Sunday, January 9, 2011

ಜೋಗಿ ಸಾರು.ಅವರಿಗೊಂದು ಥ್ಯಾಂಕ್ಸು .....

ಅದು ಬಿ.ಕಾಂ ಓದುತ್ತಿದ್ದ ದಿನಗಳು. ಬೆಂಗಳೂರಿನ ಸ್ವರ್ಣವಲ್ಲಿ ಮಠದ ಹಾಸ್ಟೆಲ್ನಲ್ಲಿ ಆಗ ಇದ್ದೆ. ನಾಗರಾಜ ಭಟ್ ಎನ್ನುವವರು ಆಗ ಹಾಸ್ಟೆಲ್ನಲ್ಲಿ ಅಡುಗೆ ಕೆಲಸಕ್ಕಿದ್ದರು.ಅವರಿಗೆ ಈ ಸಾಹಿತ್ಯ .ಸಂಗೀತ.ಸಿನೆಮ ಎನ್ನುವ ವಿಷಯಗಳ ಕಡೆ ಆಸಕ್ತಿಯಿತ್ತು. ಅಡುಗೆಮನೆಯಲ್ಲಿ ಆಗಾಗ ಈ ವಿಷಯಗಳ ಕುರಿತು ನಮ್ಮ ನಡುವೆ ಚರ್ಚೆ ನಡೆಯುತ್ತಿತ್ತು. ಹಾಗೆ ಅಂಥ ಒಂದು ಚರ್ಚೆಯ ನಡುವೆ ಸಿಕ್ಕವರು ಜೋಗಿ. ಒಮ್ಮೆ ಜಾನಕಿ ಕಾಲಂ ಕುರಿತು ಚರ್ಚೆ ಆಗುತ್ತಿತ್ತು. ‘ ಜಾನಕಿ ಕಾಲಂ ಬರೆಯೋದು ಹೆಂಗಸಲ್ಲ. ಅದನ್ನ ಬರೆಯೋರು ಜೋಗಿ ಅಂತ. ಕನ್ನಡಪ್ರಭಾದಲ್ಲಿ ಅವರು ಕೆಲಸ ಮಾಡೋದು.’ ಎಂಬ ಸತ್ಯವನ್ನ ಆಗ ನಾಗರಾಜ ಭಟ್ಟರು ಹೇಳಿದ್ದರು. ಮೊದಲ ಬಾರಿಗೆ ಆಗ ನಾನು ಜೋಗಿಯವರ ಹೆಸರು ಕೇಳಿದ್ದೆ.

ಅದು ಹಾಯ್ ಬೆಂಗಳೂರನ್ನು ತಪ್ಪದೆ ಪ್ರತಿವಾರ ಕಾದು ಕೂತು ತಂದುಕೊಂಡು ಓದುತ್ತಿದ್ದ ದಿನಗಳು. ರವಿ ಬೆಳಗೆರೆ ಖುಷಿ ಕೊಡುತ್ತಿದ್ದರು.ಚಂದ್ರಶೇಖರ ಆಲೂರರು ನಿಧಾನ ವಿಷದಂತೆ ಆವರಿಸುತ್ತಿದ್ದರು. ನಾಗತಿಹಳ್ಳಿ ಕಾಲಂ ಇಷ್ಟವಾಗುತ್ತಿತ್ತು. ಆದರೆ ಈ ‘ಜಾನಕಿ’ ಕಾಲಂ ನನ್ನ ಪಾಲಿಗೆ ಬಗೆಹರಿಯಲಾರದ ಪ್ರಶ್ನೆಗಳಿಗೆ ,ಗೊಂದಲಕ್ಕೆ ಕುತೂಹಲಕ್ಕೆ ಕಾರಣವಾಗುತ್ತಿತ್ತು. ‘ಏನಪ್ಪಾ ಇದು.ಹೀಗೆಲ್ಲಾ ಬರೆಯೋಕೆ ಸಾಧ್ಯನಾ ‘ ಎಂದುಕೊಳ್ಳುತ್ತಿದ್ದೆ. ಜಾನಕಿ ಕಾಲಂ ಎಷ್ಟೋ ಬಾರಿ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಾಲಿಗೂ ನಂತರದ ಇನ್ನೊಂದು ಸಾಲಿಗೂ ಕೆಲವೊಮ್ಮೆ ಸಂಬಂಧವೇ ಇರದಂತೆ ಕಾಣುತ್ತಿತ್ತು. ಜಾನಕಿ ಕಾಲಂ ಎಲ್ಲೋ ಯಾವುದೋ ವಿಷಯ ಇಟ್ಟುಕೊಂಡು ಶುರುವಾಗಿ ಕೊನೆಗೆ ಇನ್ನೆಲ್ಲೋ ತಲುಪಿ ಕೊಂಡು ಬಿಡುತ್ತಿತ್ತು. ಜಾನಕಿ ಕಾಲಂ ಅನ್ನು ಅಲ್ಲಲ್ಲಿ ತುಂಡರಿಸಿ ಕವನದ ರೂಪ ಕೊಟ್ಟರೆ ಒಂದು ಒಳ್ಳೆಯ ನವ್ಯಕಾವ್ಯ ರೆಡಿ ಎಂಬ ತಲೆಹರಟೆ ಯೋಚನೆ ಸುಳಿದು ಹೋಗುತ್ತಿತ್ತು.ತಲೆಯೆಂಬುದು ಹನ್ನೆರಡಾಣೆಯಾಗಿ ಹೋಗುತ್ತಿತ್ತು. ಆದರೂ ಜಾನಕಿಯನ್ನು ಓದದೆ ಇರಲಾಗುತ್ತಿರಲಿಲ್ಲ. ಜಾನಕಿಯನ್ನು ಓದುವುದು ಹಾಗು ಓದಿದ್ದೇನೆ ಎಂದು ಹೇಳಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿತ್ತು.ತುಂಬಾ ಗಂಭೀರವಾಗಿ ಓದುತ್ತಿದ್ದೆ .ಓದಿದ್ದನ್ನೇ ಹತ್ತು ಬಾರಿ ಓದುತ್ತಿದ್ದೆ.ಏನಾದರೂ ಮಾಡಿ ದಕ್ಕಿಸಿಕೊಂಡು ಬಿಡಬೇಕೆಂಬ ಹಠ. ಈ ತನಕವೂ ಆ ಪ್ರಯತ್ನ ಚಾಲ್ತಿಯಲ್ಲಿದೆ. ಜಾನಕಿ ಈಗೀಗ ಅರ್ಥವಾದಂತೆ ಕಾಣುತ್ತಾಳೆ.ಅರ್ಥವಾದಷ್ಟೇ ಅರ್ಥ ಎಂದುಕೊಂಡು ನಾನು ಒಂದು ಸಮಾಧಾನಕ್ಕೆ ಬಂದಿದ್ದೇನೆ.

ಹೀಗೆ ಜಾನಕಿ ಎಂಬ ನಿಗೂಢ .ಅನೂಹ್ಯ ಜಾಡಿನಲ್ಲಿ ಹುಟ್ಟಿಕೊಂಡ ಅಚ್ಚರಿ-ಬೆರಗುಗಳು ಜೋಗಿ ಎಂಬಲ್ಲಿ ಗೌರವಕ್ಕೆ .ಆರಾಧನೆಗೆ ಕಾರಣವಾದವು. ತೇಜಸ್ವಿ ಏನು ಬರೆದರೂ ಓದಿಸಿಕೊಂಡು ಹೋಗುತ್ತೆ ,ಅವರ ಒಂದಕ್ಷರವೂ ವ್ಯರ್ಥವಲ್ಲ ಎನ್ನುವುದು ನನ್ನ ಭಾವನೆ.ತೇಜಸ್ವಿ ಈಗಿಲ್ಲ. ನನ್ನ ಪಾಲಿನ ಆ ಖಾಲಿ ಜಾಗದಲ್ಲಿ ಈಗ ಜೋಗಿ ಪ್ರತಿಷ್ಠಾಪನೆಗೊಂಡಿದ್ದಾರೆ.

ಜೋಗಿಯವರನ್ನ ಇಷ್ಟಪಡಲಿಕ್ಕೆ ಕಾರಣಗಳು ಹಲವು. ಜೋಗಿಯವರ ಪ್ರತಿ ಬರಹದಲ್ಲಿ ತಿಳಿದುಕೊಳ್ಳಲಿಕ್ಕೆ ಏನಾದರೂ ಹೊಸತು ಇದ್ದೇ ಇರುತ್ತೆ. ಪ್ರತಿ ಬರಹ ಹೊಸತೊಂದು ಚಿಂತನೆಗೆ ದಾರಿಯಾಗುತ್ತೆ.ಹಾಗೆಂದ ಮಾತ್ರಕ್ಕೆ ಜೋಗಿಯವರು ಬರೆದದ್ದೆಲ್ಲ ವೇದವಾಕ್ಯ ಎಂದು ಹೇಳುತ್ತಿಲ್ಲ. ಆದರೆ ಜೋಗಿಯವರನ್ನು ಓದುವಾಗ ಅವರು ಹೇಳಿದ್ದೇ ವೇದವಾಕ್ಯ ಎಂಬಂತೆ ಕಂಡರೆ ಅದು ತಪ್ಪಲ್ಲ. ಅತಿರೇಕದ ಆರಾಧನೆಯೂ ಅಲ್ಲ. ಅದು ಜೋಗಿ ಬರಹದ ತಾಕತ್ತು.ಶರಣಾಗದೆ ಬೇರೆ ದಾರಿಯೇ ಇಲ್ಲ. ಇನ್ನು ಜೋಗಿ ತಮ್ಮ ವೈಯಕ್ತಿಕ ಕಷ್ಟ ಸುಖಗಳನ್ನ ಓದುಗರೆದುರು ತಂದು ಗುಡ್ಡೆಹಾಕುವುದಿಲ್ಲ. ಅವರ ಬರಹದಲ್ಲಿ ಆತ್ಮರತಿಯನ್ನು ನನಗೆ ಕೊಂಚ ಬುದ್ಧಿ ಬೆಳೆದು ಅವರನ್ನು ಓದಲಿಕ್ಕೆ ಶುರುಮಾಡಿದಾಗಿನಿಂದ ಈತನಕ ಒಮ್ಮೆಯೂ ಕಂಡಿಲ್ಲ. ಜೋಗಿ ಉಪದೇಶ ಮಾಡುವುದಿಲ್ಲ.ತಮ್ಮ ಅಭಿಪ್ರಾಯವನ್ನ ಮುಂದಿಡುತ್ತಾರೆ.ಅಭಿಪ್ರಾಯಗಳನ್ನ ಓದುಗನ ಮೇಲೆ ಹೇರುವುದಿಲ್ಲ.ಅವರು ಹೇಳಿದ್ದು ಅರ್ಥವಾದರೆ ಅದು ನಮ್ಮ ಪುಣ್ಯ. ಇಲ್ಲದಿದ್ದರೆ ಅದು ನಮ್ಮ ಕರ್ಮ. ನನ್ನಂಥ ಯಕಶ್ಚಿತ್ ನಾನೇ ಕೆಲವೊಮ್ಮೆ ನನ್ನ ಬ್ಲಾಗಿನಲ್ಲಿ ಉಪದೇಶಕ್ಕೆ ನಿಂತು ಬಿಡುತ್ತೇನೆ.ಬಿಟ್ಟಿ ಸಲಹೆಯನ್ನೂ ಧಾರಾಳವಾಗಿ ಕೊಡುತ್ತೇನೆ. ಜೋಗಿಯಂಥವರಿಗೆ ಉಪದೇಶ ಕೊಡಲಿಕ್ಕೆ ಎಲ್ಲ ಯೋಗ್ಯತೆಯೂ ಇದೆ.ಆದರೂ ಉಪದೇಶಕ್ಕೆ ಮುಂದಾಗುವುದಿಲ್ಲ.ಅವರು ತುಂಬಿದ ಕೊಡ. ತುಂಬದ ಕೊಡ ಲೆಕ್ಕ ತಪ್ಪಿ ತುಳುಕುತ್ತೆ. :) ;) .

ಎಲ್ಲಕ್ಕಿಂತ ಮುಖ್ಯವಾಗಿ ಜೋಗಿಯವರ ಬರಹದಲ್ಲಿ ನಂಜಿರುವುದಿಲ್ಲ. ಯಾರನ್ನೂ ವೈಯಕ್ತಿಕವಾಗಿ ಹಣಿಯಲೇ ಬೇಕೆಂಬ ಹಠದಲ್ಲಿ ಟೀಕಿಸುವುದಿಲ್ಲ, ವಿಮರ್ಶೆಗೆ ಈಡುಮಾಡುವುದಿಲ್ಲ. ‘ ಕುಂ.ವೀ.ಯವರು ವೈಯನ್ಕೆ ಬಗ್ಗೆ ಅವರ ಆತ್ಮಚರಿತ್ರೆಯಲ್ಲಿ ಹಗುರವಾಗಿ ಬರೆದಾಗ .’ ಕುಂ.ವೀ .ಯವರ ಮಾತುಗಳಿಗೆ ಉತ್ತರಿಸಬೇಕಾದವರು ವೈಯನ್ಕೆ.ಆದರೆ ವೈಯನ್ಕೆ ಈಗಿಲ್ಲ. ಆತ್ಮಚರಿತ್ರೆಯನ್ನ ರೋಚಕಗೊಳಿಸುವ ನಿಟ್ಟಿನಲ್ಲಿ ಹೊರಟಾಗ ಈ ರೀತಿಯ ಬರಹಗಳು ಹುಟ್ಟಿಕೊಳ್ಳುತ್ತವೆ ‘ ಎಂಬರ್ಥದಲ್ಲಿ ಜೋಗಿ ಕೇವಲ ಕೆಲವೇ ಸಾಲುಗಳಲ್ಲಿ ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದರು. ಅದೇ ಸಮಯಕ್ಕೆ ನೃಪತುಂಗ ಪ್ರಶಸ್ತಿಯನ್ನು ದೇವನೂರು ಮಹಾದೇವರು ಸ್ವೀಕರಿಸದೆ ಕನ್ನಡದ ಪರವಾದ ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದರು. ಯಾವೊಬ್ಬ ಕನ್ನಡದ ಬರಹಗಾರನೂ ಅವರಿಗೆ ಬೆಂಬಲವಾಗಿ ನಿಲ್ಲಲಿಲ್ಲ. ಅವರ ಪರವಾಗಿ ಸ್ವರ ಎತ್ತುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಜೋಗಿಯವರು ಆಗ ಮುಟ್ಟಿ ನೋಡಿಕೊಳ್ಳುವಂತೆ ಉಳಿದ ಎಲ್ಲ ಬರಹಗಾರರ ನಿರ್ವೀರ್ಯತೆಯನ್ನ ತಮ್ಮ ಎಂದಿನ ತಣ್ಣನೆ ಶೈಲಿಯಲ್ಲಿ ಸರಿಯಾಗಿ ಆಯದ ಜಾಗಕ್ಕೆ ಬಿಸಿ ತಾಕುವಂತೆ ಬರೆದಿದ್ದರು. ಕೊನೆಗೆ ‘ಮಾತು ಸೋತ ಭಾರತದ ‘ ಉಪಮೆಯೊಂದಿಗೆ ಅಷ್ಟೇ ತಣ್ಣಗೆ ಮಾತು ಮುಗಿಸಿದ್ದರು.

ಜೋಗಿಯವರು ಆಗಾಗ ಅನಂತಮೂರ್ತಿಯವರನ್ನ ನೆನೆಯುತ್ತಾರೆ. ಮೆಚ್ಚಿ ಬರೆಯುತ್ತಾರೆ.ಆದರೆ ಅನಂತ ಮೂರ್ತಿಯವರನ್ನ ಮೆಚ್ಚುವ ಕಾರಣಕ್ಕೆ ಭೈರಪ್ಪನವರನ್ನ ಟೀಕಿಸುವುದಿಲ್ಲ. ಕೊನೆಗೆ ಭೈರಪ್ಪನವರ ಬಗ್ಗೆ ಬರೆಯಬೇಕಾದ ಸಂದರ್ಭ ಒದಗಿಬಂದಾಗ ‘ ಪ್ರತಿಬಾರಿ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದಾಗ ಕನ್ನಡಿಗರಾದ ನಮಗೆ, ಭೈರಪ್ಪನವರಿಗೆ ಈ ಬಾರಿಯಾದರೂ ಜ್ಞಾನಪೀಠ ಸಿಗಲಿ ಎಂಬ ನಿರೀಕ್ಷೆ ‘ ಎಂಬ ಒಳ್ಳೆಯ ಮಾತುಗಳನ್ನೇ ಹೇಳುತ್ತಾರೆ. ಈಗಂತೂ ಅನಂತಮೂರ್ತಿಯವರನ್ನ ಮೆಚ್ಚುವವರು ಅವರೆಡೆಗಿನ ತಮ್ಮ ನಿಷ್ಠೆಯನ್ನ ಸಾಬೀತು ಪಡಿಸಿಕೊಳ್ಳಲು ಭೈರಪ್ಪನವರನ್ನ ಟೀಕಿಸುವುದು ,ಅತ್ತ ಭೈರಪ್ಪನವರ ನಿಷ್ಠ ಅನುಯಾಯಿಗಳು ಅನಂತಮೂರ್ತಿಯವರನ್ನ ಹಳಿಯುವುದು, ಒಂದು ಗುಂಪಿನೊಂದಿಗೆ ಪ್ರಖರವಾಗಿ ಗುರುತಿಸಿಕೊಳ್ಳುವುದು ಮಾಮೂಲಿಯಾಗಿಬಿಟ್ಟಿದೆ. ಅನಂತ ಮೂರ್ತಿ ಹಾಗು ಭೈರಪ್ಪನವರ ಪ್ರಸಂಗ ಒಂದು ಉದಾಹರಣೆಯಷ್ಟೇ. ಜೋಗಿ ತಮಗೆ ಇಷ್ಟವಾದದ್ದನ್ನು ಮೆರೆಸುತ್ತಾರೆ. ಇಷ್ಟವಲ್ಲದ್ದನ್ನು ಒಂದು ದಿವ್ಯ ಉದಾಸೀನದಲ್ಲಿ ಸರಿಸಿ ಬದಿಗಿಟ್ಟು ಬಿಡುತ್ತಾರೆ.ಇಷ್ಟವಲ್ಲ ಎಂಬ ಕಾರಣಕ್ಕೆ ಕಟು ಟೀಕೆಗೆ ಮುಂದಾಗುವುದಿಲ್ಲ. ಒಳ್ಳೆಯದು ಎಲ್ಲೇ ಸಿಕ್ಕರೂ ನಾಲ್ಕು ಮಾತು ಪ್ರೀತಿಯಿಂದ ಹಿರಿಯ ಕಿರಿಯ ಎಂಬ ಭೇಧವಿಲ್ಲದೆ ಬರೆದು ಬೆಂಬಲಿಸುತ್ತಾರೆ. ಹೀಗೆ ಇಂಥ ಕಷ್ಟಕಾಲದಲ್ಲಿ, ದುಷ್ಟಕಾಲದಲ್ಲಿ ಸಮಚಿತ್ತದ ಜೋಗಿ ನಮಗೆ ಮಾದರಿಯಾಗಿ ನಿಲ್ಲುತ್ತಾರೆ.

ಕಳೆದ ಭಾನುವಾರ ಜೋಗಿಯವರ ಮೂರು ಪುಸ್ತಕಗಳು ಬಿಡುಗಡೆಯಾದವು. ಜೋಗಿ ಪುಸ್ತಕಗಳು ಎಂದ ಮೇಲೆ ಎಂದಿನಂತೆ ಪ್ರೀತಿಯಿಂದ ಇಷ್ಟಪಟ್ಟು ಎತ್ತಿಟ್ಟುಕೊಳ್ಳಬಹುದು. ಆದರೆ ನನಗೆ ಅವರ ‘ರೂಪ ರೇಖೆ ‘ ಅಂಕಣದ ಬರಹಗಳು ಪುಸ್ತಕವಾಗಿ ಬಂದದ್ದು ಒಂದಿಷ್ಟು ಜಾಸ್ತಿ ಖುಷಿ ಕೊಟ್ಟಿದೆ. ಆ ಹೆಚ್ಚುವರಿಯಾದ ಖುಷಿಗೆ ಕಾರಣ ಆ ಪುಸ್ತಕದಲ್ಲಿ ನಾನು ದೇವರಂತೆ ಕಾಣುವ ಹಂಸಲೇಖಾ ಕುರಿತಾದ ಒಂದು ಬರಹವಿದೆ.ಈತನಕ ಹಂಸಲೇಖಾ ಅವರ ಕುರಿತಾಗಿ ಬಂದ ಬರಹಗಳಲ್ಲಿ ಆ ಬರಹ ‘ದಿ ಬೆಸ್ಟ್’.ಮಹತ್ತನ್ನು ಮಹತ್ತು ಮಾತ್ರ ಸರಿಯಾಗಿ ಗ್ರಹಿಸುತ್ತೆ ಹಾಗು ಗುರುತಿಸುತ್ತೆ.ಜೋಗಿ ಸರ್ ಆ ಕೆಲಸವನ್ನು ಆ ಲೇಖನದಲ್ಲಿ ಮಾಡಿದ್ದಾರೆ. ಜೋಗಿಯೆಂಬ ಮಾನಸಗುರುವಿನ ಲೇಖನಿಯಲ್ಲಿ ಹಂಸಲೇಖಾ ಎಂಬ ದೇವರ ಚಿತ್ರ ಅಕ್ಷರ ರೂಪದಲ್ಲಿ ಮೂಡುತ್ತಿದ್ದರೆ ,ಅದನ್ನು ನಮ್ಮದಾಗಿಸಿಕೊಳ್ಳುವ ಖುಷಿ ನಿಜಕ್ಕೂ ಅಪಾರ. ಆ ಖುಷಿಗೆ ಕಾರಣರಾದ ಜೋಗಿಯವರಿಗೆ ನಾನೆಂಬ ಓದುಗನ ಕಡೆಯಿಂದ ಒಂದು ದೊಡ್ಡ ಥ್ಯಾಂಕ್ಸ್ .

ಜೋಗಿ ಸಾರಿಗೊಂದು ಥ್ಯಾಂಕ್ಸ್ ಹೇಳಿ ಹಂಸಲೇಖಾ ಅವರನ್ನು ಒಮ್ಮೆ ಸ್ಮರಿಸಿ ಹೋಗಲು ಬಂದವನು ನಾನು.ಬರೆಯಲು ಶುರು ಮಾಡಿದ ಮೇಲೆ ಜೋಗಿ ಸರ್ ಇಷ್ಟೆಲ್ಲಾ ಬರೆಸಿಕೊಂಡು ಬಿಟ್ಟರು.ಕೊನೆಯದಾಗಿ ಅವರಿಗೆ ಇನ್ನೊಮ್ಮೆ ಇನ್ನೊಂದು ದೊಡ್ಡ ಥ್ಯಾಂಕ್ಸ್ ..:) :)..

8 comments:

ಶಾಂತಲಾ ಭಂಡಿ (ಸನ್ನಿಧಿ) said...

ಗೌತಮ...
ಜೋಗಿ ನಂಗೂ ಇಷ್ಟ. ಜೋಗೀ ಹೀಗೇ ಬರೀತಾರೆ ಅಂತ ಹೇಳೋಕಾಗಲ್ಲ. ಹೇಗೂ ಬರೆದಿರಬಹುದು, ಹೇಗೂ ಬರೀತಿರಬಹುದು, ಹೇಗೂ ಬರೀಬಹುದು.
ಅನಂತಮೂರ್ತಿಯವರನ್ನ ಹೊಗಳೋವಾಗ ಭೈರಪ್ಪನವರನ್ನ ತೆಗಳೋದಿಲ್ಲ ಜೋಗಿ, ಅದು ನಿಜ.
ಆದ್ರೆ ಆವರಣ ಬಂದ ಹೊಸತರಲ್ಲಿರಬೇಕು, ಕೆಂಡಸಂಪಿಗೆಯಲ್ಲಿ ಜೋಗಿ ಭೈರಪ್ಪನವರ ಕುರಿತು ಬರೆದಿದ್ರು.

ಬರಹ ತುಂಬ ಇಷ್ಟವಾಯ್ತು. ಬರೀತಿರು.

ಗೌತಮ್ ಹೆಗಡೆ said...

ಥ್ಯಾಂಕ್ಸ್ ಅತ್ತಿಗೆ :)

ನನಗೆ ಇದು ಗೊತ್ತಿರಲಿಲ್ಲ. ನನಗೆ ಕಂಡ ಜೋಗಿ ಸರ್ ಬಗ್ಗೆ ನನ್ನದೇ ಆದ ಅಭಿಮಾನದಲ್ಲಿ .ಖುಷಿಯಲ್ಲಿ ಬರೆದುಕೊಂಡು ಹೋದೆ.

ತಿಳಿಸಿ ತಿದ್ದಿದ್ದಕ್ಕೆ ಮತ್ತೊಂದು ಥ್ಯಾಂಕ್ಸ್ ಅತ್ತಿಗೆ :)

San Shetty said...

naanuu jogi sir avara dodda fan....avara articles yeraderadu sala odditi:)

PS:ondu sala odidre artha aagalla, adake eradu sala ododu!:)

ಗೌತಮ್ ಹೆಗಡೆ said...

@ ಶೆಟ್ಟಿ

ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ ಶೆಟ್ಟಿಯವರೇ.:)

ನಿಜ.ಜೋಗಿ ಸರ್ ಬರಹ ಸುಲಭಕ್ಕೆ ಪೂರ್ತಿಯಾಗಿ ದಕ್ಕುವುದಿಲ್ಲ. ಎಷ್ಟು ದಕ್ಕುತ್ತೋ ಅಷ್ಟೇ ನಮ್ಮದು :)

prashu said...

jogi ishta aagodu yakandre naavu andukondu helalaagaddanna avaru 'howdu ide adu' antha anso thara barithare..
aadare naduve omme joginoo ekathaanathege sikkidru ansittu nange(bari avranna odoke hi bang tharistene.nanu)
adrallu nadiya nenapina hangu bore hodesithu..
after dec jogi strikes again!
preethi bagge kannadadalli chennagi bariyoru jogi n rb matra!
kone mathu - jogiyolagobba santhaniddane aadare aa santhanige badukina bagge estu moha!
adke nange jogi andre ishta.!

ಗೌತಮ್ ಹೆಗಡೆ said...

@ prashu

ನಿಜ ನೀವು ಹೇಳಿದ್ದು .ಜೋಗಿಯೋಳಗೊಬ್ಬ ಸಂತನಿದ್ದಾನೆ . ಈ ಮೀಡಿಯಾ ಎಂಬ ನೂರಾರು ಸುಳ್ಳಿನ ಸಂತೆಯ ನಡುವೆ ಇದ್ದರೂ ಜೋಗಿ ಸರ್ ಮನುಷ್ಯರನ್ನ ಪ್ರೀತಿಸುವ ಗುಣ ಉಳಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿದ್ದೇನೆ ಜೋಗಿಯವರನ್ನ ಹತ್ತಿರದಿಂದ ಬಲ್ಲವರ ಬಳಿ ..ಬಹುಶಃ ಆ ಕಾರಣಕ್ಕೆ ಅವರು ಪ್ರೀತಿಯ ಬಗ್ಗೆ ಮನಸ್ಸಿಗೆ ತಟ್ಟುವಂತೆ ಬರೆಯಬಲ್ಲರು.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ..

Unknown said...

ಸೊಗಸಾಗಿದೆ ..ನನ್ನ ನೆಚ್ಚಿನ ಜೋಗಿ ಸರ್ ಬಗ್ಗೆ ಬರೆದ ಲೇಖನ

Unknown said...

ಸೊಗಸಾಗಿದೆ ..ನನ್ನ ನೆಚ್ಚಿನ ಜೋಗಿ ಸರ್ ಬಗ್ಗೆ ಬರೆದ ಲೇಖನ