ಒಂದೂವರೆ ವರುಷದ ಹಿಂದೆ ಒಂದು ಕವನ ಬರೆದಿದ್ದೆ. ಅದು ಮಾಮೂಲಿ ಕವನವಾಗಿರಲಿಲ್ಲ. ಅಲ್ಲಿ ಕೊಂಚ ಪೋಲಿತನವಿತ್ತು..ಹಸಿಬಿಸಿಯ ಭಾವಗಳೇ ಅಲ್ಲಿ ಪದಗಳಾಗಿದ್ದವು. ಆಗ ಆ ಕವನವನ್ನ ನನ್ನ ಬ್ಲಾಗಿನಲ್ಲಿ ಹಾಕಿಕೊಳ್ಳಲು ಧೈರ್ಯ ಸಾಲಲಿಲ್ಲ. ಅತ್ತಿಗೆ ಒಮ್ಮೆ ಬರೆದ ಬ್ಲಾಗ್ ಇದು.ಇಲ್ಲಿ ಇದು ಬೇಡ ಎಂಬ ಭಾವನೆ ನನ್ನ ಹಿಂಜರಿಕೆಗೆ ಕಾರಣವಾಗಿತ್ತು. ಆದರೆ ಸುಮ್ಮನೆ ಕೂರುವಂತೆಯೂ ಇರಲಿಲ್ಲ. ಕವನಕ್ಕೆ ಒಂದು ಮುಕ್ತಿ ಕಾಣಿಸಲೇ ಬೇಕಿತ್ತು. ಆಗ ನನಗೆ ನೆನಪಾದದ್ದು ‘ ಮೋಟುಗೋಡೆ’ ಬ್ಲಾಗು. ಸುಶ್ರುತಣ್ಣನಿಗೆ ಆ ಕವನವನ್ನ ಕಳಿಸಿಕೊಟ್ಟೆ. ಕೊನೆಗೆ ಅದು ‘ಮೋಟುಗೋಡೆ’ ಬ್ಲಾಗಿನಲ್ಲಿ ಬೆಳಕು ಕಂಡಿತು. ಅಲ್ಲಿಂದ ಮುಂದೆ ನನ್ನ ಪೆನ್ನಿನ ಇಂಕಿನಲ್ಲಿ ಸ್ವಲ್ಪ ಭಾಗವನ್ನ ಸಭ್ಯ ಪೋಲಿ ಕವನಗಳಿಗೆ ಮೀಸಲಿಟ್ಟೆ. ನಂತರದ ಆ ತರಹದ ನನ್ನ ಕವನಗಳಿಗೆಲ್ಲ ಮೋಟುಗೋಡೆ ವೇದಿಕೆಯಾಯಿತು.
ಆಗಾಗ ನಾನು “ಅತ್ತಿಗೆ ಈ ನನ್ನ ಬ್ಲಾಗಿನ ಒಡತಿ.ನಾನು ಇಲ್ಲಿ ಸೂರು ಹುಡುಕಿಕೊಂಡ ಅಲೆಮಾರಿ ಮಾತ್ರ” ಎಂದು ಹೇಳುತ್ತಿದ್ದೆ. ನನ್ನ ಆ ಮಾತಿಗೆ ಅತ್ತಿಗೆಯ ಆಕ್ಷೇಪವಿತ್ತು. “ ಇದು ನಿನ್ನದೇ ಬ್ಲಾಗು.ನೀನೇ ಇದರ ಒಡೆಯ ’’ ಎಂದು ಅತ್ತಿಗೆ ಪ್ರತಿಬಾರಿ ಹೇಳುತ್ತಿದ್ದಳು. ಅತ್ತಿಗೆಯ ಈ ಮಾತನ್ನೇ ನನಗೆ ಸಿಕ್ಕ ಸ್ವಾತಂತ್ರ್ಯ ಹಾಗು ಅನುಮತಿ ಎಂದುಕೊಂಡು ‘ಮೋಟುಗೋಡೆ ಕವನ’ಗಳನ್ನ ಇನ್ನು ಮೇಲೆ ನನ್ನ ಬ್ಲಾಗಿನಲ್ಲಿಯೇ ಹಾಕಿಕೊಳ್ಳುತ್ತೇನೆ.
ಈ ಸಂದರ್ಭದಲ್ಲಿ ಸುಶ್ರುತಣ್ಣ ಹಾಗು ಅವನ ಮೋಟುಗೋಡೆ ಬಳಗದವರನ್ನ ನಾನು ನೆನೆಯಲೇ ಬೇಕು. ‘ಮೋಟುಗೋಡೆ ಬ್ಲಾಗ್ ’ ನನ್ನದಲ್ಲ.ನಾನು ಅದರ ಸದಸ್ಯ ಕೂಡ ಅಲ್ಲ.ಆಗೊಮ್ಮೆ ಈಗೊಮ್ಮೆ ಕವನ ಕಳಿಸುತ್ತಿದ್ದೆ ಅಷ್ಟೇ.ಆದರೂ ನನ್ನ ಮಾನಸದಲ್ಲಿ ‘ಮೋಟುಗೋಡೆ’ ನನ್ನದೇ ಎನ್ನುವಷ್ಟು ಆತ್ಮೀಯತೆ ಬೆಳೆದುಹೋಗಿತ್ತು. ಇಷ್ಟು ದಿನ ಅವರು ನನಗೆ ಅವಕಾಶ ಕೊಟ್ಟು ಬೆಂಬಲಿಸಿ ಪ್ರೋತ್ಸಾಹ ನೀಡಿದ್ದಾರೆ. ಈಗ ಈ ಸಭ್ಯ ಪೋಲಿ ಕವನಗಳ ಮಾಲಿಕೆ ಶುರುವಾಗುತ್ತಿದೆ ಎಂದರೆ ಅದಕ್ಕೆ ಕಾರಣ ‘ಮೋಟುಗೋಡೆ ’ ಬಳಗದ ಬೆಂಬಲ ಹಾಗು ಪ್ರೋತ್ಸಾಹ. ಅವರಿಗೆ ನಾನು ಸದಾ ಋಣಿ.
ಇಲ್ಲಿನ ಕವನಗಳೆಲ್ಲ ಪ್ರಕೃತಿದತ್ತ .ಪ್ರತಿ ಪದಕ್ಕೂ ಅಪಾರ ಅರ್ಥ.ಓದುಗನ ಅನುಭವದ ವ್ಯಾಪ್ತಿಯೇ ಕವನದ ಅರ್ಥದ ಮಿತಿ. ಅನುಭವ ಜಾಸ್ತಿ ಇದ್ದಷ್ಟೂ ಅರ್ಥ ಜಾಸ್ತಿ. ಅನುಭವದ ಅಭಾವದಲ್ಲಿ ಕಲ್ಪನೆ ನೆರವಾಗಬಲ್ಲದು. ಕಲ್ಪಿಸಿದಷ್ಟೂ ಅರ್ಥ ಆಳವಾಗುತ್ತೆ, ಬೆಳೆಯುತ್ತೆ
ಸಭ್ಯ ಪೋಲಿ ಕವನ ೧ .........
ನಿನ್ನೆಡೆಗಿನ ಎನ್ನ ಮೋಹ ಅನೂಚಾನ
ಒಮ್ಮೆ ಸಮ್ಮತದ ಮುದ್ರೆಯಾಗು
ಸ್ವಾಗತದ ಭಂಗಿಯಾಗು
ಮುಂದೆ ಸಕಲವೂ ನಿರ್ವಿಘ್ನ
.
ಮಡುಗಟ್ಟಿದೆ ಯೌವ್ವನದ ಅಂಬರದಿ
ಮೊದಲ ಮಳೆಯ ಮೋಡ
ಬೀಸುತಿದೆ ಚುಂಬಕ ಹೂ ಬಿಸಿಯ ಗಾಳಿ
ಕಾಣುತಿದೆ ನಿನ್ನ ಕಣ್ಣಲಿ ಕೋಲ್ಮಿಂಚು
ಕಾಲಬೆರಳಲಿ ಗೀಚಿದ ಕಾಮನಬಿಲ್ಲು
ಅಗೋ ಅಲ್ಲಿ ಹಣೆಯ ನೆರಿಗೆ ನೀರಾಗಿದೆ
ಕೊರಳ ಇಳಿಜಾರಿನಲಿ
ನವಜಾತ ಬೆವರ ಹನಿಯೊಂದು ಬೆವರುತಿದೆ
ಏರಿಳಿಯುತಿದೆ ಎದೆಯಗೂಡು
ಮುಚ್ಚಿಟ್ಟು ಕೂಡಿಟ್ಟು ಕಳೆಯುತಿದೆ ಕಾಲ ಕಳೆಗುಂದಿ
ಬಯಲಾಗು
ಹನಿಯಲಿ ಮೋಡದೊಳಗಣ ಸೊಬಗು
ದಣಿದಣಿದು ತಣಿಯಲಿ ನಾನೆಂಬ ಇಳೆ
ಕಣಕಣವಾಗಿ ಧನ್ಯವಾಗಿ
ಹೂವಾಗಲಿ ಮಣ್ಣ ಘಮ ಹನಿಯ ಕೂಡಿ
ಹದವಾದ ಘಳಿಗೆಯಲಿ
ಮೊಳೆಯಲಿ ಆತ್ಮದಾನಂದ
ದ್ವೈತ ಅದ್ವೈತವಾಗಿ .....