ನೆತ್ತಿ ಮೇಲೆ ಸೂರ್ಯ ಹತ್ತಿ ಕುಳಿತು
ಬಿಟ್ಟೂ ಬಿಡದೆ ಸುಡುವ
ಶುದ್ಧ ಬೇಸಿಗೆಯ ನಡು ಮಧ್ಯಾಹ್ನ
ಹಾಗೆ ಸುಮ್ಮನೆ ಸೋನೆ ಮಳೆ ಸುರಿಯಬಹುದು
ತಂಗಾಳಿ ತೇಲಿ ಬರಬಹುದು
ಕೆಟ್ಟ ಚಳಿಗಾಲದ ಹೊತ್ತಿನಲಿ
ಮರಗಟ್ಟಿ ಹೋದ ಥಂಡಿ ರಾತ್ರಿಯಲಿ
ಆಸೆಯ ಬೆಂಕಿ ಕಿಡಿ ಆಳದಲ್ಲೆಲ್ಲೋ
ಹುಟ್ಟಿ ಮೈ ಬಿಸಿಯಾಗಬಹುದು
ಏನು ಬೇಕಾದರೂ ಆಗಬಹುದು
ತರ್ಕಕ್ಕೆ ಇದು ಕಾಲವಲ್ಲ
ಹೇಳಿ ಕೇಳಿ ಇದು
ಹುಚ್ಚು ಹರೆಯದ ಹವಾಮಾನ
ತಪ್ಪುಒಪ್ಪಿನ ಚಿಂತೆಯಿಲ್ಲ
ಪಾಪ ಧರ್ಮದ ಪ್ರಶ್ನೆಯಿಲ್ಲ
ಸಂವಿಧಾನವೇ ಇರದ
ಸಂಯಮ ಕಳೆದುಕೊಂಡ ಸರ್ವಾಧಿಕಾರಿ ಮನಸ್ಸು
ಬೇಲಿ ಜಿಗಿದು ಕದ್ದು ಮೇಯುವ ಹಂಬಲಕೆ
ಯಾವ ಬೇಲಿಯೂ ಇಲ್ಲ
ಕಣ್ಣು ಮುಚ್ಚಿ ಹಾಲು ಕುಡಿವ
ಅಲೌಕಿಕ ಸಂತೋಷಕ್ಕೆ ಅಂತ್ಯವೇ ಇಲ್ಲ
ಏರು ಯೌವ್ವನದ ಹಾದಿಯಲಿ
ಮೋಹಕ್ಕೆ ಪ್ರೇಮಕ್ಕೆ ದಾಹಕ್ಕೆ ಸಿಕ್ಕಿ
ಇಳಿಜಾರಿನಲ್ಲಿ ಇಳಿದು ಹೋಗಿ
ತಪ್ಪಿ ಇಟ್ಟ ಹೆಜ್ಜೆಗಳು ಎಷ್ಟೋ
ಜಾರಿಬಿದ್ದ ಕ್ಷಣದಲ್ಲಿ ಸಿಕ್ಕ
ಮಧುರ ನೋವುಗಳು ಎಷ್ಟೋ
ಲೆಕ್ಕ ಇಟ್ಟವರಿಲ್ಲ
ಕೃಷ್ಣನ ಲೆಕ್ಕವಿದು
ಯಾವ ಸೂತ್ರವಿಲ್ಲ ನಿಯಮವಿಲ್ಲ
ಜಾಸ್ತಿ ಹೇಳಿ ಸುಖವಿಲ್ಲ
ಹೇಳಿ ಕೇಳಿ ಇದು
ಹುಚ್ಚು ಹರೆಯದ ಲೆಕ್ಕಾಚಾರ ..
4 comments:
yogaraj bhatra haaDinangide...
chennaagide...
Idu Pure Poli kavithe ne... doubt ee illa..:)
Idu Pure Poli kavithe ne... doubt ee illa..:)
ಒಂದೇ ಓದಿನಲ್ಲಿ,ಕವಿಯ ಗಂಟೆಗಟ್ಟಲೆ ರಸಾಸ್ವಾದ ಕಥೆಯನ್ನು ತಿಳಿಸಿ ಬಿಟ್ಟ ಕವನ :)
Post a Comment