Sunday, July 29, 2012

ಆತ ಮತ್ತು ನಾನು


ಅಲ್ಲಿ ದೂರದಲ್ಲಿ ಎಲ್ಲೋ ಸೆಳೆತದ ಸೆಲೆ
ಸೆಳೆಯುತಿದೆ ವಿನಾಕಾರಣ
ಇಲ್ಲೇ ಕುಳಿತೇ ಇದ್ದ ನನ್ನನು
ಕಣ್ಮುಚ್ಚಿದರೆ ಒಳಗೆಲ್ಲೋ ಕಂಡರೂ ಕಾಣದ
ಮಸಕು ಮಸಕು ಚಿತ್ರ.
ಕಣ್ತೆರೆದರೆ ಶೂನ್ಯ ನೀಲಾಕಾಶ
ನನಸಾಗದ ಕನಸುಗಳು ಒಂದಿಷ್ಟು
ಜೊತೆಗೊಂದಿಷ್ಟು ಮಧುರ ವಿಷದಂಥ ನೆನಪು
ಉಳಿದದ್ದು ಹಗಲುಗನಸು.

ಸಾಗುವ ದಾರಿಗುಂಟ
ಒಮ್ಮೆ ಬಿಸಿಲು ಒಮ್ಮೆ ನೆರಳು
ನಡುವೆಲ್ಲೋ ಒಮ್ಮೆ
ಬಿಸಿಲು ನೆರಳು ಯಾವುದೂ ಇರದೇ
ಭರಪೂರ ಗೊಂದಲ.
ಹುಟ್ಟಿದ್ದಕ್ಕೆ ಪ್ರಾಯಶ್ಟಿತವೆಂಬಂತೆ ಬದುಕು
ಸಾಯುವತನಕ ಬದುಕಿಯೇ ಇರು
ಕ್ಷಣಕ್ಕೊಮ್ಮೆ ಸತ್ತು ಸತ್ತು ಬದುಕಿದರೂ ಸರಿಯೇ.
ಹಾಳು ಅರ್ಥವಾಗದ ತತ್ವ
ಯಾರೋ ಬೆಳಕು ಕಂಡ ಅಲೆಮಾರಿ ಹೇಳಿ ಹೋದ ನೆನಪು.
ಹೇಳಿ ಹೋದವನು ಹೋದ 
ಎತ್ತ ಹೋದನೋ 
ಆದರೂ ಆತ ನನ್ನಲ್ಲೇ ಉಳಿದ
ಮರಳಿ ಮರಳಿ ಪಿಸುಗುಡುವ ಗುಂಗಾಗಿ.

ಗುಂಗಲ್ಲೇ ಮೈಮರೆತು ಕುಳಿತದ್ದೇ   ಬಂತು
ಸಂಜೆ ಕಳೆದು ರಾತ್ರಿ ಸುರಿವ ಹೊತ್ತು
ನಾ ಬಂದ ದಾರಿಯೂ ಕಾಣುತಿಲ್ಲ
ಅತ್ತ ಆತ ಹೋದ ದಾರಿಯೂ ....



Wednesday, July 4, 2012

ರವಿಯಿರದ ಸಂಧಿಯಲಿ ಚಂದ್ರ ಅವಕಾಶವಾದಿ


ರವಿಯಿರದ ಸಂಧಿಯಲಿ ಚಂದ್ರ ಅವಕಾಶವಾದಿ ..

ಇಂದಿನ ರವಿ ಎಂದಿನಂತಿಲ್ಲ
ಉಡುಗುತಿದೆ ಬೆಳಗುವ ತ್ರಾಣ
ಅಳಿಯುತಿದೆ ಬೆಳಕಿನ ಬಣ್ಣ
ಅಪರಾಹ್ನ ಅಡಿಯಿಡುವ ಹೊತ್ತಿಗೆ ಅಕಾಲ ಸಂಜೆ
ರಾತ್ರಿ ದೂರಿಲ್ಲ
ಹಗಲಿಲ್ಲದ ಮೇಲೆ ರವಿಯೂ ಇಲ್ಲ

ರವಿ ಅರಳಿಸಿದ ಆ ಹೂವು
ರವಿ ಕಾಣಿಸಿದ ಹೂವ ಬಣ್ಣದ ಬೆರಗು
ಅರಳಿದ್ದು ಮುದುಡಿಹೋಯಿತು
ಕಂಡಿದ್ದು ಎಲ್ಲಿ ಕಾಣೆಯಾಯಿತೋ?
ಕತ್ತಲಲ್ಲಿ ಕಣ್ಣಿದ್ದೂ ಕುರುಡು
ಅಗೋ ಅಲ್ಲಿ
ರವಿಯಿರದ ಸಂಧಿಯಲಿ ಹಾಳು ಅವಕಾಶವಾದಿ ಚಂದ್ರ
ಹೊಳಪಾಗಿ ಕಂಡರೂ ದಾರಿ ತೋರಲಾರ
ಕೆರಳಿಸುವ ಕಲೆ ಗೊತ್ತು.ಅರಳಿಸುವ ಸಿದ್ಧಿ ಒಲಿದಿಲ್ಲ.
ಹಚ್ಚಬೇಕಿದೆ ದೀಪ ಕನಸ ಕಡ್ಡಿಯ ಗೀರಿ
ನಾಳೆಯ ಹಗಲು ಈಗಲೇ ಬೆಳಕಾಗಲಿ
ಎಂದಿನಂತಿಲ್ಲದ ರವಿ ನಾಳೆ ಏನಾಗುವನೋ
ರವಿ ಬಂದರೂ ಬರಬಹುದು ನಾಳೆ
ಖಾತ್ರಿಯಿಲ್ಲ