Sunday, January 30, 2011

ಅರೆಕ್ಷಣದ ಅದೃಷ್ಟ ..

ಒಂದು ಒಳ್ಳೆಯ ಪುಸ್ತಕ ಓದಿ ಮುಗಿಸಿದ ಖುಷಿಯಲ್ಲಿ ನಿಮ್ಮೆದುರು ಬಂದಿದ್ದೇನೆ.ನನ್ನ ಖುಷಿಗೆ ಕಾರಣವಾದ ಆ ಪುಸ್ತಕ ಡಿ.ಜಿ.ಮಲ್ಲಿಕಾರ್ಜುನರದ್ದು. ಪುಸ್ತಕದ ಹೆಸರು ‘ಅರೆ ಕ್ಷಣದ ಅದೃಷ್ಟ ‘.

ಮಲ್ಲಿಕಾರ್ಜುನರು ತೇಜಸ್ವಿಯವರಿಂದ ಪ್ರಭಾವಿತನಾಗಿದ್ದೇನೆ ಎಂದು ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಮುಖಪುಟವೆಂಬ ಶುರುವಿನಿಂದಲೇ ತೇಜಸ್ವಿ ಪ್ರಭಾವ ಎದ್ದು ಕಾಣುತ್ತೆ.ಮಲ್ಲಿಕಾರ್ಜುನರ ಪುಸ್ತಕದ ಮುಖಪುಟ ನೋಡುವಾಗ ತೇಜಸ್ವಿ ನೆನಪಾದರು.ಅವರ ಪುಸ್ತಕ ಪ್ರಕಾಶನದ ಪುಸ್ತಕಗಳ ಮುಖಪುಟಗಳು ಕಣ್ಮುಂದೆ ಬಂದವು. ಹಾಗೆ ಈ ಪುಸ್ತಕ ಶುರುವಿನಿಂದಲೇ ಒಂದು ಬಗೆಯ ಉಲ್ಲಾಸಕ್ಕೆ ,ಖುಷಿಗೆ ಕಾರಣವಾಗುತ್ತೆ. ಇನ್ನು ಪುಸ್ತಕದ ಪುಟಗಳ ಗುಣಮಟ್ಟ ಅತ್ಯುತ್ತಮವಾದದ್ದು. ಪುಸ್ತಕದಲ್ಲಿನ ಫೋಟೋಗಳು ಉಸಿರಾಡುತ್ತವೆ.

ಈವತ್ತು ನಾನು ಬಂದದ್ದು ಪುಸ್ತಕದ ಪರಿಚಯ ಹೇಳುವುದಕ್ಕಾಗಲಿ ಅಥವಾ ಪುಸ್ತಕ ಹಾಗಿದೆ ಹೀಗಿದೆ ಎಂದು ವಿಮರ್ಶೆಯ ಧಾಟಿಯಲ್ಲಿ ಮಾತನಾಡುವುದಕ್ಕಾಗಲಿ ಅಲ್ಲವೇ ಅಲ್ಲ. ನಾನು ಬಂದದ್ದು ಪುಸ್ತಕದ ಬಗೆಗಿನ ನನ್ನ ಖುಷಿಯನ್ನ ಹಂಚಿಕೊಳ್ಳುವುದಕ್ಕಷ್ಟೇ. ಅದನ್ನಷ್ಟೇ ಮಾಡುತ್ತೇನೆ.ನನ್ನ ಖುಷಿಗಳು ಈ ಕೆಳಗಿನಂತಿವೆ ನೋಡಿ.

Ø ಇಡೀ ಪುಸ್ತಕದ ಪುಟಗಳ ಗುಣಮಟ್ಟ ತುಂಬಾ ಎತ್ತರದಲ್ಲಿದೆ. ಫೋಟೋಗಳನ್ನ ಜೀವಂತವಾಗಿಸುವಲ್ಲಿ ಇದು ಅವಶ್ಯಕವಾದ್ದರಿಂದ ,ಗುಣಮಟ್ಟದ ವಿಚಾರದಲ್ಲಿ ರಾಜಿಯಾಗಿಲ್ಲ ಎಂಬುದು ಸ್ಪಷ್ಟ. ಅದೆಲ್ಲ ಇರಲಿ ಬಿಡಿ. ನಾನು ಹೇಳಹೊರಟಿರುವುದು ಅದನ್ನಲ್ಲ. ಈ ಪುಸ್ತಕವನ್ನ ಎಲ್ಲೆಂದರಲ್ಲಿ ಇಡಲು ಮನಸ್ಸೇ ಆಗುವುದಿಲ್ಲ. ಪ್ರತಿ ಪುಟವನ್ನ ಆಗಾಗ ಒರೆಸಿ ಜೋಪಾನಮಾಡಿ ಇಡಬೇಕೆಂದು ಅನ್ನಿಸಿಬಿಡುತ್ತೆ.

Ø ಪುಸ್ತಕದಲ್ಲಿರುವ ಫೋಟೋಗಳನ್ನು ಹಾಗೆಯೇ ಕತ್ತರಿಸಿ ಎತ್ತಿಕೊಂಡು ಫ್ರೇಮು ಹಾಕಿಸಿ ಗೋಡೆಗೆ ತೂಗಿ ಹಾಕಿಕೊಳ್ಳಬಹುದು .ಫೋಟೋಗಳ ಅಷ್ಟು ಚೆನ್ನಾಗಿವೆ . ಸಣ್ಣವನಿದ್ದಾಗ ಈ ಪುಸ್ತಕವೇನಾದರೂ ಕೈಗೆ ಸಿಕ್ಕಿದ್ದರೆ ,ಕೈಗೆ ಸಿಗುತ್ತಿದ್ದಂತೆ ಫೋಟೋಗಳನ್ನೆಲ್ಲ ಕತ್ತರಿಸಿ ,ಕೊನೆಗೆ ವಿದ್ಯಾ ನೋಟ್ ಬುಕ್ಕಿನಲ್ಲಿ ಅವನ್ನೆಲ್ಲ ಅಂಟಿಸಿ ನನ್ನದೇ ಒಂದು ಸ್ವಂತ ಪರ್ಸನಲ್ ಪ್ರೈವೇಟ್ ಆಲ್ಬಮ್ ಮಾಡಿಕೊಂಡಿರುತ್ತಿದ್ದೆ.

Ø ಪ್ರತಿಯೊಂದು ಚಿತ್ರ ಲೇಖನದ ಕೊನೆಗೆ ಸಿಗುವ ಉಪಸಂಹಾರದ ಸಾಲುಗಳು ಯೋಚನೆಗೆ ಹಚ್ಚುತ್ತವೆ .ಹಿತಾನುಭವ ನೀಡುತ್ತವೆ.

Ø ನನಗೆ ಪತಂಗಕ್ಕೂ ,ಚಿಟ್ಟೆಗೂ ಇರುವ ವ್ಯತ್ಯಾಸ ಗೊತ್ತಿರಲಿಲ್ಲ.ಇಲ್ಲಿತನಕ ಅವರೆಡೂ ಒಂದೇ ಎಂದುಕೊಂಡಿದ್ದೆ. ಈ ಪುಸ್ತಕದಲ್ಲಿ ಅವೆರಡರ ನಡುವಿನ ವ್ಯತ್ಯಾಸ ತಿಳಿದಾಗ ತುಂಬಾ ಖುಷಿಯಾಯಿತು.ಅದು ಹೊಸತನ್ನು ತಿಳಿದುಕೊಂಡ ಖುಷಿ. ಹೀಗೆ ಖುಷಿಪಡುವ ಸಂಗತಿಗಳು ಪುಸ್ತಕದ ಉದ್ದಕ್ಕೂ ನನಗೆ ಸಿಕ್ಕಿವೆ.

Ø ಇಲ್ಲಿ ಫೋಟೋಗಳು ಸಹಜಸುಂದರ.ಫೋಟೋ ಜೊತೆಗಿನ ಬರಹಗಳು ಸರಳ ಸುಂದರ.

Ø ನನ್ನ ರೂಮ್ ಪಕ್ಕ ಒಂದು ಅಂಟುವಾಳದ ಮರವಿದೆ. ಅಲ್ಲಿ ಒಂದು ಬಗೆಯ ಕೀಟಗಳು ಹೇರಳವಾಗಿದೆ.ಕೆಲವೊಮ್ಮೆ ಅವು ಕದ್ದುಮುಚ್ಚಿ ರೂಮಿಗೆ ಬಂದು ಪ್ಯಾಂಟ್ ನ ಜೇಬಿನಲ್ಲೋ , ಅಂಗಿಯ ಜೇಬಿನಲ್ಲೂ ,ಗೋವಾ ಚಡ್ಡಿಯ ಜೇಬಿನ ಮೂಲೆಯಲ್ಲೂ ಮೊಟ್ಟೆ ಇಟ್ಟು ಹೋಗಿಬಿಡುತ್ತವೆ. ಪ್ಯಾಂಟ್ ಅಥವಾ ಗೋವಾ ಚಡ್ಡಿ ಏರಿಸಿಕೊಂಡು ಕಿಸೆಗೆ ಕೈಹಾಕಿದರೆ ಈ ಕೀಟದ ಮೊಟ್ಟೆ ಕೆಲವೊಮ್ಮೆ ಕೈಗೆ ಸಿಗುತ್ತವೆ. ಈಗೊಂದು ತಿಂಗಳ ಕೆಳಗೆ ಟೆರೆಸ್ ಮೆಟ್ಟಿಲ ಬಳಿ ಈ ಕೀಟ ಮೊಟ್ಟೆಯಿಡುತ್ತ ಕುಳಿತಿತ್ತು. ಅಪರೂಪದ ಘಳಿಗೆಯದು.ತುಂಬಾ ಆಸಕ್ತಿಯಿಂದ ಸುಮಾರು ಹೊತ್ತಿನ ತನಕ ಅದನ್ನೇ ನೋಡುತ್ತಾ ಕುಳಿತಿದ್ದೆ. ಮೊನ್ನೆ ಮಲ್ಲಿಕಾರ್ಜುನರ ಪುಸ್ತಕದಲ್ಲಿ ಆ ಕೀಟವನ್ನ ಕಂಡೆ. ನನ್ನ ರೂಮ್ಗೆ ಕದ್ದು ಮುಚ್ಚಿ ಬಂದು ಮೊಟ್ಟೆಯಿಟ್ಟು ಹೋಗುವ ಆ ಕೀಟ ಜೀರುಂಡೆ ಕುಲಕ್ಕೆ ಸೇರಿದ್ದು ಎಂದು ತಿಳಿಯಿತು. ಈಗ ಆ ಕೀಟಗಳನ್ನ ಮೊದಲಿಗಿಂತ ಆಸಕ್ತಿಯಿಂದ ನೋಡುತ್ತಿದ್ದೇನೆ. ಮೊನ್ನೆಯಷ್ಟೇ ಅವುಗಳ ಮಿಲನ ಮಹೋತ್ಸವದ ದೃಶ್ಯವನ್ನ ಕಂಡಿದ್ದೇನೆ. ಸದ್ಯದಲ್ಲಿಯೇ ಮತ್ತೆ ಮೊಟ್ಟೆಯಿಡುವ ದೃಶ್ಯವನ್ನ ಕಾಣುವ ನಿರೀಕ್ಷೆಯಲ್ಲಿ ನಾನಿದ್ದೇನೆ.

Ø ಈ ಜೀರುಂಡೆಗಳನ್ನು ಮಾತ್ರವಲ್ಲ .ಎಲ್ಲವನ್ನೂ ಈಗ ಹೊಸದಾಗಿ ನೋಡುತ್ತಿದ್ದೇನೆ.ನನ್ನ ಸುತ್ತಲಿನ ಯಾವುದೂ ಈಗ ನೀರಸವಾಗಿ ಕಾಣುತ್ತಿಲ್ಲ.

ಖುಷಿಯ ಆಚೆ ಕೊನೆಗೊಂದು ಟೈಮ್ ಪಾಸ್ ತಲೆಹರಟೆ

ಈ ಪುಸ್ತಕದ ಮುನ್ನುಡಿಯಲ್ಲಿ ನೇಮಿಚಂದ್ರ ಅವರು ಒಂದು ಮಾತು ಹೇಳಿದ್ದಾರೆ.ಅದೇ ಮಾತನ್ನೇ ನಾಗೇಶ್ ಹೆಗಡೆಯವರು ಪುಸ್ತಕ ಬಿಡುಗಡೆಯ ದಿನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ‘ ಈ ಪುಸ್ತಕವನ್ನ ಎಲ್ಲ ಅಧ್ಯಾಪಕರು ,ಪೋಷಕರು .ಎಳೆಯ ಮಕ್ಕಳು ಓದಬೇಕೆಂದು ಅವರಿಬ್ಬರೂ ಹೇಳಿದ್ದಾರೆ. ಅದು ನಿಜಕ್ಕೂ ಒಳ್ಳೆಯ ವಿಚಾರ. ಆದರೆ ಇಲ್ಲೊಂದು ಮಜವಾದ ಸಮಸ್ಯೆಯಿದೆ. ಈ ಅಧ್ಯಾಪಕರು ಹಾಗು ಪೋಷಕರು ದೊಡ್ಡವರು.ಈ ದೊಡ್ಡವರು ಈ ಪುಸ್ತಕವನ್ನ ಓದುತ್ತಾ ಚಿಕ್ಕವರಾಗುವ ಭಾಗ್ಯ ಇಲ್ಲುಂಟು. ಹಾಗೆಯೇ ಎಳೆಯ ಮಕ್ಕಳು ತೀರಾ ದೊಡ್ಡವರಾಗಿ ಬಿಡುವ ಕಷ್ಟವೂ ಇಲ್ಲಿ ಉಂಟು. ಕಾರಣ ಇಷ್ಟೇ.ಇಲ್ಲಿ ಕೆಲವು ಪ್ರಣಯ ಪ್ರಸಂಗಗಳ ಫೋಟೋಗಳಿವೆ. ಈ ನಮ್ಮ ಎಳೆಯ ಮಕ್ಕಳು ಅವನ್ನೆಲ್ಲ ನೋಡಿ ,ತಲೆಬುಡ ಅರ್ಥವಾಗದೆ ‘ ಅಪ್ಪ ಅಪ್ಪ ಆ ಕರಿ ಮೊಲದ ಮೇಲೆ ಬಿಳಿ ಮೊಲ ಏನ್ ಮಾಡ್ತಿದೆ ? ಅಮ್ಮ ಅಮ್ಮ ಆ ಚಿಟ್ಟೆಗಳು ಯಾಕೆ ಅಂಟಿಕೊಂಡು ಕೂತಿವೆ ? ಈ ಗುಬ್ಬಚ್ಚಿ ಮೇಲೆ ಆ ಗುಬ್ಬಚ್ಚಿ ಕೂತು ಏನ್ ಮಾಡ್ತಿದೆ ಸಾರ್ ? ಎಂದೆಲ್ಲ ಕೇಳಿಬಿಟ್ಟರೆ ! ಅಂಥ ಪ್ರಸಂಗದಲ್ಲಿ ಈ ದೊಡ್ಡವರ ಪಡಿಪಾಟಲು ನೆನಸಿಕೊಂಡು ನಾನು ನನ್ನಷ್ಟಕ್ಕೆ ನಕ್ಕಿದ್ದೇನೆ :) :) ;).

Saturday, January 22, 2011

ಸಭ್ಯ ಪೋಲಿ ಕವನಗಳು ..

ಸಭ್ಯ ಪೋಲಿ ಕವನ :೨ ..........


ಮದನರಾಗವ ನುಡಿಸಬೇಕಿದೆ

ವೀಣೆಯಾಗು

ಶ್ರುತಿ ನಿನ್ನದೇ ತಾಳ ನನ್ನದು

ಇನ್ನೇನು ಬೇಕು ?

ಅಡ್ಡಕಸುಬಿ ನಾನು ಅವಸರಕ್ಕೆ ಬಿದ್ದವನು

ಪರಿಣಿತಿಯ ಪ್ರಶ್ನೆ ಬೇಕಿಲ್ಲ

ತಾಳ ತಪ್ಪಿದರೆ ಅದು ತಪ್ಪಲ್ಲ.

ನಾ ನುಡಿಸಬೇಕು ನನಗೆ ತಿಳಿದಂತೆ

ನೀ ಮಿಡಿಯಬೇಕು ನಿನಗೆ ಒಲಿದಂತೆ

ಅಷ್ಟೇ ಸಾಕು.


ಮೂಡಣದ ಸೂರ್ಯ ಪಡುವಣಕೆ ಬಂದು

ಘಳಿಗೆ ಮೂರಾಯಿತು

ರಾಗ ಕೈಹಿಡಿಯುತಿದೆ ಈಗಷ್ಟೇ

ಪಡುವಣಕೆ ಬಂದವನು ಬರಲಿ ಬಿಡು

ನಡೆಯಲಿ ತಾಲೀಮು

ಪಡುವಣಕೆ ಬಂದವನು ಮತ್ತೆ ಮೂಡಣಕೆ ಸಲ್ಲುವ ತನಕ

ಕಾಲದ ಪರಿವೆ ಮರೆಯಬೇಕು

ಇಹದ ಅರಿವ ತೊರೆಯಬೇಕು

ತಂತಿ ಮೆದುವಾಗಬೇಕು

ಬೆರಳು ನೀರಾಗಬೇಕು

ಸರಾಗವಾಗಬೇಕು

ಆರೋಹಣ ಅವರೋಹಣ

ಸಿದ್ಧಿಯ ಹಾದಿಯಲಿ ದಣಿವೇ ನೆರಳು

ಬೆವರೇ ಪನ್ನೀರು

ನಿಂತು ನಿಂತು ಮುನ್ನಡೆಯಬೇಕು

ಬೆವರು ಹರಿದಷ್ಟೂ ಬಾಯಾರಿಕೆ ನೀಗಬೇಕು

ರಾಗ ಸಂಪನ್ನವಾಗಬೇಕು

ನಾ ಸೋಲುವಲ್ಲಿ ನೀ ಗೆಲ್ಲಬೇಕು

ನಿನ್ನ ಸೋಲೆನ್ನ ಗೆಲುವಾಗಬೇಕು

ನಿನ್ನಲೊಂದು ತೃಪ್ತಹಾಸ

ನನ್ನಲೊಂದು ಮಂದಹಾಸ

ಮುಂಜಾವು ಅಡಿಯಿಡುವ ಘಳಿಗೆಯಲಿ

ಉದಯರಾಗವಾಗಬೇಕು ...

Thursday, January 13, 2011

ಛೆ..!! ಹೀಗಾಗಬಾರದಿತ್ತು ...:( :(

ಆ ದಿನಗಳು ......

ಸುಮಾರು ಹದಿನೇಳು-ಹದಿನೆಂಟು ವರುಷಗಳ ಹಿಂದಿನ ಮಾತು.ಆಗ ಊರಲ್ಲಿದ್ದುದು ಬೆರಳೆಣಿಕೆಯಷ್ಟು ಟಿ.ವಿ.ಗಳು. ನಮ್ಮ ಮನೆಯಲ್ಲೂ ಒಂದು ಟಿ.ವಿ.ಯಿತ್ತು. ಆಗ ಟಿ.ವಿ.ಯಲ್ಲಿ ಬರುತ್ತಿದ್ದುದು ದೂರದರ್ಶನ ವಾಹಿನಿಯೊಂದೆ.ಅದೊಂದು ದಿನ ಅಪ್ಪ ಹಾಗು ಊರಿನ ಹತ್ತಾರು ಜನ ಬೆಂಗಳೂರಿಗೆ ಹೊರಟು ನಿಂತಿದ್ದರು ಗುರಪ್ಪಜ್ಜನ ಮನೆ ಜೀಪಿನಲ್ಲಿ. ಅವರೆಲ್ಲಾ ಬೆಂಗಳೂರಿಗೆ ‘ಡಿಶ್’ ತರಲಿಕ್ಕೆ ದಂಡಯಾತ್ರೆಗೆ ಹೊರಟವರಂತೆ ಹೊರಟು ನಿಂತಿದ್ದರು. ಅವರು ಬೆಂಗಳೂರಿಗೆ ಹೋಗಿ ಮರಳಿ ಬರುತನಕ ಊರ ತುಂಬ ಆ ‘ಡಿಶ್’ ನದೇ ಸುದ್ದಿ. ‘ತುಂಬಾ ಚಾನೆಲ್ ನೋಡಬಹುದಂತೆ ,ಈ ಎಂಟೆನಾ ಇನ್ನು ಬೇಡವಂತೆ. ಫುಲ್ ಕ್ಲಿಯರ್ ಆಗಿ ಚಿತ್ರಗಳು ಬರುತ್ತಂತೆ ‘ ಹೀಗೆ ಆಗ ಒಂದಷ್ಟು ದಿನ ಎಲ್ಲವೂ ಡಿಶ್ ಮಯ. ಅಪ್ಪ ಹಾಗು ಅವನ ಪಡೆ ಮರಳಿ ಬೆಂಗಳೂರಿನಿಂದ ಬಂದಾಗ ಅವರನ್ನು ಊರ ಮಂದಿ ವೀರೋಚಿತವಾಗಿ ಸ್ವಾಗತಿಸಿದ್ದರು.

ನಂತರ ಬಿಡಿ ಬಿಡಿಯಾಗಿ ತಂದ ಡಿಶ್ ನ ಅವಯವಗಳನ್ನೆಲ್ಲ ‘ಮೇಲಿನ ಮನೆ ಮಹೇಶಣ್ಣನ ‘ ಮನೆಯ ಅಂಗಳದಲ್ಲಿ ಒಂದೊಂದಾಗಿ ಕ್ರಮವಾಗಿ ಜೋಡಿಸಿ ಕೊನೆಗೊಂದು ದೊಡ್ಡ ಕೊಡೆಯನ್ನಾಗಿ ಮಾಡಿ ನಿಲ್ಲಿಸಿದ್ದರು. ಮಕ್ಕಳಾದ ನಮಗೆ ಅದೊಂದು ಭಾರಿ ಅಚ್ಚರಿ. ಆ ಡಿಶ್ಶು ಮಳೆಗಾಲದಲ್ಲಿ ಜೋರು ಗಾಳಿಗೆ ಸಿಕ್ಕಿ ಉಲ್ಟಾ ಹೊಡೆದು ಕುಳಿತ ಕೊಡೆಯಂತೆ ಮಜವಾಗಿ ಕಾಣುತ್ತಿತ್ತು.ಪ್ರತಿದಿನ ಶಾಲೆಗೆ ಹೋಗುವಾಗ,ಶಾಲೆಯಿಂದ ಮರಳಿ ಬರುವಾಗ ದಾರಿಯ ಪಕ್ಕದಲ್ಲಿದ್ದ ಅದನ್ನು ನೋಡುತ್ತಾ ಸ್ವಲ್ಪ ಕಾಲ ನಮ್ಮ ಕಾಲುಗಳು ನಿಂತುಬಿಡುತ್ತಿದ್ದವು. ಈಗಲೂ ಆ ಡಿಶ್ ಎಂಬ ದೊಡ್ಡ ಉಲ್ಟಾ ಹೊಡೆದು ನಿಂತ ಕೊಡೆ ಹಾಗೇ ಇದೆ.ಅದೀಗ ಬಣ್ಣಗೆಟ್ಟಿದೆ. ಈಗ ಮನೆ ಮನೆಗೂ ಪ್ರತ್ಯೇಕವಾಗಿ ಅವರವರದೇ ಆದ ಪುಟ್ಟ ‘ಬಿಗ್ ಟಿ.ವಿ ‘ ಕೊಡೆಗಳು ಬಂದುಬಿಟ್ಟಿವೆ.

ಊರಿಗೆ ಡಿಶ್ ಬಂತು. ಪಡ್ಡೆ ಹುಡುಗರಿಗೆ ,ರಸಿಕತೆಯ ಕಾರಣಕ್ಕೆ ಹುಡುಗರಷ್ಟೇ ಆಸಕ್ತಿ ಉಳಿಸಿಕೊಂಡ ಮಧ್ಯವಯಸ್ಕರರಿಗೆ,ಕೆಲವೇ ಕೆಲವು ಬತ್ತದೆ ಉಳಿದ ವಯಸ್ಸಾದ ಮಂದಿಗೆ ನೋಡಲಿಕ್ಕೆ ಎಂ.ಟಿ.ವಿ. ಸಿಕ್ಕಿತ್ತು. ಹೆಂಗಸರಿಗೆ ಧಾರಾವಾಹಿಗಳು ಸಿಕ್ಕವು.ಆಗಷ್ಟೇ ಬೆಳಕಿಗೆ ಬರುತ್ತಿದ್ದ ಎಳೆಯ ಹುಡುಗ ಸೋನು ನಿಗಮ್ ನಡೆಸಿಕೊಡುತ್ತಿದ್ದ ‘ಸಾರೆಗಾಮ’ ವನ್ನು ಎಲ್ಲರೂ ಇಷ್ಟಪಡುತ್ತಿದ್ದರು.ಅಷ್ಟು ಕಾಲ ದೂರ ದರ್ಶನದಲ್ಲಿ ಚಂದ್ರಕಾಂತ, ಜಂಗಲ್ ಬುಕ್ಕು ನೋಡಿಕೊಂಡಿರುತ್ತಿದ್ದ ಮಕ್ಕಳಾದ ನಮಗೆ ಥ್ರಿಲ್ಲರ್ ಮಂಜು ಸಾಹಸದ ಕನ್ನಡ ಸಿನೆಮಾಗಳು,ಸಿನೆಮಾ ಹಾಡುಗಳು , ಕಾರ್ಟೂನುಗಳು ಹಾಗು ಕ್ರಿಕೆಟ್ ಸಿಕ್ಕಿತ್ತು.

ಆದರೆ ಎಲ್ಲಕ್ಕಿಂತ ಜಾಸ್ತಿ ಕ್ರಿಕೆಟ್ ಎಲ್ಲರಿಗೂ ಮುಖ್ಯವಾಗಿತ್ತು. ಆಗಿನ್ನೂ ಸ್ಟಾರ್ ಸ್ಪೋರ್ಟ್ಸ್ ಹಾಗು ಈ.ಎಸ್.ಪಿ.ಎನ್ ಗಳು ಪೇ ಚಾನೆಲ್ ಗಳಾಗಿರಲಿಲ್ಲ. ಕ್ರಿಕೆಟ್ ಯಥೇಚ್ಚವಾಗಿ ನೋಡಲಿಕ್ಕೆ ಸಿಗುತ್ತಿತ್ತು. ಮ್ಯಾಚುಗಳು ಇದ್ದ ದಿನ ಊರ ತುಂಬ ಅದರದ್ದೇ ಧ್ಯಾನ. ಮನೆಯ ಜಗುಲಿಯಲ್ಲಿ , ದೇವಸ್ಥಾನದ ಕಟ್ಟೆಯ ಮೇಲಿನ ಸಂಜೆ ವೇಳೆಯ ಬೈಠಕ್ಕಿನಲ್ಲಿ ,ಹೀಗೆ ಊರಿನವರು ಒಂದೆಡೆ ಸೇರುವ ಜಾಗದಲ್ಲೆಲ್ಲ ಕ್ರಿಕೆಟ್ ಚರ್ಚೆಯಾಗುತ್ತಿತ್ತು. ವಾದವಿವಾದಗಳು ಆಗುತ್ತಿತ್ತು. ಹಳಬರು ತಮ್ಮ ಕಾಲದ ವಿವಿಯನ್ ರಿಚರ್ಡ್ಸ್ .ಜೋಯೆಲ್ ಗಾರ್ನರ್ರು , ಮಾರ್ಷಲ್ಲು.ಪಟೌಡಿ .ಪ್ರಸನ್ನ .ಬಿ.ಎಸ್.ಚಂದ್ರಶೇಖರ್ .ಗವಾಸ್ಕರ್ .ವಿಶ್ವನಾಥು ಎಂದುಕೊಂಡು ಹಳೆಯ ಕಾಲಕ್ಕೆ ಜಾರುತ್ತಿದ್ದರು. ಟಿ.ವಿ.ಯಿಲ್ಲದ ಕಾಲದಲ್ಲಿ ಅವರ ಆಟಗಳನ್ನೆಲ್ಲ ಎಲ್ಲಿ ನೋಡಿದ್ದರೋ ದೇವರೇ ಬಲ್ಲ.ಆದರೂ ಅವರ ಬಗ್ಗೆ ಹಾಗು ಅವರ ಆಟದ ಬಗ್ಗೆ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಿದ್ದರು. ‘ಹೆಲ್ಮೆಟ್ಟು, ಗಾರ್ಡು ಇಲ್ಲದೆ ಆಡ್ತಾ ಇದ್ದ ಕಾಲ ಅದು.ಸ್ವಲ್ಪ ಎಡವಟ್ಟಾದರೂ ಬುರುಡೆ ,ಸಾಮಾನೂ ಎರಡೂ ಬಾದು. ಅದು ನಿಜವಾದ ಕ್ರಿಕೆಟ್.’ ಎಂದು ಒಂದೇ ಏಟಿಗೆ ಈಗಿನ ಕ್ರಿಕೆಟನ್ನು ಸಾರಸಗಟಾಗಿ ತಿರಸ್ಕರಿಸಿ ಮಕ್ಕಳಾಟದ ರೀತಿಯಲ್ಲಿ ಕಾಣುತ್ತಿದ್ದರು.. ‘ ಶಿರಸಿಯಲ್ಲಿ ನಡೆದ ಒಂದು ರಣಜಿ ಪಂದ್ಯದಲ್ಲಿ ಆಡಲು ವಿಶ್ವನಾಥ್ ಬಂದಿದ್ದು.ವಿಶ್ವನಾಥ್ ಮೂರು ಸಿಕ್ಸರ್ ಬಾರಿಸಿದ್ದು .ಮಿಡ್ ಆನಿನಲ್ಲಿ ಬಾರಿಸಿದ ಒಂದು ಸಿಕ್ಸರ್ ಪ್ರೇಕ್ಷಕರ ಗ್ಯಾಲರಿ ಯಲ್ಲಿ ಕುಳಿತಿದ್ದ ತಮ್ಮ ಕಾಲ ಬುಡಕ್ಕೆ ಬಂದು ಬಿದ್ದದ್ದು, ಕಾಲಬುಡಕ್ಕೆ ಬಂದು ಬಿದ್ದ ಬಾಲನ್ನು ಹೆಕ್ಕಿಕೊಟ್ಟದ್ದು ’ ಇವನ್ನೆಲ್ಲ ತುಂಬಾ ಖುಷಿಯಿಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಬುರುಡೆ ಹೋದರೆ ಹೋಗಲಿ.ಆದರೆ ಈ ‘ ಸಾಮಾನು ಬಾದು ‘ ಎಂಬ ಹಳಬರ ಒಂದೇ ಒಂದು ಮಾತಿನಿಂದ ಹಳಬರ ಕ್ರಿಕೆಟ್ಟೇ ಶ್ರೇಷ್ಠವೆಂದು ಉಳಿದ ಕಿರಿಯರು ದೂಸರಾ ಉಸಿರಿಲ್ಲದೆ ಒಪ್ಪಿಕೊಳ್ಳುತ್ತಿದ್ದರು .

ಕ್ರಿಕೆಟ್ ಕಾರಣಕ್ಕೆ ಊರಲ್ಲಿ ಹತ್ತಾರು ಗುಂಪುಗಳಿದ್ದವು.ಆಸ್ಟ್ರೇಲಿಯಾವನ್ನು ಬೆಂಬಲಿಸುವ ಗುಂಪು, ಭಾರತವನ್ನ ಬೆಂಬಲಿಸುವ ಗುಂಪು.ಪಾಕಿಸ್ತಾನವನ್ನು ಬೆಂಬಲಿಸುವ ಗುಂಪು.ಆಫ್ರಿಕಾವನ್ನು ಹಾಗು ಶ್ರೀಲಂಕಾವನ್ನು ಬೆಂಬಲಿಸುವ ಗುಂಪು.ಸಚಿನ್ ಶ್ರೇಷ್ಠ ಎಂಬ ಗುಂಪು. ಸಚಿನ್ಗಿಂತ ಬ್ರಿಯಾನ್ ಲಾರಾ ಶ್ರೇಷ್ಠ ಎಂಬ ಗುಂಪು. ಆದರೆ ಭಾರತ ಪಾಕಿಸ್ತಾನ ಮ್ಯಾಚ್ ನಡೆಯುವಾಗ ಎಲ್ಲರೂ ತಮ್ಮೆಲ್ಲ ನಿಲುವುಗಳನ್ನ ಮರೆತು ಒಟ್ಟಾಗಿ ಭಾರತವನ್ನ ಬೆಂಬಲಿಸುತ್ತಿದ್ದರು. ಆಗಿನ ವಿಶ್ವದ ಕ್ರಿಕೆಟ್ಟು ಹಾಗಿತ್ತು.ಆರಾಧಿಸಲು ಲೆಜೆಂಡ್ ಎನ್ನಬಹುದಾದ ಆಟಗಾರರ ದೊಡ್ಡ ಪಡೆಯೇ ಆಗಿತ್ತು. ಬಹುತೇಕ ಎಲ್ಲ ಟೀಮುಗಳು ಸರಿಸಮಾನವಾಗಿದ್ದವು.

ಆಗಿನ ಕ್ರಿಕೆಟ್ ವಾತಾವರಣವಾದರೂ ಹೇಗಿತ್ತು ನೋಡಿ. ಆಸ್ಟ್ರೇಲಿಯಾದಲ್ಲಿ ವಾ ಸಹೋದರರು , ಡೆವಿಡ್ ಬೂನ್ , ಶೇನ್ ವಾರ್ನ್ ,ಬೆವನ್ , ಮೆಗ್ರಾಥ್ ,ಗಿಲ್ಲಿ , ಮೈಕೆಲ್ ಸ್ಲೆಟ್ಟರ್ ಇದ್ದರು.ಭಾರತದಲ್ಲಿ ಅಜರ್ ,ಜಡೇಜಾ , ತೆಂಡೂಲ್ಕರ್,ಗಂಗೂಲಿ .ದ್ರಾವಿಡ್ ,ಕುಂಬ್ಳೆ,ಶ್ರೀನಾಥ್ ಥರದವರು, ಪಾಕಿಸ್ತಾನದಲ್ಲಿ ಸಯೀದ್ ಅನ್ವರ್ ,ಇಂಜಮಾಮ್, ವಕಾರ್ ,ಅಕ್ರಂ , ಸಕ್ಲೈನ್ ಮುಷ್ತಾಕ್ , ಅಮೀರ್ ಸೋಹೈಲ್ , ಇಜಾಜ್ ಅಹ್ಮೆದ್. ಆಫ್ರಿಕಾದಲ್ಲಿ ಗ್ಯಾರಿ ಕ್ರಸ್ಟನ್ ,ಕಾಲಿಸ್,ಪೊಲ್ಲಾಕ್ , ಹಡ್ಸನ್ , ಜಾಂಟಿ ರೋಡ್ಸ್, ಕ್ರೋನಿಯೆ, ಲ್ಯಾನ್ಸ್ ಕ್ಲುಸ್ನರ್ ,ಅಲನ್ ಡೊನಾಲ್ಡ್ , ಕಲ್ಲಿನನ್. ವೆಸ್ಟಿಂಡೀಸ್ ನಲ್ಲಿ ಲಾರಾ, ಹೂಪರ್.ಚಂದ್ರಪಾಲ್ ,ವಾಲ್ಶ್ ,ಎಂಬ್ರೂಸ್ , ಸೀಮೆನ್ಸ್ . ಶ್ರೀಲಂಕಾದಲ್ಲಿ ಸನತ್ ಜಯಸೂರ್ಯ.ಅರವಿಂದ ಡಿಸಿಲ್ವಾ , ರಣತುಂಗ , ಮುರಳೀಧರನ್ .ಕಲುವಿತರಣ ,ಅಟ್ಟಪಟ್ಟು . ಜಿಂಬಾಬ್ವೆಯ ಫ್ಲವರ್ ಸಹೋದರರು ,ಅಲಿಸ್ಟರ್ ಕ್ಯಾಂಬೆಲ್.ನ್ಯೂಜೀಲ್ಯಾಂಡ್ ನ ಹ್ಯಾರ್ರಿಸ್, ವೆಟ್ಟೋರಿ,ನಾಥನ್ ಆಸ್ಲೆ , ಕ್ರಿಸ್ ಕೈನ್ಸ್ .ಇಂಗ್ಲೆಂಡ್ ನ ಗೂಚ್, ಕುಕ್,ವಾನ್. ಎಲ್ಲರೂ ಘಟಾನುಘಟಿಗಳು. ಆರಾಧಿಸಲು ಆಗ ಅಸಂಖ್ಯ ಆಯ್ಕೆಗಳಿದ್ದವು.

ಈಗ ಏನಾಗಿದೆ ನೋಡಿ. ಸಚಿನ್.ಕಾಲಿಸ್ .ಸೆಹ್ವಾಗ್ ,ಪಾಂಟಿಂಗ್ ಬಿಟ್ಟರೆ ಇಡೀ ಕ್ರಿಕೆಟ್ಟಿನಲ್ಲಿ ಲೆಜೆಂಡ್ ಎನ್ನಬಹುದಾದ ಆಟಗಾರರು ಯಾರೂ ಕಾಣುತ್ತಿಲ್ಲ. ಅತ್ತ ಇನ್ನೊಬ್ಬ ಲೆಜೆಂಡ್ ದ್ರಾವಿಡ್ ಇದ್ದೂ ಇಲ್ಲದಂತಾಗಿ ಹೋದ. ಯಾವ ಟೀಂನಲ್ಲಿಯೂ ಹಳೆಯ ಹೊಳಪು ಉಳಿದಿಲ್ಲ. ಕ್ರಿಕೆಟ್ ಪಾಲಿಗೆ ಇದು ಕೇವಲ ಆಡಂಬರದ ದಿನಗಳು. ವೈಭವದ ದಿನಗಳು ಖಂಡಿತ ಅಲ್ಲ. ಕ್ರಿಕೆಟ್ ಈಗ ಕೇವಲ ಕೆರಳಿಸುತ್ತೆ. ಅರಳಿಸುವ ಮಾಯೆ ಎಂದೋ ಕಳೆದುಹೋಗಿದೆ.

ಕಸವಾದ ಲಾರ ಎಂಬ ಅನರ್ಘ್ಯ ರತ್ನ ಹಾಗು ಗಂಗೂಲಿಯೆಂಬ ಕಿರೀಟ ಕಳೆದುಹೋದ ರಾಜಕುಮಾರ .....

ಬ್ರಿಯಾನ್ ಲಾರಾ ಐ.ಪಿ.ಎಲ್ ಗೆ ಬರುತ್ತಾನಂತೆ ಎಂಬ ಸುದ್ದಿ ಕೇಳಿ ತುಂಬಾ ಖುಷಿಪಟ್ಟಿದ್ದೆ. ಅವನ ಫೂಟ್ ವರ್ಕ್ ನೋಡುವುದೇ ಚೆಂದ. ಸಚಿನ್ ಬಿಟ್ಟರೆ ಇನ್ಯಾರಿಗಾದರೂ ದೇವರ ಪಟ್ಟ ಕೊಡಬಹುದಾದರೆ ಅದು ಖಂಡಿತವಾಗಿ ಲಾರಾನಿಗೆ ಮೀಸಲು. ಆದರೆ ಏನಾಯಿತು ನೋಡಿ. ಹರಾಜಿನಲ್ಲಿ ಲಾರಾ ಎಂಬ ಅನರ್ಘ್ಯ ರತ್ನ ಯಾರಿಗೂ ಬೇಡವಾದ ಸರಕಾಗಿಹೋದ .ಅತ್ತ ಗಂಗೂಲಿ ಕಿರೀಟ ಕಳೆದುಕೊಂಡು ಕುಳಿತ ರಾಜಕುಮಾರ.ಗಂಗೂಲಿಯನ್ನು ಪುಕ್ಕಟೆ ಕೊಟ್ಟರೂ ಕೇಳುವವರಿಲ್ಲ . ಒಮ್ಮೆ ಅವರು ಮೆರೆದ ವೈಭವದ ದಿನಗಳು ನೆನಪಾದವು.ತುಂಬಾ ಕಷ್ಟವಾಯಿತು ಮನಸ್ಸಿಗೆ. ಈ ವ್ಯಾಪಾರಿ ಜಗತ್ತು ಇಂಥವರಿಗೆ ಎಂಥಾ ಹೀನಾಯ ವಿದಾಯ ಹೇಳಿಬಿಟ್ಟಿತು. ನನ್ನಂಥ ಮಾಮೂಲಿ ಅಭಿಮಾನಿಗೆ ಇಷ್ಟು ಬೇಸರವಾಗಿದೆ. ಇನ್ನು ಒಂದೇ ಇನ್ನಿಂಗ್ಸ್ ನಲ್ಲಿ ನಾನೂರು ರನ್ ಹೊಡೆದು ನಾಟ್ ಔಟ್ ಆಗಿ ಉಳಿದು ಬೀಗಿ ನಿಂತ ಲಾರನಿಗೆ, ಹಠಕ್ಕೆ ,ಹೋರಾಟಕ್ಕೆ ,ಆತ್ಮಗೌರವಕ್ಕೆ ಇನ್ನೊಂದು ಹೆಸರಾದ ಗಂಗೂಲಿ ಗೆ ಎಷ್ಟು ಕಷ್ಟವಾಗಿರಬೇಕು ಅರಗಿಸಿಕೊಳ್ಳಲು. ಒಂದೇ ಒಂದು ಸಮಾಧಾನವೆಂದರೆ ದ್ರಾವಿಡ್ ಈ ಬಾರಿ ಮುಖಭಂಗದಿಂದ ಪಾರಾಗಿದ್ದು.

ಈ ಬಾರಿ ಬೆಂಗಳೂರು ಟೀಂ ನ ಹೆಸರಿನಲ್ಲಿ ಮಾತ್ರ ಬೆಂಗಳೂರಿದೆ. ದ್ರಾವಿಡ್, ವಿನಯ್ ಕುಮಾರ್ ,ಉತ್ತಪ್ಪ ಬೇರೆಯವರ ಪಾಲಾದರು.ಕುಂಬ್ಳೆ ವಿದಾಯ ಹೇಳಿಬಿಟ್ಟರು. ಇನ್ನು ಯಾವ ಖುಷಿಗೆ ಬೆಂಗಳೂರು ಟೀಂಮನ್ನು ಬೆಂಬಲಿಸುವುದು ಎನ್ನುವುದೇ ತಿಳಿಯುತ್ತಿಲ್ಲ. ಅತ್ತ ಯಾರನ್ನು ವಿರೋಧಿಸುವುದೂ ಎನ್ನುವುದೂ ತಿಳಿಯುತ್ತಿಲ್ಲ. ಒಂದು ಪರ ಅಥವಾ ವಿರೋಧದ ಮನೋಭಾವ ಇಟ್ಟುಕೊಳ್ಳದೆ ನಿರ್ಭಾವುಕವಾಗಿ ಕ್ರಿಕೆಟ್ ನೋಡುವುದಾದರೂ ಹೇಗೆ ? ಹಾಗೆ ನೋಡುವುದರಲ್ಲಿ ಸ್ವಾರಸ್ಯವಾದರೂ ಎಲ್ಲಿದೆ ?

ನಾನಂತೂ ಈ ಬಾರಿ ಐ.ಪಿ.ಎಲ್ ಕಡೆ ಆಸಕ್ತಿಯನ್ನೇ ಕಳೆದುಕೊಂಡಿದ್ದೇನೆ .ಮುಂದಿರುವ ಈ ಬಾರಿಯ ವಿಶ್ವಕಪ್ಪನ್ನು ಎದುರು ನೋಡುತ್ತಿದ್ದೇನೆ. ಈ ವಿಶ್ವಕಪ್ ನಂತರ ಸಚಿನ್ ನಿವೃತ್ತಿ ತೆಗೆದುಕೊಳ್ಳುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರೇಕ್ಷಕರಾದ ನಾವು ಕ್ರಿಕೆಟ್ ವೀಕ್ಷಣೆಯಿಂದ ನಿವೃತ್ತಿ ತೆಗೆದುಕೊಳ್ಳುವ ಯೋಚನೆಯನ್ನು ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು. ಏಕೆಂದರೆ ಇನ್ನು ಮುಂದೆ ಸಚಿನ್ ಹರಾಜಿನಲ್ಲಿ ಮಾರಾಟವಾಗಿ ಬೇರೊಂದು ದೇಶದ ಪಾಲಾದರೂ ಅಚ್ಚರಿಯಿಲ್ಲ. ನಮ್ಮದೇ ಆಟಗಾರರು ನಮ್ಮನ್ನಾಳಿದ ಇಂಗ್ಲೆಂಡ್ ಪರವಾಗಿ. ನಮ್ಮ ಪಕ್ಕದ ಮಗ್ಗುಲ ಮುಳ್ಳು ಪಾಕಿಸ್ತಾನದ ಪರವಾಗಿ ಆಡಿದರೂ ಆಡಬಹುದು.ಇದು ವ್ಯವಸ್ಥೆಯ ಬಗ್ಗೆ ಕೊಂಚ ವ್ಯಂಗ್ಯವಿಟ್ಟುಕೊಂಡು ಅತಿರೇಕದಲ್ಲಿ ಹೇಳಿದ ಮಾತು.ಆದರೆ ಭವಿಷ್ಯದಲ್ಲಿ ಇದು ನಿಜವಾಗಿಬಿಡಲೂಬಹುದು. ಈ ಜಾಗತೀಕರಣದ ,ವ್ಯಾಪಾರೀಕರಣದ ಯುಗದಲ್ಲಿ ಎಲ್ಲವೂ ಸಾಧ್ಯ. ಏನು ಬೇಕಾದರೂ ಆಗಬಹುದು .ಎಲ್ಲವನ್ನೂ ನಿರ್ಲಿಪ್ತವಾಗಿ ನಿರ್ಭಾವುಕವಾಗಿ ನಾಡು, ನುಡಿ,ಸಂಸ್ಕೃತಿ ಎನ್ನುವ ಹಂಗಿರದೆ ,ಮನುಷ್ಯರನ್ನೂ ವಸ್ತುಗಳನ್ನೂ ಸಮನಾಗಿ ನೋಡುವ ಮಲ್ಯರಂಥವರು,ಬಿಸಿಸಿಐ ಬಳಗದವರು, ಉದ್ಯಮಿಗಳು ನಿಜಕ್ಕೂ ವಿಶ್ವಮಾನವರು. ಭಾವನೆ ಇಟ್ಟುಕೊಂಡು ಬದುಕುತ್ತಿರುವ ನಾವು ಕ್ಷುದ್ರ ಹುಲುಮಾನವರು.ಅಯೋಗ್ಯರು. Unfit to Survive …

Sunday, January 9, 2011

ಜೋಗಿ ಸಾರು.ಅವರಿಗೊಂದು ಥ್ಯಾಂಕ್ಸು .....

ಅದು ಬಿ.ಕಾಂ ಓದುತ್ತಿದ್ದ ದಿನಗಳು. ಬೆಂಗಳೂರಿನ ಸ್ವರ್ಣವಲ್ಲಿ ಮಠದ ಹಾಸ್ಟೆಲ್ನಲ್ಲಿ ಆಗ ಇದ್ದೆ. ನಾಗರಾಜ ಭಟ್ ಎನ್ನುವವರು ಆಗ ಹಾಸ್ಟೆಲ್ನಲ್ಲಿ ಅಡುಗೆ ಕೆಲಸಕ್ಕಿದ್ದರು.ಅವರಿಗೆ ಈ ಸಾಹಿತ್ಯ .ಸಂಗೀತ.ಸಿನೆಮ ಎನ್ನುವ ವಿಷಯಗಳ ಕಡೆ ಆಸಕ್ತಿಯಿತ್ತು. ಅಡುಗೆಮನೆಯಲ್ಲಿ ಆಗಾಗ ಈ ವಿಷಯಗಳ ಕುರಿತು ನಮ್ಮ ನಡುವೆ ಚರ್ಚೆ ನಡೆಯುತ್ತಿತ್ತು. ಹಾಗೆ ಅಂಥ ಒಂದು ಚರ್ಚೆಯ ನಡುವೆ ಸಿಕ್ಕವರು ಜೋಗಿ. ಒಮ್ಮೆ ಜಾನಕಿ ಕಾಲಂ ಕುರಿತು ಚರ್ಚೆ ಆಗುತ್ತಿತ್ತು. ‘ ಜಾನಕಿ ಕಾಲಂ ಬರೆಯೋದು ಹೆಂಗಸಲ್ಲ. ಅದನ್ನ ಬರೆಯೋರು ಜೋಗಿ ಅಂತ. ಕನ್ನಡಪ್ರಭಾದಲ್ಲಿ ಅವರು ಕೆಲಸ ಮಾಡೋದು.’ ಎಂಬ ಸತ್ಯವನ್ನ ಆಗ ನಾಗರಾಜ ಭಟ್ಟರು ಹೇಳಿದ್ದರು. ಮೊದಲ ಬಾರಿಗೆ ಆಗ ನಾನು ಜೋಗಿಯವರ ಹೆಸರು ಕೇಳಿದ್ದೆ.

ಅದು ಹಾಯ್ ಬೆಂಗಳೂರನ್ನು ತಪ್ಪದೆ ಪ್ರತಿವಾರ ಕಾದು ಕೂತು ತಂದುಕೊಂಡು ಓದುತ್ತಿದ್ದ ದಿನಗಳು. ರವಿ ಬೆಳಗೆರೆ ಖುಷಿ ಕೊಡುತ್ತಿದ್ದರು.ಚಂದ್ರಶೇಖರ ಆಲೂರರು ನಿಧಾನ ವಿಷದಂತೆ ಆವರಿಸುತ್ತಿದ್ದರು. ನಾಗತಿಹಳ್ಳಿ ಕಾಲಂ ಇಷ್ಟವಾಗುತ್ತಿತ್ತು. ಆದರೆ ಈ ‘ಜಾನಕಿ’ ಕಾಲಂ ನನ್ನ ಪಾಲಿಗೆ ಬಗೆಹರಿಯಲಾರದ ಪ್ರಶ್ನೆಗಳಿಗೆ ,ಗೊಂದಲಕ್ಕೆ ಕುತೂಹಲಕ್ಕೆ ಕಾರಣವಾಗುತ್ತಿತ್ತು. ‘ಏನಪ್ಪಾ ಇದು.ಹೀಗೆಲ್ಲಾ ಬರೆಯೋಕೆ ಸಾಧ್ಯನಾ ‘ ಎಂದುಕೊಳ್ಳುತ್ತಿದ್ದೆ. ಜಾನಕಿ ಕಾಲಂ ಎಷ್ಟೋ ಬಾರಿ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಾಲಿಗೂ ನಂತರದ ಇನ್ನೊಂದು ಸಾಲಿಗೂ ಕೆಲವೊಮ್ಮೆ ಸಂಬಂಧವೇ ಇರದಂತೆ ಕಾಣುತ್ತಿತ್ತು. ಜಾನಕಿ ಕಾಲಂ ಎಲ್ಲೋ ಯಾವುದೋ ವಿಷಯ ಇಟ್ಟುಕೊಂಡು ಶುರುವಾಗಿ ಕೊನೆಗೆ ಇನ್ನೆಲ್ಲೋ ತಲುಪಿ ಕೊಂಡು ಬಿಡುತ್ತಿತ್ತು. ಜಾನಕಿ ಕಾಲಂ ಅನ್ನು ಅಲ್ಲಲ್ಲಿ ತುಂಡರಿಸಿ ಕವನದ ರೂಪ ಕೊಟ್ಟರೆ ಒಂದು ಒಳ್ಳೆಯ ನವ್ಯಕಾವ್ಯ ರೆಡಿ ಎಂಬ ತಲೆಹರಟೆ ಯೋಚನೆ ಸುಳಿದು ಹೋಗುತ್ತಿತ್ತು.ತಲೆಯೆಂಬುದು ಹನ್ನೆರಡಾಣೆಯಾಗಿ ಹೋಗುತ್ತಿತ್ತು. ಆದರೂ ಜಾನಕಿಯನ್ನು ಓದದೆ ಇರಲಾಗುತ್ತಿರಲಿಲ್ಲ. ಜಾನಕಿಯನ್ನು ಓದುವುದು ಹಾಗು ಓದಿದ್ದೇನೆ ಎಂದು ಹೇಳಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿತ್ತು.ತುಂಬಾ ಗಂಭೀರವಾಗಿ ಓದುತ್ತಿದ್ದೆ .ಓದಿದ್ದನ್ನೇ ಹತ್ತು ಬಾರಿ ಓದುತ್ತಿದ್ದೆ.ಏನಾದರೂ ಮಾಡಿ ದಕ್ಕಿಸಿಕೊಂಡು ಬಿಡಬೇಕೆಂಬ ಹಠ. ಈ ತನಕವೂ ಆ ಪ್ರಯತ್ನ ಚಾಲ್ತಿಯಲ್ಲಿದೆ. ಜಾನಕಿ ಈಗೀಗ ಅರ್ಥವಾದಂತೆ ಕಾಣುತ್ತಾಳೆ.ಅರ್ಥವಾದಷ್ಟೇ ಅರ್ಥ ಎಂದುಕೊಂಡು ನಾನು ಒಂದು ಸಮಾಧಾನಕ್ಕೆ ಬಂದಿದ್ದೇನೆ.

ಹೀಗೆ ಜಾನಕಿ ಎಂಬ ನಿಗೂಢ .ಅನೂಹ್ಯ ಜಾಡಿನಲ್ಲಿ ಹುಟ್ಟಿಕೊಂಡ ಅಚ್ಚರಿ-ಬೆರಗುಗಳು ಜೋಗಿ ಎಂಬಲ್ಲಿ ಗೌರವಕ್ಕೆ .ಆರಾಧನೆಗೆ ಕಾರಣವಾದವು. ತೇಜಸ್ವಿ ಏನು ಬರೆದರೂ ಓದಿಸಿಕೊಂಡು ಹೋಗುತ್ತೆ ,ಅವರ ಒಂದಕ್ಷರವೂ ವ್ಯರ್ಥವಲ್ಲ ಎನ್ನುವುದು ನನ್ನ ಭಾವನೆ.ತೇಜಸ್ವಿ ಈಗಿಲ್ಲ. ನನ್ನ ಪಾಲಿನ ಆ ಖಾಲಿ ಜಾಗದಲ್ಲಿ ಈಗ ಜೋಗಿ ಪ್ರತಿಷ್ಠಾಪನೆಗೊಂಡಿದ್ದಾರೆ.

ಜೋಗಿಯವರನ್ನ ಇಷ್ಟಪಡಲಿಕ್ಕೆ ಕಾರಣಗಳು ಹಲವು. ಜೋಗಿಯವರ ಪ್ರತಿ ಬರಹದಲ್ಲಿ ತಿಳಿದುಕೊಳ್ಳಲಿಕ್ಕೆ ಏನಾದರೂ ಹೊಸತು ಇದ್ದೇ ಇರುತ್ತೆ. ಪ್ರತಿ ಬರಹ ಹೊಸತೊಂದು ಚಿಂತನೆಗೆ ದಾರಿಯಾಗುತ್ತೆ.ಹಾಗೆಂದ ಮಾತ್ರಕ್ಕೆ ಜೋಗಿಯವರು ಬರೆದದ್ದೆಲ್ಲ ವೇದವಾಕ್ಯ ಎಂದು ಹೇಳುತ್ತಿಲ್ಲ. ಆದರೆ ಜೋಗಿಯವರನ್ನು ಓದುವಾಗ ಅವರು ಹೇಳಿದ್ದೇ ವೇದವಾಕ್ಯ ಎಂಬಂತೆ ಕಂಡರೆ ಅದು ತಪ್ಪಲ್ಲ. ಅತಿರೇಕದ ಆರಾಧನೆಯೂ ಅಲ್ಲ. ಅದು ಜೋಗಿ ಬರಹದ ತಾಕತ್ತು.ಶರಣಾಗದೆ ಬೇರೆ ದಾರಿಯೇ ಇಲ್ಲ. ಇನ್ನು ಜೋಗಿ ತಮ್ಮ ವೈಯಕ್ತಿಕ ಕಷ್ಟ ಸುಖಗಳನ್ನ ಓದುಗರೆದುರು ತಂದು ಗುಡ್ಡೆಹಾಕುವುದಿಲ್ಲ. ಅವರ ಬರಹದಲ್ಲಿ ಆತ್ಮರತಿಯನ್ನು ನನಗೆ ಕೊಂಚ ಬುದ್ಧಿ ಬೆಳೆದು ಅವರನ್ನು ಓದಲಿಕ್ಕೆ ಶುರುಮಾಡಿದಾಗಿನಿಂದ ಈತನಕ ಒಮ್ಮೆಯೂ ಕಂಡಿಲ್ಲ. ಜೋಗಿ ಉಪದೇಶ ಮಾಡುವುದಿಲ್ಲ.ತಮ್ಮ ಅಭಿಪ್ರಾಯವನ್ನ ಮುಂದಿಡುತ್ತಾರೆ.ಅಭಿಪ್ರಾಯಗಳನ್ನ ಓದುಗನ ಮೇಲೆ ಹೇರುವುದಿಲ್ಲ.ಅವರು ಹೇಳಿದ್ದು ಅರ್ಥವಾದರೆ ಅದು ನಮ್ಮ ಪುಣ್ಯ. ಇಲ್ಲದಿದ್ದರೆ ಅದು ನಮ್ಮ ಕರ್ಮ. ನನ್ನಂಥ ಯಕಶ್ಚಿತ್ ನಾನೇ ಕೆಲವೊಮ್ಮೆ ನನ್ನ ಬ್ಲಾಗಿನಲ್ಲಿ ಉಪದೇಶಕ್ಕೆ ನಿಂತು ಬಿಡುತ್ತೇನೆ.ಬಿಟ್ಟಿ ಸಲಹೆಯನ್ನೂ ಧಾರಾಳವಾಗಿ ಕೊಡುತ್ತೇನೆ. ಜೋಗಿಯಂಥವರಿಗೆ ಉಪದೇಶ ಕೊಡಲಿಕ್ಕೆ ಎಲ್ಲ ಯೋಗ್ಯತೆಯೂ ಇದೆ.ಆದರೂ ಉಪದೇಶಕ್ಕೆ ಮುಂದಾಗುವುದಿಲ್ಲ.ಅವರು ತುಂಬಿದ ಕೊಡ. ತುಂಬದ ಕೊಡ ಲೆಕ್ಕ ತಪ್ಪಿ ತುಳುಕುತ್ತೆ. :) ;) .

ಎಲ್ಲಕ್ಕಿಂತ ಮುಖ್ಯವಾಗಿ ಜೋಗಿಯವರ ಬರಹದಲ್ಲಿ ನಂಜಿರುವುದಿಲ್ಲ. ಯಾರನ್ನೂ ವೈಯಕ್ತಿಕವಾಗಿ ಹಣಿಯಲೇ ಬೇಕೆಂಬ ಹಠದಲ್ಲಿ ಟೀಕಿಸುವುದಿಲ್ಲ, ವಿಮರ್ಶೆಗೆ ಈಡುಮಾಡುವುದಿಲ್ಲ. ‘ ಕುಂ.ವೀ.ಯವರು ವೈಯನ್ಕೆ ಬಗ್ಗೆ ಅವರ ಆತ್ಮಚರಿತ್ರೆಯಲ್ಲಿ ಹಗುರವಾಗಿ ಬರೆದಾಗ .’ ಕುಂ.ವೀ .ಯವರ ಮಾತುಗಳಿಗೆ ಉತ್ತರಿಸಬೇಕಾದವರು ವೈಯನ್ಕೆ.ಆದರೆ ವೈಯನ್ಕೆ ಈಗಿಲ್ಲ. ಆತ್ಮಚರಿತ್ರೆಯನ್ನ ರೋಚಕಗೊಳಿಸುವ ನಿಟ್ಟಿನಲ್ಲಿ ಹೊರಟಾಗ ಈ ರೀತಿಯ ಬರಹಗಳು ಹುಟ್ಟಿಕೊಳ್ಳುತ್ತವೆ ‘ ಎಂಬರ್ಥದಲ್ಲಿ ಜೋಗಿ ಕೇವಲ ಕೆಲವೇ ಸಾಲುಗಳಲ್ಲಿ ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದರು. ಅದೇ ಸಮಯಕ್ಕೆ ನೃಪತುಂಗ ಪ್ರಶಸ್ತಿಯನ್ನು ದೇವನೂರು ಮಹಾದೇವರು ಸ್ವೀಕರಿಸದೆ ಕನ್ನಡದ ಪರವಾದ ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದರು. ಯಾವೊಬ್ಬ ಕನ್ನಡದ ಬರಹಗಾರನೂ ಅವರಿಗೆ ಬೆಂಬಲವಾಗಿ ನಿಲ್ಲಲಿಲ್ಲ. ಅವರ ಪರವಾಗಿ ಸ್ವರ ಎತ್ತುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಜೋಗಿಯವರು ಆಗ ಮುಟ್ಟಿ ನೋಡಿಕೊಳ್ಳುವಂತೆ ಉಳಿದ ಎಲ್ಲ ಬರಹಗಾರರ ನಿರ್ವೀರ್ಯತೆಯನ್ನ ತಮ್ಮ ಎಂದಿನ ತಣ್ಣನೆ ಶೈಲಿಯಲ್ಲಿ ಸರಿಯಾಗಿ ಆಯದ ಜಾಗಕ್ಕೆ ಬಿಸಿ ತಾಕುವಂತೆ ಬರೆದಿದ್ದರು. ಕೊನೆಗೆ ‘ಮಾತು ಸೋತ ಭಾರತದ ‘ ಉಪಮೆಯೊಂದಿಗೆ ಅಷ್ಟೇ ತಣ್ಣಗೆ ಮಾತು ಮುಗಿಸಿದ್ದರು.

ಜೋಗಿಯವರು ಆಗಾಗ ಅನಂತಮೂರ್ತಿಯವರನ್ನ ನೆನೆಯುತ್ತಾರೆ. ಮೆಚ್ಚಿ ಬರೆಯುತ್ತಾರೆ.ಆದರೆ ಅನಂತ ಮೂರ್ತಿಯವರನ್ನ ಮೆಚ್ಚುವ ಕಾರಣಕ್ಕೆ ಭೈರಪ್ಪನವರನ್ನ ಟೀಕಿಸುವುದಿಲ್ಲ. ಕೊನೆಗೆ ಭೈರಪ್ಪನವರ ಬಗ್ಗೆ ಬರೆಯಬೇಕಾದ ಸಂದರ್ಭ ಒದಗಿಬಂದಾಗ ‘ ಪ್ರತಿಬಾರಿ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದಾಗ ಕನ್ನಡಿಗರಾದ ನಮಗೆ, ಭೈರಪ್ಪನವರಿಗೆ ಈ ಬಾರಿಯಾದರೂ ಜ್ಞಾನಪೀಠ ಸಿಗಲಿ ಎಂಬ ನಿರೀಕ್ಷೆ ‘ ಎಂಬ ಒಳ್ಳೆಯ ಮಾತುಗಳನ್ನೇ ಹೇಳುತ್ತಾರೆ. ಈಗಂತೂ ಅನಂತಮೂರ್ತಿಯವರನ್ನ ಮೆಚ್ಚುವವರು ಅವರೆಡೆಗಿನ ತಮ್ಮ ನಿಷ್ಠೆಯನ್ನ ಸಾಬೀತು ಪಡಿಸಿಕೊಳ್ಳಲು ಭೈರಪ್ಪನವರನ್ನ ಟೀಕಿಸುವುದು ,ಅತ್ತ ಭೈರಪ್ಪನವರ ನಿಷ್ಠ ಅನುಯಾಯಿಗಳು ಅನಂತಮೂರ್ತಿಯವರನ್ನ ಹಳಿಯುವುದು, ಒಂದು ಗುಂಪಿನೊಂದಿಗೆ ಪ್ರಖರವಾಗಿ ಗುರುತಿಸಿಕೊಳ್ಳುವುದು ಮಾಮೂಲಿಯಾಗಿಬಿಟ್ಟಿದೆ. ಅನಂತ ಮೂರ್ತಿ ಹಾಗು ಭೈರಪ್ಪನವರ ಪ್ರಸಂಗ ಒಂದು ಉದಾಹರಣೆಯಷ್ಟೇ. ಜೋಗಿ ತಮಗೆ ಇಷ್ಟವಾದದ್ದನ್ನು ಮೆರೆಸುತ್ತಾರೆ. ಇಷ್ಟವಲ್ಲದ್ದನ್ನು ಒಂದು ದಿವ್ಯ ಉದಾಸೀನದಲ್ಲಿ ಸರಿಸಿ ಬದಿಗಿಟ್ಟು ಬಿಡುತ್ತಾರೆ.ಇಷ್ಟವಲ್ಲ ಎಂಬ ಕಾರಣಕ್ಕೆ ಕಟು ಟೀಕೆಗೆ ಮುಂದಾಗುವುದಿಲ್ಲ. ಒಳ್ಳೆಯದು ಎಲ್ಲೇ ಸಿಕ್ಕರೂ ನಾಲ್ಕು ಮಾತು ಪ್ರೀತಿಯಿಂದ ಹಿರಿಯ ಕಿರಿಯ ಎಂಬ ಭೇಧವಿಲ್ಲದೆ ಬರೆದು ಬೆಂಬಲಿಸುತ್ತಾರೆ. ಹೀಗೆ ಇಂಥ ಕಷ್ಟಕಾಲದಲ್ಲಿ, ದುಷ್ಟಕಾಲದಲ್ಲಿ ಸಮಚಿತ್ತದ ಜೋಗಿ ನಮಗೆ ಮಾದರಿಯಾಗಿ ನಿಲ್ಲುತ್ತಾರೆ.

ಕಳೆದ ಭಾನುವಾರ ಜೋಗಿಯವರ ಮೂರು ಪುಸ್ತಕಗಳು ಬಿಡುಗಡೆಯಾದವು. ಜೋಗಿ ಪುಸ್ತಕಗಳು ಎಂದ ಮೇಲೆ ಎಂದಿನಂತೆ ಪ್ರೀತಿಯಿಂದ ಇಷ್ಟಪಟ್ಟು ಎತ್ತಿಟ್ಟುಕೊಳ್ಳಬಹುದು. ಆದರೆ ನನಗೆ ಅವರ ‘ರೂಪ ರೇಖೆ ‘ ಅಂಕಣದ ಬರಹಗಳು ಪುಸ್ತಕವಾಗಿ ಬಂದದ್ದು ಒಂದಿಷ್ಟು ಜಾಸ್ತಿ ಖುಷಿ ಕೊಟ್ಟಿದೆ. ಆ ಹೆಚ್ಚುವರಿಯಾದ ಖುಷಿಗೆ ಕಾರಣ ಆ ಪುಸ್ತಕದಲ್ಲಿ ನಾನು ದೇವರಂತೆ ಕಾಣುವ ಹಂಸಲೇಖಾ ಕುರಿತಾದ ಒಂದು ಬರಹವಿದೆ.ಈತನಕ ಹಂಸಲೇಖಾ ಅವರ ಕುರಿತಾಗಿ ಬಂದ ಬರಹಗಳಲ್ಲಿ ಆ ಬರಹ ‘ದಿ ಬೆಸ್ಟ್’.ಮಹತ್ತನ್ನು ಮಹತ್ತು ಮಾತ್ರ ಸರಿಯಾಗಿ ಗ್ರಹಿಸುತ್ತೆ ಹಾಗು ಗುರುತಿಸುತ್ತೆ.ಜೋಗಿ ಸರ್ ಆ ಕೆಲಸವನ್ನು ಆ ಲೇಖನದಲ್ಲಿ ಮಾಡಿದ್ದಾರೆ. ಜೋಗಿಯೆಂಬ ಮಾನಸಗುರುವಿನ ಲೇಖನಿಯಲ್ಲಿ ಹಂಸಲೇಖಾ ಎಂಬ ದೇವರ ಚಿತ್ರ ಅಕ್ಷರ ರೂಪದಲ್ಲಿ ಮೂಡುತ್ತಿದ್ದರೆ ,ಅದನ್ನು ನಮ್ಮದಾಗಿಸಿಕೊಳ್ಳುವ ಖುಷಿ ನಿಜಕ್ಕೂ ಅಪಾರ. ಆ ಖುಷಿಗೆ ಕಾರಣರಾದ ಜೋಗಿಯವರಿಗೆ ನಾನೆಂಬ ಓದುಗನ ಕಡೆಯಿಂದ ಒಂದು ದೊಡ್ಡ ಥ್ಯಾಂಕ್ಸ್ .

ಜೋಗಿ ಸಾರಿಗೊಂದು ಥ್ಯಾಂಕ್ಸ್ ಹೇಳಿ ಹಂಸಲೇಖಾ ಅವರನ್ನು ಒಮ್ಮೆ ಸ್ಮರಿಸಿ ಹೋಗಲು ಬಂದವನು ನಾನು.ಬರೆಯಲು ಶುರು ಮಾಡಿದ ಮೇಲೆ ಜೋಗಿ ಸರ್ ಇಷ್ಟೆಲ್ಲಾ ಬರೆಸಿಕೊಂಡು ಬಿಟ್ಟರು.ಕೊನೆಯದಾಗಿ ಅವರಿಗೆ ಇನ್ನೊಮ್ಮೆ ಇನ್ನೊಂದು ದೊಡ್ಡ ಥ್ಯಾಂಕ್ಸ್ ..:) :)..

Wednesday, January 5, 2011

ಗುಡ್ ನೈಟ್ ಕವನಗಳು

ಗುಡ್ ನೈಟ್ ಕವನ ೨ ....

‘ಪುಟ್ಟಿ ‘ ಎಂಬುದು

ಬರಿಯ ಹೆಸರಲ್ಲ ಎನಗೆ

‘ಪುಟ್ಟಿ ‘ ಎನ್ನ ಧ್ಯಾನ ಮಂತ್ರ

ಎನ್ನ ಪ್ರಾಣ ಮಂತ್ರ

ಎನ್ನ ಬಾಳ್ಗೆ ಒಲವು ತಂದ ಅಭಯನುಡಿ

ನೆಮ್ಮದಿಯ ಐತಂದ ಶಾಂತಿನುಡಿ

‘ಪುಟ್ಟೀ ಪುಟ್ಟೀ ‘ಎನುವುದು ಬರಿಯ ಹೆಸರಲ್ಲ

ಬರಿಯ ಹೆಸರಲ್ಲ ಅದು ,ಎನಗೆ ಎಲ್ಲಾ ..

ಗುಡ್ ನೈಟ್ ಕವನ ೩ .........

ಕಪ್ಪು ರಾಚಿದ ರಾತ್ರಿಯಲಿ

ಭವ್ಯ ಕೋಲ್ಮಿಂಚೊಂದು ಮಿಂಚಿ

ಆ ಬೆಳ್ಳಿ ಮಿಂಚ ಮೈದುಂಬಿಕೊಂಡು

ರಾತ್ರಿ ಬೆಳಗುವುದು .

ಹಾಗೆ ಮಿಂಚಂತೆ ಬಂದವಳು ನೀನು

ನಿನ್ನೊಡನೆ ಬೆಳಗಿದ್ದು ನಾನು ...