Saturday, April 11, 2020

ನೆನಪು, ಕನಸು ಮತ್ತು ನಾನು

ಇನ್ನೇನು ನಗಬೇಕು , ಅಷ್ಟರಲ್ಲಿ ಯಾರೋ  ಬಾಗಿಲು ತಟ್ಟಿದ ಸದ್ದು . ಹೊತ್ತಲ್ಲದ ಹೊತ್ತಿನಲ್ಲಿ ಯಾರು ಬಂದಿರಬಹುದು ಎಂಬ ಯೋಚನೆ ಸುಳಿದು ಹೋಯಿತು. ಬಹುಶಃ ನೆನಪು ಬಂದಿರಬೇಕು . ಹಾಗೆಂದುಕೊಂಡು ನಿಟ್ಟುಸಿರು ಬಿಟ್ಟೆ.  ಈ ನೆನಪು ಮೊದಲಿನಿಂದಲೂ  ಹೀಗೆಯೇ , ಕಾಲಿಂಗ್ ಬೆಲ್ ಒತ್ತುವ ಸೌಜನ್ಯ , ಸಂಸ್ಕಾರ  ಚೂರೂ ಇಲ್ಲ. ಹೊತ್ತಲ್ಲದ ಹೊತ್ತಿನಲ್ಲಿ ಬಂದು ಬಾಗಿಲು ಬಡಿಯುತ್ತ ನಿಂತಿರುತ್ತೆ .

ಬಾಗಿಲು ತೆರೆದೆ. ನನ್ನ ಎಣಿಕೆ ಸುಳ್ಳಾಗಲಿಲ್ಲ. ಬಂದದ್ದು ನೆನಪೇ . ಹೀಗೆ ನೆನಪು ಹೇಳದೆ ಕೇಳದೆ ಪ್ರತಿಬಾರಿ ಬಂದಾಗಲೆಲ್ಲ , ನಾನು ಕೊಂಚವೂ ಬೇಸರಿಸದೆ ಬಾಗಿಲು ತೆರೆಯುತ್ತೇನೆ. ಯಾಕೆಂದರೆ ನೆನಪು ತುಂಬಾ ಭಾವುಕ. ನನ್ನಿಂದ ಒಂದಿಷ್ಟು ಅನುಕಂಪ, ಸಾಂತ್ವನವನ್ನ ನಿರೀಕ್ಷಿಸಿ ದೈನೇಸಿಯಂತೆ ಬಾಗಿಲಲ್ಲಿ ನಿಂತಿರುತ್ತೆ.

ಹಾಗೆ ಬಂದ ನೆನಪಿನ ಕಷ್ಟ ಸುಖವನ್ನ ವಿಚಾರಿಸಿ, ಸಂತೈಸಿ, ಕಣ್ಣೊರೆಸಿ ಕಳುಹಿಸುವುದು ವಾಡಿಕೆ . ನೆನಪು ಅಷ್ಟು ಸುಲಭಕ್ಕೆ ಹೋಗುವುದಿಲ್ಲ.  ನೆನಪಿಗೆ ಕೈ ಬೇಸಿ ವಿದಾಯ ಹೇಳಬೇಕು ಎನ್ನುವಷ್ಟರಲ್ಲಿ , ನೆನಪು ಕೈ ಹಿಡಿದು ಜೊತೆಗೆ ಬಾ ಎನ್ನುತ್ತೆ . ಕೊನೆಗೆ ನೆನಪನ್ನ ಪರಿ ಪರಿಯಾಗಿ ಬೇಡಿಕೊಂಡು , ನೀನೀಗ ಹೋಗು ಎಂದು ನೆನಪಿಗೆ ಸಮಾಧಾನ ಹೇಳಿ , ಬೀಳ್ಕೊಡುವಷ್ಟರಲ್ಲಿ  ನಾನು ಪ್ರತಿ ಬಾರಿ ಹೈರಾಣಾಗಿ ಹೋಗಿರುತ್ತೇನೆ.

ಈ ಬಾರಿ ಕೂಡ, ಎಂದಿನಂತೆ ನೆನಪನ್ನ ಕಳುಹಿಸಿ , ಬಾಗಿಲನ್ನ ಭದ್ರವಾಗಿ ಹಾಕಿದ್ದೇನೆ ಎನ್ನುವುದನ್ನ ಖಾತ್ರಿ ಮಾಡಿಕೊಂಡು ಒಳಗೆ ಬಂದೆ. ಆಗಲೇ ಪೂರ್ತಿ ಬಸವಳಿದು ಹೋಗಿದ್ದ ನಾನು , ನಗುವುದು ಹಾಗಿರಲಿ, ನೆಮ್ಮದಿಯಾಗಿ ಮಲಗಿದರೆ ಸಾಕೆಂದು ಹಾಸಿಗೆಯನ್ನ ತಲುಪಿಕೊಂಡೆ. ಕಣ್ಣು ಮುಚ್ಚಿದ್ದೆ ತಡ, ಯಾವುದೋ ಮಾಯದಲ್ಲಿ ಬಂದ ಕನಸು , 'ನಾನು ಬಂದೆ ' ಎಂದು ಹೇಳಿದ್ದು ಅಸ್ಪಷ್ಟವಾಗಿ ನಿದ್ದೆಗಣ್ಣಿನ ಕಿವಿಗೆ ಕೇಳಿಸಿದಂತಾಯಿತು.

ಕನಸು ನೆನಪಿನಂತೆ ಭಾವುಕನಲ್ಲ . ಕೊಂಚ ಹುಂಬ. ಅಂಗೈಯಲ್ಲೇ ಆಕಾಶ ತೋರಿಸ್ತೀನಿ ಬಾ ಎನ್ನುತ್ತೆ. ನಕ್ಷತ್ರ ಲೆಕ್ಕ ಹಾಕು ಎನ್ನುತ್ತೆ. ನೆನಪಿನಿಂದ ಪಾರಾಗಿ ಸುಖವಾಗಿ ಮಲಗಬೇಕಿದ್ದ ನನ್ನ ತಲೆಯಲ್ಲಿ ಏನೇನೋ ಆಸೆ, ಆಮಿಷಗಳನ್ನೆಲ್ಲ ತುಂಬಿ , ನೆನಪಿನ ಸಹವಾಸ ಸಾಕು , ನನ್ನ ಜೊತೆ ಬಾ , ನಿನ್ನ ಪಾಲಿನ ನೆರಳು ನಾನೆ ಎನ್ನುತ್ತೆ .

ಎತ್ತ ಹೋಗುವುದು ? ಈ ಕನಸು ಮತ್ತೆ ನೆನಪು ಇಬ್ಬರೂ ನನ್ನ ನಿದ್ರೆಯನ್ನ , ನೆಮ್ಮದಿಯನ್ನ ಕಿತ್ತುಕೊಳ್ಳುತ್ತಾರೆ.  ಸುಖ ಸಂತೋಷ ಅರಸಿ ಹೊರಟ ನನಗೆ, ಇವರಿಬ್ಬರೂ ಅನೇಕ ಬಾರಿ  ದಾರಿ ತಪ್ಪಿಸಿದ್ದಾರೆ. ಇವರಿಬ್ಬರನ್ನೂ ತೀರಾ ಹತ್ತಿರಕ್ಕೆ ಬಿಟ್ಟುಕೊಂಡರೆ ಅಪಾಯ. ದೂರ ಮಾಡುವಂತೆಯೂ ಇಲ್ಲ. ಉಭಯಸಂಕಟ.

ಕೊನೆಗೆ ನಾಳೆಯೇ ಹೋಗಿ , ಎರಡು ಮೂಗುದಾರ ತರುವುದೆಂದು ನಿರ್ಧಾರ ಮಾಡಿಕೊಂಡೆ.  ನೆನಪು ಮತ್ತು ಕನಸು, ಇಬ್ಬರನ್ನೂ ಕರೆಸಿ , ಮೂಗುದಾರ ಹಾಕಬೇಕು , ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕಾಡಬೇಡಿ ಎಂಬ ಎಚ್ಚರಿಕೆ ಕೊಟ್ಟು, ಸಮಯ ಪ್ರಜ್ಞೆಯ ಪಾಠ ಹೇಳಬೇಕು , ನನ್ನಿಂದ ನೀವು , ನಿಮ್ಮಿಂದ ನಾನಲ್ಲ ಅನ್ನುವುದನ್ನ ಮನವರಿಕೆ ಮಾಡಿಕೊಡಬೇಕು ಎಂದೆಲ್ಲ ನಿರ್ಧರಿಸಿಕೊಂಡೆ.
**
ದುರಂತವೇನೆಂದರೆ ,ಅವತ್ತಿನಿಂದ ಇವತ್ತಿನ ವರೆಗು ತಂದಿಟ್ಟುಕೊಂಡ ಮೂಗು ದಾರ ನನ್ನ ಕೈಯಲ್ಲೆ ಉಳಿದು ಹೋಗಿದೆ . ಕನಸು ಮತ್ತೆ ನೆನಪುಗಳ ಮೊಂಡುತನದ ಮುಂದೆ  ನಾನು ಪ್ರತಿ ದಿನ , ಪ್ರತಿ ಕ್ಷಣ ಸೋಲುತ್ತಲೇ ಇದ್ದೇನೆ . ಅಸಹಾಯಕನಾಗಿದ್ದೇನೆ .