Sunday, October 21, 2012

ಸಭ್ಯ ಪೋಲಿ ಕವನ ...೪


ಮೌನ ಖಾಲಿ ಹಾಳೆ .....ಕೊನೆಯಲ್ಲಿ ನನ್ನ ಸಹಿಯಿದೆ 



ಎಷ್ಟೊಂದು ಕೇಳಿದೆ
ಎಷ್ಟೊಂದು ಬೇಡಿದೆ
ಒಂದೇ ಒಂದು ಮರು ಮಾತಿಲ್ಲ
ಈ ಪರಿಯ ಮೌನ ಈಗೇಕೆ
ಹೇಳು ಏನಾದರೂ ಹೇಳು


ಅಯ್ಯೋ ಹುಚ್ಚು ಹುಡುಗಾ
ಮಾತಲ್ಲಿ ಏನಿದೆ
ಮೌನ ಖಾಲಿ ಹಾಳೆ
ಪುಟದ ಕೊನೆಯಲ್ಲಿ ನನ್ನ ಸಹಿಯಿದೆ
ಬೇಕಾದ್ದು ಗೀಚಿಕೋ
ನಾ ಒಲಿವೆ ನಿನ್ನ ಬಯಕೆಯಂತೆ

'ಸರಿ'
ಮೊದಲೊಂದು ಮುತ್ತನಿಡುವೆ
ತುದಿಗೊಂದು ಪೂರ್ಣವಿರಾಮ?
ಪೆದ್ದು ಹುಡುಗ
ಮುತ್ತು ಮೊದಲ ಮೆಟ್ಟಿಲು
ನನ್ನೊಡಲ ಗರ್ಭ ಗುಡಿಗೆ
ಇಲ್ಲಿ ಇರಬೇಕಾದ್ದು ಪೂರ್ಣವಿರಾಮವಲ್ಲ
ಕಾಮ, ಸುಮ್ಮನೆ ಬರೆಯುತ್ತ ಹೋಗು
ನಡುವೆ ಕಾಮ ಸೇರಿಸಿ

'ಹ್ಮ್ಮ್ ಸರಿ,
ಮೊದಲೊಂದು ಮುತ್ತನಿಡುವೆ
ಹಣೆಯಿಂದ ಕಾಲ ಕಿರು ಬೆರಳ ತನಕ
ಒಂದರ ಮೇಲೆ ಇನ್ನೊಂದು
ಮೆಲು ಗಾಳಿಯಂತೆ ತಾಕುವೆ
ಮತ್ತೆ ಬುಡದಿಂದ ತುದಿಯವರೆಗೆ

'ಮತ್ತೇನು'
ಸಾಕು ಬಿಡು ಬರೆದದ್ದು
ಮೊಗ್ಗು ಅರಳಿದೆ
ಗರ್ಭಗುಡಿಯೇ ಮೊದಲ ಮೆಟ್ಟಿಲ ತನಕ ಬಂದಿದೆ
ಈಗೊಂದು ಮುತ್ತನಿಡು ,,,,

ಬೆಳಕು ಆರಿಸಿ ಕಾಮ
ಇರುಳ ಬೆಳಗಿತು ಕಾಮ
ದೇಹ ಬೆಸೆಯಿತು ಕಾಮ
ಮೋಕ್ಷ ತೋರಿತು ಕಾಮ
ಅಲ್ಲೊಂದು ಸುಖದ ಉಸಿರು
ಇಲ್ಲೊಂದು ಏದುಸಿರು
ಪೂರ್ಣವಿರಾಮ.




Thursday, October 18, 2012

ಮಿಲಿ .....ಕಳ್ಳ ತುಂಟ ಬೆಕ್ಕು ಮರಿ



ಮಿಲಿ ಮಿಲಿ ಮುದ್ದು ಮಿಲಿ
ಕಳ್ಳ ತುಂಟ ಬೆಕ್ಕು ಮರಿ
ಪುಟ್ಟ ಪುಟ್ಟ ಹೆಜ್ಜೆಯಲ್ಲಿ
ಆಚೆ ಈಚೆ ಹಾರಿ ಓಡೋ
ಮುದ್ದು ಉಣ್ಣೆ ಚೆಂಡು ಮಿಲಿ
ಕೈಗೆ ಸಿಕ್ಕ ಕ್ಷಣವೇ
ಜಾರಿಕೊಂಡು ಓಡಿ ಹೋಗಿ
ಎಲ್ಲೊ ಮೂಲೆಯಲ್ಲಿ ಅಡಗಿ
ಕಣ್ಣಾ ಮುಚ್ಚೆ ಕಾಡೆಗೂಡೆ
ನನ್ನ ಪುಟ್ಟ ಬೆರಗು ನೀನು
ಮುದ್ದು ಬೆಣ್ಣೆ ಮುದ್ದೆ ಮಿಲಿ

ಕಾಯಿಸಿಟ್ಟು ಮುಚ್ಚಿ ಇಟ್ಟ
ಹಾಲು ಹುಡುಕಿ ಕಣ್ಣ ಮುಚ್ಚಿ
ಕದ್ದು ಕುಡಿದು
ಹಾಲು ಬಳಿದ ಚಿಗುರು ಮೀಸೆ ಹೊತ್ತು
ಮಳ್ಳನಂತೆ ಸುತ್ತ ಸುಳಿವ
ನನ್ನ ಪುಟ್ಟ ಕಳ್ಳ ಮಿಲಿ

ಮಿಂಚಿ ಹೋದ ಮಿಂಚು ಮಿಲಿ
ನನ್ನ ಪುಟ್ಟ ಗೆಳೆಯ ಮಿಲಿ
ಇಂದು ನೀನು ಜೊತೆಯಲಿಲ್ಲ 
ಕಾಲ ಕದ್ದು ಒಯ್ಯಿತಲ್ಲ
ನನಗೆಲ್ಲ ಆದವನು ನೀನು
 ನೆನಪಲ್ಲಿ ಮಾತ್ರವೇ  ಉಳಿದೆಯಲ್ಲ  
ಹೀಗೆ ಪದ್ಯವಾಗಿ ಹೋದೆಯಲ್ಲ
ಜಾಸ್ತಿ ಇನ್ನು ಬರೆಯಲಾರೆ
ಕಣ್ಣ ತುಂಬ ನಿನ್ನ ಚಿತ್ರ
ಕಣ್ಣ ಅಂಚು ಒದ್ದೆ ಒದ್ದೆ
ಕಣ್ಣ ಹನಿಗಳೆಲ್ಲ ಒಳಗೇ ಇರಲಿ
ಜಾರಿ ಇಳಿದು
ನಿನ್ನ ಚಿತ್ರ ಕರಗದಿರಲಿ

ಮಿಲಿ ಮಿಲಿ ಮುದ್ದು ಮಿಲಿ
ಕಳ್ಳ ತುಂಟ ಬೆಕ್ಕು ಮರಿ
 ನನ್ನ ಪುಟ್ಟ ಬೆರಗು ನೀನು
ನನ್ನ ಪುಟ್ಟ ಗೆಳೆಯ ಮಿಲಿ


Saturday, October 13, 2012

ಹವಿಗನ್ನಡ ಕವನ ............


ಮಂಗಳೂರು ಮಲ್ಲಿಗೆಗೆ ಮೈಸೂರು ಮಲ್ಲಿಗೆ ಕಸಿ


ಎಂತಕೆನ ಗೊತ್ತಿಲ್ಲೆ
ಕೊಟ್ಟಿಗೇಲಿ ,
ಬ್ಯಾಣದಲ್ಲಿ
ಗದ್ದೇಲಿ ತ್ವಾಟದಲ್ಲಿ
ಎಲ್ಲ್ ಹೋದ್ರು ನೀ ನೆನಪಾಗ್ತೆ
ಯಾವತ್ತೂ ಹಿಂಗೆಲ್ಲಾ ಆಗಿತ್ತಿಲ್ಲೆ ಇಲ್ಲಿತಂಕ

ಎಂತಕ್ಕೋ ಗೊತ್ತಿಲ್ಲೆ
ಹಂಗೆ  ಕೆರೆ ಏರಿ ಮೇಲೆ
ಸಂಜೆ ಹೊತ್ತಿಗೆ ಸುಖಾಸುಮ್ನೆ  ಹೋಗನ ಕಾಣ್ತು
ಕೆರೆ ತುಂಬ ಈಗ ಅಂತರಗಂಗೆ ಬೆಳದ್ದು
ಕೆರೆಲೀಗ ನೀರೇ ಇಲ್ಲೆ
ಅಥ್ವಾ ಎಂಗೆ ಕಾಣ್ಸ್ತಿಲ್ಲೇ ಅನ್ಸ್ತು
ಆದ್ರೂ ಕೆರಿಗೆ ಕಲ್ಲು ಹೊಡದು
ಅಲೆಯೇನಾದ್ರು ಯೋಳ್ತಾ ಹೇಳಿ
ಕಾಯ್ತಾ ಕೂರನ ಕಾಣ್ತು  
ಅಂತರಗಂಗೆಯೊಳಗೆ ಕೆಳಗೆ ಅಲೆ ಎದ್ರೂ ಎದ್ದಿಕ್ಕು
ತಾವರೆ ಹೂವು ಇದ್ರೂ ಇದ್ದಿಕ್ಕೂ ಹೇಳೂ ಅನ್ಸ್ತ್
ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಹೇಳಿ
ನರಸಿಂಹಸ್ವಾಮಿ ಪದ್ಯ ನೆನಪಾಗ್ತು
ಸಂತಿಗೆ ಅನಂತಸ್ವಾಮಿ ಹಾಡೂ
ಬಾಯಿ ಬಿಡದೆ ಮನ್ಸಲ್ಲೇ
ಪ್ರತಿಸಲ  ಹಾಡನ ಅನ್ಸ್ತು

ಅಜ್ಜನ ಮನೆಯಿಂದ ಅಮ್ಮ
ತಂದು ನೆಟ್ಟಿದ್ದ ಮಂಗಳೂರು ಮಲ್ಲಿಗೆ
ಬಳ್ಳಿ ತುಂಬ ಈಗ ಹೂವಾಜು
ನೀನು ಈಗ ಇಲ್ಲಿದ್ದಿದ್ರೆ
ನಿನ್ನ ಊರುದ್ದ ಜಡೆಗೆ ಮಾರುದ್ದ ದಂಡೆ ಮಾಡ್ಕಂಡು
ಖುಷಿಪಡ್ತಿದ್ದೆ ಅನ್ಸ್ತು

ಅಪ್ಪ ತಂದಿಟ್ಟಿದ್ದು
ಹಳೇ ಮೈಸೂರು ಮಲ್ಲಿಗೆ ಕ್ಯಾಸೆಟ್ಟು
ಪದೇ ಪದೇ ಕೇಳನ ಕಾಣ್ತು
ಮಂಗಳೂರು ಮಲ್ಲಿಗೆಗೆ ಮೈಸೂರು ಮಲ್ಲಿಗೆ ಕಸಿ
ಹಳೇ ಕ್ಯಾಸೆಟ್ಟಿಗೆ ಹೊಸಾ ಟೇಪ್  ರೆಕಾಡರ್ರು
ಮಲ್ಗೆ ಮೂಗ್ಗು ಅರಳಿ ಹಾಡಾಗ್ತಾ ಇದ್ದು
ಹಾಡಿನಲ್ಲಿ ಎಂಥದೋ ಪರಿಮಳ
ಎಂತದು ಹೇಳಿ ಗೊತಾಗ್ತಾ ಇಲ್ಲೆ
ಒಟ್ನಲ್ಲಿ ಏನೇನೋ ಆಗ್ತಾ ಇದ್ದು

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿ ಮಹಿಮೆ
ರಿವೈಂಡ್ ಮಾಡಿ ಮಾಡಿ ಕೇಳ್ತಾ ಕೂತ್ರೆ
ಈ  ಹಾಡು ಥೇಟ್   ನಿನ್ನಂಗೆಯಾ ಅನ್ಸ್ತು
ಅರ್ಥ ಮಾಡ್ಕಳಕ್ಕೆ ಹೊರಟ್ರೆ ಅರ್ಥ ಆಗಲ್ಲೆ
ಸುಮ್ಮನೆ ಕೇಳ್ತಾ ಕೂತ್ರೆ ಖುಷಿಗೆ ಲಿಮಿಟ್ಟೆ ಇಲ್ಲೆ.

ಜಾಸ್ತಿ ಎಂತ ಹೇಳದು
ಈಗೀಗ ಬರಿ ನೀನೇ ನೀನು
ಉಳಿದಿದ್ದೆಲ್ಲ
ಹಾಳು ಮೂಳು
ಮಣ್ಣು ಮಸಿ
ಒಣ ಶುಂಟಿ ಅಷ್ಟೇ.