Saturday, June 1, 2013

ಪರದೇಸಿ

ಮನೆಯ ಅಂಗಳದಾಚೆಯ ಗಟಾರಕ್ಕೆ
ಎಲೆ ಅಡಿಕೆ ಉಗಿದು ಮುಂದೇನು ಎಂಬಂತೆ
ನಡು  ಮಧ್ಯಾಹ್ನದಲ್ಲಿ ಶೂನ್ಯವಾಯಿತು ಒಂದು ನೋಟ

ಏನೇನೋ ಓದಿ ಹೆಮ್ಮೆ ತಂದ ಮಗ
ಅದೆಲ್ಲೋ ಇದ್ದಾನೆ ದೂರ ದೇಶದಲ್ಲಿ
ಹೋಗುವಾಗ ಕರೆದದ್ದು ಎದೆ ತುಂಬಾ ಕನಸಿನ
ಮೋಹನ ಮುರಳಿ
ಮರಳಿ ಬರಲಾಗದು ಈಗ
ಕರೆದ ಮೋಹನ ಮುರಳಿ ಉರುಳಾಗಿದೆ
ಬದುಕು ಪರದೇಶದಲ್ಲಿ ಬೇರು ಬಿಟ್ಟದ್ದು
ಗೊತ್ತಾಗಲೇ ಇಲ್ಲ ನಿಧಾನ ವಿಷದಂತೆ
ಅತ್ತ ಬೇರು ಬಿಟ್ಟ ಮರ  ಫಲಕ್ಕೆ ಬಂದ ಹೊತ್ತು  
ಇತ್ತ ಹಳೆಯ ಮರವೊಂದು ಉರುಳುವ ಹೊತ್ತು
ಉಭಯ ಸಂಕಟ
ಅಲ್ಲೂ ಮತ್ತೂ ಇಲ್ಲೂ

ಊರ ತುಂಬಾ ಹೆಮ್ಮೆಯಿಂದ ಹೇಳಿಕೊಂಡ
ಮಗ ಪರದೇಶ ಸೇರಿದ ಸಂಗತಿ ಈಗ
ಹಳಸಿ ಹೋಗಿದೆ ಸರಿವ ಕಾಲದೊಡನೆ ಕಲಸಿ
ನಡುವೆ ಏನೇನೋ ಆಗಿ ಹೋಗಿದೆ
ಬೆನ್ನು  ಬಾಗಿದೆ ಕಣ್ಣು ಮಂಜಾಗಿದೆ
ಕೇಳದ ಕಿವಿ ಇದ್ದರೂ ಇರದಿದ್ದರೂ ಒಂದೇ
ಹೇಳಿ ಕೇಳಲು ಮುಸ್ಸಂಜೆಯ ಗಾಢ ಮೌನ ಬಿಟ್ಟು
ಇನ್ನೇನೂ ಇಲ್ಲ

ಅಪ್ಪ ಅಮ್ಮನಿಗೆ ಮಗನುಂಟು
ಮಗನಿಗೆ ಅವರುಂಟು
ಆದರೂ ಯಾರಿಗೆ ಯಾರೂ ಇಲ್ಲ
ಮಗ ಯಾಕಾಗಿ ಹೋದ ಎಂಬ ಯೋಚನೆ ಇಲ್ಲಿ  
ಇಲ್ಲಿ ಬಂದು ಏನೆಲ್ಲಾ ಮಾಡಿ  ಏನು ಬಂತು
ಹೆತ್ತವರು ಹೋದ ದಿನ 
ತಾನು ಬರಲೇ ಬೇಕು ಮಗನಾಗಿ ಮರಳಿ 
ಸತ್ತು ಎಷ್ಟು ದಿನವಾಗಿರುತ್ತೋ
ಹೋಗುವ ಮುನ್ನ ಜೊತೆಗಿರಬೇಕಿತ್ತು
ಎಂಬ ಪರದೇಸಿ ಭಾವ ಪರದೇಶದಲ್ಲಿ

ಬದಲಾದ ಕಾಲ
ಇರಿಯುತಿದೆ ಒಳಗೊಳಗೇ
ಅಲ್ಲೂ ಮತ್ತು ಇಲ್ಲೂ