Friday, May 9, 2014

ಸಭ್ಯ ಪೋಲಿ ಕವನ : ಭಗವಂತ ಮಿಲನದಲ್ಲೂ ದಕ್ಕಬಹುದು

ನಿಲ್ಲು
ಹೇಳಬೇಕಾದ ಮಾತೊಂದಿದೆ
ನಿನ್ನೆಡೆಗೆ ನನ್ನಲೊಂದು ದಿವ್ಯ ಆರಾಧನೆಯಿದೆ
ನಿನ್ನ ಚೆಲುವು ನನ್ನ ಶುದ್ಧ ಕುತೂಹಲ
ಅದುಮಿಕೊಳ್ಳಲಾಗದ ಆಕರ್ಷಣೆ ಸೇರಿ
ನಿನ್ನಲ್ಲೊಮ್ಮೆ ಇಂಗಿಕೊಳ್ಳುವಾಸೆ ಬಲವಾಗಿದೆ

  

'ಏನೆಂದು ಕೊಂಡಿರುವೆ ಎನ್ನ
ಅಷ್ಟು ಅಗ್ಗದವಳಲ್ಲ ನಾನು'



ನಿಜ
ನೀನು ಅಗ್ಗದವಳಲ್ಲ
ನನ್ನೆಲ್ಲ ಆರಾಧನೆಗೆ
ಬಚ್ಚಿಡಲಾಗದ ಹುಚ್ಚು ಮೋಹಕ್ಕೆ ಅರ್ಹಳು
ದೇವತೆ ನೀನು
ಶುಧ್ಧ ಅಪರಂಜಿ
ವಿಷವಿಲ್ಲ ನನ್ನಲ್ಲಿ
ಎಲ್ಲ ಸಹಜ ಸಹಜ


ಲೋಕಕ್ಕೆ ಹೇಗೋ ತಿಳಿದಿಲ್ಲ
ನನಗೆ ಮಾತ್ರ ನಿನ್ನಲ್ಲಿ ಕಾಣುವುದು
ಯಾವ ಕೊಂಕೂ ಇರದ ಬರಿಯ ನೀನು
ಸೃಷ್ಟಿಯ ಕುಸುರಿ ಕೆಲಸಕ್ಕೆ
ಅದ್ಭುತಕ್ಕೆ ಕಣ್ಣೆದುರೇ ಇರುವ
ಸಾಕ್ಷಿ ನೀನು
ಭಗವಂತ ಮಿಲನದಲ್ಲೂ ದಕ್ಕಬಹುದು
ಒಬ್ಬಬ್ಬರಿಗೂ ಒಂದೊಂದು ದಾರಿ
ಮೋಕ್ಷಕ್ಕೆ
ಮಿಲನವೂ ದಾರಿಯಾಗಬಹುದು
ಎಂಬ ನಂಬಿಕೆಯ
ಮುಕ್ತ ಪಂಥದವನು
ಅಚ್ಚರಿಯ ಪುಟ್ಟ ನಾನು



ಹುಡುಗಿ ಕಲ್ಲಾದಳು
ಕಣ್ಣೀರಾದಳು .

2 comments:

sunaath said...

ಯಪ್ಪಾ! ಮೋಕ್ಷವೆಂದರೆ ಭಗವಂತನ ಜೊತೆಗೆ ಮಿಲನವಾಗುವುದು, ಅಕ್ಕಮಹಾದೇವಿಯ ಹಾಗೆ. ‘ಮಾಯೆ’ಯ ಜೊತೆಗೆ ಮಿಲನವಾದರೆ, ಅದು ಸಂಸಾರ!

sunaath said...
This comment has been removed by the author.