Sunday, May 1, 2011

ಬ್ಲಾಗಿಗೊಂದು ವಿದಾಯ .......

ಶ್ರಾವಣದ ಮಳೆ ಸುರಿದಿದೆಯಾದರೂ .....ಆದರೂ ...


ಇಲ್ಲಿತನಕ ಸರಿಸುಮಾರು ಎರಡು ವರುಷ ‘ಶ್ರಾವಣದ ಮಳೆ ಸುರಿದಿದೆಯಾದರೂ ‘ ,ಇನ್ನು ಮುಂದೆ ಕಾಲ ಕಾಲಕ್ಕೆ ಅದು ಸುರಿಯುವ ಭರವಸೆ ನನಗೆ ಉಳಿದಿಲ್ಲ.ಬರೆಯುವ ಖುಷಿ ,ಪ್ರೀತಿ ಎಂದಿನಂತೆ ಅಥವಾ ಎಂದಿಗಿಂತ ಜಾಸ್ತಿಯಾಗಿದ್ದರೂ ,ಅಂದುಕೊಂಡಿದ್ದನ್ನೆಲ್ಲಾ ಬರಹಕ್ಕೆ ಇಳಿಸಲು ನನಗೆ ಪುರುಸೊತ್ತಿಲ್ಲ. ಇನ್ನು ಹಟಕ್ಕೆ ಬಿದ್ದು ‘ಶ್ರಾವಣದ ಮಳೆಯನ್ನ ಸುರಿಸಲೇ ಬೇಕೆಂದು ಪಟ್ಟು ಹಿಡಿದು ಬರೆಯಲು ಕುಳಿತರೆ ಅದು ‘ಶ್ರಾವಣದ ಮಳೆಯಾಗುವುದಿಲ್ಲ. ಬಲವಂತಕ್ಕೆ ಬರೆದದ್ದು ಬಕೇಟಿನಲ್ಲಿ ನೀರು ತಂದು ಸುರಿದಂತೆಯೇ ವಿನಹಃ.ಅದಕ್ಕಿಂತ ಹೆಚ್ಚಿನ ಯಾವ ಮಹತ್ವವೂ ಅಲ್ಲಿ ಕಾಣುವುದಿಲ್ಲ..

ಹೊಸತಾಗಿ ಒಂದು ಕೆಲಸಕ್ಕೆ ಸೇರಿ ಎರಡು ತಿಂಗಳಾಯಿತು. ಬಹುರಾಷ್ಟ್ರೀಯ ಕಂಪನಿ. ವಿಪರೀತ ಕೆಲಸ. ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸರಿಸುಮಾರು ಹದಿನೈದರಿಂದ ಹದಿನಾರು ತಾಸು ನಾನು ಆಫೀಸ್ ನಲ್ಲಿಯೇ ಕಳೆದು ಹೋಗಿದ್ದೇನೆ.. ವಾರದ ಕೊನೆಯ ರಜೆಗಳು ಸಿಕ್ಕೆಯೇ ಬಿಡುತ್ತವೆ ಎಂಬುದು ಕೆಲವೊಮ್ಮೆ ಖಾತ್ರಿಯಿಲ್ಲ. ನಡುವೆ ಅಲ್ಲಿ ಇಲ್ಲಿ ಸಿಗುವ ವಾರದ ಕೊನೆಯ ರಜೆಗಳು ,ನಾನು ಹಚ್ಚಿಕೊಂಡು ಕುಳಿತ ಹತ್ತಾರು ಹುಚ್ಚುಗಳನ್ನು ಪೊರೆಯಲು ಸಾಕಾಗುತ್ತಿಲ್ಲ. ಹುಚ್ಚು ಮನಸ್ಸಿನ ಹತ್ತಾರು ಮುಖಗಳ ಜೊತೆ ಕೊನೆಯದಾಗಿ ಇತ್ತೀಚಿಗೆ ಸೇರಿಕೊಂಡದ್ದು ಈ ಬ್ಲಾಗ್ ಎಂಬ ಹನ್ನೊಂದನೆಯ ಮುಖ.ಅದೀಗ ಭಾರವಾಗುತ್ತಿದೆ.

ಕಳೆದ ಒಂದಿಷ್ಟು ವಾರ ನನ್ನ ಹಳೆಯ ಬ್ಲಾಗ್ ಪೋಸ್ಟು ಗಳನ್ನೇ ನನ್ನ ಬ್ಲಾಗಿನಲ್ಲಿ ಹಾಕಿಕೊಳ್ಳಲು ಶುರು ಮಾಡಿದ್ದೆ. ಒಟ್ಟಿನಲ್ಲಿ ಬ್ಲಾಗ್ ಖಾಲಿ ಬಿಡಬಾರದು ಎಂಬ ಕಾರಣವೊಂದನ್ನು ಬಿಟ್ಟರೆ ,ಅಲ್ಲಿ ಮತ್ಯಾವ ಖುಷಿ ಇರಲಿಲ್ಲ. ಎಷ್ಟು ದಿನ ಹೀಗೆ ನನಗೆ ನಾನೇ ಮೋಸ ಮಾಡಿಕೊಳ್ಳಲಿ ? ನನ್ನದೊಂದು ಬ್ಲಾಗ್ ಇದೆ ಕಾರಣಕ್ಕೆ ಅದನ್ನು ಹಟಕ್ಕೆ ಬಿದ್ದು ,ಏನೋ ಒಂದು ತಂದು ತುಂಬಿ ಕಸದ ತೊಟ್ಟಿಯಾಗಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಹೊಸತಾಗಿ ಏನನ್ನೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂಬುದು ನಿಚ್ಚಳ ಸತ್ಯ. ಸತ್ಯವನ್ನು ಕಣ್ಣೆದುರು ಇಟ್ಟುಕೊಂಡು , ಹೇಗೋ ಏನೋ ಒಟ್ಟಿನಲ್ಲಿ ಬ್ಲಾಗ್ ನಡೆಸಿಕೊಂಡು ಹೋಗುತ್ತೇನೆಂಬ ಸುಳ್ಳನ್ನು ನನಗೆ ನಾನೇ ಯಾಕೆ ಹೇಳಿಕೊಳ್ಳಲಿ?

ಇನ್ನು ಈ ಸತ್ಯ ,ಸುಳ್ಳು ಎಂಬ ತರ್ಕವನ್ನೆಲ್ಲ ಬದಿಗಿಟ್ಟು ನೋಡಿದರೆ ಬ್ಲಾಗ್ ಬರೆಯುವುದು ಒಳ್ಳೆಯ ಹವ್ಯಾಸ ಎಂಬುದು ನಿಜಕ್ಕೂ ಸತ್ಯ. ಎಲ್ಲೋ ಸಿಗುವ ಒಂದು ದಿನದ ಬಿಡುವಿನಲ್ಲಿ ಬ್ಲಾಗ್ ಬರೆಯಬಹುದು ಎಂಬುದೂ ಸತ್ಯ. ಕಂಪನಿಯ ಕೆಲಸದ ಸಂಗತಿ ಬ್ಲಾಗ್ ನಿಲ್ಲಿಸುವುದಕ್ಕೆ ಕಾರಣವಾಗಬಾರದು ಎಂಬುದೂ ಸತ್ಯ. ಆದರೆ ಹಾಗೆ ಎಂದೋ ಎಲ್ಲೋ ಸಿಗುವ ಬಿಡುವಿನಲ್ಲಿ ಬ್ಲಾಗ್ ಗಿಂತ ನನಗೆ ಹತ್ತಿರವಾದ ಒಂದಿಷ್ಟು ವಿಷಯಗಳಿಗೂ ಸಮಯವನ್ನ ನಾನು ಮೀಸಲಿಡಲು ನಾನು ಸೋಲುತ್ತಿದ್ದೇನೆ. ಈಗೀಗ ಯಾವುದು ಮುಖ್ಯ, ಯಾವುದು ಅತಿಮುಖ್ಯ ಎಂದು ನಾನು ಪಟ್ಟಿ ಮಾಡಿಕೊಂಡು ನನ್ನ ಸಮಯವನ್ನ ಬಳಸಿಕೊಳ್ಳುತ್ತಿದ್ದೇನೆ. ಬ್ಲಾಗ್ ಬರೆಯುವುದರಲ್ಲಿ ನನಗೆ ಪ್ರೀತಿಯಿತ್ತು , ಖುಷಿಯಿತ್ತು.ಆದರೆ ಈಗ ಅದನ್ನು ನಿಲ್ಲಿಸುವಲ್ಲಿ ನನಗೆ ಯಾವ ಬೇಸರವೂ ಇಲ್ಲ. ಯಾವ ಸಂಕಟವೂ ಇಲ್ಲ.

ಕಂಪನಿಯ ಕೆಲಸದ ಕಾರಣಕ್ಕೆ ನಾನು ಈಗೀಗ ನನ್ನ ಸಿನೆಮಾ ಎಂಬ ಕನಸನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಂಪನಿಯ ಕೆಲಸ ಹೇಗೂ ಅನಿವಾರ್ಯ. ಕಂಪನಿಯ ಕೆಲಸದ ಜೊತೆ ಜೊತೆಗೆ ನನ್ನೆಲ್ಲ ಆಸಕ್ತಿಗಳಿಗೆ ಸಮಯ ಕೊಡುವುದು ಈಗೀಗ ನನಗೆ ದೊಡ್ಡ ಸವಾಲಂತೆ ಕಾಣುತ್ತಿದೆ. ಆ ಕಾರಣಕ್ಕೆ ನನ್ನ ಆಸಕ್ತಿಯ ಪಟ್ಟಿಯನ್ನು ಸೋಸಿ ಕೆಲವಷ್ಟನ್ನ ಮಾತ್ರ ಉಳಿಸಿಕೊಳ್ಳುತ್ತಿದ್ದೇನೆ. ಹಾಗೆ ಸೋಸಿ ಉಳಿದದ್ದು ಸಿನೆಮಾ ಒಂದೇ. ಅದು ನನ್ನ ಕನಸು. ನನ್ನ ಅತಿ ದೊಡ್ಡ ಖುಷಿ. ಈ ಕಂಪನಿಯ ಕೆಲಸವಾಗಲಿ ,ಅಥವಾ ಇನ್ಯಾವುದೇ ಈ ಜಗತ್ತಿನ ಅನಿವಾರ್ಯತೆಗಳಾಗಲಿ ನನ್ನಿಂದ ಏನನ್ನೇ ಕಸಿದುಕೊಂಡರೂ ಸಿನೆಮಾದೆಡೆಗಿನ ನನ್ನ ಭಕ್ತಿಯನ್ನ ,ಪ್ರೀತಿಯನ್ನ .ಧ್ಯಾನವನ್ನ ಕಸಿದು ಕೊಳ್ಳಲು ಸಾಧ್ಯವಿಲ್ಲ ಅಥವಾ ಕಸಿದುಕೊಳ್ಳಲು ನಾನು ಬಿಡುವುದಿಲ್ಲ.

ಈ ಕಂಪನಿಯ ಕೆಲಸ ಕೈತುಂಬಾ ದುಡ್ಡು ಕೊಡುತ್ತೆ. ಹೊಟ್ಟೆ ಪಾಡಿಗೆ ದಾರಿಯಾಗುತ್ತೆ. ಇನ್ನು ಯಾಕೆ ಈ ಸಿನೆಮಾ ಎಂಬ ಹಗಲುಗನಸು ಎಂದು ಕಂಪನಿಯಲ್ಲಿ ಮೊದಲ ತಿಂಗಳ ಸಂಬಳ ಬಂದಾಗ ಅನ್ನಿಸಿತ್ತು. ಎಲ್ಲರಂತೆ ತೀರಾ ವಾಸ್ತವಕ್ಕೆ ಅಂಟಿಕೊಂಡು ನಾನು ಯಾಕೆ ಬದುಕಬಾರದು ಎಂದೂ ಅನ್ನಿಸಿತ್ತು.

ಕೊನೆಗೆ ಆ ಪ್ರಶ್ನೆಗೆ ನಾನೇ ಉತ್ತರವನ್ನ ಕಂಡುಕೊಂಡೆ. ನೀವು ನನ್ನನ್ನು ಅಥವಾ ಇನ್ಯಾರೇ ದೊಡ್ಡ ಕಂಪನಿ ಗಳಲ್ಲಿ ಕೆಲಸ ಮಾಡುವವರನ್ನ ‘ನೀವು ಯಾಕೆ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ‘ ಎಂದು ಕೇಳಿ ನೋಡಿ. ಬಹುತೇಕ ಉತ್ತರ ದುಡ್ಡಿನ ಸಲುವಾಗಿ. ಇನ್ಪೋಸಿಸ್ ಅಥವಾ ಇನ್ಯಾವುದೇ ಕಂಪನಿಯಲ್ಲಿ ಅವರು ಕೊಡುವ ದುಡ್ಡಿನ ಮುಖ ನೋಡಿ ಕೆಲಸಕ್ಕೆ ಸೇರುತ್ತೇವೆ.ಇದು ನಾರಾಯಣ ಮೂರ್ತಿ ಕೆಲಸ ಮಾಡಿದ ಇಂಡಸ್ಟ್ರಿ,ಇದು ಅಂಬಾನಿ ಕೆಲಸ ಮಾಡಿದ ಇಂಡಸ್ಟ್ರಿ ಎಂಬ ಒಂದು ಆದರ್ಶದಲ್ಲಿ ಯಾರೂ ಅವರ ಕಂಪನಿ ಗೆ ಸೇರುವುದಿಲ್ಲ. ಆದರೆ ನೀನು ಸಿನೆಮಾದಲ್ಲೇ ಯಾಕೆ ಕೆಲಸ ಮಾಡಬೇಕೆಂದು ನನ್ನನ್ನು ಕೇಳಿದರೆ ನನ್ನಲ್ಲಿ ಎಲ್ಲ ಲೆಕ್ಕಾಚಾರಗಳನ್ನ ಮೀರಿದ ಉತ್ತರವಿದೆ. ಸಿನೆಮಾ ರಾಜ್ಕುಮಾರ್ ಕೆಲಸ ಮಾಡಿದ ಇಂಡಸ್ಟ್ರಿ.ಹಂಸಲೇಖಾ, ಎಸ್.ಪಿ.ಬಿ. ಇರುವ ಇಂಡಸ್ಟ್ರಿ. ನಾಸ್ತಿಕನಾದ ನಾನು ನಂಬುವ ದೇವರೆಲ್ಲ ಅಲ್ಲೇ ಇರುವಾಗ ನಾನು ಅದನ್ನು ಬಿಟ್ಟು ಹೇಗಿರಲಿ?

ಸದ್ಯಕ್ಕೆ ನನ್ನೆದುರು ಕನಸಿನ ದಾರಿಯಲ್ಲಿ ಒಂದಿಷ್ಟು ಗುರಿಗಳಿವೆ. ಜೊತೆಗೆ ಕಂಪನಿ ಕೆಲಸವನ್ನ ಮಾಡಲೇ ಬೇಕಿದೆ. ಕಂಪನಿಯ ಕೆಲಸದ ಆಚೆ ನಾನು ಏನೇ ಮಾಡಿದರೂ ಅದು ಸಿನೆಮಾದ ಕೆಲಸದ ಸಲುವಾಗಿ ,ಅವಕಾಶಕ್ಕಾಗಿ ಅಲೆಯುವ ಸಲುವಾಗಿ ಮಾತ್ರ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಾಗಿದೆ . ಅಂಥದ್ದೊಂದು ಅತಿರೇಕದ ಶ್ರದ್ಧೆಯನ್ನ ಸಿನಿಮಾ ಪ್ರೀತಿ ಬೇಡುತ್ತೆ. ಇನ್ನು ನನ್ನ ಕಂಪನಿಯ ಕೆಲಸದಾಚೆಗಿನ ಬಿಡುವಿನ ವೇಳೆ ಏನೇ ಇದ್ದರೂ ಅದು ಸಿನೆಮಾಕ್ಕೆ ಮೀಸಲು.

ಕೊನೆಗೊಂದು ಮಂಗಳ ..
.
ಎಲ್ಲದರ ಶುರುವು ಹೇಗೆ ಇರಲಿ. ಅಂತ್ಯ ತುಂಬಾ ಮುಖ್ಯ .ಅಥವಾ ಅಂತ್ಯಕ್ಕೊಂದು ತಾರ್ಕಿಕ ಸಮಜಾಯಿಷಿ ತುಂಬಾ ಮುಖ್ಯ. ಬ್ಲಾಗ್ ಬರೆಯುವುದು ನಿಲ್ಲಿಸುತ್ತಿದ್ದೇನೆ ಎಂಬುದಕ್ಕೆ ಸಿನೆಮಾ ಒಂದು ದೊಡ್ಡ ಕಾರಣ. ಅದರಾಚೆ ನಾನು ಒಂದಿಷ್ಟು ಹೊಸಾ ಕಾರಣಗಳನ್ನ ,ಲಾಭಗಳನ್ನ ಕಂಡುಕೊಂಡಿದ್ದೇನೆ. ಇನ್ನು ಮೇಲೆ ನಾನು ನನ್ನ ಭಾವುಕತೆಯನ್ನ , ಖುಷಿಯನ್ನ ,ಅಭಿಮಾನವನ್ನ ,ಪ್ರೀತಿಯನ್ನ ಖಾಸಗಿಯಾಗಿ ಕಾದಿಟ್ಟು ಕೊಳ್ಳಬಹುದು. ಬ್ಲಾಗ್ ಇದ್ದಾಗ ಎಲ್ಲರೆದುರು ಅವನ್ನೆಲ್ಲ ಹರವಿಟ್ಟುಕೊಂಡು ಕೂರುವ ಚಪಲ ನಮ್ಮ ಅರಿವಿಗೆ ಬಾರದೆ ಬರಹದಲ್ಲಿ ಇಣುಕಿ ಬಿಡುತ್ತೆ. ನಾವು ಬರೆದದ್ದೆಲ್ಲಾ ಎಲ್ಲರಿಗೂ ಆಗಿ ಬರುವ ಖಾತ್ರಿಯಿಲ್ಲ. ವಾದ ವಿವಾದ, ಬರಹದಲ್ಲಿನ ಪ್ರಾಮಾಣಿಕತೆಯ ಪ್ರಶ್ನೆ , ಅನಾವಶ್ಯಕವಾದ ಬೇಸರ. ಯಾರನ್ನು ಹೊಗಳಿದರೂ ಕಷ್ಟ.ತೆಗಳಿದರೂ ಕಷ್ಟ. ಇನ್ನು ಮೇಲೆ ಆ ತಾಪತ್ರಯವಿಲ್ಲ. ನನ್ನೆಲ್ಲ ಮಾತುಗಳನ್ನ ನನ್ನಲ್ಲೇ ಇಟ್ಟುಕೊಳ್ಳಬಹುದು. ಸ್ವಗತದಲ್ಲೂ ಒಂದು ಬಗೆಯ ಸೊಬಗಿದೆ.


ಈವತ್ತು ಇಷ್ಟೆಲ್ಲಾ ಹೇಳಿ ,ವಿದಾಯಕ್ಕೊಂದು ಮುನ್ನುಡಿಯನ್ನ ಬರೆದು ಹೋಗುವ ಅವಶ್ಯಕತೆ ಖಂಡಿತ ಇರಲಿಲ್ಲ. ಹಾಗೆಯೇ ಬ್ಲಾಗನ್ನು ಹಾಳು ಸುರಿಯಲು ಬಿಟ್ಟು ನನ್ನ ಪಾಡಿಗೆ ನಾನು ಎದ್ದು ಹೋಗಿ ಬಿಡಬಹುದಿತ್ತು. ಆದರೆ ಈ ವಿದಾಯದ ಮುನ್ನುಡಿಯ ನೆಪದಲ್ಲಿ ಬರಲು ಕಾರಣ ಶ್ರೀ ಸಾಯಿ ಬಾಬಾ . ಅವರ ಕುರಿತು ಬರೆಯಲು ಶುರುವಿಟ್ಟುಕೊಂಡು ಒಂದು ಮುನ್ನುಡಿಯನ್ನು ಕಳೆದ ಪೋಸ್ಟಿನಲ್ಲಿ ಹಾಕಿದ್ದೆ. ಅವರ ಬಗ್ಗೆ ಬರಹವನ್ನ ಅರ್ಧಕ್ಕೆ ನಿಲ್ಲಿಸಿ ಎದ್ದು ಹೋಗುವ ಮನಸ್ಸಾಗಲಿಲ್ಲ. ಆದರೆ ನಾನು ಅಂದುಕೊಂಡಿದ್ದನ್ನೆಲ್ಲ ಬರೆಯಲೂ ಆಗುತ್ತಿಲ್ಲ. ಆ ಕಾರಣಕ್ಕೆ ಒಂದೆರಡು ಮಾತಿನಲ್ಲಿ ಹೇಳಬೇಕೆಂದಿದ್ದ ವಿಷಯಗಳ ಸಾರಾಂಶವನ್ನ ಹೇಳಿ ಹೋಗಿ ಬಿಡುತ್ತೇನೆ.

ಬಾಬಾ ದೇವರೋ ಅಥವಾ ಮಾಮೂಲಿ ಮನುಷ್ಯರೋ ಎಂಬ ಮಾತು ಬದಿಗಿರಲಿ. ಆದರೆ ಅವರು ಮಾಡಿದ ಕೆಲಸಗಳನ್ನ ಬದಿಗಿಟ್ಟು ,ಕೇವಲ ಅವರ ಪವಾಡದ ಕುರಿತು ಮಾತನಾಡಿ ಅವರನ್ನು ಒಬ್ಬ ಮಾಮೂಲಿ ಮನುಷ್ಯನಂತೆ ನಾವು ಕಾಣುವುದರಲ್ಲಿ ಯಾವ ಮನುಷ್ಯತ್ವವೂ ನನಗೆ ಕಾಣುವುದಿಲ್ಲ. ..
.....................................................................................

ಅತ್ತಿಗೆ ನನಗೆ ವಹಿಸಿಕೊಟ್ಟ ಅವಳ ಬ್ಲಾಗನ್ನು ಮತ್ತೆ ಅವಳ ಮಡಿಲಿಗೇ ಹಾಕುತ್ತಿದ್ದೇನೆ. ಮೊದಲಿಗೆ ನನ್ನನ್ನು ಬ್ಲಾಗ್ ಗೆ ಕರೆತಂದ ಅವಳಿಗೆ ದೊಡ್ಡ ಥ್ಯಾಂಕ್ಸ್. ನಂತರ ಅತ್ತಿಗೆಯ ನೆರಳಿನಲ್ಲಿ ಬಂದವನನ್ನ ಬೆಂಬಲಿಸಿದ ನಿಮ್ಮೆಲ್ಲರಿಗೂ ಅಷ್ಟೇ ದೊಡ್ಡ ಥ್ಯಾಂಕ್ಸ್.

ಹಿಂದೊಮ್ಮೆ ಹೀಗೆಯೇ ಬ್ಲಾಗ್ ಬಿಡುವ ಮಾತನಾಡಿದ್ದೆ ಅರೆಬೆಂದವನಂತೆ. ಹೇಳಿ ಎರಡೇ ದಿನಕ್ಕೆ ವಾಪಾಸು ಬಂದಿದ್ದೆ. ಈ ಬಾರಿ ಹಾಗಲ್ಲ .ಈ ಬಾರಿ ಸಿನೆಮಾ ಕಾರಣಕ್ಕೆ ಹೋಗುವ ಮಾತಾಡುತ್ತಿದ್ದೇನೆ. ಇದು ಸ್ವಲ್ಪ ಸೀರಿಯಸ್ ಎನ್ನುವಷ್ಟು ಗಂಭೀರ ನಿರ್ಧಾರ. ಮತ್ತೆ ತೆಲೆಕೆಟ್ಟು ವಾಪಾಸು ಬರುತ್ತೇನೆಂದರೂ ಸದ್ಯಕ್ಕಂತೂ ತಲೆಕೆಡುವ ಮಾತೇ ಇಲ್ಲ. ತಲೆ ಫುಲ್ ಬ್ಯುಸಿ. ಅಕಸ್ಮಾತ್ ಮುಂದೆ ಎಂದಾದರೂ ಬರುವ ಬಯಕೆಯಾದರೆ ಖಂಡಿತ ಬರುತ್ತೇನೆ. ನನ್ನದೇ ಬ್ಲಾಗ್ ಗೇ ಮರಳಿ ಬರುವುದರಲ್ಲಿ ನನಗೆ ಯಾವ ಬಿಗುಮಾನವಿಲ್ಲ. ಈಗ ಬಿಡುತ್ತಿರುವುದು ಅನಿವಾರ್ಯ. ಇದು ಈ ಕ್ಷಣದ ಸತ್ಯ. ಎಲ್ಲ ಸತ್ಯಗಳೂ ಎಲ್ಲ ಕಾಲಕ್ಕೂ ಸತ್ಯವಾಗಿರಲೇಬೇಕೆಂಬ ನಿಯಮವಿಲ್ಲ. ಆದರೆ ಒಂದಂತೂ ಸತ್ಯ. ಈ ಬಾರಿ ವಾಪಾಸು ಮರಳಿ ಬಂದರೂ ಸದ್ಯಕ್ಕಂತೂ ಬರುವುದಿಲ್ಲ. ನಾನು ಭೀಷ್ಮ ಪ್ರತಿಜ್ಞೆ ಮಾಡುತ್ತಿಲ್ಲ. ನನ್ನ ಸಂಕಷ್ಟವನ್ನ ಹೇಳಿಕೊಂಡು ಬ್ಲಾಗ್ ಬಿಡುವ ನಿರ್ಧಾರವನ್ನ ಹೇಳಿದ್ದೇನೆ ಅಷ್ಟೇ. ಕಡ್ಡಿ ಮುರಿದಂತೆ ಬ್ಲಾಗ್ ಗೇ ವಾಪಾಸು ಬರುವುದೇ ಇಲ್ಲವೆಂದು ಹೇಳಲು ನನಗೆ ಧೈರ್ಯ ಸಾಲುತ್ತಿಲ್ಲ. ಹಾಗೇನಾದರೂ ಖಡಾಖಂಡಿತವಾಗಿ ಹೇಳಿದರೆ ಕೆಲವು ಬುದ್ಧಿಜೀವಿಗಳು, ವಿಚಾರವಾದಿಗಳು ಕಾಯುತ್ತಲೇ ಇರುತ್ತಾರೆ. ಮತ್ತೆ ಎಂದಾದರೂ ಮರಳಿ ಬ್ಲಾಗ್ ಗೆ ಬಂದರೆ ಅವರೆಲ್ಲ ಸೇರಿ ಯಾಕಾದರೂ ಮರಳಿ ಬಂದೆನೆಂದು ಅನ್ನಿಸುವಂತೆ ಮಾಡಿಬಿಡುವುದರಲ್ಲಿ ನನಗೆ ಯಾವ ಅನುಮಾನವೂ ಕಾಣುತ್ತಿಲ್ಲ. ಹಿಂದೊಮ್ಮೆ ಅನಾವಶ್ಯಕವಾಗಿ ,ಅಗತ್ಯಕ್ಕಿಂತ ಹೆಚ್ಚಾಗಿ ಫೇಸ್ ಬುಕ್ ಬಳಸುವುದು ಸರಿಯಲ್ಲ ಎಂದು ಹೇಳಿ ನಾನು ಫೇಸ್ ಬುಕ್ ಬಿಟ್ಟಿದ್ದೆ. ಯಾವುದೋ ಒಂದು ಅಗತ್ಯವಾದ ಕಾರಣಕ್ಕೆ ಮರಳಿ ಫೇಸ್ ಬುಕ್ ಗೆ ಮರಳಿ ಬಂದಿದ್ದೇ ತಡ, ಎಲ್ಲರೂ ಮುರಕೊಂಡು ನನ್ನ ಮೇಲೆ ಬಿದ್ದು ಬಿಟ್ಟರು. ನಾನು ಹೇಳಿದ್ದು ಫೇಸ್ ಬುಕ್ ಎಷ್ಟು ಬೇಕೋ ಅಷ್ಟೇ ಬಳಕೆ ಮಾಡಿ ಎಂದು. ಬಳಕೆ ಮಾಡಲೇ ಬೇಡಿ ಎಂದು ನಾನು ಹೇಳಿದವನಂತೆ ನನ್ನನ್ನು ನೋಡಿಬಿಟ್ಟರು. ಓ ದೇವರೇ .:) :) :) ;)

ಈಗ ಹೋಗುತ್ತೇನೆ ಎಂಬುದು ನಿರ್ಧಾರ. ಹೋಗಿ ಬರುತ್ತೇನೆ ಎಂಬುದು ಆಶಯ. ಉಳಿದದ್ದು ‘ತಿರುಗಿ ನೋಡದಿರು ಬ್ಲಾಗಿನತ್ತ . ಮುಂದಿನದು ದೇವರ ಚಿತ್ತ' .:) :) :೦ :)