Monday, December 10, 2012

ಸಭ್ಯ ಪೋಲಿ ಕವನ ೭ ..........


ನಡುಗಾಲ .......

ಆಗ  ಕಾರ್ಮೋಡ ಕವಿಯುತ್ತಿತ್ತು
ಆಕಾಶವೇ ಕಳಚಿ ಬಿದ್ದಂತೆ
ಮಳೆ ಸುರಿಯುತ್ತಿತ್ತು
ನನ್ನ ಇಳೆಯಲ್ಲಿ
ಸುರಿದಿದ್ದೆಲ್ಲವೂ ತೊಟ್ಟೂ ಬಿಡದೆ
ಇಂಗುತಿತ್ತು
ಈಗಲೂ ನನ್ನ ಇಳೆ ಅಂದಿನಂತೆಯೇ ಇದೆ
ಮಳೆಗೆ ಯಾಕೋ ಉದಾಸೀನ
ಈಗೀಗ ಅದು ಬರಗಾಲದ ಮಳೆ  
ಆಗೊಮ್ಮೆ ಈಗೊಮ್ಮೆ ಮಳೆಯಾದರೂ
ಬಿಸಿಕಾವಲಿಗೆ ನೀರು ಚಿಮುಕಿಸಿದಂತೆ
ಎಲ್ಲೋ ಮೂಲೆಯಲ್ಲಿ
ಅತೃಪ್ತಿಯ  ಹೊಗೆ ಹೊಗೆಯಷ್ಟೇ
ಇಂಗಿಸಿಕೊಂಡ ಸಂಭ್ರಮವಿಲ್ಲ
ಇದು ನಡುಗಾಲ
ಮತ್ತೆ ಚಿಗುರುವ ಆಸೆ ಭವ್ಯ ಮಳೆಯಡಿ
ಮತ್ತೆ ಚಿಗುರಲೇ ಬೇಕೆಂದರೆ
ಕಾರ್ಮೋಡ ಸಿಗಬೇಕು
ಸಿಗಬೇಕೆಂದರೆ   
ನೆತ್ತಿ ಮೇಲಿನ ಒಣ ಮೋಡದ ಕಾವಲಿಗೆ
ಕಣ್ತಪ್ಪಿಸಬೇಕು .


ಸೃಷ್ಟಿ ನಿಯಮ ಸೆಳೆಯುತಿದೆ ಎಲ್ಲೋ
ಆದರೂ ಲೋಕ ನಿಯಮ ಮೀರುವಂತಿಲ್ಲ
ಕನಸುಗಳಿಗೆ ಇಲ್ಲಿ ಜಾಗವಿಲ್ಲ
ಹಸಿವು ತುಂಬಾ ಕೆಟ್ಟದ್ದು
ಅನ್ನ ಹಳಸಿಹೋದ ಹೊತ್ತಿನಲಿ

ಹೇಳು
ನನ್ನ ಧರ್ಮಸಂಕಟವ ಹೇಗೆ ಮೀರಲಿ
ಹಾಗೆ ನಗಬೇಡ  ಪಾಪಿ
ಹೇಳು ಏನಾದರೂ

ನಗದೆ ಇನ್ನೇನು ಮಾಡಲಿ
ನಿನಗೆ ಸಿಕ್ಕ ಉತ್ತರಗಳನ್ನೆಲ್ಲ ಪ್ರಶ್ನೆಮಾಡಿ
ಮೂಟೆ ಕಟ್ಟಿ ನನ್ನ ಮುಂದಿಟ್ಟಿರುವೆ  
ದಾರಿ ಯಾವುದೆಂದು ನಿನಗೆ ತಿಳಿದಿದೆ
ಹೆಜ್ಜೆ ಮಾತ್ರ ಗೊಂದಲದಲ್ಲಿದೆ


ಕನಸುಗಳಿಗೆ ಇದೇ ಸಕಾಲ  
ಒಬ್ಬೊಬ್ಬರಿಗೂ  ಒಂದೊಂದು ಕನಸು
ನಿನ್ನದೂ ಹಾಗೆ ಹತ್ತರಲಿ ಹನ್ನೊಂದು  
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಕವಿ ಹೇಳಿದ್ದು.
ಇರದುದರೆಡೆಯ  ಬಿಟ್ಟು ಎಲ್ಲ ಇರುವೆಡೆಗೆ ಸಾಗು
ನಿನ್ನ  ಧರ್ಮಸಂಕಟಕ್ಕೆ  ಸದ್ಯಕ್ಕೆ  ಇದುವೇ
ತುರ್ತು ಸಮಾಧಾನ

ಲೋಕನಿಯಮ ಮೀರಬೇಡ
ಅದು ಪಾಪ
ಮುಂಬಾಗಿಲಲ್ಲಿ   ಒಣ ಮೋಡಕ್ಕೆ ಕಾದಿರು
ಮಳೆಯ ಕನಸನ್ನು ಕಣ್ಣಲ್ಲಿ ತುಂಬಿಕೊಂಡು
ಕಾದು  ಕುಳಿತವಳಂತೆ
ಇನ್ನು ಸೃಷ್ಟಿ ನಿಯಮವನ್ನೂ ಮೀರುವಂತಿಲ್ಲ
ಆತ್ಮಹತ್ಯೆ ಮಹಾ ಪಾಪ  
ಹಿತ್ತಿಲ ಬಾಗಿಲು ತೆರೆದೇ ಇರಲಿ
ಮುಸ್ಸಂಜೆ ಹೊತ್ತಲ್ಲಿ  ಎಳೆಯ ಬಿಸಿಲು ಕೋಲೊಂದು
ಇಣುಕಿದರೂ ಇಣುಕಬಹುದು .


ಈಗಾದರೂ ನಾನೊಮ್ಮೆ ನಗಲೇ?

ಹ್ಮ್ಮ್ J J J