Thursday, October 18, 2012

ಮಿಲಿ .....ಕಳ್ಳ ತುಂಟ ಬೆಕ್ಕು ಮರಿ



ಮಿಲಿ ಮಿಲಿ ಮುದ್ದು ಮಿಲಿ
ಕಳ್ಳ ತುಂಟ ಬೆಕ್ಕು ಮರಿ
ಪುಟ್ಟ ಪುಟ್ಟ ಹೆಜ್ಜೆಯಲ್ಲಿ
ಆಚೆ ಈಚೆ ಹಾರಿ ಓಡೋ
ಮುದ್ದು ಉಣ್ಣೆ ಚೆಂಡು ಮಿಲಿ
ಕೈಗೆ ಸಿಕ್ಕ ಕ್ಷಣವೇ
ಜಾರಿಕೊಂಡು ಓಡಿ ಹೋಗಿ
ಎಲ್ಲೊ ಮೂಲೆಯಲ್ಲಿ ಅಡಗಿ
ಕಣ್ಣಾ ಮುಚ್ಚೆ ಕಾಡೆಗೂಡೆ
ನನ್ನ ಪುಟ್ಟ ಬೆರಗು ನೀನು
ಮುದ್ದು ಬೆಣ್ಣೆ ಮುದ್ದೆ ಮಿಲಿ

ಕಾಯಿಸಿಟ್ಟು ಮುಚ್ಚಿ ಇಟ್ಟ
ಹಾಲು ಹುಡುಕಿ ಕಣ್ಣ ಮುಚ್ಚಿ
ಕದ್ದು ಕುಡಿದು
ಹಾಲು ಬಳಿದ ಚಿಗುರು ಮೀಸೆ ಹೊತ್ತು
ಮಳ್ಳನಂತೆ ಸುತ್ತ ಸುಳಿವ
ನನ್ನ ಪುಟ್ಟ ಕಳ್ಳ ಮಿಲಿ

ಮಿಂಚಿ ಹೋದ ಮಿಂಚು ಮಿಲಿ
ನನ್ನ ಪುಟ್ಟ ಗೆಳೆಯ ಮಿಲಿ
ಇಂದು ನೀನು ಜೊತೆಯಲಿಲ್ಲ 
ಕಾಲ ಕದ್ದು ಒಯ್ಯಿತಲ್ಲ
ನನಗೆಲ್ಲ ಆದವನು ನೀನು
 ನೆನಪಲ್ಲಿ ಮಾತ್ರವೇ  ಉಳಿದೆಯಲ್ಲ  
ಹೀಗೆ ಪದ್ಯವಾಗಿ ಹೋದೆಯಲ್ಲ
ಜಾಸ್ತಿ ಇನ್ನು ಬರೆಯಲಾರೆ
ಕಣ್ಣ ತುಂಬ ನಿನ್ನ ಚಿತ್ರ
ಕಣ್ಣ ಅಂಚು ಒದ್ದೆ ಒದ್ದೆ
ಕಣ್ಣ ಹನಿಗಳೆಲ್ಲ ಒಳಗೇ ಇರಲಿ
ಜಾರಿ ಇಳಿದು
ನಿನ್ನ ಚಿತ್ರ ಕರಗದಿರಲಿ

ಮಿಲಿ ಮಿಲಿ ಮುದ್ದು ಮಿಲಿ
ಕಳ್ಳ ತುಂಟ ಬೆಕ್ಕು ಮರಿ
 ನನ್ನ ಪುಟ್ಟ ಬೆರಗು ನೀನು
ನನ್ನ ಪುಟ್ಟ ಗೆಳೆಯ ಮಿಲಿ


1 comment:

Shrilampi said...

Thank you..
really nice one..