Monday, December 10, 2012

ಸಭ್ಯ ಪೋಲಿ ಕವನ ೭ ..........


ನಡುಗಾಲ .......

ಆಗ  ಕಾರ್ಮೋಡ ಕವಿಯುತ್ತಿತ್ತು
ಆಕಾಶವೇ ಕಳಚಿ ಬಿದ್ದಂತೆ
ಮಳೆ ಸುರಿಯುತ್ತಿತ್ತು
ನನ್ನ ಇಳೆಯಲ್ಲಿ
ಸುರಿದಿದ್ದೆಲ್ಲವೂ ತೊಟ್ಟೂ ಬಿಡದೆ
ಇಂಗುತಿತ್ತು
ಈಗಲೂ ನನ್ನ ಇಳೆ ಅಂದಿನಂತೆಯೇ ಇದೆ
ಮಳೆಗೆ ಯಾಕೋ ಉದಾಸೀನ
ಈಗೀಗ ಅದು ಬರಗಾಲದ ಮಳೆ  
ಆಗೊಮ್ಮೆ ಈಗೊಮ್ಮೆ ಮಳೆಯಾದರೂ
ಬಿಸಿಕಾವಲಿಗೆ ನೀರು ಚಿಮುಕಿಸಿದಂತೆ
ಎಲ್ಲೋ ಮೂಲೆಯಲ್ಲಿ
ಅತೃಪ್ತಿಯ  ಹೊಗೆ ಹೊಗೆಯಷ್ಟೇ
ಇಂಗಿಸಿಕೊಂಡ ಸಂಭ್ರಮವಿಲ್ಲ
ಇದು ನಡುಗಾಲ
ಮತ್ತೆ ಚಿಗುರುವ ಆಸೆ ಭವ್ಯ ಮಳೆಯಡಿ
ಮತ್ತೆ ಚಿಗುರಲೇ ಬೇಕೆಂದರೆ
ಕಾರ್ಮೋಡ ಸಿಗಬೇಕು
ಸಿಗಬೇಕೆಂದರೆ   
ನೆತ್ತಿ ಮೇಲಿನ ಒಣ ಮೋಡದ ಕಾವಲಿಗೆ
ಕಣ್ತಪ್ಪಿಸಬೇಕು .


ಸೃಷ್ಟಿ ನಿಯಮ ಸೆಳೆಯುತಿದೆ ಎಲ್ಲೋ
ಆದರೂ ಲೋಕ ನಿಯಮ ಮೀರುವಂತಿಲ್ಲ
ಕನಸುಗಳಿಗೆ ಇಲ್ಲಿ ಜಾಗವಿಲ್ಲ
ಹಸಿವು ತುಂಬಾ ಕೆಟ್ಟದ್ದು
ಅನ್ನ ಹಳಸಿಹೋದ ಹೊತ್ತಿನಲಿ

ಹೇಳು
ನನ್ನ ಧರ್ಮಸಂಕಟವ ಹೇಗೆ ಮೀರಲಿ
ಹಾಗೆ ನಗಬೇಡ  ಪಾಪಿ
ಹೇಳು ಏನಾದರೂ

ನಗದೆ ಇನ್ನೇನು ಮಾಡಲಿ
ನಿನಗೆ ಸಿಕ್ಕ ಉತ್ತರಗಳನ್ನೆಲ್ಲ ಪ್ರಶ್ನೆಮಾಡಿ
ಮೂಟೆ ಕಟ್ಟಿ ನನ್ನ ಮುಂದಿಟ್ಟಿರುವೆ  
ದಾರಿ ಯಾವುದೆಂದು ನಿನಗೆ ತಿಳಿದಿದೆ
ಹೆಜ್ಜೆ ಮಾತ್ರ ಗೊಂದಲದಲ್ಲಿದೆ


ಕನಸುಗಳಿಗೆ ಇದೇ ಸಕಾಲ  
ಒಬ್ಬೊಬ್ಬರಿಗೂ  ಒಂದೊಂದು ಕನಸು
ನಿನ್ನದೂ ಹಾಗೆ ಹತ್ತರಲಿ ಹನ್ನೊಂದು  
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಕವಿ ಹೇಳಿದ್ದು.
ಇರದುದರೆಡೆಯ  ಬಿಟ್ಟು ಎಲ್ಲ ಇರುವೆಡೆಗೆ ಸಾಗು
ನಿನ್ನ  ಧರ್ಮಸಂಕಟಕ್ಕೆ  ಸದ್ಯಕ್ಕೆ  ಇದುವೇ
ತುರ್ತು ಸಮಾಧಾನ

ಲೋಕನಿಯಮ ಮೀರಬೇಡ
ಅದು ಪಾಪ
ಮುಂಬಾಗಿಲಲ್ಲಿ   ಒಣ ಮೋಡಕ್ಕೆ ಕಾದಿರು
ಮಳೆಯ ಕನಸನ್ನು ಕಣ್ಣಲ್ಲಿ ತುಂಬಿಕೊಂಡು
ಕಾದು  ಕುಳಿತವಳಂತೆ
ಇನ್ನು ಸೃಷ್ಟಿ ನಿಯಮವನ್ನೂ ಮೀರುವಂತಿಲ್ಲ
ಆತ್ಮಹತ್ಯೆ ಮಹಾ ಪಾಪ  
ಹಿತ್ತಿಲ ಬಾಗಿಲು ತೆರೆದೇ ಇರಲಿ
ಮುಸ್ಸಂಜೆ ಹೊತ್ತಲ್ಲಿ  ಎಳೆಯ ಬಿಸಿಲು ಕೋಲೊಂದು
ಇಣುಕಿದರೂ ಇಣುಕಬಹುದು .


ಈಗಾದರೂ ನಾನೊಮ್ಮೆ ನಗಲೇ?

ಹ್ಮ್ಮ್ J J J
Sunday, November 25, 2012

ಸಭ್ಯ ಪೋಲಿ ಕವನ ೬ ...

ನೆತ್ತಿ ಮೇಲೆ ಸೂರ್ಯ ಹತ್ತಿ ಕುಳಿತು
ಬಿಟ್ಟೂ ಬಿಡದೆ ಸುಡುವ
ಶುದ್ಧ ಬೇಸಿಗೆಯ ನಡು ಮಧ್ಯಾಹ್ನ
ಹಾಗೆ ಸುಮ್ಮನೆ ಸೋನೆ ಮಳೆ ಸುರಿಯಬಹುದು
ತಂಗಾಳಿ ತೇಲಿ ಬರಬಹುದು
ಕೆಟ್ಟ ಚಳಿಗಾಲದ ಹೊತ್ತಿನಲಿ 
ಮರಗಟ್ಟಿ ಹೋದ ಥಂಡಿ ರಾತ್ರಿಯಲಿ
ಆಸೆಯ ಬೆಂಕಿ ಕಿಡಿ ಆಳದಲ್ಲೆಲ್ಲೋ
ಹುಟ್ಟಿ ಮೈ ಬಿಸಿಯಾಗಬಹುದು
ಏನು ಬೇಕಾದರೂ ಆಗಬಹುದು
ತರ್ಕಕ್ಕೆ ಇದು ಕಾಲವಲ್ಲ
ಹೇಳಿ ಕೇಳಿ ಇದು
ಹುಚ್ಚು ಹರೆಯದ ಹವಾಮಾನ


ತಪ್ಪುಒಪ್ಪಿನ ಚಿಂತೆಯಿಲ್ಲ
ಪಾಪ ಧರ್ಮದ ಪ್ರಶ್ನೆಯಿಲ್ಲ
ಸಂವಿಧಾನವೇ ಇರದ
ಸಂಯಮ ಕಳೆದುಕೊಂಡ ಸರ್ವಾಧಿಕಾರಿ ಮನಸ್ಸು
ಬೇಲಿ ಜಿಗಿದು ಕದ್ದು ಮೇಯುವ ಹಂಬಲಕೆ
ಯಾವ ಬೇಲಿಯೂ ಇಲ್ಲ
ಕಣ್ಣು ಮುಚ್ಚಿ ಹಾಲು ಕುಡಿವ
ಅಲೌಕಿಕ ಸಂತೋಷಕ್ಕೆ ಅಂತ್ಯವೇ ಇಲ್ಲ


ಏರು ಯೌವ್ವನದ ಹಾದಿಯಲಿ
ಮೋಹಕ್ಕೆ ಪ್ರೇಮಕ್ಕೆ  ದಾಹಕ್ಕೆ ಸಿಕ್ಕಿ
ಇಳಿಜಾರಿನಲ್ಲಿ ಇಳಿದು ಹೋಗಿ
ತಪ್ಪಿ ಇಟ್ಟ ಹೆಜ್ಜೆಗಳು ಎಷ್ಟೋ
ಜಾರಿಬಿದ್ದ ಕ್ಷಣದಲ್ಲಿ ಸಿಕ್ಕ
ಮಧುರ ನೋವುಗಳು ಎಷ್ಟೋ
ಲೆಕ್ಕ ಇಟ್ಟವರಿಲ್ಲ
ಕೃಷ್ಣನ ಲೆಕ್ಕವಿದು
ಯಾವ ಸೂತ್ರವಿಲ್ಲ ನಿಯಮವಿಲ್ಲ
ಜಾಸ್ತಿ ಹೇಳಿ ಸುಖವಿಲ್ಲ
ಹೇಳಿ ಕೇಳಿ ಇದು
ಹುಚ್ಚು ಹರೆಯದ ಲೆಕ್ಕಾಚಾರ ..

Monday, November 5, 2012

ಸಭ್ಯ ಪೋಲಿ ಕವನ ೫ ...


ಸುಡುಸುಡು ಮರುಭೂಮಿಯೊಳು 
ಧಾರಾಕಾರ ವರ್ಷಧಾರೆ 
ತಣಿಸುತಲಿತ್ತು .
ನಡುನಡುವೆ ನಿಂತು 
ಬಿಟ್ಟು ಬಿಟ್ಟು ಹುಯ್ಯುತಲಿತ್ತು .
ನಿನಗಾಗ ಹದಿನೆಂಟು 
ನನಗೆ ಇಪ್ಪತ್ತು .

ಪುರುಷದಂಡ ಉದ್ದಂಡ ಕೋದಂಡ .
ಮದನ ಬಾಣಕೆ ಗುರಿಯ 
ಕಣ್ಣಿಲ್ಲದ ಕಾಮ 
ತೋರುತಲಿತ್ತು .
ಹಾಳು ಹದಿಹರೆಯಕೆ ಹೊತ್ತಿಲ್ಲ ಗೊತ್ತಿಲ್ಲ 
ನೆತ್ತಿ ಮೇಲಣ ನಡು ಮಧ್ಯಾಹ್ನ 
ಬೆಕ್ಕಸ ಬೆರಗಾಗಿ 
ಬೆವರುತಲಿತ್ತು .

ಯಾರಲ್ಲೋ ಕೇಳಿದ್ದು 
ಪೋಲಿ ಪುಸ್ತಕ ಓದಿದ್ದು 
ನೋಡಿ ನಲಿದದ್ದೇ ಬಂತು 
ಮಾಡಿ ತಿಳಿವೆನೆನ್ದಾಗ 
ಎಡವಟ್ಟಾಯಿತು.
ಪಲ್ಲವಿ ಕಳೆದು 
ಚರಣ ಬಂತೆನುವಷ್ಟರಲಿ 
ಹಾಡು ಮುಗಿದಿತ್ತು .

Sunday, October 21, 2012

ಸಭ್ಯ ಪೋಲಿ ಕವನ ...೪


ಮೌನ ಖಾಲಿ ಹಾಳೆ .....ಕೊನೆಯಲ್ಲಿ ನನ್ನ ಸಹಿಯಿದೆ ಎಷ್ಟೊಂದು ಕೇಳಿದೆ
ಎಷ್ಟೊಂದು ಬೇಡಿದೆ
ಒಂದೇ ಒಂದು ಮರು ಮಾತಿಲ್ಲ
ಈ ಪರಿಯ ಮೌನ ಈಗೇಕೆ
ಹೇಳು ಏನಾದರೂ ಹೇಳು


ಅಯ್ಯೋ ಹುಚ್ಚು ಹುಡುಗಾ
ಮಾತಲ್ಲಿ ಏನಿದೆ
ಮೌನ ಖಾಲಿ ಹಾಳೆ
ಪುಟದ ಕೊನೆಯಲ್ಲಿ ನನ್ನ ಸಹಿಯಿದೆ
ಬೇಕಾದ್ದು ಗೀಚಿಕೋ
ನಾ ಒಲಿವೆ ನಿನ್ನ ಬಯಕೆಯಂತೆ

'ಸರಿ'
ಮೊದಲೊಂದು ಮುತ್ತನಿಡುವೆ
ತುದಿಗೊಂದು ಪೂರ್ಣವಿರಾಮ?
ಪೆದ್ದು ಹುಡುಗ
ಮುತ್ತು ಮೊದಲ ಮೆಟ್ಟಿಲು
ನನ್ನೊಡಲ ಗರ್ಭ ಗುಡಿಗೆ
ಇಲ್ಲಿ ಇರಬೇಕಾದ್ದು ಪೂರ್ಣವಿರಾಮವಲ್ಲ
ಕಾಮ, ಸುಮ್ಮನೆ ಬರೆಯುತ್ತ ಹೋಗು
ನಡುವೆ ಕಾಮ ಸೇರಿಸಿ

'ಹ್ಮ್ಮ್ ಸರಿ,
ಮೊದಲೊಂದು ಮುತ್ತನಿಡುವೆ
ಹಣೆಯಿಂದ ಕಾಲ ಕಿರು ಬೆರಳ ತನಕ
ಒಂದರ ಮೇಲೆ ಇನ್ನೊಂದು
ಮೆಲು ಗಾಳಿಯಂತೆ ತಾಕುವೆ
ಮತ್ತೆ ಬುಡದಿಂದ ತುದಿಯವರೆಗೆ

'ಮತ್ತೇನು'
ಸಾಕು ಬಿಡು ಬರೆದದ್ದು
ಮೊಗ್ಗು ಅರಳಿದೆ
ಗರ್ಭಗುಡಿಯೇ ಮೊದಲ ಮೆಟ್ಟಿಲ ತನಕ ಬಂದಿದೆ
ಈಗೊಂದು ಮುತ್ತನಿಡು ,,,,

ಬೆಳಕು ಆರಿಸಿ ಕಾಮ
ಇರುಳ ಬೆಳಗಿತು ಕಾಮ
ದೇಹ ಬೆಸೆಯಿತು ಕಾಮ
ಮೋಕ್ಷ ತೋರಿತು ಕಾಮ
ಅಲ್ಲೊಂದು ಸುಖದ ಉಸಿರು
ಇಲ್ಲೊಂದು ಏದುಸಿರು
ಪೂರ್ಣವಿರಾಮ.
Thursday, October 18, 2012

ಮಿಲಿ .....ಕಳ್ಳ ತುಂಟ ಬೆಕ್ಕು ಮರಿಮಿಲಿ ಮಿಲಿ ಮುದ್ದು ಮಿಲಿ
ಕಳ್ಳ ತುಂಟ ಬೆಕ್ಕು ಮರಿ
ಪುಟ್ಟ ಪುಟ್ಟ ಹೆಜ್ಜೆಯಲ್ಲಿ
ಆಚೆ ಈಚೆ ಹಾರಿ ಓಡೋ
ಮುದ್ದು ಉಣ್ಣೆ ಚೆಂಡು ಮಿಲಿ
ಕೈಗೆ ಸಿಕ್ಕ ಕ್ಷಣವೇ
ಜಾರಿಕೊಂಡು ಓಡಿ ಹೋಗಿ
ಎಲ್ಲೊ ಮೂಲೆಯಲ್ಲಿ ಅಡಗಿ
ಕಣ್ಣಾ ಮುಚ್ಚೆ ಕಾಡೆಗೂಡೆ
ನನ್ನ ಪುಟ್ಟ ಬೆರಗು ನೀನು
ಮುದ್ದು ಬೆಣ್ಣೆ ಮುದ್ದೆ ಮಿಲಿ

ಕಾಯಿಸಿಟ್ಟು ಮುಚ್ಚಿ ಇಟ್ಟ
ಹಾಲು ಹುಡುಕಿ ಕಣ್ಣ ಮುಚ್ಚಿ
ಕದ್ದು ಕುಡಿದು
ಹಾಲು ಬಳಿದ ಚಿಗುರು ಮೀಸೆ ಹೊತ್ತು
ಮಳ್ಳನಂತೆ ಸುತ್ತ ಸುಳಿವ
ನನ್ನ ಪುಟ್ಟ ಕಳ್ಳ ಮಿಲಿ

ಮಿಂಚಿ ಹೋದ ಮಿಂಚು ಮಿಲಿ
ನನ್ನ ಪುಟ್ಟ ಗೆಳೆಯ ಮಿಲಿ
ಇಂದು ನೀನು ಜೊತೆಯಲಿಲ್ಲ 
ಕಾಲ ಕದ್ದು ಒಯ್ಯಿತಲ್ಲ
ನನಗೆಲ್ಲ ಆದವನು ನೀನು
 ನೆನಪಲ್ಲಿ ಮಾತ್ರವೇ  ಉಳಿದೆಯಲ್ಲ  
ಹೀಗೆ ಪದ್ಯವಾಗಿ ಹೋದೆಯಲ್ಲ
ಜಾಸ್ತಿ ಇನ್ನು ಬರೆಯಲಾರೆ
ಕಣ್ಣ ತುಂಬ ನಿನ್ನ ಚಿತ್ರ
ಕಣ್ಣ ಅಂಚು ಒದ್ದೆ ಒದ್ದೆ
ಕಣ್ಣ ಹನಿಗಳೆಲ್ಲ ಒಳಗೇ ಇರಲಿ
ಜಾರಿ ಇಳಿದು
ನಿನ್ನ ಚಿತ್ರ ಕರಗದಿರಲಿ

ಮಿಲಿ ಮಿಲಿ ಮುದ್ದು ಮಿಲಿ
ಕಳ್ಳ ತುಂಟ ಬೆಕ್ಕು ಮರಿ
 ನನ್ನ ಪುಟ್ಟ ಬೆರಗು ನೀನು
ನನ್ನ ಪುಟ್ಟ ಗೆಳೆಯ ಮಿಲಿ


Saturday, October 13, 2012

ಹವಿಗನ್ನಡ ಕವನ ............


ಮಂಗಳೂರು ಮಲ್ಲಿಗೆಗೆ ಮೈಸೂರು ಮಲ್ಲಿಗೆ ಕಸಿ


ಎಂತಕೆನ ಗೊತ್ತಿಲ್ಲೆ
ಕೊಟ್ಟಿಗೇಲಿ ,
ಬ್ಯಾಣದಲ್ಲಿ
ಗದ್ದೇಲಿ ತ್ವಾಟದಲ್ಲಿ
ಎಲ್ಲ್ ಹೋದ್ರು ನೀ ನೆನಪಾಗ್ತೆ
ಯಾವತ್ತೂ ಹಿಂಗೆಲ್ಲಾ ಆಗಿತ್ತಿಲ್ಲೆ ಇಲ್ಲಿತಂಕ

ಎಂತಕ್ಕೋ ಗೊತ್ತಿಲ್ಲೆ
ಹಂಗೆ  ಕೆರೆ ಏರಿ ಮೇಲೆ
ಸಂಜೆ ಹೊತ್ತಿಗೆ ಸುಖಾಸುಮ್ನೆ  ಹೋಗನ ಕಾಣ್ತು
ಕೆರೆ ತುಂಬ ಈಗ ಅಂತರಗಂಗೆ ಬೆಳದ್ದು
ಕೆರೆಲೀಗ ನೀರೇ ಇಲ್ಲೆ
ಅಥ್ವಾ ಎಂಗೆ ಕಾಣ್ಸ್ತಿಲ್ಲೇ ಅನ್ಸ್ತು
ಆದ್ರೂ ಕೆರಿಗೆ ಕಲ್ಲು ಹೊಡದು
ಅಲೆಯೇನಾದ್ರು ಯೋಳ್ತಾ ಹೇಳಿ
ಕಾಯ್ತಾ ಕೂರನ ಕಾಣ್ತು  
ಅಂತರಗಂಗೆಯೊಳಗೆ ಕೆಳಗೆ ಅಲೆ ಎದ್ರೂ ಎದ್ದಿಕ್ಕು
ತಾವರೆ ಹೂವು ಇದ್ರೂ ಇದ್ದಿಕ್ಕೂ ಹೇಳೂ ಅನ್ಸ್ತ್
ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಹೇಳಿ
ನರಸಿಂಹಸ್ವಾಮಿ ಪದ್ಯ ನೆನಪಾಗ್ತು
ಸಂತಿಗೆ ಅನಂತಸ್ವಾಮಿ ಹಾಡೂ
ಬಾಯಿ ಬಿಡದೆ ಮನ್ಸಲ್ಲೇ
ಪ್ರತಿಸಲ  ಹಾಡನ ಅನ್ಸ್ತು

ಅಜ್ಜನ ಮನೆಯಿಂದ ಅಮ್ಮ
ತಂದು ನೆಟ್ಟಿದ್ದ ಮಂಗಳೂರು ಮಲ್ಲಿಗೆ
ಬಳ್ಳಿ ತುಂಬ ಈಗ ಹೂವಾಜು
ನೀನು ಈಗ ಇಲ್ಲಿದ್ದಿದ್ರೆ
ನಿನ್ನ ಊರುದ್ದ ಜಡೆಗೆ ಮಾರುದ್ದ ದಂಡೆ ಮಾಡ್ಕಂಡು
ಖುಷಿಪಡ್ತಿದ್ದೆ ಅನ್ಸ್ತು

ಅಪ್ಪ ತಂದಿಟ್ಟಿದ್ದು
ಹಳೇ ಮೈಸೂರು ಮಲ್ಲಿಗೆ ಕ್ಯಾಸೆಟ್ಟು
ಪದೇ ಪದೇ ಕೇಳನ ಕಾಣ್ತು
ಮಂಗಳೂರು ಮಲ್ಲಿಗೆಗೆ ಮೈಸೂರು ಮಲ್ಲಿಗೆ ಕಸಿ
ಹಳೇ ಕ್ಯಾಸೆಟ್ಟಿಗೆ ಹೊಸಾ ಟೇಪ್  ರೆಕಾಡರ್ರು
ಮಲ್ಗೆ ಮೂಗ್ಗು ಅರಳಿ ಹಾಡಾಗ್ತಾ ಇದ್ದು
ಹಾಡಿನಲ್ಲಿ ಎಂಥದೋ ಪರಿಮಳ
ಎಂತದು ಹೇಳಿ ಗೊತಾಗ್ತಾ ಇಲ್ಲೆ
ಒಟ್ನಲ್ಲಿ ಏನೇನೋ ಆಗ್ತಾ ಇದ್ದು

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿ ಮಹಿಮೆ
ರಿವೈಂಡ್ ಮಾಡಿ ಮಾಡಿ ಕೇಳ್ತಾ ಕೂತ್ರೆ
ಈ  ಹಾಡು ಥೇಟ್   ನಿನ್ನಂಗೆಯಾ ಅನ್ಸ್ತು
ಅರ್ಥ ಮಾಡ್ಕಳಕ್ಕೆ ಹೊರಟ್ರೆ ಅರ್ಥ ಆಗಲ್ಲೆ
ಸುಮ್ಮನೆ ಕೇಳ್ತಾ ಕೂತ್ರೆ ಖುಷಿಗೆ ಲಿಮಿಟ್ಟೆ ಇಲ್ಲೆ.

ಜಾಸ್ತಿ ಎಂತ ಹೇಳದು
ಈಗೀಗ ಬರಿ ನೀನೇ ನೀನು
ಉಳಿದಿದ್ದೆಲ್ಲ
ಹಾಳು ಮೂಳು
ಮಣ್ಣು ಮಸಿ
ಒಣ ಶುಂಟಿ ಅಷ್ಟೇ.


Sunday, September 23, 2012

ಫೇಸ್ ಬುಕ್ ಸ್ಟೇಟಸ್ ಬಾರಿನಿಂದ ಒಂದಿಷ್ಟು :)

ಈ ನೀತಿ ಕಥೆಗಳು,ಬೋಧನೆಗಳು,ತತ್ವಗಳು,ಉಪದೇಶಗಳು , ಧರ್ಮ -ಅಧರ್ಮ ,ಪಾಪ ಪುಣ್ಯಗಳ ಬಗೆಗಿನ ಜಿಜ್ಞಾಸೆಗಳು..ಇವೆಲ್ಲ ನಿಜಕ್ಕೂ ತುಂಬಾ ಉಪಯುಕ್ತವಾದ ಸಂಗತಿಗಳು. ಎಲ್ಲರನ್ನೂ ಇವುಗಳು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ ,ಕಡೇಪಕ್ಷ ಕೆಲವರಾದರೂ ಇವುಗಳ ಪ್ರಯೋಜನ ಪಡೆದು ಬದಲಾಗುತ್ತಾರೆ.ತುಂಬ ಒಳ್ಳೆಯವರಾಗುತ್ತಾರೆ. ಆದರೆ ನಮ್ಮ ಅದೃಷ್ಟಕ್ಕೋ ,ದುರಾದೃಷ್ಟಕ್ಕೋ ,ಪುಣ್ಯಕ್ಕೋ ಅಥವಾ ಇನ್ಯಾವುದಕ್ಕೋ ಗೊತ್ತಿಲ್ಲ.ನಾವು ಮಾತ್ರ ಒಳ್ಳೆಯವರಾಗಿ ಬದಲಾಗುವ ಆ 'ಕೆಲವರ 'ಲಿಸ್ಟಿನಲ್ಲಿ ಇರುವುದಿಲ್ಲ ;) :) ;) ಇದು ಇಷ್ಟೇಯಾ..ಎಷ್ಟಂದ್ರೂ ಅಷ್ಟೆಯಾ ;) ನಮ್ಮ ಹಣೆಬರಹಕ್ಕೆ ನಾವೇ ಹೊಣೆ :)

...........................................

ಆ ಧರ್ಮದ ಪ್ರಕಾರ ಸಂಗೀತವೆಂದರೆ ನಿಷಿದ್ಧ ..ಅದು ಅವರ ಮಾತಿನಲ್ಲಿ ಹೇಳುವುದಾದರೆ 'ಹರಾಮ್ '..ಆದರೆ ಸಂಗೀತದಲ್ಲಿ ಆ ಧರ್ಮಕ್ಕೆ ಸೇರಿದವರನ್ನ ಮೀರಿಸಲು ಸಾಧ್ಯವೇ ಇಲ್ಲ ..ಜಗತ್ತಿನ ಅತಿ ಶ್ರೇಷ್ಠ ಎನ್ನಬಹುದಾದ ಸ್ವರಗಳು ಆ ಧರ್ಮದವರ ಹೆಸರಿನಲ್ಲಿಯೇ ಇದೆ. ಸಂಗೀತದ ಮಾಹಾಮಹಿಮರಲ್ಲಿ ಬಹುತೇಕರು ಅವರೇ .ಕಲೆಗಿರುವ ಶಕ್ತಿಯೇ ಆ ತೆರನಾದದ್ದು ..ಅದು ಎಲ್ಲ ಎಲ್ಲೆಗಳನ್ನೂ ,ಎಲ್ಲ ಕಟ್ಟು ಪಾಡುಗಳನ್ನೂ ಮೀರಿ ನಮ್ಮನ್ನು ಆವರಿಸಿ ಬಿಡುತ್ತೆ .ನಮ್ಮನ್ನು ಕೇವಲ ಮನುಷ್ಯರನ್ನಾಗಿಯಷ್ಟೇ ಉಳಿಸುತ್ತೆ .:) :)

.............................................

Please dont tell me that you are good..I hate that title ..it is very difficult to mentain that .we have to do lot of circus to retain that title.The terms like good, perfect literally does not exist in reality.I want to be myself . :) my goal is not to be good, but to overcome my badness as much as possible. I cannot say it as completely ..if i say that then i will be god :) :)I am human and like to be human only :) ;)

...............................................ನುಸ್ರತ್ ಫತೆಹ್ ಅಲಿ ಖಾನ್ ಅವರ ಒಂದು ಜನಪ್ರಿಯ ಕೃತಿ ಇಲ್ಲಿದೆ ನೋಡಿ ;)

Sunday, September 2, 2012

ಗುಡ್ ನೈಟ್ ಕವನಗಳು......

ನೂರು ಭಾವ ನೂರು ನೋವು
ಹಳೆಯ ನೆನಪುಗಳು ಅಲೆ ಅಲೆಯಾಗಿ
ಮನದ ತೀರಕೆ ಬಡಿದು ಮರಳುವಾಗ
ಅಲೆ ಬಂದು ಹೋದ ಘಳಿಗೆಯಲಿ
ಉಳಿಯುವುದು ಕಣ್ಣಂಚಲಿ ಹನಿಸಾಲು
ಮತ್ತೆ ಎನ್ನ ಸಂತೈಸಲೆಂದೇ ಹುಟ್ಟಿದ ನೀನು
ನೀನು ಮಾತ್ರ ಪುಟ್ಟಿ ನೀನು ಮಾತ್ರವೇ ..

............................................................

ಈ ರಾತ್ರಿಯ ದಿವ್ಯ  ನೆಮ್ಮದಿಯೆ
ಇರದ ಅಮ್ಮನ ಮಮತೆ ಮಡಿಲಾಗಲಿ
ಮೆಲು ಗಾಳಿಯ ಬೀಸು ಅವಳ ಜೋಗುಳವಾಗಲಿ
ಆ ಬಾಗು ಚಂದಮನೆ ತೂಗೋ ತೊಟ್ಟಿಲಾಗಲಿ
ನಾನಲ್ಲಿ ಬೆಳದಿಂಗಳ ಮುದ್ದೆಯಂಥ
ಮುದ್ದು ಮಗುವಾಗಲಿ
ನಾನೆಂದೂ ಹಾಗೇ ಇರಲಿ
ಮತ್ತೆ ಹಗಲಾಗದಿರಲಿ

.............................................................

ಒಮ್ಮೆಯೂ ಎನ್ನ ಒಲವಲ್ಲದೆ
ಇನ್ನೇನೂ ಕೇಳಲಿಲ್ಲ
ಒಮ್ಮೆಯೂ ಎನ್ನ ದೂರಲಿಲ್ಲ
ದೂರಿಟ್ಟು ಸತಾಯಿಸಲಿಲ್ಲ
ಸಿಡುಕಲಿಲ್ಲ ಮುನಿಯಲಿಲ್ಲ
ಇನ್ನಾರಿಗೋ ಹೋಲಿಸಿ ತೂಗಲಿಲ್ಲ
ಅಪರಂಜಿಯಂಥ ಪ್ರೀತಿ ನಿನದು
ನಿನ್ನ ಪಡೆದ ಭಾಗ್ಯ ಎನದು
ಖುಷಿಯ ಕಣ್ಣೀರಲ್ಲದೆ ಏನೂ ಇಲ್ಲ.
ನಿನ್ನೊಲವಿಗೆ ಪ್ರತಿಯಾಗಿ ಋಣಿಯಾಗಿ
ಈ ಅಲೆಮಾರಿ ಭಿಕಾರಿಯಲ್ಲಿ
ಏನೂ ಇಲ್ಲ.

Saturday, August 25, 2012

ಸಭ್ಯ ಪೋಲಿ ಕವನ ...

ಕಾಳನಿಶಿ ನಶೆಯ ಹಬ್ಬಿಸಿ ಬಾನ ತಬ್ಬಿದೆ 
ಪೂರ್ಣಶಶಿ ಬಿಂಬ ಮೂಡಿದೆ 
ಬಾ ಗೆಳತಿ 
ಪ್ರಣಯ ಕಡಲೊಳು 
ತನುವ ನೌಕೆ ಇಳಿಬಿಟ್ಟು 
ಅನಂಗರತಿ ಜೋಡಿಯ ಅನಾದಿ ಜಾಡಲಿ 
ಅನಂಗನಾ ರತಿ ನೀನಾಗಿ 
ಉಬ್ಬು ತಗ್ಗುಗಳ 
ಅನಾಮಿಕ ತಿರುವುಗಳ ತಾಕಿ 
ತೇಲಿ ತೇಲಿ ಅಲ್ಲಲ್ಲಿ ಮುಳುಗಿ 
ಈಜಿ ಈಜಿ 
ರಸಕಡಲ  ಸೀಳಿ 
ಬ್ರಹ್ಮಾನಂದದ ದಾರಿ ಹುಡುಕುವ 
ಉನ್ಮತ್ತ ಧ್ಯಾನದ ಉತ್ತುಂಗ  ಸೇರುವ 

ಬಾ ಗೆಳತಿ ಬೇಗ ಬಾ 
ಎಲ್ಲ ಎಲ್ಲೆಯ  ಮೀರಿ ಜಗದೆಲ್ಲ ಬೇಲಿಯ ದಾಟಿ 
ಮನದ ದುಗುಡ ದುಮ್ಮಾನ ಬಿಗುಮಾನವೆಲ್ಲ 
ಬೆವರಾಗಿ ಹನಿಯಲಿ 
ಕಿಬ್ಬೊಟ್ಟೆಯಾಳದ ಕನವರಿಕೆಯೆಲ್ಲ 
ಬಚ್ಚಿಟ್ಟ ಆಸೆಗಳೆಲ್ಲ ತಡೆಹಿಡಿದ ಕಳ್ಳಕನಸುಗಳೆಲ್ಲ 
ಹಿರಿಕಿರಿಯ ಸುಖದ ಝೇಂಕಾರದಲೆಯಾಗಿ 
ಸುತ್ತಲ ನೀರವ ಕದಡಲಿ 


ರೋಮ  ರೋಮದಿ ಮಿಂಚು ಚಲಿಸಿ 
ನಡೆಯಲಿ ತನು ಮಥನ 
ಬಾಳ ನಿಜ ಸುಧೆಗಾಗಿ 
 ಬಹಿರಂಗ ಅಂತರಂಗದೊಳು ಲೀನವಾಗಿ 
ಜೀವ ರಸ ಚಿಮ್ಮಿ 
ಸೃಷ್ಟಿ ಗುಟ್ಟು ಕತ್ತಲಲಿ ಬಯಲಾಗಲಿ
ಇರುಳು ಬೆಳಕಾಗಲಿ 

Monday, August 20, 2012

ಫೇಸ್ ಬುಕ್ ಸ್ಟೇಟಸ್ ಬಾರಿನಿಂದ ಒಂದಿಷ್ಟು

ಪೋಲಿ ಚಿತ್ರಗಳು, ಪೋಲಿ ಪುಸ್ತಕಗಳು, ಪೋಲಿ ಮೆಸ್ಸೇಜುಗಳು.ಇವರೆಲ್ಲ ನಿಜಕ್ಕೂ ನತದೃಷ್ಟರು ..ನಾವು ಇವುಗಳ ಸಮ್ಮುಖದಲ್ಲಿ ಎಲ್ಲದರಕ್ಕಿಂತ ಹೆಚ್ಚು ಖುಷಿಯಿಂದ ,ತನ್ಮಯತೆಯಿಂದ ತಲ್ಲೀನರಾಗುತ್ತೇವೆ .ಎಲ್ಲಿಯೂ ಸಿಕ್ಕದ ಧ್ಯಾನಸ್ಥ ಸ್ಥಿತಿಯನ್ನು ನಾವಿಲ್ಲಿ ಕಂಡುಕೊಳ್ಳುತ್ತೇವೆ ..ಆದರೂ ಇವು ಎಂದಿಗೂ ನಮ್ಮ ಸ್ಟೇಟಸ್ ಬಾರಿನಲ್ಲಿ ಜಾಗ ಪಡೆದುಕೊಳ್ಳುವುದಿಲ್ಲ .ನಮ್ಮ ಲೈಕ್ ಲಿಸ್ಟಿನಲ್ಲಿ ,ಫೇವರಿಟ್ ಲಿಸ್ಟುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ .ಒಳಮನೆಯಲ್ಲೇ ಉಳಿದುಬಿಡುತ್ತವೆ ಮುಖವಾಡದ ಹೊಸ್ತಿಲು ದಾಟದೆ .ಅದು ಸರಿಯೇ ಬಿಡಿ.ಎಷ್ಟೆಂದರೂ ನಾವು ಸುಸಂಸ್ಕೃತ ಸಮಾಜದ ಶುದ್ಧ ಸಭ್ಯರು :) ;) ;)

..............................................ಮಹಾ ಜ್ಞಾನಿ. ಚಿಂತಕ, ವಿಚಾರವಾದಿ, ಸಂವೇದನಾ ಶೀಲ ಬರಹಗಾರ, ಎಂದೆಲ್ಲ ಅವನಿಗೆ ಹೇಳಬಹುದಿತ್ತು. .ಮಹಾಕಾವ್ಯ ,ತತ್ವಶಾಸ್ತ್ರ, ಅದೂ ಇದೂ. ಅಕ್ಷರ ರೂಪದಲ್ಲಿರುವ ಎಲ್ಲವನ್ನೂ ಆತ ಓದಿಕೊಂಡಿದ್ದ.ಎಲ್ಲದರ ಬಗ್ಗೆ ವಿದ್ವತ್ಪೂರ್ಣವಾಗಿ ಹೇಳಬಲ್ಲವನು ,ಬರೆಯಬಲ್ಲವನು ಆಗಿದ್ದ .ಎಲ್ಲವನ್ನೂ ಒಂದು ಬಗೆಯ ಹೆಮ್ಮೆಯಲ್ಲೇ ಮಾಡಿಕೊಂಡಿದ್ದ .ಇಷ್ಟೆಲ್ಲಾ ವಿಚಾರಗಳನ್ನು ತಿಳಿದುಕೊಂಡಿದ್ದರೂ ಆತ ಸದಾ ಅಸುಖಿ. ಬದುಕನ್ನು ಚೆಂದಗೆ ಕಟ್ಟಿಕೊಳ್ಳುವಲ್ಲಿ ಸೋತ. ಯಾವ ಜ್ಞಾನವೂ ಅವನ ನೆರವಿಗೆ ಬರಲಿಲ್ಲ. 
ಎಲ್ಲ ಜ್ಞಾನವೂ ಅವನಿಗೆ ಹೆಮ್ಮೆಯಷ್ಟೇ ಆಗಿತ್ತು..ತಿಳಿದುಕೊಂಡ ಖುಷಿ ಎಂದಿಗೂ ಆಗಲಿಲ್ಲ ..ಎಲ್ಲವೂ ತಲೆಯಲ್ಲೇ ಉಳಿಯಿತು.ಹೃದಯಕ್ಕೆ ಇಳಿಯಲಿಲ್ಲ. ಆತ ಮಂಕುತಿಮ್ಮನ ಕಗ್ಗವನ್ನೂ ಓದಿದ್ದ .ಅದರ ಬಗ್ಗೆಯೇ ಒಂದು ವಿಮರ್ಶೆ ಕೂಡ ಬರೆದ. ‘ಎಲ್ಲರೊಳಗೊಂದಾಗು ಮಂಕುತಿಮ್ಮ ‘ ಎಂಬ ಕಗ್ಗದ ಸಾಲು ಆತನಿಗೆ ವಿಮರ್ಶೆಗೊಂದು ವಿಷಯವಾಯಿತು ಅಷ್ಟೇ. , ಬದುಕು ಕಟ್ಟಿಕೊಳ್ಳುವ ಸರಕಾಗಲಿಲ್ಲ :) :) ಯಾವುದೋ ಅರ್ಥವಾಗದ ಸಾಹಿತ್ಯಕ್ಕಿಂತ,ಒಣ ಚರ್ಚೆಗಿಂತ,ವಿಮರ್ಶೆಗಿಂತ ,ಅಮ್ಮ ಹಾಡುವ ಲಾಲಿ ,ಅಜ್ಜ ಹೇಳಿದ ಕಥೆ, ಅಪ್ಪ ಹಂಚಿಕೊಂಡ ಕಥೆವ್ಯಥೆ , ನಮ್ಮದೇ ಆದ ದಾರಿಯಲ್ಲಿ ನಮಗೆ ಸಿಕ್ಕ ಅನುಭವ ಇವುಗಳೇ ಮೇಲು :) :)

...................................................


ಕೆಲವಷ್ಟು ಸಂಗತಿಗಳು ಲೈಫಿನಲ್ಲಿ ಮೆಗಾ ಸೀರಿಯಲ್ ರೀತಿ. ಕಥೆ ಹಳ್ಳ ಹಿಡಿದು ಹೋಗಿರುತ್ತೆ .ಅಥವಾ ಅಸಲಿಗೆ ಕಥೆಯೇ ಇರುವುದಿಲ್ಲ. ಚಿತ್ರಕಥೆಯಲ್ಲೇ ನಿಭಾಯಿಸಿಕೊಂಡು ಹೋಗಬೇಕು .ಶುರುವಾದ ತಪ್ಪಿಗೆ ಸಾಗಬೇಕು. ನಿಲ್ಲಿಸಬಾರದು ಎಂಬ ಕಾರಣಕ್ಕೆ ನಡೆಸಿಕೊಂಡು ಹೋಗಬೇಕು :) :) ;)

..................................................

ಭಾರತಕ್ಕೆ ನಾಳೆ ಸ್ವಾತಂತ್ರ್ಯ ಸಿಕ್ಕ ದಿನ.ನನಗೆ ಅದನ್ನು ಕಳಕೊಂಡ ದಿನ ಎಂದ. ಯಾಕಪ್ಪ ಏನು ಸಮಾಚಾರ ಎಂದೆ.ನಾಳೆ ನನ್ನ Marriage Anniversary ಮಾರಾಯ ಎಂದು ನಕ್ಕ.. :) ;)..................................................


ಹಿಂದೊಮ್ಮೆ ಕೈಯಲ್ಲಿದ್ದ MBA ಬಿಟ್ಟು ಮಾಧ್ಯಮ ಕ್ಷೇತ್ರದಲ್ಲಿ ಕೆಲಸದ ಕನಸು ಕಂಡಿದ್ದೆ. ದಕ್ಕಲಿಲ್ಲ.ಹಣೆಯಲ್ಲಿ ಇದು ಬರೆದಿಲ್ಲ ಎಂದುಕೊಂಡು ನಿರಾಶನಾಗಿದ್ದೆ.ಈಗೀಗ ಮಾಧ್ಯಮ ಜಗತ್ತಿನ ವಿದ್ಯಮಾನಗಳನ್ನು ನೋಡುತ್ತಿದ್ದರೆ ನನ್ನ ಹಣೆಬರಹ ಸರಿಯಾಗಿಯೇ ಇತ್ತೆಂದು ಅನಿಸುತ್ತೆ. ವ್ಯಕ್ತಿಗತ ನಿಂದನೆ, ಸ್ವಪ್ರತಿಷ್ಠೆ ,ಮಿತಿ ಮೀರಿದ ರಾಜಕೀಯ. ಅಲ್ಲಿ ಏನುಂಟು ಏನಿಲ್ಲ. ‘ನಿನ್ನ ಕ್ರಿಯಾಶೀಲತೆ ವೃತ್ತಿಯಾಗುವುದು ಬೇಡ.ಪ್ರವೃತ್ತಿಯಾಗಿಯೇ ಇರಲಿ. ಆಗ ನೀನೂ ಉಳೀತಿ ,ನಿನ್ನ ಕ್ರಿಯಶೀಲತೆಯೂ ಉಳಿಯುತ್ತೆ. 
ಈ ಮಾಧ್ಯಮದ ಸಹವಾಸ ನಮ್ಮ ಕಾಲಕ್ಕೇ ಆಗಿಹೋಗಲಿ .ನಿನಗಿದು ಬೇಡ.ಅವಕಾಶ ಹುಡುಕಿ ಹೋಗಬೇಡ .ಸಿಕ್ಕದ್ದನ್ನು ಬಿಡಬೇಡ ‘ಎನ್ನುವ ಅರ್ಥದಲ್ಲಿ ಹೇಳಿದ ಗುರುವಿನ ಮಾತು ಈಗಲೂ ಆಗಾಗ ನೆನಪಿಗೆ ಬರುತ್ತೆ. ಈಗ ಆಗೊಮ್ಮೆ ಈಗೊಮ್ಮೆ ತಲೆ ಕೆಟ್ಟು ಕೈ ತುರಿಸಿದರೆ ಎರಡು ಸಾಲು ಗೀಚಲು ಸ್ಟೇಟಸ್ ಬಾರ್ ಇದೆ. ತುರಿಕೆ ಜಾಸ್ತಿಯಾದರೆ ಯಥಾನುಶಕ್ತಿ ಕೆರೆದುಕೊಳ್ಳಲಿಕ್ಕೆ ನನ್ನದೇ ಆದ ಬ್ಲಾಗ್ ಅಂಗಳವಿದೆ.ಬದುಕಿನ ಬಗ್ಗೆ ಯಾವುದೇ ದೂರುಗಳಿಲ್ಲ.ನಾನು ಪರಮಸುಖಿ. ;) :)


...................................................


ಒಂದ್ ಕಾಲ್ ಕಾಲು ..ಎರಡ ಕಾಲ್ ಅರ್ಧ .ಮೂರಕ್ಕೆ ಮುಕ್ಕಾಲು ...ನಾಲ್ಕ್ ಕಾಲ್ ಒಂದೇ ..ಸಾಕು ಬಿಡು ..ನನಗೆ ಗೊತ್ತು ನೀನು ಪಕ್ಕಾ ಲೆಕ್ಕಾಚಾರದ ಮನುಷ್ಯ ಅಂತ .ಇದು ಲೆಕ್ಕದ ಸಮಯವಲ್ಲ .ಮಂಚಕ್ಕೆ ಮೂರೇ ಕಾಲು ಅಂದಳು ಮೆಲ್ಲಗೆ ನಕ್ಕು , ಬೆರಳಲ್ಲಿ ನೆಲವ ಗೀರಿ ಮಳ್ಳಿ. :) :) ಅಲ್ಲಿಗೆ ನನ್ನ ಲೆಕ್ಕ ತಪ್ಪಿತು. ನಾಲ್ಕ್ ಕಾಲ್ ಎರಡೂ ? ಮೂರೂ.. ? :) :) :


....................................................

ಸನ್ನಿ ಲಿಯೋನ್..ಇತ್ತೀಚಿಗೆ ನಾನು ಕೇಳಿದ ಹೆಸರು.. ಇವಳುತುಂಬ ಫೇಮಸ್ಸು .ಆದರೆ ನನಗೆ ಮಾತ್ರ ಗೊತ್ತಿಲ್ಲ...ಇಷ್ಟೊಂದು ದಡ್ಡ ಆಗಬಾರದು. ಸಾಮಾನ್ಯ ಜ್ಞಾನ ಬೆಳೆಸ್ಕೋಬೇಕು ಅಂತ ,ಅವಳು ಯಾರು ,ಏನು ಎತ್ತ ,ಏನವಳ ಸ್ಟೋರಿ ಕಥೆ ಎಂದು ಹುಡುಕಿಕೊಂಡು ಹೊರಟೆ ..ದೇವರೇ !!..ಬ್ರಹ್ಮಾಂಡವನ್ನೇ ಕಂಡೆ...ಮಹಾಮಹಿಮಳು ಅವಳು.ಪುಣ್ಯಾತಗಿತ್ತಿ .ಅದಕ್ಕೆ ದೊಡ್ಡವರು ಹೇಳಿದ್ದು ಕೆಲವಷ್ಟರ ಮೂಲ ಹುಡುಕಬಾರದು ಅಂತ ;) :) ;) ಸಣ್ಣವರು ನಾವು..ಹುಡುಕೋದೇ ನಮ್ ಬಿಸಿನೆಸ್ಸು ಅಂತ ಹೊರಟು ಎಲ್ಲೋಹೋಗಿ ವಾಪಸ್ಸು ಬರುವ ದಾರಿನೇ ಮರ್ತು ಬಿಡ್ತೀವಿ :) :) ಏನ್ ಮಾಡನ ಹೇಳಿ ?


......................................................


ಕೈಯಲ್ಲಿ ಪೆನ್ ಇದ್ದರೆ ಸಾಲದು.ತಲೆಯಲ್ಲಿ ಇಂಕ್ ಇರಬೇಕು  :) :)

Sunday, August 12, 2012

ಆ ಒಂದು ದಿನದ ಡೈರಿ ; ಮಾಜಿ ಡಾನ್ ಮತ್ತವನ ಸಹಚರರು ...ಅವತ್ತು ಭಾನುವಾರ. ನನ್ನ ಎಲ್ಲ ವಾರಗಳ  ಕೊನೆಯ ಎರಡು ದಿನಗಳನ್ನು ಆಗ ಸ್ಟುಡಿಯೋ ಭೇಟಿಗೆ ಮೀಸಲಿಡುತ್ತಿದ್ದೆ. ವಾರದ ಮೊದಲಿನ ಐದು ದಿನಗಳು ಕಂಪನಿಯಲ್ಲಿನ ನನ್ನ ವೃತ್ತಿಗೆ ಹಾಗು ಉಳಿದ ಇನ್ನೆರೆಡು ದಿನಗಳು ಸಿನೆಮಾ ಎಂಬ ನನ್ನ ಪ್ರವೃತ್ತಿಗೆ ಎಂಬ ಲೆಕ್ಕಾಚಾರ. ಸ್ಟುಡಿಯೋದಲ್ಲಿ ನನಗೆ ಸಿಕ್ಕ ಅಪರೂಪದ ಅನುಭವಗಳು ಅನೇಕ.ಅಂಥಹ ಅಪರೂಪದ ಅನುಭವಗಳಲ್ಲಿ ಒಂದನ್ನು ಈ ದಿನ ನಿಮ್ಮ ಮುಂದಿಡುತ್ತಿದ್ದೇನೆ.


ಆ ಭಾನುವಾರ ಕೂಡ ಎಂದಿನಂತೆ ಸ್ಟುಡಿಯೋ ಗೆ ಹೋಗಿದ್ದೆ. ಮ್ಯೂಸಿಕ್ ಡೈರೆಕ್ಟ್ರು ಯಾರೊಡನೆಯೋ ಒಂದು ಹೊಸಾ ಸಿನೆಮಾದ ಬಗ್ಗೆ ಮಾತನಾಡುತ್ತ ಕುಳಿತಿದ್ದರು.ಅಂತ ಸಮಯಗಳಲ್ಲಿ ನನಗೆ ಅಥವಾ ಇನ್ಯಾರಿಗೂ ಅವರ ರೂಮಿಗೆ ಎಂಟ್ರಿ ನಿಷಿದ್ಧ. ಆ ಸೂಕ್ಷ್ಮಗಳೆಲ್ಲ ಮೊದಲೇ ತಿಳಿದಿದ್ದರಿಂದ ನಾನು ಪಕ್ಕದ ರೂಮಿನಲ್ಲಿ ನಾನು ತಂದಿಟ್ಟುಕೊಂಡಿದ್ದ ಪೇಪರ್ ಬಿಡಿಸಿ ಓದುತ್ತಾ ಕುಳಿತೆ.ನನ್ನೆದುರಿನ ಸೋಫಾದಲ್ಲಿ ಇಬ್ಬರು ಕುಳಿತಿದ್ದರು. ನಾನು ಬಂದು ಕೂತಾಗ ಒಮ್ಮೆ ಮೇಲಿನಿಂದ ಕೆಳಗಿನ ತನಕ ನಿರ್ಭಾವುಕವಾಗಿ ನೋಡಿದರು. ನಾನೂ ಅಷ್ಟೇ ನಿರ್ಭಾವುಕವಾಗಿ ಅವರನ್ನೊಮ್ಮೆ ನೋಡಿ ಕುಳಿತಿದ್ದೆ. ಸ್ವಲ್ಪ ಸಮಯದ ನಂತರ ಆ ಇಬ್ಬರಲ್ಲಿ ಒಬ್ಬ ಸಾರ್ ಎಂದು ಬಳಿಗೆ ಬಂದ.ಏನು ಎಂದು ಕೇಳಿದೆ.ಪೇಪರ್ ಬೇಕಿತ್ತು ಒಮ್ಮೆ ಕೊಡಿ ಎಂದು ದೇಶಾವರಿ ನಗೆ ನಕ್ಕ.ನಾನೂ ನಕ್ಕು ಅದಕ್ಕೇನು ತಗೋಳಿ ಸಾರ್ ಎಂದು ಕೊಟ್ಟೆ.ಅಲ್ಲಿಗೆ ನಮ್ಮಲ್ಲಿ ಒಂದು ಬಗೆಯ ಸಲುಗೆ ಅನಾಯಾಸವಾಗಿ ಚಿಗಿತುಕೊಂಡಿತ್ತು.’ಸಾರ್ ಪೇಪರ್ ನಿಮ್ಮ ಬಳಿಯೇ ಇರಲಿ.ನಾನು ಊಟ ಮುಗಿಸಿ ಬರುತ್ತೇನೆ ಎಂದು ಎದ್ದು ಹೊರಟೆ.ಸರಿ ನೀವು ಆರಾಮವಾಗಿ ಊಟ ಮುಗಿಸಿ ಬನ್ನಿ ಬಾಸ್ .ನಾವಿಲ್ಲೇ ಇರುತ್ತೇವೆ ಎಂದು ಮತ್ತೊಮ್ಮೆ ನಕ್ಕು ಕೈ ಕುಲುಕಲು ಕೈ ಮುಂದೆ ಮಾಡಿದ. ಮೊದಲು ಅವನಿಗೆ ಕೊನೆಗೆ ಜೊತೆಗಿದ್ದ ಇನ್ನೊಬ್ಬನಿಗೂ ಕೈಕೊಟ್ಟು ನಾನು ಊಟಕ್ಕೆ ಹೊರಟೆ.

   ಊಟ ಮುಗಿಸಿ ಬರುವಷ್ಟರಲ್ಲಿ ಸ್ಟುಡಿಯೋಗೆ  ಹತ್ತಿ ಹೋಗುವ ಮೆಟ್ಟಿಲ ಬಳಿ ಒಬ್ಬ ನಿಂತಿದ್ದ.ಅವನು ಕೂಡ ಒಮ್ಮೆ ನನ್ನನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ. ಅವನ ಕಣ್ಣಲ್ಲಿ ಸಣ್ಣಗೆ ಒಂದು ಶಂಕೆ ಸುಳಿದು ಹೋಗಿದ್ದನ್ನು ಗಮನಿಸಿ ನಾನು ಮೆಟ್ಟಿಲೇರಿ ಮೇಲೆ ಬಂದುಬಿಟ್ಟೆ. ಡೈರೆಕ್ಟಾರ್ ರೂಂ ಪಕ್ಕದ,ನಾನು ಮೊದಲು ಹೇಳಿದ ರೂಮಿನೆಡೆ ಒಮ್ಮೆ ನೋಡಿದೆ.ಆ ಇಬ್ಬರು ಅಲ್ಲೇ ಇದ್ದರು.ನನ್ನನ್ನೊಮ್ಮೆ ನೋಡಿ ಕೈ ಬೀಸಿ ನಕ್ಕರು.ಮತ್ತೆ ನಾನೂ ಒಮ್ಮೆ ನಕ್ಕು ನೀರು ಕುಡಿಯಲೆಂದು ಸ್ಟುಡಿಯೋ ದ ಇನ್ನೊಂದು ಭಾಗಕ್ಕೆ ಬಂದೆ.ಅಲ್ಲಿ ಇನ್ನೊಬ್ಬ ಕಂಡ.ಆತ ಅತ್ತಿಂದಿತ್ತ ಸುಮ್ಮನೆ ಮತ್ತದೇ ನಿರ್ಭಾವುಕತೆಯಲ್ಲಿ  ಗಸ್ತು ತಿರುಗುವನಂತೆ ಓಡಾಡಿಕೊಂಡಿದ್ದ.ಆಗೊಮ್ಮೆ ಈಗೊಮ್ಮೆ ಸ್ಟುಡಿಯೋದ ಹಿಂಭಾಗದ ಜಾಗವನ್ನ ಮೇಲಿನಿಂದಲೇ ಗಮನಿಸುತ್ತಿದ್ದ.ಯಾಕೋ ಸ್ಟುಡಿಯೋ ಎಂದಿನಂತಿಲ್ಲ  ಎಂದುಕೊಂಡು ನಾನು ಮತ್ತೆ ಡೈರೆಕ್ಟಾರ್ ರೂಂ ಪಕ್ಕದ ರೂಮಿನೆಡೆ ಹೊರಟೆ.

   ಅಲ್ಲೊಂದು ಶಾಕ್ ನನಗಾಗಿ ಕಾದಿತ್ತು. ರೂಮಿಗೆ ಹೋಗುವ ಬಾಗಿಲಲ್ಲಿ ಒಬ್ಬ ನನ್ನನ್ನು ತಡೆದ. ಜೊತೆಗೆ ಅಷ್ಟು ಹೊತ್ತು ನನ್ನೆದುರು ಕುಳಿತು ನನ್ನಿಂದಲೇ ಪೇಪರ್ ತೆಗೆದುಕೊಂಡು ಓದಿದ ಆ ಇಬ್ಬರೂ ಕೂಡ ಧಾವಂತದಲ್ಲಿ ಎದ್ದು ನನ್ನ ಬಳಿ ಬಂದು ಬಿಟ್ಟರು. ಜೊತೆಗೆ ಇನ್ನಿಬ್ಬರು. ಎಲ್ಲಿದ್ದರೋ ಗೊತ್ತಿಲ್ಲ.ಅವರೂ ಬಂದು ನನ್ನ ಸುತ್ತ ನಿಂತು ಬಿಟ್ಟರು. ರೂಮ್ ಒಳಗಿನಿಂದ ಯಾವುದೋ ಒಂದು ಧ್ವನಿ ಅವರಲ್ಲಿ ಒಬ್ಬನನ್ನು ಕರೆಯಿತು.ಒಳಗೆ ಹೋಗಿ ಬಂದ ಆತ ನನ್ನನ್ನು ಒಳಗೆ ಬರುವಂತೆ ಕರೆದ. ಅಲ್ಲಿ ನನಗೆ ಇನ್ನೊಂದು ದೊಡ್ಡ ಶಾಕ್ ಕಾದಿತ್ತು.

ಅವರು ಮಾಜಿ ಡಾನ್. ನಾನು ಅವರೆದುರು ನಿಂತಿದ್ದೆ.ಹೊರಡಲಿಕ್ಕೆ ಅನುವಾಗಿ ಸ್ಟುಡಿಯೋ ರೆಕಾರ್ಡಿಂಗ್ ರೂಮಿನಿಂದ ಹೊರಬಂದು ನಾನು ಮೊದಲು ಕುಳಿತಿದ್ದ ರೂಮಿಗೆ ಬಂದು ಕೂತಿದ್ದರು.ಜೊತೆಗೆ ನನ್ನ ಡೈರೆಕ್ಟ್ರು. ‘ಯಾರು ನೀನು’ ಎಂದು ಗಂಭೀರವಾಗಿ  ಕೇಳಿದರು. ಪಕ್ಕದಲ್ಲಿದ್ದ ಡೈರೆಕ್ಟ್ರು ತಡಮಾಡದೆ ನನ್ನ ಸಹಾಯಕ್ಕೆ ಬಂದರು .’ಅವನು ನಮ್ಮವನೇ ಸಾರ್. ಹಾಡು ಬರೀತಾನೆ’ ಎಂದು ಹೇಳಿದಾಗ ಡಾನ್ ತಣ್ಣಗಾದರು.ಗಂಭೀರ ಮುಖದಲ್ಲಿ ಮಂದಹಾಸ ಮೂಡಿತು. ಬನ್ನಿ ಕೂತುಕೊಳ್ಳಿ ಎಂದು ಕೈ ಕುಲುಕಿದರು. ಅವರು ಅಷ್ಟು ಹೇಳುತ್ತಿದ್ದಂತೆ ಅಲ್ಲಿದ್ದ ಅವರ ಬೆಂಗಾವಲಿನ ಪಡೆಯ  ಅಷ್ಟೂ ಮಂದಿ ‘ಸಾರೀ ಸಾರ್’ ಎಂದು ಹೇಳಿ ನಕ್ಕು ಹೋದರು.ಈಗ ರೂಮಿನಲ್ಲಿ ನಾನು, ಡೈರೆಕ್ಟ್ರು ಮತ್ತು ಮಾಜಿ ಡಾನ್ ಅಷ್ಟೇ. ಸ್ವಲ್ಪ ಹೊತ್ತು ಅವರು ಸಿನೆಮಾದ ಹಾಡುಗಳ ಬಗ್ಗೆ ಮಾತಾಡಿಕೊಂಡರು.ನಾನು ಸುಮ್ಮನೆ ನೋಡುತ್ತಾ ಕುಳಿತಿದ್ದೆ. ಮಾತಿನ ನಡುವೆ ಕೆಲವೊಮ್ಮೆ ಮೌನ ಆಗೊಮ್ಮೆ ಈಗೊಮ್ಮೆ ಇಣುಕುತ್ತಿತ್ತು. ಜೀವನದಲ್ಲಿ ಮೊದಲ ಬಾರಿಗೆ ಮೌನಕ್ಕೆ ಇರಬಹುದಾದ ಆಳವನ್ನ,ಅರ್ಥವನ್ನ  ಅರಿವಿಗೆ ತಂದುಕೊಂಡಿದ್ದೆ. ಡೈರೆಕ್ಟ್ರು ತುಂಬಾ ವಿಧೇಯತೆಯಿಂದ ಡಾನ್ ಮಾತುಗಳನ್ನ ಕೇಳಿಸಿಕೊಳ್ಳುತ್ತಿದ್ದರು.ಡಾನ್ ಮಾತನಾಡಿದ್ದೇ ಜಾಸ್ತಿ. ಡೈರೆಕ್ಟ್ರು ಡಾನ್ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಿದ್ದರು.ಆಗೊಮ್ಮೆ ಈಗೊಮ್ಮೆ ‘ಹ್ಮ್ಮ್’ ‘ಸರಿ ಸರಿ ಸಾರ್’   ಎಂದಷ್ಟೇ ಹೇಳುತ್ತಿದ್ದರು.

  ಕೊನೆಗೆ ಡಾನ್ ಹೊರಟರು. ಅವರನ್ನು ಬೀಳ್ಕೊಡಲು ನಾನು ಹಾಗು ನಮ್ಮ ಡೈರೆಕ್ಟ್ರು ಎದ್ದು ಅವರ ಜೊತೆ ಹೊರಟೆವು.ಸ್ಟುಡಿಯೋದ ಮೊದಲನೇ ಮಹಡಿಯಿಂದ ಕೆಳಗೆ ಬರುವತನಕ ಐದು ಮಂದಿ ಮಾರಿಗೊಬ್ಬರಂತೆ  ಮೆಟ್ಟಿಲುಗಳ ಪಕ್ಕ ನಿಂತಿದ್ದರು. ಸ್ಟುಡಿಯೋ ಬಾಗಿಲಲ್ಲಿ ಇನ್ನಿಬ್ಬರು. ಡಾನ್ ಸ್ಟುಡಿಯೋ ದಿಂದ ಹೊರಬರುತ್ತಿದ್ದಂತೆ ಎಲ್ಲರೂ ಅವರ ಸುತ್ತ ಎಲ್ಲ ಕಡೆಯಿಂದ ಸುತ್ತುವರಿದು ನಿಂತರು.ನಡುವೆ ವೃತ್ತದಲ್ಲಿ ನಾನು ,ಡೈರೆಕ್ಟ್ರು ಮತ್ತು ಡಾನ್.ಹೋಗುವ ಮುನ್ನ ಒಂದಿಷ್ಟು ಲೋಕಾಭಿರಾಮದ ಮಾತಿನ ಸಮಯವದು.ಮಾತು ಸಾಗುತ್ತಿತ್ತು .ನಾನು ಸುಮ್ಮನೆ ಸುತ್ತಲೂ ಗಮನಿಸುತ್ತ ನಿಂತಿದ್ದೆ.ಸ್ಟುಡಿಯೋ ಎದುರಿನ ರಸ್ತೆಯ ಶುರುವಿನಲ್ಲಿ ಇನ್ನೊಬ್ಬ ಕಂಡ.ಆತ ಕಣ್ಣಲ್ಲಿ ಕಣ್ಣಿಟ್ಟು ಸುತ್ತಲಿನ ಜಾಗವನ್ನ ಗಮನಿಸುತ್ತಾ ನಿಂತಿದ್ದ. ನಡುವೆ ಎಲ್ಲಿಂದಲೋ ಸ್ಟುಡಿಯೋ ರಸ್ತೆಯ ಇನ್ನೊಂದು ತುದಿಯಿಂದ ಬೈಕೊಂದು ಬರ್ರನೆ ನಮ್ಮ ಹಿಂದೆ ಹೋಯಿತು.ಆಗ ನೋಡಬೇಕಿತ್ತು ಡಾನ್ ನ ಇಡೀ ಟೀಮು ಬೈಕ ಹೋದ ಕಡೆ ಧಾವಂತಕ್ಕೆ ಬಿದ್ದು ನೋಡಿದ ರೀತಿ. ಒಂದೆರೆಡು ಕ್ಷಣ ತಣ್ಣನೆಯ ಮೌನ.ಅಷ್ಟು ಜನರಿದ್ದರೂ ಸುತ್ತ ,ಇಡೀ ಆ ಪ್ರದೇಶ ನಿರ್ಜನವಾದಂತೆ ಭಾಸವಾಯಿತು.ಅದು ನಿಶ್ಚಲವಾದ ಕೊಳಕ್ಕೆ ಕಲ್ಲು ಬಿದ್ದ ಘಳಿಗೆ.ಬೈಕು ತಿರುವಿನಲ್ಲಿ ಮಾಯವಾದ ನಂತರ ಪರಿಸ್ಥಿತಿ ಮತ್ತೆ ಮರಳಿ ಮೊದಲಿನಂತಾಯಿತು.ಮೊದಲು ಡಾನ್ ನನ್ನ ಹಾಗು ಡೈರೆಕ್ಟರ ಕೈ ಕುಲುಕಿದರು.ನಂತರ ಇಡೀ   ಟೀಂ ನ ಮಂದಿ ಅದನ್ನೇ ಅನುಸರಿಸಿದರು.ಅಷ್ಟು ಮಾಡಿ  ಡಾನ್ ಮತ್ತು ಅವರ ಬಳಗ ಅಲ್ಲಿಂದ ಹೊರಟುಹೋಯಿತು.

  ಈ ಎಲ್ಲ ವಿದ್ಯಮಾನಗಳು ನನ್ನ ಕಣ್ಣೆದುರು ಕನಸಿನಂತೆ ನಡೆದು ಹೋದವು.ಸಿನೆಮಾದ ರೀಲ್ ನಲ್ಲಿ ಅಷ್ಟೇ ಕಂಡ ಸಂಗತಿಗಳು ರಿಯಲ್ ಆಗಿ ಅನುಭವಕ್ಕೆ ಬಂದವು. ಆ ಡಾನ್ ಅವರನ್ನು ಉಪೇಂದ್ರರ ಓಂ ಸಿನಿಮಾದಲ್ಲಿ ಕಂಡಿದ್ದೆ.ಈಗ ಕಣ್ಣೆದುರು. ಹುಡುಕಿಕೊಂಡು ಹೋದರೂ  ಸಿಕ್ಕದ ಅಪರೂಪದ ಅನುಭವ ಆ ದಿನ ನನ್ನದಾಯಿತು.ಇಂಥ ಅಪರೂಪದ ಅನೇಕ ಅನುಭವಗಳನ್ನ ಕೊಡಮಾಡಿದ ನನ್ನ ಸಿನೆಮಾ ಪ್ರೀತಿಗೆ ನಾನು ಯಾವತ್ತೂ ಋಣಿ J J

ಕೊನೆಗೊಂದಿಷ್ಟು ಮಾತು........

 ಅವರು ಅಷ್ಟು ದೊಡ್ಡ ಡಾನ್.ನನ್ನಂಥ ಕ್ಷುದ್ರ ಜೀವಿಗೆ ,ಎಲ್ಲಿಂದಲೋ ಬಂದು ಪಕ್ಕದಲ್ಲಿ ಹಾದುಹೋದ ಬೈಕಿನೆಡೆ ಅಷ್ಟೊಂದು ಭಯಬಿದ್ದರಲ್ಲ.ಈವತ್ತಿಗೂ ಅವನ್ನೆಲ್ಲ ನೆನೆಸಿಕೊಂಡರೆ ಒಂದು ಅನಾಯಾಸ ನಗು ನನ್ನಲ್ಲಿ ಹುಟ್ಟುತ್ತೆ.ಡಾನ್ ಬದುಕು ಒಂದು ರೀತಿ ಬಂಗಾರದ ಪಂಜರದೊಳಗಿನ ಹಕ್ಕಿಯಂತೆ. ಅಷ್ಟೇ.
  

Sunday, July 29, 2012

ಆತ ಮತ್ತು ನಾನು


ಅಲ್ಲಿ ದೂರದಲ್ಲಿ ಎಲ್ಲೋ ಸೆಳೆತದ ಸೆಲೆ
ಸೆಳೆಯುತಿದೆ ವಿನಾಕಾರಣ
ಇಲ್ಲೇ ಕುಳಿತೇ ಇದ್ದ ನನ್ನನು
ಕಣ್ಮುಚ್ಚಿದರೆ ಒಳಗೆಲ್ಲೋ ಕಂಡರೂ ಕಾಣದ
ಮಸಕು ಮಸಕು ಚಿತ್ರ.
ಕಣ್ತೆರೆದರೆ ಶೂನ್ಯ ನೀಲಾಕಾಶ
ನನಸಾಗದ ಕನಸುಗಳು ಒಂದಿಷ್ಟು
ಜೊತೆಗೊಂದಿಷ್ಟು ಮಧುರ ವಿಷದಂಥ ನೆನಪು
ಉಳಿದದ್ದು ಹಗಲುಗನಸು.

ಸಾಗುವ ದಾರಿಗುಂಟ
ಒಮ್ಮೆ ಬಿಸಿಲು ಒಮ್ಮೆ ನೆರಳು
ನಡುವೆಲ್ಲೋ ಒಮ್ಮೆ
ಬಿಸಿಲು ನೆರಳು ಯಾವುದೂ ಇರದೇ
ಭರಪೂರ ಗೊಂದಲ.
ಹುಟ್ಟಿದ್ದಕ್ಕೆ ಪ್ರಾಯಶ್ಟಿತವೆಂಬಂತೆ ಬದುಕು
ಸಾಯುವತನಕ ಬದುಕಿಯೇ ಇರು
ಕ್ಷಣಕ್ಕೊಮ್ಮೆ ಸತ್ತು ಸತ್ತು ಬದುಕಿದರೂ ಸರಿಯೇ.
ಹಾಳು ಅರ್ಥವಾಗದ ತತ್ವ
ಯಾರೋ ಬೆಳಕು ಕಂಡ ಅಲೆಮಾರಿ ಹೇಳಿ ಹೋದ ನೆನಪು.
ಹೇಳಿ ಹೋದವನು ಹೋದ 
ಎತ್ತ ಹೋದನೋ 
ಆದರೂ ಆತ ನನ್ನಲ್ಲೇ ಉಳಿದ
ಮರಳಿ ಮರಳಿ ಪಿಸುಗುಡುವ ಗುಂಗಾಗಿ.

ಗುಂಗಲ್ಲೇ ಮೈಮರೆತು ಕುಳಿತದ್ದೇ   ಬಂತು
ಸಂಜೆ ಕಳೆದು ರಾತ್ರಿ ಸುರಿವ ಹೊತ್ತು
ನಾ ಬಂದ ದಾರಿಯೂ ಕಾಣುತಿಲ್ಲ
ಅತ್ತ ಆತ ಹೋದ ದಾರಿಯೂ ....