ಬರೆದ ಓಲೆಗಳಲಿ
ದುಃಖ ದುಮ್ಮಾನ ನೋವಿನ ಪದಗಳಿತ್ತು.
ಬರೆವ ಘಳಿಗೆಯಲಿ ಕಣ್ಣಂಚಲಿ ಕುಳಿತಿದ್ದ
ಮಂಜು ಮಂಜು ಹನಿಸಾಲು ನಿನಗೆಲ್ಲಿ ಕಂಡಿತ್ತು ?
ಓಲೆ ಸಿಗುವಾಗಲೆಲ್ಲ ಎಲ್ಲೆ ಮೀರಿದ
ದೈವೀಕ ಸಂತಸ ನಿನ್ನದಾಗುತ್ತಿತ್ತು
ಆದರೆ
ಕೊನೆಯ ಸಾಲು ಬರೆವ ಮುನ್ನವೇ
ಎಲ್ಲಿ ಭಾವ ಭಾರಕೆ ಕುಸಿದು ಮಲಗುವೆನೋ
ಎನುವ ಎನ್ನ ಅಸಹಾಯಕತೆ ನಿನಗೆಲ್ಲಿ ತಿಳಿದಿತ್ತು ?
ಕೆಲವಷ್ಟು ಹಾಗೆಯೇ
ಪದ ಮೀರಿದ್ದು
ಕಲ್ಪನೆಗೆ ತಾಕದ್ದು
ನಿನ್ನುಸಿರು ತಾಕುವ ಸನಿಹವೇ ಬೇಕು
ಮೆಲ್ಲಗೆ ನಿನ್ನ ಕಿವಿಯ ಬಳಿ ತುಟಿಯಿಟ್ಟು
ಎಲ್ಲ ಹೇಳಬೇಕು
ಮತ್ತೆ ನೀನು ಎನ್ನೆದೆಗೆ ತಲೆಯಿಟ್ಟು
ಎದೆಯ ಗೂಡಿನ ದನಿಗೆ ಕಿವಿಯಾಗಬೇಕು
ನೀನೇ ನಾನಾಗಬೇಕು
ನಾನು ನೀನಾಗಿ.....
4 comments:
ಚೆಂದದ ಕವಿತೆ .ಇಷ್ಟವಾಯಿತು.
ಚ೦ದ ಇದೆ ಕವನ :)
Super... tumba chennagide..
Bhavukateya. .hadiyalli.. kavite horatu banda hagide..
ಪ್ರತಿಕ್ರಿಯೆ ನೀಡಿ ಬೆಂಬಲಿಸಿದ ಕೃಷ್ಣ ಮೂರ್ತಿಯವರಿಗೆ . ಸುಧೇಶ್ ಅವರಿಗೆ , ರಾಘವೇಂದ್ರರರಿಗೆ ತುಂಬಾ ಧನ್ಯವಾದ :)
Post a Comment