Tuesday, January 1, 2013

ಗುಟ್ಟು ....

ಯಾವಾಗಲೂ ಬಯ್ಯುತ್ತಿದ್ದ  ಅಪ್ಪ ಆ ದಿನ ಅನಂತನಿಗೆ ಕೊಂಚ ಜಾಸ್ತಿಯಾಗಿಯೇ  ಬಾಯಿಗೆ  ಬಂದಂತೆ ಬಯ್ದು 'ಅಯೋಗ್ಯ ನೀನು .ಕೆಲಸವಿಲ್ಲ ಕಾರ್ಯವಿಲ್ಲ. ಮನುಷ್ಯನಾಗಿ ಹುಟ್ಟಿದ್ದಿ .ಮನುಷ್ಯ ಜನ್ಮ ಸುಲಭಕ್ಕೆ ಸಿಕ್ಕುವುದಲ್ಲ .ನಿನ್ನಂಥವರು ಹುಟ್ಟಿ ..ಸಾಕು ಬಿಡು .ಎಷ್ಟು ಹೇಳಿದರೂ ಅಷ್ಟೇ 'ಎಂದು ಬೆನ್ನು ತಿರುಗಿಸಿ ಹೋಗಿಬಿಟ್ಟರು .ಮಧ್ಯಾಹ್ನದ ಸುಡುಬಿಸಿಲು. ಅಪ್ಪನಿಂದ ಬಯ್ಯಿಸಿಕೊಳ್ಳುವುದು ,ಕೊನೆಗೆ ತಾನು ಅದ್ಯಾವುದನ್ನೂ ತಲೆಗೆ ತೆಗೆದು ಕೊಳ್ಳದೆ  ನಿರ್ಲಿಪ್ತನಾಗಿ ,ತಾನಿರುವುದೇ ಹೀಗೆ ಎಂಬಂತೆ ಬದುಕುವುದು ಅನಂತನಿಗೆ ರೂಢಿಯಾಗಿ ಹೋಗಿತ್ತು .ಆದರೂ ಅಂಥ  ಅನಂತನಂತಹ  ಅನಂತನಿಗೆ  ಆ ದಿನ ಅಪ್ಪ ಬಯ್ದದ್ದು ಒಳಗೆಲ್ಲೋ ಇರಿದು ಹೋಗಿತ್ತು .ಅನಂತ ಸುಮ್ಮನೆ ಬಿರ ಬಿರನೆ ಹೆಜ್ಜೆ ಹಾಕುತ್ತ ಮನೆಯಿಂದ ಹೊರಟು  ಬಿಟ್ಟ.ಯಾಕೆ ಹೊರಟದ್ದು ಎಂಬುದು ಆ ಕ್ಷಣಕ್ಕೆ ಆತನಿಗೂ ಗೊತ್ತಿರಲಿಲ್ಲ.ಅಪ್ಪನ ಮೇಲಿನ ಸಿಟ್ಟಿಗಾ ? ಪಶ್ಚಾತ್ತಾಪಕ್ಕಾ ? ಆತ್ಮಹತ್ಯೆಗಾ ? ಸುಮ್ಮನೆ ಹೊರಟ ಯಾರೋ ಅವನನ್ನು ಸೆಳೆದು ಎಳೆದುಕೊಂಡು ಹೊರಟಂತೆ.

ಮನೆಯ ಎದುರಿಗೆ ಅಡಿಕೆ ತೋಟವಿದೆ .ತೋಟಕ್ಕೆ ಹೊಕ್ಕು ತೋಟದ ಇನ್ನೊಂದು ತುದಿ ತಲುಪಿಕೊಂಡರೆ ಅಲ್ಲಿ ಆಕಾಶಕ್ಕೆ ಮುತ್ತಿಕ್ಕುವಂತೆ ಘನ   ಗಂಭೀರವಾಗಿ ,ಭವ್ಯವಾಗಿ ನಿಂತಿರುವಂತೆ ಕಾಣುವ ಹುಲಿದೇವನ ಗುಡ್ದವಿದೆ.ಗುಡ್ಡವನ್ನ ಸಾದ್ಯಂತವಾಗಿ ಆವರಿಸಿಕೊಂಡಿರುವ ಆಳೆತ್ತರದ ಹುಲ್ಲು.ಗುಡ್ಡದ ದಾರಿ ಹಿಡಿದು ಹೊರಟರೆ ಅಸಲಿಗೆ ಅಲ್ಲಿ ದಾರಿಯೆಂಬುದೇ ಇಲ್ಲ.ಆಳೆತ್ತರದ ಹುಲ್ಲಿನಲ್ಲಿ ನಾವೇ ದಾರಿ ಮಾಡಿಕೊಂಡು ಹೋಗಬೇಕು. ಹಾಗೆ ಹೋಗುವಾಗ ಮೊನಚಾದ ಹುಲ್ಲಿನ ಮೇಲ್ಮೈ ಮೈಗೆ ತಾಕಿ ,ಹುಲ್ಲು ಮೈಗೆ ತಾಕಿದ ಜಾಗದಲ್ಲಿ ಗೀರಿದಂತೆ ಗಾಯವಾಗಿ ರಕ್ತ ಜಿನುಗುತ್ತೆ . ಜೊತೆ ಜೊತೆಗೆ ಹುಲ್ಲಿನ ಉಣುಗಿನ ಕಾಟ ಬೇರೆ. ಇವೆಲ್ಲವನ್ನೂ ಹೇಗೋ ನಿಭಾಯಿಸಿ ಕೊಳ್ಳಬಹುದು ಎಂದು ಹೊರಟರೆ ಅಲ್ಲಿ ಇನ್ನೊಂದು ದೊಡ್ಡ ಅಪಾಯವಿದೆ.ಅದು ಅಪಾಯಕಾರಿ ಕಾಡು ಹಂದಿಗಳದ್ದು .ರಾತ್ರಿ ಹೊತ್ತು ಗುಡ್ಡದ ಮೇಲಿನಿಂದ ಇಳಿದು ಅಡಿಕೆ ತೋಟಕ್ಕೆ ಹೊಕ್ಕು ಅಲ್ಲಿರುವ ಬಾಳೆ  ಗಿಡಗಳನ್ನೋ , ಎಳೆಯ ಅಡಿಕೆ ಮರಗಳನ್ನೂ,ಏಲಕ್ಕಿ ಗಿಡಗಳನ್ನೋ  ಅಗೆದು ಬುಡಮೇಲು ಮಾಡಿ ಅನಾಹುತ ಮಾಡಿ ಹೋಗುವ ಹಂದಿಗಳಿಗೆ ಮಧ್ಯಾಹ್ನದ ಹೊತ್ತಿನಲ್ಲಿ ಹುಲಿದೇವನ ಗುಡ್ಡದ ಆಳೆತ್ತರದ ಹುಲ್ಲೇ ಅಡಗುದಾಣ.  ದಟ್ಟವಾಗಿ ಬೆಳೆದ ಹುಲ್ಲಿನ ನಡುವಿಂದ ನುಗ್ಗಿ ಬರುವ ಹಂದಿಗೆ ಈಡಾದರೆ ಭಗವಂತನೂ ಕಾಪಾಡಲಾರ.ಆ ಸತ್ಯ ಗೊತ್ತಿರುವ ಊರಿನ ಜನ ಅಪ್ಪಿ ತಪ್ಪಿಯೂ ತೋಟದ ಗಡಿ ದಾಟಿ ಹುಲಿದೇವನ  ಗುಡ್ಡಕ್ಕೆ ಕಾಲಿಡುತ್ತಿರಲಿಲ್ಲ.

 ಈವೆಲ್ಲ ಸಂಗತಿಗಳು ಆ ಊರಿನವನೇ  ಆದ ಅನಂತನಿಗೂ ತಿಳಿದಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.ಆದರೂ ಅನಂತ ಆ ದಿನ ಹುಲಿದೇವನ ಗುಡ್ಡದ ದಾರಿ ಹಿಡಿದ. ಗುಡ್ಡದ ಹುಲ್ಲಿನ ನಡುವೆ ಅನಂತ ದಾರಿ ಮಾಡಿಕೊಳ್ಳುತ್ತ ಹೋಗುತ್ತಲೇ ಉಳಿದ.ಮೈಯೆಲ್ಲಾ ಹುಲ್ಲಿನಿಂದ ಗೀರಿಹೋಗಿ  ರಕ್ತ ಬಂದರೂ ,ನವೆಯಾಗಲೀ ;ಮೈಗೆ ಹತ್ತಿಕೊಂಡ ಹುಲ್ಲಿನ ಉಣುಗುಗಳ ಕಾರಣಕ್ಕೆ ತುರಿಕೆಯಾಗಲೀ ಅನಂತನ ಗಮನಕ್ಕೆ ಬರಲೇ ಇಲ್ಲ.ಅನಂತ ಅನಂತದೆಡೆ ಮುಖ ಮಾಡಿ ಹೊರಟವನಂತೆ   ಅನ್ಯ ಮನಸ್ಕನಾಗಿ ಬಿರ ಬಿರನೆ ಹೊಗುತ್ತಿದ್ದ . ಯಾವುದೂ ಆತನನ್ನ ತಡೆಯಲಿಲ್ಲ. ಹಂದಿಗಳ ದೊಡ್ಡ ಹಿಂಡೊಂದು ತೀರಾ ಹತ್ತಿರದಲ್ಲೇ ಅವನ  ಎಡಭಾಗದಲ್ಲಿ ಹುಲ್ಲುಗಳ ನಡುವೆ ವಿಶ್ರಮಿಸಿಕೊಳ್ಳುತ್ತಿತ್ತು    . ಹಂದಿಗಳು ಯಾಕೋ ನುಗ್ಗಿ ಬರುವ ಉಸಾಬರಿಗೆ ಹೋಗಲಿಲ್ಲ. ಒಂದು ದೊಡ್ಡ ಹಂದಿ ಒಮ್ಮೆ ಸಣ್ಣಗೆ ಗುಟುರು ಹಾಕಿ ಅನಂತನೆಡೆ  ನುಗ್ಗಿ ಬರುವಂತೆ ನೋಡಿತು.ಅನಂತ ಇದ್ಯಾವುದೂ ತನಗೆ ಸಂಬಂಧವೇ ಇಲ್ಲವೆಂಬಂತೆ ಸುಮ್ಮನೆ ಮುಂದೆ ಮುಂದೆ ದಾರಿ ಮಾಡಿಕೊಳ್ಳುತ್ತಾ ನಡೆಯುತ್ತಲೇ ಇದ್ದ. ಅವನ ದಿವ್ಯ ಉದಾಸೀನ ಕಂಡು ಹಂದಿ ಕೂಡ ದಿವ್ಯ ಉದಾಸೀನದಲ್ಲಿ ಸುಮ್ಮನಾಗಿ ಹೋಯಿತು.ನುಗ್ಗಿ ಹೋಗುವುದರಲ್ಲಿ ಅದಕ್ಕೆ ಯಾವುದೇ ಬಲವಾದ ಕಾರಣವಾಗಲಿ ,ಸ್ವಾರಸ್ಯವಾಗಲಿ ಬಹುಶಃ ಕಂಡಿರಲಿಕ್ಕಿಲ್ಲ.

ಅನಂತ ಗುಡ್ಡದ ತುದಿಯನ್ನ ತಲುಪಿ ಗುಡ್ಡದ ಇನ್ನೊಂದು ಕಡೆ ಇಳಿಜಾರಿನಲ್ಲಿ ಇಳಿದು ಗುಡ್ಡದ ಆಚೆ ತೀರವನ್ನ ತಲುಪಿಕೊಂಡ. ಏನನ್ನಿಸಿತೋ ಏನೋ,ಒಂದು ಕ್ಷಣ ಸುಮ್ಮನೆ ನಿಂತು ಸುತ್ತ ಕಣ್ಣಾಡಿಸಿದ. ಕೊನೆಗೆ ಯಾವುದೋ ತೀರ್ಮಾನಕ್ಕೆ ಬಂದವನಂತೆ ತನ್ನ ಬಲಕ್ಕೆ ಹೊರಳಿ ಹತ್ತಿರದಲ್ಲೆ ಇದ್ದ ಹೊಳೆಯ ಹಾದಿ ಹಿಡಿದ. ಅದೊಂದು ಪುಟ್ಟದಾದ ಕೆಸರಾಗಿ ಹರಿಯುತ್ತಿದ್ದ  ಹೊಳೆ.ಮೊಳಕಾಲು ತೋಯುವಷ್ಟು ನೀರಿತ್ತು. ಹೊಳೆಯನ್ನು ದಾಟಿದವನಿಗೆ  ಕಂಡಿದ್ದು ಒಂದು ದೊಡ್ಡ ಆಲದ ಮರ.ಅದರ  ಕೆಳಗೊಂದು ಪುಟ್ಟ ಗುಡಿಸಲು. ಅನಂತನಿಗೆ ತೀವ್ರವಾಗಿ ಬಾಯಾರಿ ಹೋಗಿತ್ತು. ಕೆಸರು ನೀರಿನ  ಹೊಳೆಯನ್ನು ದಾಟಿದವನಿಗೆ ಗುಡಿಸಲು ಕಂಡು ಹೋದ ಜೀವ ಬಂದಹಾಗಾಯಿತು. ಇಷ್ಟು ಹೊತ್ತು ಈ ಲೋಕದವನೇ ಅಲ್ಲ ಎಂಬುವನಂತೆ ಮನೆ ಬಿಟ್ಟು ನಡೆದು ಬಂದವನಿಗೆ ,ಬಾಯಾರಿಕೆಯ ನೆಪದಲ್ಲಿ ಈ ಲೋಕದ ಪ್ರಜ್ಞೆ ಮರಳಿ ಪಾಪ್ತವಾಯಿತು.

ಗುಡಿಸಲ ಬಾಗಿಲ ಬಳಿ ಹೋಗಿ ಯಾರಾದರೂ ಇದ್ದೀರಾ ಎಂದು ಕೂಗಿ ಕೇಳಬೇಕೆಂದು ಯೋಚಿಸುವಷ್ಟರಲ್ಲಿ ವೃದ್ಧ ಗಂಡು ಜೀವವೊಂದು ಕೈಲಿ ಪುಟ್ಟ ಮಡಿಕೆ ಹಿಡಿದು ಗುಡಿಸಲ ಕತ್ತಲಿಂದ ಬಾಗಿಲೆಡೆ ನಡೆದು ಬಂತು.' ತಗೋ ನೀರು.ಹೊಳೆ ನೀರು ಕೆಸರು.ಕುಡಿಯೋದು ಹ್ಯಾಗೆ ಅಲ್ವಾ ? ನಿನಗಾಗೇ  ಕಾಯ್ತಾ ಇದ್ದೆ .ನೀ  ಬರೋದು  ಕೊಂಚ ತಡವಾಗಿ ಹೋಯಿತು. ಆದರೂ ಕಾಲ ಕೈ ಮೀರಿಲ್ಲ' ಎಂದು ಬೊಚ್ಚು ಬಾಯಿಯಲ್ಲಿ ಇಲ್ಲದ ಹಲ್ಲುಗಳು ಕಾಣುವಂತೆ ಬಾಯಿ ತುಂಬಾ ನಕ್ಕಿತು.



( ಮುಂದೆ ಇನ್ನೂ  ಇದ್ದರೂ ಇರಬಹುದು :) :) :) )

1 comment:

ಶಾಂತಲಾ ಭಂಡಿ (ಸನ್ನಿಧಿ) said...

ಅಣ್ಣಯ್ಯ ...
ಚಂದ ಬರದ್ದೆ,ಬರೀತಿರು,ಓದ್ತಿರ್ತೀನಿ.

ವಂದನೆಗಳೊಂದಿಗೆ,
ಪ್ರೀತಿಯಿಂದ ,
ಶಾಂತಲಾ ಭಂಡಿ(ಸನ್ನಿಧಿ)