲ್ಲ , ನಾನು ಕೊಂಚವೂ ಬೇಸರಿಸದೆ ಬಾಗಿಲು ತೆರೆಯುತ್ತೇನೆ. ಯಾಕೆಂದರೆ ನೆನಪು ತುಂಬಾ ಭಾವುಕ. ನನ್ನಿಂದ ಒಂದಿಷ್ಟು ಅನುಕಂಪ, ಸಾಂತ್ವನವನ್ನ ನಿರೀಕ್ಷಿಸಿ ದೈನೇಸಿಯಂತೆ ಬಾಗಿಲಲ್ಲಿ ನಿಂತಿರುತ್ತೆ.

ಹಾಗೆ ಬಂದ ನೆನಪಿನ ಕಷ್ಟ ಸುಖವನ್ನ ವಿಚಾರಿಸಿ, ಸಂತೈಸಿ, ಕಣ್ಣೊರೆಸಿ ಕಳುಹಿಸುವುದು ವಾಡಿಕೆ . ನೆನಪು ಅಷ್ಟು ಸುಲಭಕ್ಕೆ ಹೋಗುವುದಿಲ್ಲ.  ನೆನಪಿಗೆ ಕೈ ಬೇಸಿ ವಿದಾಯ ಹೇಳಬೇಕು ಎನ್ನುವಷ್ಟರಲ್ಲಿ , ನೆನಪು ಕೈ ಹಿಡಿದು ಜೊತೆಗೆ ಬಾ ಎನ್ನುತ್ತೆ . ಕೊನೆಗೆ ನೆನಪನ್ನ ಪರಿ ಪರಿಯಾಗಿ ಬೇಡಿಕೊಂಡು , ನೀನೀಗ ಹೋಗು ಎಂದು ನೆನಪಿಗೆ ಸಮಾಧಾನ ಹೇಳಿ , ಬೀಳ್ಕೊಡುವಷ್ಟರಲ್ಲಿ  ನಾನು ಪ್ರತಿ ಬಾರಿ ಹೈರಾಣಾಗಿ ಹೋಗಿರುತ್ತೇನೆ.

ಈ ಬಾರಿ ಕೂಡ, ಎಂದಿನಂತೆ ನೆನಪನ್ನ ಕಳುಹಿಸಿ , ಬಾಗಿಲನ್ನ ಭದ್ರವಾಗಿ ಹಾಕಿದ್ದೇನೆ ಎನ್ನುವುದನ್ನ ಖಾತ್ರಿ ಮಾಡಿಕೊಂಡು ಒಳಗೆ ಬಂದೆ. ಆಗಲೇ ಪೂರ್ತಿ ಬಸವಳಿದು ಹೋಗಿದ್ದ ನಾನು , ನಗುವುದು ಹಾಗಿರಲಿ, ನೆಮ್ಮದಿಯಾಗಿ ಮಲಗಿದರೆ ಸಾಕೆಂದು ಹಾಸಿಗೆಯನ್ನ ತಲುಪಿಕೊಂಡೆ. ಕಣ್ಣು ಮುಚ್ಚಿದ್ದೆ ತಡ, ಯಾವುದೋ ಮಾಯದಲ್ಲಿ ಬಂದ ಕನಸು , 'ನಾನು ಬಂದೆ ' ಎಂದು ಹೇಳಿದ್ದು ಅಸ್ಪಷ್ಟವಾಗಿ ನಿದ್ದೆಗಣ್ಣಿನ ಕಿವಿಗೆ ಕೇಳಿಸಿದಂತಾಯಿತು.

ಕನಸು ನೆನಪಿನಂತೆ ಭಾವುಕನಲ್ಲ . ಕೊಂಚ ಹುಂಬ. ಅಂಗೈಯಲ್ಲೇ ಆಕಾಶ ತೋರಿಸ್ತೀನಿ ಬಾ ಎನ್ನುತ್ತೆ. ನಕ್ಷತ್ರ ಲೆಕ್ಕ ಹಾಕು ಎನ್ನುತ್ತೆ. ನೆನಪಿನಿಂದ ಪಾರಾಗಿ ಸುಖವಾಗಿ ಮಲಗಬೇಕಿದ್ದ ನನ್ನ ತಲೆಯಲ್ಲಿ ಏನೇನೋ ಆಸೆ, ಆಮಿಷಗಳನ್ನೆಲ್ಲ ತುಂಬಿ , ನೆನಪಿನ ಸಹವಾಸ ಸಾಕು , ನನ್ನ ಜೊತೆ ಬಾ , ನಿನ್ನ ಪಾಲಿನ ನೆರಳು ನಾನೆ ಎನ್ನುತ್ತೆ .

ಎತ್ತ ಹೋಗುವುದು ? ಈ ಕನಸು ಮತ್ತೆ ನೆನಪು ಇಬ್ಬರೂ ನನ್ನ ನಿದ್ರೆಯನ್ನ , ನೆಮ್ಮದಿಯನ್ನ ಕಿತ್ತುಕೊಳ್ಳುತ್ತಾರೆ.  ಸುಖ ಸಂತೋಷ ಅರಸಿ ಹೊರಟ ನನಗೆ, ಇವರಿಬ್ಬರೂ ಅನೇಕ ಬಾರಿ  ದಾರಿ ತಪ್ಪಿಸಿದ್ದಾರೆ. ಇವರಿಬ್ಬರನ್ನೂ ತೀರಾ ಹತ್ತಿರಕ್ಕೆ ಬಿಟ್ಟುಕೊಂಡರೆ ಅಪಾಯ. ದೂರ ಮಾಡುವಂತೆಯೂ ಇಲ್ಲ. ಉಭಯಸಂಕಟ.

ಕೊನೆಗೆ ನಾಳೆಯೇ ಹೋಗಿ , ಎರಡು ಮೂಗುದಾರ ತರುವುದೆಂದು ನಿರ್ಧಾರ ಮಾಡಿಕೊಂಡೆ.  ನೆನಪು ಮತ್ತು ಕನಸು, ಇಬ್ಬರನ್ನೂ ಕರೆಸಿ , ಮೂಗುದಾರ ಹಾಕಬೇಕು , ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕಾಡಬೇಡಿ ಎಂಬ ಎಚ್ಚರಿಕೆ ಕೊಟ್ಟು, ಸಮಯ ಪ್ರಜ್ಞೆಯ ಪಾಠ ಹೇಳಬೇಕು , ನನ್ನಿಂದ ನೀವು , ನಿಮ್ಮಿಂದ ನಾನಲ್ಲ ಅನ್ನುವುದನ್ನ ಮನವರಿಕೆ ಮಾಡಿಕೊಡಬೇಕು ಎಂದೆಲ್ಲ ನಿರ್ಧರಿಸಿಕೊಂಡೆ.
**
ದುರಂತವೇನೆಂದರೆ ,ಅವತ್ತಿನಿಂದ ಇವತ್ತಿನ ವರೆಗು ತಂದಿಟ್ಟುಕೊಂಡ ಮೂಗು ದಾರ ನನ್ನ ಕೈಯಲ್ಲೆ ಉಳಿದು ಹೋಗಿದೆ . ಕನಸು ಮತ್ತೆ ನೆನಪುಗಳ ಮೊಂಡುತನದ ಮುಂದೆ  ನಾನು ಪ್ರತಿ ದಿನ , ಪ್ರತಿ ಕ್ಷಣ ಸೋಲುತ್ತಲೇ ಇದ್ದೇನೆ . ಅಸಹಾಯಕನಾಗಿದ್ದೇನೆ . 

Tuesday, January 19, 2016

ಮುಂಗಾರ ಸೂರಡಿ

ಮತ್ತೆ ಬಂದಿದೆ ಮುಂಗಾರುಮಳೆ
ಈ ಸುರಿವ ಸೊಬಗ ಸೂರಡಿ
ಮನಸಾರೆ ನೀರಾಟ ಆಡಬೇಕಿದೆ
ಹಾಳೆ ದೋಣಿಮಾಡಿ
ಹರಿವ ನೀರಲಿ ತೇಲಿಬಿಡಬೇಕಿದೆ
ಸಾಗೋ ದೋಣಿ ಹಿಂದೆ ಓಡಿ ಓಡಿ
ಆಡೋ ಕಾಲವ ಹಿಂದೆ ಹಾಕಿ
ಕಳೆದ ನಿನ್ನೆಯ ಕಾಣಬೇಕಿದೆ

ನೀವೂ ಬರುವಿರೇನು ಎನ್ನೊಡನೆ?

ದೊಡ್ಡವರು ನಾವು ಜಗ ನಕ್ಕೀತು ಎಂಬ ಹಿಂಜರಿಕೆ ಯಾಕೆ?
ಈ ಹಾಳು ಹಿರಿತನ,
ಹಮ್ಮು ಬಿಮ್ಮು ಗತ್ತಿನ ನಡುವೆ
ನಮ್ಮ ನಡುವೆ ಸಹಜ ಸುಂದರ ಖುಷಿ
ಹಾಳಾಗಬೇಕೆ?
ಹಿರತನ ಬಂದರೆ ಬರಲಿ ಸಹಜವಾಗಿ
ಈ ಸುರಿವ ಮಳೆಯಂತೆ.
ಸುಮ್ಮನೆ ಮುಖವಾಡ ಯಾಕೆ?

ಇನ್ನೂ ತಡವೇಕೆ ಬಂದುಬಿಡಿ,
ಮಳೆ ನಿಲ್ಲುತಿದೆ...

Wednesday, September 2, 2015

ಬಣ್ಣಗೆಟ್ಟ ಕಾಮನಬಿಲ್ಲು

ಸುಮ್ಮನೇತಕೆ ನಗುವೆಂಬ ಪದರಪೋಷಾಕು?
ಹೊಳಪಿರದ ಕಣ್ಣ ಕತ್ತಲಲಿ ಕಾಣುತಿದೆ
ಒಳಮನೆಯಲಿ ಆರಿಹೋದ ದೀಪದ ಕೊನೆಯ ಉಸಿರು
.
ನಾನೀಗ ಬಣ್ಣಗೆಟ್ಟ ಕಾಮನಬಿಲ್ಲು
ಹಿತ್ತಿಲ ಬಾಗಿಲು ಮೆಲ್ಲಗೆ ತೆರೆದದ್ದು ನಾನು ಬಲ್ಲೆ
ಕಾಯುತಿದೆ ನಿನ್ನ ದಾರಿಯ ಅಲ್ಲಿ
ಹೊಸತೊಂದು ಬಿಸಿಲುಕೋಲು .
ಇನ್ನೂ ಏತಕೆ ಮುಂಬಾಗಿಲೊಳು ಕುಳಿತು
ಎನ್ನ ದಾರಿ ಕಾಯುವ ಅರ್ಥವಿಲ್ಲದ ಸೋಗು?

ಕಿತ್ತಿಟ್ಟ ಹೆಜ್ಜೆಯಡಿ ಹೊಸಕಿ ಹೋಗಲಿ
ಕಳೆದ ನಿನ್ನೆಗಳ ಜೊತೆಗೆ ನಾನೆಂಬ ಕ್ಷುದ್ರ ಕಸವು.
ಹೋಗಿಬಿಡು ಬೆನ್ನು ಹಾಕಿ
ತಿರುಗಿ ನೋಡದಿರು ದಯವಿಟ್ಟು
ಪ್ರೀತಿಯಿಲ್ಲದ ಮೇಲೆ
ಹೇಗಿರುವೆನೆಂಬ ಕೆಟ್ಟ ಕುತೂಹಲವೇಕೆ?
ಸತ್ತವನ ಎಬ್ಬಿಸಿ ಇರಿಯುವ
ಹಾಳು ಅನುಕಂಪವೇಕೆ?

ಅರಳಬೇಕಿದೆ ನಾಳೆಯ ಹೂವು ಭೂತದ ಗೋರಿಯ ಮೇಲೆ
ಮತ್ತೆ ಹುಟ್ಟಬೇಕಿದೆ ನಾನು
ನಿನ್ನ ನೆನಪುಗಳ ಶ್ರಾದ್ಧ ಮಾಡಿ
ಮತ್ತೆ ಹುಟ್ಟಬೇಕಿದೆ ನಾನು .

Saturday, November 22, 2014

ಅಮ್ಮ ಹೇಳದೆ ಹೇಳಿ ಹೋದ ಗೀತಾರಹಸ್ಯ ...

ನೀ ಜಗವ ಬಿಟ್ಟ ಘಳಿಗೆ
ನಾನು ಹೊಸ ಜಗತ್ತು ಕಂಡೆ
ಮಣ್ಣು ಸೇರುವ ಮುನ್ನ 
ತಾಕಿದ ನಿನ್ನ ತಣ್ಣನೆಯ ಕೈಯಲ್ಲಿ
ಲೋಕದ ತಣ್ಣನೆಯ ಭಾವಗಳ ಅನುಭವಕ್ಕೆ ತಂದುಕೊಂಡೆ
ನಾನು ತುಸು ಜಾಸ್ತಿಯೇ ಬುದ್ಧನಾಗಿಬಿಟ್ಟೆ
ನಂಟು , ನೆಂಟಸ್ತನ
ಎಲ್ಲದರ ನಕಲಿತನವನ್ನ ಅಸಲಿ ದೃಷ್ಟಿಯಲ್ಲಿ ಕಂಡೆ

ಒಳ್ಳೆಯ ಲೆಕ್ಕ ಕಲಿಸಿ ಹೋದೆ
ಎಲ್ಲವನ್ನೂ ಪ್ರೀತಿಸುವ ಎಲ್ಲವನ್ನೂ ನಿರಾಕರಿಸುವ
ಸಂತೆಯಲ್ಲೂ ಏಕಾಂತದ ಸುಖವ ದಕ್ಕಿಸಿಕೊಳ್ಳುವ
ಏಕಾಂತದಲ್ಲಿ ಸಂಭ್ರಮಿಸುವ
ದಿವ್ಯ ಧ್ಯಾನವ ಕಲಿಸಿ
ಒಂದೊಳ್ಳೆ ಸ್ವಾರ್ಥಿಯಾಗಿ ನನಗಾಗಿ ಬದುಕುವ
ಶಕ್ತಿಯನ್ನ ಕೊಟ್ಟು ಹೋದೆ

ಎಲ್ಲೇ ಇದ್ದರೂ ಬದುಕಬಲ್ಲೆ
ಯಾರ ಹಂಗಿಲ್ಲದೆ
ಯಾವ ಭಯವಿಲ್ಲದೆ
ನಿರೀಕ್ಷೆಯಿರದೆ
ನಿರಾಸೆಯಿರದೆ
ನೋವಿರದೆ
ಯಾರನ್ನೂ ದೂರದೆ
ನನ್ನನ್ನ ನಾನು ಕಳೆದುಕೊಳ್ಳದೆ .

ಏನೆಂದು ಹೇಳಲಿ
ಎಲ್ಲವನ್ನೂ ಕೊಟ್ಟು ಹೋದೆ
ದೇವರು ವರದೊಡನೆ ಶಾಪವನ್ನೂ ಸೇರಿಸಿ ಕೊಟ್ಟಂತೆ
ನಿನ್ನನ್ನು ನನ್ನಿಂದ ಕಿತ್ತುಕೊಂಡು
ಆದದ್ದೆಲ್ಲ ಒಳ್ಳೆಯದಕ್ಕೆ ಬಿಡು
ಬದುಕಿಗಿಂತ ದೊಡ್ಡದು ಯಾವುದಿದೆ ಹೇಳು
ಕತ್ತಲಲ್ಲೂ ಬೆಳಕು ಕಾಣಬೇಕು
ನೀ ಹೋದೆ
ನಾ ಗೆದ್ದೆ ಅಮ್ಮ

Friday, November 7, 2014

ಚುಟುಕುಗಳು ಒಂದಿಷ್ಟು :) :) :)...





ಬದಲಾಗುವುದೆಂದರೆ
ಗಿಡ ಹೋಗಿ ಮರ
ಹೊಳೆ ಹೋಗಿ ಕಡಲು
ಗೋಸುಂಬೆ ರೀತಿ
ಹಸಿರು ಹೋಗಿ ಹಳದಿಯಲ್ಲ ..
**********
ಕಳೆದಿರುಳು ಮಳೆ ಸುರಿದು ಹೋಯಿತು
ಮನದ ಸೂರು ಬಿಕ್ಕಳಿಸಿ
ತೊಟ್ಟಿಕ್ಕುತಿದೆ ಇನ್ನೂ ನಿನ್ನ ನೆನಪಾಗಿ .
ಮತ್ತೆ ಮೋಡಗಟ್ಟುತಿದೆ ಮೇಲೆ
ಬದುಕೋ ಆಸೆಯೇ ಆವಿಯಾಗಿ ...

*******
ಆತ ಗೆದ್ದ ರಾಜ್ಯದಿ
ನಾನೀಗ ಸೋತ ರಾಜ......
*********
ನೀ ಅಕಾಲ ಮಳೆಯಂತೆ .
ಬೇಕೆಂದಾಗ ಬಾರದವಳು .
ನೀನಾಗಿ ನೀನೇ ಬಂದ ಸಮಯದಿ
ಭರಿಸಲಾಗದವಳು.
**********
ಎಲ್ಲವೂ ತಣ್ಣಗಿರಲೆಂದುಕೊಂಡರೆ ಹೇಗೆ ಸಾಧ್ಯ?
ಆದಷ್ಟು ತಣ್ಣಗಿರುವುದು ಬದುಕ ಗುರಿ.
ಬಿಸಿಯೇ ಬದುಕ ಚಿಹ್ನೆ.
ಎಲ್ಲ ತಣ್ಣಗಾಗಿಹೋಯಿತೆಂದರೆ
ಅದು ಕೊನೆಯಲ್ಲಿ ಮಾತ್ರ...

Friday, May 9, 2014

ಸಭ್ಯ ಪೋಲಿ ಕವನ : ಭಗವಂತ ಮಿಲನದಲ್ಲೂ ದಕ್ಕಬಹುದು

ನಿಲ್ಲು
ಹೇಳಬೇಕಾದ ಮಾತೊಂದಿದೆ
ನಿನ್ನೆಡೆಗೆ ನನ್ನಲೊಂದು ದಿವ್ಯ ಆರಾಧನೆಯಿದೆ
ನಿನ್ನ ಚೆಲುವು ನನ್ನ ಶುದ್ಧ ಕುತೂಹಲ
ಅದುಮಿಕೊಳ್ಳಲಾಗದ ಆಕರ್ಷಣೆ ಸೇರಿ
ನಿನ್ನಲ್ಲೊಮ್ಮೆ ಇಂಗಿಕೊಳ್ಳುವಾಸೆ ಬಲವಾಗಿದೆ

  

'ಏನೆಂದು ಕೊಂಡಿರುವೆ ಎನ್ನ
ಅಷ್ಟು ಅಗ್ಗದವಳಲ್ಲ ನಾನು'



ನಿಜ
ನೀನು ಅಗ್ಗದವಳಲ್ಲ
ನನ್ನೆಲ್ಲ ಆರಾಧನೆಗೆ
ಬಚ್ಚಿಡಲಾಗದ ಹುಚ್ಚು ಮೋಹಕ್ಕೆ ಅರ್ಹಳು
ದೇವತೆ ನೀನು
ಶುಧ್ಧ ಅಪರಂಜಿ
ವಿಷವಿಲ್ಲ ನನ್ನಲ್ಲಿ
ಎಲ್ಲ ಸಹಜ ಸಹಜ


ಲೋಕಕ್ಕೆ ಹೇಗೋ ತಿಳಿದಿಲ್ಲ
ನನಗೆ ಮಾತ್ರ ನಿನ್ನಲ್ಲಿ ಕಾಣುವುದು
ಯಾವ ಕೊಂಕೂ ಇರದ ಬರಿಯ ನೀನು
ಸೃಷ್ಟಿಯ ಕುಸುರಿ ಕೆಲಸಕ್ಕೆ
ಅದ್ಭುತಕ್ಕೆ ಕಣ್ಣೆದುರೇ ಇರುವ
ಸಾಕ್ಷಿ ನೀನು
ಭಗವಂತ ಮಿಲನದಲ್ಲೂ ದಕ್ಕಬಹುದು
ಒಬ್ಬಬ್ಬರಿಗೂ ಒಂದೊಂದು ದಾರಿ
ಮೋಕ್ಷಕ್ಕೆ
ಮಿಲನವೂ ದಾರಿಯಾಗಬಹುದು
ಎಂಬ ನಂಬಿಕೆಯ
ಮುಕ್ತ ಪಂಥದವನು
ಅಚ್ಚರಿಯ ಪುಟ್ಟ ನಾನು



ಹುಡುಗಿ ಕಲ್ಲಾದಳು
ಕಣ್ಣೀರಾದಳು .

Tuesday, April 15, 2014

ಕಳೆದುಕೊ ಎಲ್ಲವನೂ.......

ಕಳೆದುಕೊ ಎಲ್ಲವನೂ
ಲೆಕ್ಕವಿಟ್ಟು ನಗಬೇಕು
ನಾಜೂಕಿನಿಂದ ತೂಕ ಹಾಕಿ ಮಾತು ಕಟ್ಟಿ ಕೊಡಬೇಕು
ಏನೋ ಹೇಳಲು ಹೋಗಿ ಹೇಳಲಾಗದೆ
ಉಗುಳು ನುಂಗಿ ಇನ್ನೇನೋ ತೊದಲಬೇಕು
ತ್ಯಾಗದ ಹೆಸರಲ್ಲಿ ನೀನು ಕೂಡ ಒಂದು
ಜೀವವಿರುವ ಪ್ರಾಣಿ ಎನ್ನುವುದ ಮರೆಯಬೇಕು
ಹೊರಗೆ ಬೀಗಬೇಕು
ಬಿಕ್ಕಳಿಸಬೇಕು ಆಗಾಗ ಮಾಡಿದ ತ್ಯಾಗಕ್ಕೆ
ನಿನ್ನನ್ನು ನೀನೆ ಕೊಂದುಕೊಂಡ ಆತ್ಮಹತ್ಯೆಯೆಂಬ
ಮಹಾ ಪಾಪಕ್ಕೆ
ಎಷ್ಟೆಲ್ಲಾ ಮಾಡಬೇಕು ಎಲ್ಲರನೂ ನಿನ್ನೆದೆಯ
ಅಂಗಳಕೆ ಕರೆ ತರಲು
ಅವರಿಗೆ ಅವರದ್ದೇ ಆದ ಅಂಗಳವಿದೆ
ನಿನ್ನ ಅಂಗಳವೇ ಬೇಕಿಲ್ಲ ಬೆಳದಿಂಗಳ ಕಾಣಲಿಕ್ಕೆ


ಬಯಲಾಗು
ಬೆತ್ತಲಾಗು
ಮೋಹವಿರಲಿ ,ಮಮತೆಯಿರಲಿ
ಪ್ರೆಮವಿರಲಿ ಕಾಮವಿರಲಿ
ಏನೇ ಇರಲಿ
ಎಲ್ಲವನೂ ಹರವಿಟ್ಟು ಕೂತುಬಿಡು ಶುದ್ಧವಾಗಿ
ಅಂಗಳಕೆ ರಂಗೋಲಿ ಹಾಕಿ
ಬಾಗಿಲಿಗೆ ಹಸಿರು ಕಟ್ಟಿ ಏನು ಉಪಯೋಗ
ಮನವೆಂಬ ಒಳಮನೆ ರಾಡಿಯಾಗದಿರಲಿ
ಇರುವವರು ಇದ್ದೇ ಇರುತ್ತಾರೆ ನಿನ್ನಾತ್ಮದಂತೆ
ಹೊರಟು ನಿಂತವರ ಶಪಿಸುವ ಸಣ್ಣತನ ಬೇಡ
ಶುಭ ಕೋರು
ನನ್ನದಲ್ಲದ್ದು ಒಂದು ಹೋಯಿತೆಂದು ದೇವರಿಗೊಂದು
ಧನ್ಯವಾದ ಹೇಳಿ ಸುಮ್ಮನಾಗು


ಬದುಕು ನಾಟಕ ರಂಗ
ಬಣ್ಣ ಎಷ್ಟು ಬೇಕೋ ಅಷ್ಟೇ ಹಚ್ಚು
ಸರಳವಿರಲಿ ಸಹಜವಿರಲಿ ಅಭಿನಯ
ಬೋರು ಬಂದ ನೋಡುಗರು ಎದ್ದು ಹೋದರು ಸರಿಯೇ
ಎಲ್ಲ ಜಳ್ಳು ಪೊಳ್ಳು ಸೋಸಿ ಹೋಗಲಿ
ಕೊನೆಗೆ ನೀನಷ್ಟೇ ಉಳಿಯಲಿ
ನಿನಗೆ ನೀನೆ ಗಟ್ಟಿ ಕಾಳು
ದೀಪವೂ ನಿನ್ನದೇ ಗಾಳಿಯು ನಿನ್ನದೇ
ಕವಿಯ ಮಾತು
ನಿನ್ನಂತೆ ನೀನು ಬದುಕು
ಆರದಿರಲಿ ನಿನ್ನತನವೆಂಬ ಬೆಳಕು  ;) :) :)

Monday, January 20, 2014

ನಮ್ಮೂರು ಎಂಡ್ ನಮ್ಮೋರು : ನಮ್ಮೂರು ಮತ್ತು ನಿಮ್ಮೂರು ;) :)



 ಒಣ ಕೆಮ್ಮು , ಕಫ ಕಟ್ಟಿ ಬಿಗಿದು ಕೂತ  ಗಂಟಲು
ಏನೋ ಹೇಳಬೇಕು
ಕಫದೊಡನೆ ಸಿಕ್ಕಿ ಕೆಲವಷ್ಟು ಗಂಟಲಲ್ಲೇ ಉಳಿದು
ಉಳಿದು ಹೊರಬಂದದ್ದು ಅಸ್ಪಷ್ಟ
ಏನೂ  ಕೇಳದ ಕಿವುಡ ಕಿವಿಯಲ್ಲಿ ಎಲ್ಲವನೂ ಕೇಳುತ್ತ
ತಲೆಯಾಡಿಸುತ್ತಾ ಕೂತ ಇನ್ನೊಂದು ಜೀರ್ಣ ಜೀವ
ಅವರಿಬ್ಬರು  ,
ಅವರವರೇ ಒಬ್ಬರಿಗೊಬ್ಬರು

ಸಾಲು ಸಾಲು ಮನೆ, ಎಲ್ಲ ಮನೆಯ ದೋಸೆಯೊಂದೇ ಅಲ್ಲ
ಎಲ್ಲವೂ ತೂತೇ
ಜೀವ ಕಳೆದು ಕೊಂಡ  ಹಬ್ಬಗಳು
ಬೇರು ಕಳೆದುಕೊಂಡ ತೋಟಗಳು
ಮಾತೆ ಇಲ್ಲದೆ ಸಮಾಧಿ ಕಟ್ಟೆಗಳಾಗಿ ಕೂತ ಹರಟೆ ಕಟ್ಟೆಗಳು
ಮಕ್ಕಳಿಲ್ಲದೆ ಬಂಜೆಯಾಗಿದೆ  ಊರ ಆಚೆಗಿನ
ದೊಡ್ಡ ಆಟದ ಬಯಲು
ಇನ್ನು ಏನೇ ಆದರೂ ಕದಲದ ಗುಡಿಯ ದೇವರು
ಗುಡಿಯುಂಟು ದೇವರುಂಟು
ನಾಳೆಗೆ ಪೂಜೆ ಖಾತ್ರಿಯಿಲ್ಲ
ಪೂಜಾರಿ ದೇವರ ಪಾದ ಸೇರುವ ಇಂಥಾ ಸರಹೊತ್ತಿನಲಿ 
ಅವನ ಮಗ ಪೇಟೆ ದೇವರ ಪಾದವನ್ನ ಗುತ್ತಿಗೆಗೆ ಪಡೆದು
ಗಂಟೆ ಅಲ್ಲಾಡಿಸುತ್ತಿದ್ದಾನೆ
ದೋಸೆ ಅನಾದಿ ಕಾಲದಿಂದಲೂ ತೂತೇ
ಈದೀಗ ಕಾವಲಿಯೂ ತೂತಾಗುವ ಕಾಲ
ಕೆಳಗೆ ಕಾಲವೆಂಬ ಬೆಂಕಿ
ತಣ್ಣಗೆ ಉರಿಯುತಿದೆ ಎಲ್ಲವನೂ ಗುಡಿಸಿ ಒರೆಸಿ ಉರಿಸಿ

ಎಳೆಯ ಚಿಗುರಿಲ್ಲ
ಸೊಂಪು ಹಸಿರಿಲ್ಲ
ಅರಳೋ ಮೊಗ್ಗಿಗೆ ಹಾರೋ ತವಕ
ಧಾವಂತ , ಅನಿವಾರ್ಯ ಕರ್ಮ
ಅಯ್ಯೋ !
ಊರಿಗೆ ಊರೇ ನೆರೆತ  ಕೂದಲಿನ ಹುಲ್ಲುಗಾವಲು
ಹತ್ತಿರದಲ್ಲೇ ಮಹಾ ನಿರ್ವಾಣ ಖಂಡಿತ
 ಎಷ್ಟು ಹತ್ತಿರ ಎನುವುದಷ್ಟೇ ಸದ್ಯದ ಕುತೂಹಲ
ಸಣ್ಣ ಸಂಕಟ ಅಸಹಾಯಕತೆ



ಮರಳುವ ಬಯಕೆಗೆ ದಾರಿಯಿಲ್ಲ
ಕವಲು ದಾರಿಯಲಿ ಬದುಕು  ಅಲ್ಲೇ ಸಾವು 
ಯಾರನೂ ದೂರುವಂತಿಲ್ಲ
ಏನೂ ಮಾಡುವಂತಿಲ್ಲ
ಹೀಗೆ ನಾನು  ಮಾಡಿದಂತೆ
ಕವನ ಗೀಚಬಹುದು ,ಕಥೆ ಕಟ್ಟಬಹುದು
ಬರೆಯುವ ದುಶ್ಚಟವಿರದಿದ್ದರೆ
ತಣ್ಣಗೆ ಹೊದ್ದು ಮಲಗಬಹುದು  :) :) :) :)

Wednesday, December 25, 2013

ಸಭ್ಯ ಪೋಲಿ ಕವನ ...

 ಕಾಮ ನೀಲಾಂಜನವಾಗಲಿ......



ಬಂದದ್ದು ಬಂದಾಗಿದೆ
ಮರಳಿ ಹೋಗಿ ಬಿಡಲೇ
ಹುಚ್ಚು ಮನಸ್ಸು ತಡೆದಷ್ಟೂ
ತೆರೆದುಕೊಂಡು ಸೆಳೆದು ಎಳೆ ತಂದಿದೆ
ಹೊಸ್ತಿಲು ದಾಟಿ ಬಂದಾಗಿದೆ
ಬಂದ ದಾರಿಗೆ ಸುಂಕವ ತೆತ್ತೇ  ಹೋಗುವೆ
ಬರುವ ಮುನ್ನ ಇದ್ದ ಬಿಸಿಯೆಲ್ಲ ಆರಿ ಹೋಗಿದೆ
ಒಳಗೆಲ್ಲೋ ತಣ್ಣನೆ ಚಳಿ ಇಣುಕಿ
ಸಣ್ಣಗೆ ಬೆವರುತಿದೆ ಸರ್ವಾಂಗ
ಹೀಯಾಳಿಸದಿರು ದಯವಿಟ್ಟು
ತುಂಬಾ ಒಳ್ಳೆಯವನು ನಾನು ಪರಿಚಯದ ಮಂದಿಗೆ
ಆದರೂ ಹೀಗೆಲ್ಲ ಆಗುತಿದೆ
ಸಕಲ ಬಣ್ಣವ ಇದೊಂದೇ ಒಂದು ಬಣ್ಣ
ನುಂಗಿ ತೇಗಿದರೆ ಮರುಕ್ಷಣವೇ
ತೀರಾ ತೀರಾ ಕೆಟ್ಟವನು ನಾನು ಮತ್ತೆ ಆ ನನ್ನದೇ
ಪರಿಚಯದ ಮಂದಿಗೆ .

ಹೋಗು . ಸುಂಕ ತೆರುವೆ ಎಂದ ಮೇಲೆ
ನಿನ್ನ ದಾರಿ ನಿನಗೆ
ನನಗೆ ಸುಂಕ ಒಂದೇ ಸಕಲ
ಬಂದ  ದಾರಿ  ಹೋದ ದಾರಿ ಏನಾದರೆ ನನಗೇನು
ತುಂಬಾ ಎಳಸು ನೀನು
ದಾರಿ ಖರ್ಚಿಗೆ
ಒಂದಿಷ್ಟು ಕಿವಿ ಮಾತು ಹೇಳುವೆ ಕೇಳಿ ಹೋಗು

ಸಾಧ್ಯವಾದರೆ ನಿನ್ನ ಸಲುವಾಗಿ ನೀನು ಬದಲಾಗು
ಕೊನೆ ಗೊಂದು ದಿನ ನಿನ್ನ ಆ ಮಂದಿ ಕೂಡ
ಹಿಡಿದು ಬಂದಾರು ನನ್ನ ಮನೆಯ ದಾರಿ  ನಿನ್ನಂತೆಯೇ
ಅವರೂ ಒಳ್ಳೆಯವರೇ ನಿನ್ನಂತೆಯೇ
ಹಾಲು ಸಿಕ್ಕ ಕ್ಷಣ ಮುದ್ದು ಬೆಕ್ಕು ಕೂಡ
ಕಳ್ಳ ಬೆಕ್ಕೇ
ಸಿಗದಿದ್ದರೆ ಮೊದಲಿನಂತೆ ಮುದ್ದು ಬೆಕ್ಕೇ

ಅದೆಷ್ಟು  ರಾತ್ರಿಯಲಿ
ನನ್ನ ಕನಸಿಗೆ ತಂದುಕೊಂಡು
ಏನೆಲ್ಲಾ ಆಗಿ ಹೋಗಿದೆ ಹೇಳು
ಅಕಾಲದಲ್ಲಿ ಮಳೆ ಬಂದು ಸುಮ್ಮನೆ ಸೋರಿ ಹೋದಂತೆ
ಕನಸಲ್ಲಿ ಇದ್ದವಳು ಈಗ ನಿನ್ನೆದುರು ಇರುವೆ
ಕನಸು ಕಂಡವನೂ  ನೀನೆ
ಈಗ ಎದುರು ಕೂತವನೂ ನೀನೆ
ಕಾಮವನು  ಗೆಲ್ಲು ಕಾಮದಿಂದಲೇ
ಮುಳ್ಳನ್ನು ಮುಳ್ಳಿಂದಲೇ ತೆಗೆದಂತೆ
ಬಚ್ಚಿಟ್ಟರೆ ಬಲಿಯುವುದು
ಮತ್ತೆ ಮತ್ತೆ ಸೋಲು ಗೆಲ್ಲಲಾಗದೆ
ಮತ್ತದೇ ರಾತ್ರಿ ಮತ್ತದೇ ಅಕಾಲದ ಮಳೆ
ರಾಡಿ ರಾಡಿ

ಬಾ
ಎಲ್ಲ ಪಾಠವ ಹೇಳಿ ಕೊಡುವೆ
ಎಲ್ಲವ ತೆರೆದಿಡುವೆ
ಕಂಡು ಬೆರಗಾಗು
ಮತ್ತೆ ಬಾರದಿರು ನನ್ನ ಮನೆಯ ದಾರಿ ಹಿಡಿದು
ಎಲ್ಲಾದರೂ ಶುದ್ಧ ಒಲವೊಂದು  ಸಿಗಬಹುದು

ಒಲವ ದಾರಿಗೆ
ಕಾಮ ನೀಲಾಂಜನವಾಗಲಿ .
ನಿಜಕ್ಕೂ ಒಳ್ಳೆಯವನೇ ನೀನು
ನಿನಗೆ ಶುಭವಾಗಲಿ.

Sunday, December 15, 2013

ರವಿ ಅಸ್ತಂಗತನಾದ


    ಧೋ ಎಂದು ಒಂದೇ ಸಮನೆ ಮಳೆ ಸುರಿಯುತ್ತಿತ್ತು . ಮಳೆಯ ಜೊತೆ ಮನೆಗೆ ಹತ್ತಿರದಲ್ಲೇ ಇದ್ದ ಕಡಲು ಭೋರ್ಗರೆಯುತ್ತಿದ್ದ ಸದ್ದು. ಮಳೆಯ ಇರಿಚಲು ಕಿಟಕಿಗೆ ಒಂದೇ ಸಮನೆ ಬಡಿಯುತ್ತ ಸದ್ದು ಮಾಡುತ್ತಿತ್ತು. ಸುಮ್ಮನೆ ಸ್ವಲ್ಪ ಹೊತ್ತು ಕತ್ತಲೆಗೆ ಕಣ್ಣಿಟ್ಟು ಮಳೆಗೆ .ಕಡಲ ಉನ್ಮಾದಕ್ಕೆ ಕಿವಿಯಾಗಿ ಕಿಟಕಿಎದುರು  ರವಿ ನಿಂತಿದ್ದ. ನಡು ಮಳೆಗಾಲದ ಮಳೆಯಾದ್ದರಿಂದ ಮಿಂಚು ಕೂಡ ಇರಲಿಲ್ಲ.ಶುದ್ಧ ಮಳೆ ಅದೃಶ್ಯವಾಗಿ ಹುಯ್ಯುತ್ತಿತ್ತು. ಯಾವುದೊ ಅಸಹನೆಯಲ್ಲಿ ಕಿಟಕಿಯಿಂದ ಕಣ್ಣು ಕಿತ್ತು ಕಿಟಕಿಯ ಪರದೆ ಮುಚ್ಚಿ , ನಿಧಾನವಾಗಿ ಕತ್ತಲೆಯಲ್ಲೇ ಹೇಗೋ ಅಭ್ಯಾಸ ಬಲದ ಮೇಲೆ ಬೆಡ್ ರೂಮ್ ತಲುಪಿಕೊಂಡು ಮಂಚ ಏರಿ ಮುಸುಕು ಎಳೆದುಕೊಂಡ. ತಲೆಯಲ್ಲಿ ನೂರಾರು ಯೋಚನೆಗಳು. ಬದುಕಿನ ನಿನ್ನೆಯ ಪುಟಗಳೆಲ್ಲ ಚಿತ್ರವಾಗಿ ಕಣ್ಣೆದುರು ಕಾಡುತ್ತಿತ್ತು.

ಮೊದಲು ನೆನಪಾದವಳು ಅವಳು ..

   ಅವಳೆಂದರೆ  ರಶ್ಮಿ .ರವಿಯ  ಮಡದಿ. ಆಕೆ  ರವಿಯನ್ನ ತೊರೆದು ಮೂವತ್ತು ವರುಷದ ಮೇಲಾಯಿತು. ಆಗಿನ್ನೂ ರವಿಗೆ ಇಪ್ಪತ್ತೈದು ವರ್ಷ.ಆಕೆ ಅವನಿಗಿಂತ ಮೂರೇ ವಾರದಷ್ಟು ಚಿಕ್ಕವಳು. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದವರು. ಹಾಗೆ ಒಂದು ಪ್ರೇಮಕಥನ ದುರಂತ ಅಂತ್ಯ ಕಾಣಲಿಕ್ಕೆ ಮೂಲ ಈತನೇ. ಹಾಗೆಂದ ಮಾತ್ರಕ್ಕೆ ಈತ ಖಳನಾಯಕನಲ್ಲ. ವಿಫಲ ನಾಯಕನಷ್ಟೇ. ಆತ ಭಾವನೆಯ ಪ್ರತಿನಿಧಿ. ಆಕೆ ಬದುಕಿನ ಪ್ರತಿನಿಧಿ. ಕೊನೆಗೆ ಬದುಕಿಗೆ ಭಾವನೆ ಬೇಡವಾಗಿ ಹೊಸ ಬದುಕು ಅರಸಿ ಹೊರಟೇ ಹೋಯಿತು.
   
   ತುಂಬಾ ಬುದ್ಧಿವಂತನಿದ್ದ ರವಿ. ಅದ್ಭುತ ಕವಿತೆಗಳನ್ನು ಬರೆಯುತ್ತಿದ್ದ. ಚೆಂದದ ಕಥೆಗಳನ್ನ ಗೀಚುತ್ತಿದ್ದ. ಚಿಂತನೆ ಆದರ್ಶಗಳ ಹಿಂದೆ ಬಿದ್ದು  ಎಲ್ಲರ ನಡುವೆ ಎದ್ದು ಕಾಣುತ್ತಿದ್ದ. ನೋಡಲಿಕ್ಕೆ ಸುಮಾರಾಗಿಯೇ ಇದ್ದರೂ ಅವನ ಮೇಧಾವಿತನದೆದುರು ಆತನಿಗೆ ಎದುರಾದವರೆಲ್ಲ ಶರಣಾಗಿಬಿಡುತ್ತಿದ್ದರು. ಈಕೆ ಕೂಡ ಹಾಗೆ ಶರಣಾಗಿ ಹೃದಯ ಒಪ್ಪಿಸಿದವಳು. ಎಂಜಿನಿಯರಿಂಗ್ ಮೊದಲ ವರ್ಷದಲ್ಲಿ ಪ್ರೇಮ ಹುಟ್ಟಿ ಕೊನೆಯ ವರ್ಷಕ್ಕೆ ಬರುವಷ್ಟರಲ್ಲಿ ನಿಶ್ಚಿತಾರ್ಥ ಕೂಡ ಆಗಿಹೋಗಿತ್ತು. ಎಂಜಿನಿಯರಿಂಗ್ ಮುಗಿಸಿ ಕಾಲೇಜ್ ಕ್ಯಾಂಪಸ್ಸಿನಿಂದ ಹೊರಬಂದವನು ನೇರವಾಗಿ ಪ್ರತಿಷ್ಠಿತ ಕಂಪನಿಯ ಅಂಗಳಕ್ಕೆ ಕಾಲಿಟ್ಟು  ಸಾಫ್ಟ್ ವೇರ್ ಎಂಜಿನಿಯರ್ ಆಗಿಹೋಗಿದ್ದ. ಹುಡುಗಿ ಹಿರಿಹಿರಿ ಹಿಗ್ಗಿದ್ದಳು. ಮೊದಲೇ ನಿಶ್ಚಯವಾಗಿದ್ದ ಮದುವೆ ತಡವಿಲ್ಲದೆ ಜರುಗಿಹೋಯಿತು
  
ಅದೇನಾಯಿತೋ ಗೊತ್ತಿಲ್ಲ. ಕಾಲ ತನ್ನ ದಾಳ ಉರುಳಿಸಿತ್ತು.ಬದುಕು ನಿಧಾನವಾಗಿ ಹಳಿ ತಪ್ಪುವ ಹಾದಿ ಹಿಡಿದಿತ್ತು. ಇದ್ದಕ್ಕಿದ್ದಂತೆ ಒಂದು ದಿನ ರವಿ ಕೆಲಸ ಬಿಡುವ ನಿರ್ಧಾರಕ್ಕೆ ಬಂದಿದ್ದ. ದಿನ ಮನೆಯಲ್ಲಿ ರಂಪಾ ರಾಮಾಯಣ. ಹುಡುಗಿ ಅತ್ತು ಕರೆದು ,ಗೋಗರೆದು ಬೇಡಿಕೊಂಡಳು. “ ನಿನ್ನನ್ನೇ ನಂಬಿ ಪ್ರೀತಿಸಿ ಮದುವೆಯಾಗಿ ಜೊತೆಗೆ ಬಂದಾಗಿದೆ. ಇದ್ಯಾಕೆ ಈಗ ಇದ್ದಕ್ಕಿದ್ದಂತೆ ಕೆಲಸ ಬಿಡುವ ನಿರ್ಧಾರ? ಕೆಲಸ ಬಿಟ್ಟರೆ ಸಂಸಾರ ನಡೆಯೋದು ಹೇಗೆ ? ಏನಾಗಿದೆ ನಿನಗೆ ರವಿ? ಕೆಲಸ ಬಿಟ್ಟು ನೀನು ಮಾಡೋದಾದ್ರೂ ಏನು? " .ರವಿ ತಣ್ಣಗೆ ಉತ್ತರಿಸಿದ್ದನಾನು ಸಾಹಿತಿ ಆಗ್ತೇನೆ.ಕಥೆ ,ಕವಿತೆ .ಸಾಹಿತ್ಯದಲ್ಲೇ ಬದುಕು ಕಟ್ಟಿ ಕೊಳ್ತೇನೆ. ನಾನು ನಾನಾಗಿ ಬದುಕಬೇಕು. ನನ್ನದಲ್ಲದ ಕೆಲಸ ಮಾಡಿ ನನಗೂ ಸಾಕಾಗಿ ಹೋಗಿದೆ.ಎಷ್ಟು ದಿನ ಹೀಗೆ ನನಗೆ ನಾನೇ ವಂಚನೆ ಮಾಡಿಕೊಂಡು ಬದುಕಲಿ ಹೇಳು." ರಶ್ಮಿ ಕೊನೆಯ ಬಾರಿ ಕಣ್ಣೊರೆಸಿಕೊಂಡುನಿನ್ನ ನಿರ್ಧಾರ ಬದಲಾಯಿಸಲು ಸಾಧ್ಯವಾ " ಎಂದು ಕೇಳಿದ್ದಳು. ರವಿ ಉತ್ತರವನ್ನೇ ಕೊಡಲಿಲ್ಲ.ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದಸಾವಿನ ಮನೆಯ ಮೌನ ಅಲ್ಲಿ ಮೈಚಾಚಿ ಮಲಗಿತ್ತು..ರವಿ ತಲೆಯೆತ್ತಿ ನೋಡುವಷ್ಟರಲ್ಲಿ ರಶ್ಮಿ ಅಲ್ಲಿರಲಿಲ್ಲ

ಮುಂದೇನಾಯಿತು ?

   ರವಿ ಹಟಕ್ಕೆ ಬಿದ್ದ. ಮನೆಯ ಜನ, ಬಂಧುಗಳು ,ಗೆಳೆಯರು ಎಲ್ಲರಿಂದಲೂ ದೂರವಾಗಿ  ತನ್ನದೇ ಜಗತ್ತಿನಲ್ಲಿ ಉಳಿದು ಬಿಟ್ಟ.ಇನ್ನೊಂದು ಹೆಣ್ಣಿನ ಸಾಂಗತ್ಯಕ್ಕೂ ಕೈಚಾಚಲಿಲ್ಲ. ಶುದ್ಧ ಹಠಯೋಗಿಯಂತೆ ಬದುಕಿಬಿಟ್ಟ .ಶ್ರದ್ಧೆಯಿಟ್ಟು ಅವಡುಗಚ್ಚಿಕೊಂಡು ಬರೆಯುತ್ತಾ ಹೋದ. ಬರವಣಿಗೆಯೇ ಉಸಿರು ಎಂಬಂತೆ ಅದರ ಜೊತೆ ಉಸಿರಾಡಿದ. ತಪಸ್ಸು ವ್ಯರ್ಥವಾಗಲಿಲ್ಲ. ಸರಸ್ವತಿ ಒಲಿದಳು. ನಿಧಾನವಾಗಿ ರವಿಯ ಪಾಲಿನ ಇರುಳು ಕಳೆದು ಹಗಲು ಹರವಿಕೊಂಡಿತು. ರವಿ ಈಗ ಕೇವಲ ರವಿಯಾಗಿರಲಿಲ್ಲ. ಪ್ರಸಿದ್ಧ ಸಾಹಿತಿ ರವಿಯಾಗಿದ್ದ. ದುಡ್ಡು .ಖ್ಯಾತಿ ಎಲ್ಲವೂ ಅಜೀರ್ಣವಾಗುವಷ್ಟಿತ್ತು. ರವಿ ಎಲ್ಲವನ್ನೂ ಗಳಿಸಿಕೊಂಡ ಅವನಂದು ಕೊಂಡಂತೆ. ಆದರೆನಾನು ನಾನಾಗಿ ಬದುಕಬೇಕಂಬ ' ಹಂಬಲ  ಜನಪ್ರಿಯ ಸಾಹಿತಿಯಾಗುವ ಹಾದಿಯಲ್ಲಿ ಕೈಗೂಡಲೇ ಇಲ್ಲ.
     
   ರವಿ ಸಾಹಿತಿಯಾಗಿ ತಾನು ತಾನಾಗಿ ಬದುಕಬೇಕೆಂದುಕೊಂಡು ಸಾಹಿತಿಯಾದದ್ದೇನೋ ನಿಜ. ಆದರೆ ಆತ ಅವನು 'ಅವನಾಗಿ ' ಬರೆಯಲೇ ಇಲ್ಲ. ಮೊದಲು ಅವನ ಪಾಡಿಗೆ ಅವನು ಅವನದೇ ಲಹರಿಯಲ್ಲಿ ಬರೆದ. ಓದುಗರನ್ನು ತಲುಪುವಲ್ಲಿ ಸೋತ. ಕೊನೆಗೆ ಓದುಗರನ್ನು ಮೆಚ್ಚಿಸಲು ,ಜನಪ್ರಿಯತೆಯ ಸಲುವಾಗಿ ಬರೆಯಲಾರಂಭಿಸಿದ. ಜನಪ್ರಿಯತೆ ದಕ್ಕಿ ಒಂದು ಹಂತಕ್ಕೆ ಬರುವಷ್ಟರಲ್ಲಿ ಪ್ರಶಸ್ತಿ, ಪುರಸ್ಕಾರ ಮುಖ್ಯವಾಯಿತು. ಪ್ರಶಸ್ತಿಗಾಗಿಯೇ ಬರೆದಸಾಕಷ್ಟು ಲಾಬಿ ನಡೆಸಿದ. ಯಾರ್ಯಾರನ್ನೋ ಓಲೈಸಲು ಮುಂದಾಗಿ ಅವರೆದುರು ಬಾಗಿ ನಿಂತ.. ಒಮ್ಮೆ ಎಡಪಂಥೀಯನಾದ.ಒಮ್ಮೆ ಬಲಪಂಥೀಯನಾದ. ಭಾವನೆ ಕಳೆದು ಹೋಗಿ ಬುದ್ಧಿಜೀವಿಯಾದ. ಇಷ್ಟೆಲ್ಲಾ ಕಸರತ್ತಿನ ನಡುವೆನಾನು ನಾನಾಗಿ ಬದುಕಬೇಕೆಂಬ ' ಅವನ ಒಳದನಿಗೆ ಕಿವಿಯಾಗಲು ಅವನಿಗೆ ಪುರುಸೊತ್ತೇ ಆಗಲಿಲ್ಲ. ಮುಪ್ಪು ನಿಧಾನವಾಗಿ ಅಡಿಯಿಡುತ್ತಿತ್ತು. ಕಿವಿ ಮಂದವಾಗಿ ಹೊರಗಿನ ಧ್ವನಿಗಳ ಮೇಲಾಟ ಕಡಿಮೆಯಾಗುವ ಹೊತ್ತಿಗೆ ಅವನಿಗೆ ಒಳದನಿಗೆ ಕಿವಿಯಾಗುವ ಅನಿವಾರ್ಯ ಎದುರಾಗಿತ್ತು. ಕಾಲ ಮಿಂಚಿ  ಹೋಗಿತ್ತು.
  
  ನಿದಿರೆ ಬಾರದೆ ಮಂಚದ ಮೇಲೆ ಮಲಗಿದ್ದ ರವಿ ಸಣ್ಣಗೆ ಕಣ್ಣೀರಾದ. ಅಷ್ಟು ವರ್ಷ ಕಣ್ಣ ಹರವಿನಲ್ಲಿ ಮಡುಗಟ್ಟಿದ್ದ ಹಠ ಕರಗಿ ಹೋಗಿತ್ತು .ಅದೆಷ್ಟು ವರುಷವಾಗಿತ್ತು ಕಣ್ಣು ಕಣ್ಣೀರಾಗಿ ! ರಶ್ಮಿ ನೆನಪಾಗಿ ಮತ್ತೆ ಬಂದಿದ್ದಳು. ‘ಆಗ ಕೆಲಸ ಬಿಡುವ ಬದಲು ಕೆಲಸದ ಜೊತೆಜೊತೆಗೆ ಸಾಹಿತ್ಯವನ್ನೂ ಕೈಹಿಡಿದು ನಡೆಸಿಕೊಂಡು ಬರಬಹುದಿತ್ತಲ್ಲ. ಅಥವಾ ಸ್ವಲ್ಪ ವರ್ಷ  ಕೈತುಂಬಾ ಸಂಪಾದಿಸಿ ಕೊನೆಗೆ ಸಾಹಿತ್ಯದೆಡೆ ಹೊರಳಬಹುದಿತ್ತಲ್ಲ. ತಾನು ತಾನಾಗುವ ಆವೇಶದಲ್ಲಿ ರಶ್ಮಿಯನ್ನು ಕಳೆದುಕೊಂಡ ರವಿಗೆ  ಕೊನೆಗೆ ಏನೂ ಆಗದೆ ತನ್ನನ್ನು ತಾನು ಕಳೆದುಕೊಂಡೆನೆಂದು ಅನ್ನಿಸಿಹೋಯಿತು.
        
   ರವಿ ನಿಧಾನವಾಗಿ ಎದ್ದು ಕತ್ತಲಲ್ಲೇ ಎಡವುತ್ತಾ ಮನೆಯ ಬಾಗಿಲು ತೆರೆದ. ಮಳೆ ನಿಂತಿತ್ತು. ಅಂಗಳವೆಲ್ಲ ರಾಡಿ ರಾಡಿ. ಹತ್ತಿರದಲ್ಲೇ ಕಡಲು ಮೊರೆಯುತ್ತಿತ್ತು. ಕಡಲ ಸದ್ದಿನ ಜಾಡು ಹಿಡಿದು ನಡೆಯುತ್ತಾ ಹೋದ. ಈಗ ರವಿಯ ಪಾದಗಳನ್ನ ಕಡಲಿನಲೆ ತೋಯಿಸುತ್ತಿತ್ತು. ರವಿ ನಿಲ್ಲಲಿಲ್ಲ. ಕಡಲಿನಾಳಕೆ ನಡೆಯುತ್ತಲೇ ಹೋದ. ಕಡಲ ತಡಿಯ ಮರಳ ಮೇಲೆ ಕಡಲಿಗೆ ಅಭಿಮುಖವಾಗಿ ಮೂಡಿದ್ದ ರವಿಯ ಹೆಜ್ಜೆಯ ಗುರುತಿನ  ಜೊತೆಗೆ ರವಿಯನ್ನೂ ಕೂಡ ಕಡಲು ತನ್ನೊಳು ಬರಸೆಳೆದುಕೊಂಡಿತು.

ರವಿ ಅಸ್ತಂಗತನಾದ ...