ಇದು ಈ ದಿನಮಾನದ ಎಲ್ಲರ ಅಗತ್ಯ ....
ಹಿಂದಿದ್ದ ನನ್ನ ಹಳೆಯ ಬ್ಲಾಗಿನಲ್ಲಿ ಬ್ಲಾಗ್ ಶುರುಮಾಡಿದ ಆರಂಭದ ದಿನಗಳಲ್ಲಿ ಕೆಲವು ಕವನಗಳನ್ನ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೆ.ಆ ಕವನಗಳ ಹಿನ್ನೆಲೆಯಲ್ಲಿ ಇದ್ದದ್ದು ಗಾಢ ವಿಷಾದದ ಛಾಯೆ.ಜೊತೆ ಜೊತೆಗೆ ವಯಸ್ಸಿಗೆ ಮೀರಿದ ವೈರಾಗ್ಯ .ಕೆಲವರು ಈ ಬಗ್ಗೆ ಆಕ್ಷೇಪ ಎತ್ತಿ , ನಿನ್ನ ವಯಸ್ಸಿಗೆ ಇದು ಸರಿಯಲ್ಲ ಎಂಬ ಕಿವಿಮಾತು ಹೇಳುತ್ತಿದ್ದರು. ಅವರ ಆ ಆಕ್ಷೇಪದಲ್ಲಿ ಹುರುಳಿತ್ತು.ನಾನು ಬದಲಾದೆ. ನನ್ನ ಬರಹಗಳು ನನ್ನ ವಯಸ್ಸಿನ ದಿಕ್ಕಿಗೆ ಹೊರಳಿಕೊಂಡವು.
ನನಗೀಗ ವಯಸ್ಸು ಇಪ್ಪತ್ಮೂರು . ‘ ಹೆಣ್ಣು ಹೊನ್ನು ಮಣ್ಣು ಎಲ್ಲ ಮಾಯೆ ,ಎಲ್ಲ ನಶ್ವರ’ ಎನುವ ರೀತಿಯ ಮಾತುಗಳು ನನ್ನ ಕಡೆಯಿಂದ ಬರಲೇಬಾರದು.ಅದು ನಿಜಕ್ಕೂ ಆರೋಗ್ಯಕರ ಲಕ್ಷಣವಲ್ಲ. ಆದರೆ ಒಂದು ಹದವಾದ ಸಣ್ಣ ವೈರಾಗ್ಯ ನಿಜಕ್ಕೂ ಆರೋಗ್ಯಕರ ಎಂಬುದು ಈಗೀಗ ನಾನು ಕಂಡುಕೊಂಡ ಸತ್ಯ. ಈಗ ನನ್ನ ಪಾಲಿಗೆ ವೈರಾಗ್ಯವೆಂದರೆ ಕೇವಲ ವೈರಾಗ್ಯವಲ್ಲ. ಅದು ವಿರಾಗ.ವಿಶೇಷ ರಾಗ. ಜಗತ್ತನ್ನು ಬೇರೆಯದೇ ರೀತಿಯಲ್ಲಿ ನೋಡುವ ಮೂರನೇ ಕಣ್ಣು ವೈರಾಗ್ಯ. ಅದು ಎಲ್ಲವನ್ನೂ ಕಂಡೂ ಏನನ್ನೂ ಕಾಣದ ಕಣ್ಣು.ಇದ್ದೂ ಇಲ್ಲದಂತಾಗಿ ,ಹಿಂದಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಜಗತ್ತಿನ ಎದುರು ಮುಖಾಮುಖಿಯಾಗಲಿಕ್ಕೆ ಈ ವೈರಾಗ್ಯ ಬೇಕು. ಅದು ಕೇವಲ ಸನ್ಯಾಸಿಗಳ, ತತ್ವ ಜ್ಞಾನಿಗಳ, ಹತಭಾಗ್ಯರ .ಮುದುಕರ ಸ್ವತ್ತಲ್ಲ.ಅದು ಈ ದಿನಮಾನದ ಎಲ್ಲರ ಅಗತ್ಯ.
ಈಗೊಂದು ಸ್ವಲ್ಪ ದಿನದ ಕೆಳಗೆ ಪೇಪರಿನಲ್ಲಿ ಅನಂತಮೂರ್ತಿಯವರ ಒಂದು ಮಾತು ಹೇಳಿದ್ದರು.ಅವರು ಈ ಜಾಗತೀಕರಣ ,ಕೈಗಾರೀಕರಣ, ಅಭಿವೃದ್ಧಿ ಮುಂತಾದ ಪ್ರಸ್ತುತ ವಿದ್ಯಮಾನದ ಬಗ್ಗೆ ಮಾತನಾಡುತ್ತ ‘ ಯಾವುದೇ ಅಭಿವೃದ್ಧಿ ಇರಲಿ, ಬೆಳವಣಿಗೆಗಳಿರಲಿ ,ಅಲ್ಲಿ ವೈರಾಗ್ಯಕ್ಕೂ ಕೊಂಚ ಜಾಗವಿರಬೇಕು ‘ ಎಂಬರ್ಥದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಈಗಂತೂ ಜಗತ್ತು ಅಸಂಖ್ಯ ಆಯ್ಕೆಗಳ ಸಾಗರ. ಮನುಷ್ಯನ ಮೂಲಭೂತ ಅವಶ್ಯಕತೆಗಳು ಹಿಂದಿನಂತಯೇ ಇವೆ.ಆದರೆ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವ ದಾರಿಯಲ್ಲಿ ನೂರಾರು ಆಯ್ಕೆಗಳು. ನಾವು ಆಧುನಿಕರಾದಷ್ಟೂ ಅತೃಪ್ತರಾಗುತ್ತಿದ್ದೇವೆ.
ಒಂದು ಕೆಲಸ ಸಿಕ್ಕಿ ಕೊಂಚ ದುಡ್ಡು ಕೈಸೇರುತ್ತಿದಂತೆ ನಮಗೆ ಕ್ರೆಡಿಟ್ ಕಾರ್ಡ್ ಬೇಕು. ಇರುವ ಕೆಲಸವನ್ನ ನಂಬಿಕೊಂಡು ಇನ್ಸ್ಟಾಲ್ಮೆಂಟ್ ಲೆಕ್ಕದಲ್ಲಿ ಒಂದಾದ ಮೇಲೊಂದರಂತೆ ಕಾರು, ಫ್ಲಾಟು ಎಂದು ಖರೀದಿ ಮಾಡುತ್ತಾ ಹೋಗುತ್ತೇವೆ.ಕಳೆದ ರಿಸೆಶನ್ ಸಮಯದಲ್ಲಿ ಹೀಗೆ ಸಾಲ ಮಾಡಿ ತಿಂಗಳು ತಿಂಗಳು ಇನ್ಸ್ಟಾಲ್ಮೆಂಟ್ ಕಟ್ಟುತ್ತಿದ್ದ ಎಷ್ಟು ಜನ ಕಂಗಾಲಾಗಿ ಹೋದರು ನೋಡಿ. ಇದು ದುಬಾರಿಯ ಕಾಲ.ಇದು ತೀವ್ರವಾದ ಸ್ಪರ್ಧೆಯ ಕಾಲ ನಿಜ. ಆದರೆ ನಾವಂದುಕೊಂಡಷ್ಟು ಪರಿಸ್ಥಿತಿ ಕೈಮೀರಿಲ್ಲ. ಎಲ್ಲ ನಮ್ಮ ಕೈಯಲ್ಲೇ ಇದೆ.ಎಲ್ಲವೂ ದುಬಾರಿ ಆದರೆ ಆಗಲಿ ಬಿಡಿ.ನಮ್ಮ ಅನಾವಶ್ಯಕ ಅಗತ್ಯತೆಗಳನ್ನ ಕಡಿಮೆ ಮಾಡಿಕೊಳ್ಳಬಹುದಲ್ಲ. ನಮ್ಮ ಎಲ್ಲ ಸಂಕಷ್ಟಕ್ಕೆ ಕಾರಣ ನಮ್ಮನ್ನು ನಾವು ಉಳಿದವರ ಜೊತೆ ಹೋಲಿಕೆ ಮಾಡಿಕೊಳ್ಳುವ ಗುಣ. ನಮಗಾಗಿ ನಾವು ನಮ್ಮ ಪಾಡಿಗೆ ಬದುಕಿಬಿಟ್ಟರೆ ನಮ್ಮ ಸಂಕಷ್ಟ ಅರ್ಧ ಕಡಿಮೆಯಾದಂತೆ.ದುರಂತವೆಂದರೆ ನಾವು ಉಳಿದವರ ಸಲುವಾಗಿ ಬದುಕುತ್ತೇವೆ. ಪ್ರತಿಷ್ಠೆಗಾಗಿ ಬದುಕುತ್ತೇವೆ. ಉಳಿದವರ ಜೊತೆ ತೋರಿಕೆಯ ವಿಷಯದಲ್ಲಿ ಸರಿಸಮಾನವಾಗಿ ಬದುಕಬೇಕೆಂಬ ಹಪಾಹಪಿಗೆ ಬೀಳುತ್ತೇವೆ.ಮಾಡುವ ಕೆಲಸದಲ್ಲಿ ,ಚಿಂತನೆಯ ರೀತಿಯಲ್ಲಿ ಘನತೆಯಿದ್ದರೆ,ವೈಭವವಿದ್ದರೆ ಸಾಕಲ್ಲವೇ ?
ಈಗಂತೂ ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ. ಎಷ್ಟೇ ಫ್ಲೈ ಓವರ್ಗಳು ತಲೆ ಎತ್ತಲಿ, ರಸ್ತೆಗಳು ಎಷ್ಟೇ ಅಗಲವಾಗಲಿ,ಟ್ರಾಫಿಕ್ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಪರಿಹಾರವೆಂಬಂತೆ ‘ಕಾರ್ ಪೂಲಿಂಗ್’, ‘ಬಸ್ ಡೇ ‘ ಮುಂತಾದ ಹೊಸಾ ಚಿಂತನೆಗಳು ಶುರುವಾಗಿವೆ.ಅತ್ತ ಮೆಟ್ರೋ ರೈಲು ಸಿದ್ಧವಾಗುತ್ತಿದೆ.ಈ ಟ್ರಾಫಿಕ್ ಸಮಸ್ಯೆ ಹಾಗು ಅದರಿಂದ ಪೋಲಾಗುವ ಸಮಯವನ್ನ ಗಮನದಲ್ಲಿಟ್ಟುಕೊಂಡು ಕೆಲವು ಕಂಪನಿಗಳು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಅವಕಾಶವನ್ನ ನೌಕರರಿಗೆ ಒದಗಿಸುತ್ತಿವೆ.ಭವಿಷ್ಯದಲ್ಲಿ ಈ ಪದ್ಧತಿಯನ್ನ ಅಳವಡಿಸಿಕೊಳ್ಳಲು ಎಲ್ಲ ಕಂಪನಿಗಳು ಗಂಭೀರವಾಗಿ ಯೋಚಿಸುತ್ತಿವೆ. ಈ ಟ್ರಾಫಿಕ್ ಸಮಸ್ಯೆ ಇದೆ ಎಂಬುದು ಎಲ್ಲರಿಗೂ ಗೊತ್ತು. ಅತ್ತ ಮೋಟಾರು ವಾಹನಗಳ ಮಾರಾಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಓಡಾಡಲಿಕ್ಕೆ ಬಸ್ ಗಳಿವೆ.ಐಷಾರಾಮ ಬೇಕೆನುವ ಮಂದಿಗೆ ಅದು ಕೂಡ ಲಭ್ಯ ವಾಯು ವಜ್ರದಂಥ ಐಷಾರಾಮಿ ಬಸ್ಸುಗಳಲ್ಲಿ. ಅತ್ತ ಕಂಪನಿಗಳೇ ಕೆಲಸಕ್ಕೆ ಹೋಗಿ ಬರುವ ಸಮಯದಲ್ಲಿ ತನ್ನ ನೌಕರರಿಗಾಗಿ ಕಳುಹಿಸುವ ವಾಹನಗಳಿವೆ ,ಮೆಟ್ರೋ ಇನ್ನು ಸ್ವಲ್ಪವೇ ಸಮಯದಲ್ಲಿ ಸಿದ್ಧವಾಗಲಿದೆ. ಆದರೂ ನಮ್ಮ ಜನಗಳಿಗೆ ಮನೆಯ ಅಂಗಳದಲ್ಲಿ ಅಲಂಕಾರಕ್ಕೆ ಒಂದು ಕಾರು ಬೇಕೇ ಬೇಕು. ಕಾರು ಖರೀದಿ ಮಾಡದಿದ್ದರೆ ಅಷ್ಟು ದುಡ್ಡೂ ಉಳಿಯುತ್ತೆ.ದುಡ್ಡು ಒಟ್ಟು ಮಾಡುವ ಭರದಲ್ಲಿ ಹೊತ್ತುಗೊತ್ತಿಲ್ಲದೆ ವಿಪರೀತ ದುಡಿಮೆಗೆ ಈಡಾಗುವ ಕಷ್ಟ ತಪ್ಪುತ್ತೆ.ಕುಟುಂಬದೊಂದಿಗೆ ಸಮಯ ಕಳೆಯಲು ಪುರುಸೊತ್ತು ಸಿಗುತ್ತೆ. ಪೆಟ್ರೋಲು ಡೀಸೇಲುಗಳಿಗೆ ಮಾಡುವ ಖರ್ಚು ಇಲ್ಲವಾಗುತ್ತೆ.ಇಂಧನದ ಉಳಿತಾಯವಾಗುತ್ತೆ.ಮಾಲಿನ್ಯ ಕಡಿಮೆಯಾಗುತ್ತೆ .ಟ್ರಾಫಿಕ್ ಸಮಸ್ಯೆಯೂ ನೀಗುತ್ತೆ.ಇವೆಲ್ಲ ನಮಗೆ ಅರ್ಥವಾಗುವುದೇ ಇಲ್ಲ. ನಾವು ವಿದ್ಯಾವಂತರು.ಪ್ರಜ್ಞಾವಂತರು?
ಇಲ್ಲಿ ಕಾರಿನ ಪ್ರಸಂಗ ಒಂದು ಉದಾಹರಣೆಯಷ್ಟೇ.ಹೇಳ ಹೊರಟರೆ ತುಂಬಾ ಇವೇ ನಮ್ಮ ದಡ್ಡತನಗಳು. ‘ಪಾಪ ಹುಡುಗ,ವಯಸ್ಸಿನ ಆವೇಶದಲ್ಲಿ ಬರೆಯಲಿಕ್ಕೆ ಒಂದು ಜಾಗ ಸಿಕ್ಕಿದೆ ಎಂದು ತುಂಬಾ ಆವೇಶದಲ್ಲಿ ಮಾತಾಡುತ್ತಿದ್ದಾನೆ.ಹುಟ್ಟಿ ಎರಡು ಸೋಮವಾರ ಕೂಡ ಆಗಿಲ್ಲ.ಇವನಿಗಿನ್ನೂ ಅನುಭವ ಕಡಿಮೆ.’ ಎಂದು ಕೆಲವರು ಅಂದುಕೊಳ್ಳಬಹುದು.ನಾನು ಸಣ್ಣವನು .ನನಗೆ ಅನುಭವ ಕಡಿಮೆ ನಿಜ.ಅನುಭವ ಇಲ್ಲದವನಿಗೆ ತಿಳುವಳಿಕೆ ಕಡಿಮೆ ಎನ್ನುವುದು ಲೋಕಾರೂಢಿ .ಆದರೆ ಒಂದಂತೂ ಸತ್ಯ.ದೊಡ್ಡವರ ಸಣ್ಣತನಗಳು ಅರ್ಥವಾಗುವಷ್ಟು ತಿಳುವಳಿಕೆ ನನಗೆ ಬಂದಿದೆ.ಹೇಗೆ ಬದುಕಬೇಕೆಂಬುದಕ್ಕೆ ದೊಡ್ಡವರು ಉದಾಹರಣೆ.ಹೇಗೆ ಬದುಕಬಾರದು ಎಂಬುದಕ್ಕೂ ಮತ್ತೆ ಅವರೇ ಉದಾಹರಣೆ. ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಮಾತು ನಿಜ. ಆದರೆ ನಮ್ಮನ್ನು ನಾವು ಬಿಟ್ಟು.ನಮ್ಮ ಸ್ವಂತ ಬುದ್ಧಿಯನ್ನು ಬಿಟ್ಟು ಎಲ್ಲರೊಳಗೊಂದಾಗ ಹೊರಟರೆ ಕೊನೆಗೆ ನಾವಾಗುವುದು ಗುಂಪಿನಲ್ಲಿ ಗೋವಿಂದರಷ್ಟೇ.
ನಾವು ನಾವಾಗಿದ್ದುಕೊಂಡು ಎಲ್ಲರೊಳಗೊಂದಾಗಬೇಕು. ತೀರಾ ಜಗತ್ತಿಗೆ ಅಂಟಿಕೊಳ್ಳಬಾರದು. ಒಂದು ಸಣ್ಣ ವೈರಾಗ್ಯ ಇಟ್ಟುಕೊಂಡೇ ಬದುಕಬೇಕು.ಹದವಾದ ವೈರಾಗ್ಯವಿದ್ದಲ್ಲಿ ತೃಪ್ತಿಯಿರುತ್ತೆ.ತೃಪ್ತಿಯಿದ್ದಲ್ಲಿ ನೆಮ್ಮದಿ.ಆಗ ನಿಜಕ್ಕೂ ಜಗತ್ತು ನಮ್ಮ ಪಾಲಿಗೆ ನವ ನವೀನ.ಇಲ್ಲದಿದ್ದರೆ ಅದು ಭಟ್ಟರ ಭಾಷೆಯಲ್ಲಿ ‘ಹಳೇ ಬೇಜಾರು’.
ಯಾರ್ಯಾರದೋ ಹಂಗಿಗೆ,ಇನ್ಯಾವುದೋ ಮುಲಾಜಿಗೆ ,ಹೇಗಾದರೂ ಸರಿ ಒಟ್ಟಿನಲ್ಲಿ ಬದುಕಬೇಕೆಂಬ ಅಸಹಾಯಕತೆಗೆ ಬಿದ್ದು ಇಷ್ಟವಿಲ್ಲದ ಕೆಲಸವನ್ನು ಕಷ್ಟಪಟ್ಟು ಮಾಡಿ ದಣಿದ ಮೈಮನಸ್ಸುಗಳಿಗೆ ನವಚೈತನ್ಯ ಎಂಬುದೊಂದಿದ್ದರೆ ಅದು ವೈರಾಗ್ಯದಿಂದ ಮಾತ್ರ ಸಾಧ್ಯ.
ಆ ಕಾರಣಕ್ಕೆ ನಾನು ವೈರಾಗ್ಯ ಬೇಕು ಎಂದಿದ್ದು. ವೈರಾಗ್ಯವೇ ವಯಾಗ್ರ ಎಂದದ್ದು .:) :) .
ಎಲ್ಲರಿಗೂ ಹೊಸವರ್ಷದ ಶುಭಾಶಯಗಳು ..:) :).