Thursday, April 11, 2013

ಗುಟ್ಟು ೩ ....


ಅದೊಂದು ದಿನ ಎಂದಿನಂತೆ ಬೆಳಗಾಯಿತು. ಸೂರ್ಯ ಆಗಷ್ಟೇ ದಿಗಂತದ ಗೆರೆಯಿಂದ ಮೆಲ್ಲಗೆ ಮೇಲಕ್ಕೇರುತ್ತಿದ್ದ  .ಜಗತ್ತು ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಅಜ್ಜ ಗುಡಿಸಲ ಮುಂದಿನ ಬಂಡೆಯ ಮೇಲೆ ವಜ್ರಾಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡು ಮುಖವನ್ನ ತುಸು ಮೇಲಕ್ಕೆತ್ತಿ ಒಳಗಣ್ಣಿನಲ್ಲೇ  ಸುತ್ತಲ ಜಗತ್ತನ್ನು ನೋಡುತ್ತಾ , ಒಳಗೆ ಎಳೆದುಕೊಳ್ಳುತ್ತಿದ್ದ ಉಸಿರೊಡನೆ ಸೂರ್ಯನ ಹೊಂಬಿಸಲನ್ನೂ ತನ್ನೊಳಗೆ ಬರಮಾಡಿಕೊಳ್ಳುತ್ತಿದ್ದವನಂತೆ ಕುಳಿತಿದ್ದ. ಅನಂತ ತದೇಕ ಚಿತ್ತದಿಂದ ಅಜ್ಜನನ್ನೇ ನೋಡುತ್ತಾ ಗುಡಿಸಲ ಬಾಗಿಲ ಬಳಿ ಕುಳಿತಿದ್ದ .  ಕೊನೆಗೊಮ್ಮೆ ಅಜ್ಜ ಕಣ್ಣು ತೆರೆದ. ಒಂದು ಪದಕ್ಕೆ ನಿಲುಕದ ಮಂದಹಾಸ ಅವನ ಮುಖದಲ್ಲಿತ್ತು. ಸ್ವಲ್ಪ ಹೊತ್ತು ಅದೇ ಮಂದಹಾಸವನ್ನು ಹೊತ್ತು ಅಜ್ಜ ಬಂಡೆಯ ಮೇಲೆಯೇ ಕುಳಿತಿದ್ದ .ಕೊನೆಗೆ ಅಜ್ಜ ಬಂಡೆಯಿಂದ ಕೆಳಗಿಳಿದು ಅನಂತನ ಬಳಿ ಬಂದು ‘ ಇದೇನು ಹೀಗೆ ಕುಳಿತಿದ್ದೀಯ .ಎದ್ದು ಎಷ್ಟು ಹೊತ್ತಾಯಿತು. ಬಾ ಮಲಬದ್ಧತೆಯ ಪಾನೀಯಕ್ಕೆ ಎಲೆ ಕಿತ್ತುಕೊಂಡು ಬರೋಣ ‘ ಎಂದು ದೊಡ್ಡದಾಗಿ ನಕ್ಕು ಅನಂತನನ್ನು ಕೈ ನೀಡಿ ಎಬ್ಬಿಸಿದ. ‘ಹ್ಮ್ಮ್ ‘ಎನ್ನುವಂತೆ ತಲೆಯಷ್ಟೇ ಆಡಿಸಿ ಅನಂತ ಅಜ್ಜನೊಡನೆ ಹೊರಟ.
  
ಎಲೆಯನ್ನು ಕೀಳುತ್ತ ಅಜ್ಜ ಪ್ರತಿ ಗಿಡದ ಎಲೆಯ ಮಹತ್ವವನ್ನ ಹೇಳುತ್ತಾ ಸಾಗುತ್ತಿದ್ದ.ಅನಂತ ಸುಮ್ಮನೆ ಕೇಳುತ್ತಾ ಅಜ್ಜನೊಡನೆ ಅಜ್ಜನ ನೆರಳಂತೆ ಹೆಜ್ಜೆ ಹಾಕುತ್ತಿದ್ದ. ತಟ್ಟನೆ ಅನಂತ ‘ ಅಜ್ಜಾ ನೀನು ನನಗಿನ್ನೂ ಕೆಸರು ಹೊಳೆಯ ಹಿಂದಿನ ಮರ್ಮವನ್ನ ಹೇಳಲೇ ಇಲ್ಲ. ಹೇಳ್ತೇನೆ ಸ್ವಲ್ಪ ಕಾಯಿ ಎಂದು ತಿಂಗಳ ಮೇಲಾಯಿತು ‘ಎಂದ. ಅಜ್ಜ ‘ನೀನಿನ್ನೂ ಅಲ್ಲೇ ಇದ್ದೀಯ. ಕೆಸರು ಹೊಳೆ ದಾಟಿ ಬಂದಾಯಿತು. ಮತ್ತೇಕೆ ಸುಮ್ಮನೆ ಆ ವಿಷಯ. ತಿಳಿದುಕೊಳ್ಳಲಿಕ್ಕೆ ಬೇರೆ ವಿಷಯಗಳು ಇನ್ನೂ ಬೇಕಾದಷ್ಟಿವೆ’ ಎಂದು ನಕ್ಕ. ‘ ಉಹುಂ .ಈವತ್ತು ನೀನು ಹೇಳಲೇ ಬೇಕು. ಹೇಳದಿದ್ದರೆ ನಾನು ಮತ್ತೆ ಮರಳಿ ಹೋಗಿಬಿಡುತ್ತೇನೆ. ‘ ಎಂದು ಚಿಕ್ಕ ಮಕ್ಕಳಂತೆ ರಚ್ಚೆ ಹಿಡಿದು ಕುಳಿತ. ‘ ಹೋಗ್ತೀಯಾ? ಹೋಗು. ಹೋಗುವುದಾದರೆ ಹೋಗು. ಆದರೆ ಬಂದ ದಾರಿ ಈಗ ಪೂರ್ತಿ ಬದಲಾಗಿದೆ. ನೀನು ಕೂಡ. ಮತ್ತೆ ಹೊರಟರೆ ನೀನು ಎಲ್ಲಿಯೂ ಸಲ್ಲದವನಾಗ್ತೀಯ. ನನಗೆ ಏನಾಗಬೇಕಿದೆ .ನೀ ಬರುವ ಮುಂಚೆಯೂ ನಾನು ಇಲ್ಲೇ ಇದ್ದೆ. ನೀ ಹೋದರು ನಾನು ಇಲ್ಲೇ ಇರ್ತೇನೆ .ಹೇಳು ಈಗ.ಹೋಗ್ತೀಯಾ? ‘ ಎಂದು ಮತ್ತೆ ನಕ್ಕ . ‘ ಹಾಂ ಹೋಗ್ತೇನೆ .ಏನಾದರೂ ಆಗಲಿ. ನನ್ನ ಪ್ರಶ್ನೆಗೆ ಉತ್ತರವನ್ನ ಮೊದಲು ಕೊಡು. ಉಳಿದದ್ದು ನಿನಗ್ಯಾಕೆ ‘ ಎಂದು ಅನಂತ ಮತ್ತೆ ಮಕ್ಕಳಂತೆ ಹುಸಿ ಮುನಿಸು ತೋರಿಸಿದ. ‘ ಸರಿಬಿಡಪ್ಪ .ನೀನು ಹೋಗಲಾರೆ ಮರಳಿ.ಅದು ನಿನಗೂ ಗೊತ್ತು. ನಿಂಗೆ ನಿನ್ನ ಪ್ರಶ್ನೆಗೆ ಉತ್ತರ ಬೇಕು ತಾನೇ..ಹೇಳ್ತೇನೆ ಬಿಡು'
 ‘
   ‘ನೋಡು ಆ ಹುಲಿದೇವನ ಗುಡ್ಡ ಅಸಲಿಗೆ ಗುಡ್ಡವೇ ಅಲ್ಲ.ಅದು ನಮ್ಮ ಸುತ್ತ ನಾವೇ ಕಟ್ಟಿಕೊಂಡ ಗೋಡೆ ಎಂದು ಹೇಳಿದ್ದೆ. ಅಂಥಾ ಹುಲಿದೇವನ ಗುಡ್ಡವನ್ನ ದಾಟುವುದು  ಅಥವಾ ತನ್ನ ಸುತ್ತಲ ಗೋಡೆಯನ್ನ ಕೆಡವಿ ,ಸಾಮಾನ್ಯ ಜಗತ್ತಿನ ರೀತಿ ರಿವಾಜುಗಳನ್ನು ಕೊಡವಿಕೊಂಡು ಬರುವುದು  ಎಲ್ಲವನ್ನೂ ಮೀರುವ ಮೊದಲ ಹಂತ. ಅದನ್ನು ಹೇಗೋ ಆ ಕ್ಷಣದ ಹುಂಬತನದಲ್ಲಿ ನಿಭಾಯಿಸಿಕೊಂಡು ಭಂಡ ಧೈರ್ಯಕ್ಕೆ ಬಿದ್ದು ದಾಟಿ ಈಚೆ ಬಂದು ಬಿಡಬಹುದು .ಆದರೆ ಈಚೆ ಬಂದ ಮೇಲೆ ಬೇಡ ಬೇಡವೆಂದರೂ ಯಾವುದೋ ಸೆಳೆತ ನಮ್ಮನ್ನು ಮತ್ತೆ ಮತ್ತೆ ಅತ್ತ ಕಡೆಯೇ ಎಳೆಯುತ್ತೆ.  ಒಂದು ಬಗೆಯ ನಿಸ್ಸಾಹಯಕ ಭಾವ ಆವರಿಸುತ್ತೆ. ಅಲ್ಲಿಯೇ ಇರಬೇಕಿತ್ತು ಆ ಜಗತ್ತಿನೊಡನೆ ,ಎಲ್ಲರೂ ಸಾದಾಸೀದ ರೀತಿಯಲ್ಲಿ ತಮ್ಮ ಪಾಡಿಗೆ ತಾವು ಬದುಕುತ್ತಿರುವಾಗ ,ನನಗೇಕೆ ಅವೆಲ್ಲವನ್ನೂ ನಿರಾಕರಿಸಿ .ಧಿಕ್ಕರಿಸಿ ಬರುವ ಹುಚ್ಚು ,ಇದು ಸರಿಯೇ  ಅಥವಾ ತಪ್ಪೇ , ಹೀಗೆ ನೂರೆಂಟು ಗೊಂದಲ ಕಾಡುತ್ತೆ.. ಈ ಪರಿಸ್ಥಿತಿಯಲ್ಲೇ ಅನೇಕರು   ಬಸವಳಿದುಬಿಡುತ್ತಾರೆ ಮುಂದೇನು ಎಂಬ ಪ್ರಶ್ನೆಯನ್ನು  ಮುಂದಿಟ್ಟುಕೊಂಡು. ಕೆಸರು ಹೊಳೆಯೆಂದರೆ ಅದೇ . ಗುಡ್ಡ ದಾಟಿದವನಿಗೆ ಎದುರಾಗುವ  ಉಭಯಸಂಕಟ. ನೀನು ಅದನ್ನು ದಾಟಿ ನನ್ನ ಗುಡಿಸಲ ಬಳಿ ಬಂದೆ’ ಎಂದು ಅಜ್ಜ ಅನಂತನ ಮುಖ ನೋಡಿದ. ‘ಅಜ್ಜ ಹಾಗಿದ್ದರೆ ನಾನು ಎಲ್ಲವನ್ನೂ ಮೀರಿಬಿಟ್ಟೆನೆ ? ಗುಡ್ಡವನ್ನು ದಾಟಿದ್ದು ನೀನು ಹೇಳಿದಂತೆ ಒಂದು ಬಗೆಯ ಹುಂಬತನದಲ್ಲೇ .ಆದರೆ ಈ ಕೆಸರು ಹೊಳೆಯನ್ನೂ ದಾಟುವ ಸತ್ವ ನನಗೆಲ್ಲಿಂದ ಬಂತು . ನಾನೊಬ್ಬ ಮಾಮೂಲಿ ಎಳೆಯ ಪ್ರಾಯದ ಹುಡುಗ.  ‘ ಅಜ್ಜ ಗಂಭೀರವಾಗಿ ಅನಂತನನ್ನೇ ನೋಡುತ್ತಾ ಹೇಳಿದ ‘ನೀನು ಎಲ್ಲವನ್ನೂ ಮೀರಲೆಂದೇ ಹುಟ್ಟಿದವನು. ಅದಕ್ಕೆ ನೀನು ಅಷ್ಟು ಸಲೀಸಾಗಿ ಎಲ್ಲವನ್ನೂ ದಾಟಿ ಬಂದುಬಿಟ್ಟೆ. ನೀನು ಬಂದದ್ದು ಕೊಂಚ ತಡವಾಯಿತು .ಆದರೂ ಕಾಲ ಕೈ ಮೀರಿಲ್ಲ ಎಂದು ನಿನಗೆ ನಾನು ಹೇಳಿದ್ದು ನೆನಪುಂಟು ತಾನೇ. ನಿನ್ನಿಂದ ಆಗಬೇಕಾದ್ದು ತುಂಬಾ ಇದೆ .ನೋಡುತ್ತಿರು ’  ಎಂದು ಅಜ್ಜ ಗಂಭೀರ ಮುಖಮುದ್ರೆ ಸಡಿಲಿಸಿ ಮೆಲುವಾಗಿ ನಕ್ಕ.

    ಸ್ವಲ್ಪ ಹೊತ್ತು ಅಜ್ಜ ಹಾಗು ಅನಂತ ಮೌನವಾಗಿ ಒಬ್ಬರೊನ್ನಬ್ಬರು ದಿಟ್ಟಿಸುತ್ತ ಕುಳಿತರು. ಅಜ್ಜ ಮೌನ ಮುರಿದು ಮತ್ತೆ ಮಾತಿಗೆ ಬಿದ್ದ ‘ ನೀನು ಕಾರಣವೇ ಅಲ್ಲದ ಕಾರಣಕ್ಕೆ ,ಅಪ್ಪ ಬಯ್ದಿದ್ದೆ ನೆಪವಾಗಿ ಮನೆ ಬಿಟ್ಟು ಬಂದೆ. ನೀನು ಬಿಟ್ಟು ಬಂದೆ ಎನ್ನುವುದಕ್ಕಿಂತ , ನಿನ್ನನ್ನು ಆ ಶಕ್ತಿ ಕೈ ಹಿಡಿದು ನಡೆಸಿಕೊಂಡು ಬಂತು ಎನ್ನಬಹುದು..ಹೇಳಿದೆನಲ್ಲ ನೀನು ಎಲ್ಲವನ್ನೂ ಮೀರಲಿಕ್ಕೆ ಹುಟ್ಟಿದವನೆಂದು. ನಾನು ನಿನ್ನಷ್ಟು ಪುಣ್ಯವಂತನಲ್ಲ. ಎಲ್ಲರಂತೆ ಈ ಜಗತ್ತಿನ ಸಂತೆಯಲ್ಲಿ ಹತ್ತರಲ್ಲಿ ಹನ್ನೊಂದಾಗಿ ನನ್ನ ಪಾಡಿಗೆ ನಾನಿದ್ದೆ. ತುಂಬಾ ಚಿಕ್ಕ ವಯಸ್ಸಿನಲ್ಲಿ ಕಂಡ ಕೆಲವು ಕಟು ಸತ್ಯಗಳು ಅಡಿಗಡಿಗೂ ನನ್ನನ್ನು ಕಾಡುತ್ತಲೇ ಇದ್ದವು. ಎಲ್ಲರಂತೆ ಮದುವೆಯಾಯಿತು .ಮಕ್ಕಳಾದವು. ಆದರೂ ಒಳಗೆಲ್ಲೋ ಒಂದು ಧ್ವನಿ ‘ಸಾಕು ಇದು.ನೀನು ಹೋಗಬೇಕಾದ ದಾರಿ ಬೇರೆಯೇ ಇದೆ’ ಎಂದು ಬಿಟ್ಟು ಬಿಡದೆ ಪಿಸುಗುಡುತ್ತಿತ್ತು. ಹೆಂಡತಿ ಇದ್ದಳಲ್ಲ ,ಜೊತೆಗೆ ನಾಲ್ಕು ಪುಟ್ಟ ಮಕ್ಕಳು. ಅವರ ಸಲುವಾಗಿ ನಾನು ಎಲ್ಲರಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಬಂದೆ. ಹೊಣೆಗೇಡಿ ಎಂಬ ಪಟ್ಟವನ್ನ  ಆ ಸಮಯಕ್ಕೆ ನಾನು ಹೊತ್ತುಕೊಳ್ಳಲಿಕ್ಕೆ ಸಿದ್ಧನಿರಲಿಲ್ಲ. ಮಕ್ಕಳು ವಯಸ್ಸಿಗೆ ಬಂದರು. ಮದುವೆಯಾದರು .ಅವರಿಗೆಲ್ಲ ಒಂದು ನೆಲೆ ಮಾಡಿಕೊಟ್ಟೆ. ಕೊನೆಗೊಂದು ದಿನ ಹೆಂಡತಿ ತೀರಿ ಹೋದಳು. ಹೆಂಡತಿಯನ್ನು ಮಣ್ಣಿಗೆ ಕಳುಹಿಸಿ ಯಾರಿಗೂ ಸಣ್ಣ ಸುಳಿವೂ ಕೊಡದೆ ನಿಶ್ಚಿಂತೆಯಿಂದ  ನಾನು ಮನೆ ಬಿಟ್ಟೆ . ಮನೆ ಬಿಟ್ಟು ಬಂದು ನಿನ್ನಂತೆಯೇ ಹುಲಿದೇವನ ಗುಡ್ಡ ದಾಟಿದೆ. ಗುಡಿಸಲು ಕಟ್ಟಿಕೊಂಡೆ. ಹಾಂ ಇನ್ನೊಂದು ವಿಷಯ .ನೀನು ನನಗೆ ಅಜ್ಜನೆಂದು ಕರೆಯುತ್ತಿದ್ದೀಯಲ್ಲ .ನಾನು ನಿನ್ನಜ್ಜನ ಅಪ್ಪ .ನಿನ್ನ ಮುತ್ತಜ್ಜ ನಾನು ಮಗು ಎಂದ . ‘ ಮುತ್ತಜ್ಜನಾ? ಎಲ್ಲೋ ಒಮ್ಮೆ ಅಪ್ಪ ನನಗೆ ಬಯ್ಯುವಾಗ ನಿನ್ನನ್ನೂ ಸೇರಿಸಿ ನನಗೆ ಬಯ್ಯುತ್ತಿದ್ದ. ತಿಕ್ಕಲು ಹಿಡಿದು ಮನೆ ಬಿಟ್ಟು ಹೋದ ನಿನ್ನ ಮುತ್ತಜ್ಜ ಒಬ್ಬನಿದ್ದ. ನೀನು ಅವನಂತೆಯೇ ಒಂದು ದಿನ ಬಿಟ್ಟು ಹೋದರೂ ಹೋಗುವವನೇ. ಯಾವುದಕ್ಕೂ ಕೆಲಸಕ್ಕೆ ಬಾರದವನು ನೀನು. ಮನೆ ಬಿಟ್ಟು ಅಂಡಲೆಯಲಿಕ್ಕೆ  ಲಾಯಕ್ಕು ‘ ಎನ್ನುತ್ತಿದ್ದ.

  ಅಜ್ಜ ದೊಡ್ಡದಾಗಿ ಸ್ವಲ್ಪ ವಿಷಾದ ಬೆರೆಸಿ ನಕ್ಕ. ‘ಮಕ್ಕಳನ್ನೆಲ್ಲ ಒಂದು ಹಂತಕ್ಕೆ ಬೆಳೆಸಿ ,ಯಾವುದಕ್ಕೂ ಕೊರತೆಯಾಗದಂತೆ ಎಲ್ಲವನ್ನೂ ಮಾಡಿಕೊಟ್ಟು ಮನೆ ಬಿಟ್ಟು ಬಂದವನು ನಾನು. ಈಗ ನಿನ್ನ ಅಪ್ಪ ತಿನ್ನುತ್ತಿರುವುದೂ ನನ್ನ ಬೆವರಿನ ಫಲವನ್ನೇ. ನನ್ನನ್ನೇ ತಿಕ್ಕಲೆಂದು ಅನ್ನುತ್ತಿದ್ದಾನೆ. ನಾನು ಮಾಡಿಟ್ಟಿದ್ದನ್ನು ನನ್ನ ಮಕ್ಕಳು ಉಂಡರು. ಅವರ  ಕಾಲ ಆಗಿ ಹೋದ ಮೇಲೆ ಈಗ ನಿನ್ನಪ್ಪ ಉಣ್ಣುತ್ತಿದ್ದಾನೆ .ಆತ ಅವನದೆಂದು ಏನನ್ನೂ ಸ್ವಂತವಾಗಿ ಕಟ್ಟಲಿಲ್ಲ. ಬೆಳೆಸಲಿಲ್ಲ . ಅವನಿಗೆ ಅವನಂತೆಯೇ ನೀನು ಆಗಬೇಕಿತ್ತೆಂಬ ಹಂಬಲ. ನೀನು ಯಾವ ಅಂಕೆಯಿಲ್ಲದ ಚೈತನ್ಯ. ನಮ್ಮ ಜನರಿಗೆ ಎಲ್ಲರೂ ತಮ್ಮಂತೆಯೇ ಸಾದಾ ಸೀದಾ ಇದ್ದು ಬಿಟ್ಟರಾಯಿತು. ಹೊಸ ದಾರಿ ಹಿಡಿದು ಹೊರಟವರು ಅವರಿಗೆ ಹುಚ್ಚರಂತೆ ಕಾಣುತ್ತಾರೆ. ಕೆಲವೊಮ್ಮೆ ಇವನ್ನೆಲ್ಲ ನೋಡಿದರೆ ಸಂಕಟವಾಗುತ್ತೆ .ಕೆಲವೊಮ್ಮೆ ಅಯ್ಯೋ ಪಾಪದ ಜನ  ಎಂದೆನಿಸಿ ಮರುಕ ಹುಟ್ಟುತ್ತೆ. ಹ್ಮ್ಮ್ ಇರಲಿ ಬಿಡು. ಈಗ ನೀನು ಸಿಕ್ಕಿದ್ದಿ. ನಾಳೆ ಇನ್ಯಾರೋ ಸಿಗುತ್ತಾರೆ ನಿನ್ನಂಥವರು. ಪ್ರಕೃತಿಯೇ ಹಾಗೆ. ಕಾಲ ಕಾಲಕ್ಕೆ ಹೊಸದಾರಿ ತೋರುವವರನ್ನು ತುಂಬಾ ಜತನದಿಂದ ಸೃಷ್ಟಿಸಿ ಜಗತ್ತಿಗೆ ಕಳುಹಿಸಿ  ಕೊಡುತ್ತೆ’

   ‘ ಹ್ಮ್ಮ್ ಅಜ್ಜ .ಅಲ್ಲಲ್ಲ ಮುತ್ತಜ್ಜ  ..ಉಹುಂ ಮುತ್ತಜ್ಜ ಯಾಕೋ ಬೇಡ ಅನ್ನಿಸ್ತಾ ಇದೆ.  .ದೊಡ್ಡಜ್ಜ ಎಂದು ಕರೀತೀನಿ ಇನ್ಮೇಲೆ.  ಚಿಕ್ಕವನಿದ್ದಾಗಲೇ ಕೆಲವು ಕಟು ಸತ್ಯಗಳು ನಿನ್ನ ಬದುಕಿನ ಗತಿಯನ್ನ ನಿರ್ಧರಿಸಿಬಿಟ್ಟವು ಎಂದೆಯಲ್ಲ. ಏನದು.?

‘ನನ್ನಮ್ಮನ ಸಾವು ಮತ್ತು  ನನ್ನಪ್ಪನ ಬದುಕು.ಅಮ್ಮ ಹೋದ ಮೇಲಿನ ಅಪ್ಪನ ಬದುಕು ’ ಯಾವಾಗಲೂ ಮಂದಹಾಸವನ್ನೇ ಸೂಸುತ್ತಿದ್ದ ಅಜ್ಜನ ಮುಖದಲ್ಲಿ ಸಂಕಟದ ಗೆರೆ ಸುಳಿಯಿತು. ಕಣ್ಣು ಹನಿಗೂಡಿದವು . ಕೊನೆಗೆ ಒಂದಕ್ಷರವನ್ನೂ ಅಜ್ಜನಿಗೆ ಮಾತಾಡಲಿಕ್ಕೆ ಆಗಲಿಲ್ಲ.ಕಣ್ಣು ಮುಚ್ಚಿ ಸುಮ್ಮನೆ ಕುಳಿತುಬಿಟ್ಟ. :) :) :) 
   

Saturday, April 6, 2013

ಸಭ್ಯ ಪೋಲಿ ಕವನ ೮ ...........:) :) ;)


ಕೋರಿಕೆ ಇಡುವ  ಮುನ್ನವೇ ಒಲಿದಿರುವೆ 
ನೀನಾಗಿ ನೀನೇ ಬಂದು 
ಅಪ್ಪಿ ಎನ್ನ ಹಣೆಗೊಂದು ಮುತ್ತನಿಟ್ಟು 
ತುಂಬ ಒಳ್ಳೆಯ ಹುಡುಗ ನಾನೆಂದು ಹೇಳಲಾರೆ 
ಇಷ್ಟೆಲ್ಲಾ ಆಗಿ ಹೋದ ಮೇಲೂ 
ಆದರೆ  ಹೆಣ್ಣಾಗಿ ನಿನಗಿದು ಸರಿಯೇ 
ಕೊಂಚವಾದರೂ 
ತೋರಿಕೆಗಾದರೂ ಒಂದೆಳೆಯ  ನಾಚಿಕೆ 
ನಿನ್ನ ಕಣ್ಣಲ್ಲಿ ಸುಳಿಯಬಾರದೆ
ಚಿಕ್ಕದೊಂದು ಭಯ 
ನಯವಾಗಿ ಒಂದು ಒಲ್ಲೆನೆಂಬ ಉದ್ಗಾರ
ಹೀಗೆ ಏನೂ ಇರದೆ 
ಬಿಡು ಬೀಸು ತೊರೆಯಂತೆ ಧುಮ್ಮಿಕ್ಕಿ ಬಂದಿರುವೆ
ಬಂದ ಕಾರ್ಯ ಬಾಗಿಲಲ್ಲೇ ಮುಗಿದಂತೆ ನಾನು ಕಂಗಾಲಾಗಿರುವೆ  
ಗಂಡು ಬೇಡಬೇಕು ಹೆಣ್ಣು ಮೀನಾಮೇಷ ಎಣಿಸಬೇಕು 
ಮುನ್ನುಡಿಯೇ ಇರದೆ ನೇರ ಬೆನ್ನುಡಿಗೆ ಬಂದು 
ನಿಯಮ ಮುರಿದಿರುವೆ . 

ನಿಯಮ ಮೀರಲೆಂದೇ ಬಂದದ್ದು ಈ ಹದಿಹರೆಯ 
ಮೀರದೆ ಹರೆಯಕೊಂದು ಹುರುಪಿಲ್ಲ 
ಮೀರದೆ ಉಳಿದರೆ ಹರೆಯಕೆ ಮೂರು ಕಾಸಿನ ಬೆಲೆಯಿಲ್ಲ 
 ಮೀರುವುದೇ ತುರ್ತಿನ ಮುಕ್ತಿಯ ದಾರಿ 
ಮೀರಿದ ಮರುಘಳಿಗೆ ಪ್ರಣಯವೇ  ಹರೆಯ ಸಾಕ್ಷಾತ್ಕಾರ 
 ಮೀರುವ  ಕರ್ಮ ಅನಿವಾರ್ಯ ಎಂದಾದ ಮೇಲೆ 
ನಿಯಮ ಮುರಿವ ಕಾರ್ಯಕೆ 
ನಾನಾದರೇನು ನೀನಾದರೇನು 
ಸೋಗು ಹಾಕಿ ನಾನೇಕೆ ಕೂರಲಿ ಹೇಳು 
ಮನವು ಒಲಿದೆಡೆ ತನುವ ನೈವೇದ್ಯ ತಪ್ಪೇನು?

ಬೇಡ  ಬಿಡು ಈ ತರ್ಕದ ಸರಕು 
ಆಟ ಶುರುವಾಗುವ ಹೊತ್ತು 
ಸೋತೂ ಗೆಲ್ಲುವ 
ಗೆದ್ದೂ ಸೋಲುವ ಈ ಆಟದಲಿ 
ನಿಯಮ ಮರೆತು ಬಿಡು 
ಎಲ್ಲವನೂ ಬದಿಗಿಟ್ಟು ಧ್ಯಾನಕ್ಕೆ ಬಿದ್ದುಬಿಡು 
ಉಳಿದದ್ದು ಸಮಯಕ್ಕೆ ಬಿಟ್ಟು ಬಿಡು 
ಸಾಕು ಮಾತನಾಡಿದ್ದು 
ತಡಮಾಡದೆ ಈಗ ಎದೆಯ ಮಿದುವಿಗೊಂದು
ಬಿಸಿಯುಸಿರು ಹದವಾಗಿ ಬೆರೆತ ಮುತ್ತನಿಡು J J