ಪೂರ್ಣಚಂದ್ರ ತೇಜಸ್ವಿ ನೆನಪಾದಾಗಲೆಲ್ಲ ನಾನು ನನ್ನ ಹೈ ಸ್ಕೊಲ್ ದಿನಗಳತ್ತ ಮುಖ ಮಾಡಿ ನಿಲ್ಲುತ್ತೇನೆ. ಎಂಟನೆ ತರಗತಿಯಿಂದ ಹತ್ತರ ತನಕ ಪೂರ್ತಿ ಮೂರು ವರುಷ ತಮ್ಮ ಬರಹದ ಜೊತೆಗೆ ನನ್ನನ್ನು ಪ್ರಭಾವಿಸಿದ್ದು,ನನ್ನ ಆಲೋಚನೆಗಳ ಹಿನ್ನೆಲೆಯಲ್ಲಿ ನಿಂತು ಮುನ್ನಡೆಸಿದ್ದು ತೇಜಸ್ವಿ.ನಂತರದ ಸ್ಥಾನ ಪತ್ರದ ಮೂಲಕ ನನ್ನ ಜೊತೆ ಸಂಪರ್ಕದಲ್ಲಿದ್ದು ನನ್ನ ಆ ವಯಸ್ಸಿನ ಕುತೂಹಲಕ್ಕೆ, ಅಚ್ಚರಿಗೆ ನೀರೆರೆದು ಪೋಷಿಸಿದ್ದ ಜಿ.ಟಿ.ನಾರಾಯಣ ರಾವ್ ಅವರು. ಇವರಿಬ್ಬರನ್ನು ಬಿಟ್ಟರೆ ಹೈ ಸ್ಕೂಲ್ ದಿನಗಳೆಂದರೆ ನೆನಪಾಗುವುದು ಶ್ರೀ ಸತ್ಯ ಸಾಯಿ ಬಾಬಾ.ನಾನು ಓದಿದ್ದು ಅವರದ್ದೇ ಆದ ತುಂಬಾ ಪ್ರತಿಷ್ಠಿತವಾದ ದಕ್ಷಿಣ ಕನ್ನಡದ ಅಳಿಕೆಯ ಶಾಲೆಯಲ್ಲಿ.
ಅಲ್ಲಿ ಬೆಳಿಗ್ಗೆ ನಾಲ್ಕೂವರೆಗೆ ದೊಡ್ಡ ಧ್ವನಿಯ ಮೈಕಿನಲ್ಲಿ ಸಾಯಿ ಸುಪ್ರಭಾತ ಹಾಸ್ಟೆಲ್ ನಲ್ಲಿ ಕೇಳುತ್ತಿದ್ದಂತೆ ಅಲ್ಲಿನ ದಿನಗಳು ಶುರುವಾಗುತ್ತಿತ್ತು.ನಂತರದ ಹದಿನೈದು ನಿಮಿಷ ಹಲ್ಲುಜ್ಜಿ ಮುಖ ತೊಳೆಯಲಿಕ್ಕೆ ಮೀಸಲು.ಆನಂತರ ಯೋಗಾಸನ, ಹಾಗು ಬೆಳಗ್ಗಿನ ಪ್ರಾರ್ಥನೆ ಆರು ಘಂಟೆಯ ತನಕ. ಆಮೇಲೆ ಆರರಿಂದ ಎಂಟರ ತನಕ ಸ್ಟಡಿಗೆಂದು ಮೀಸಲಾದ ‘ಸ್ಟಡಿ ಅವರ್ಸ್’. ಆ ಸ್ಟಡಿ ಅವರ್ಸ್ ನಡುವೆ ಇಪ್ಪತ್ತು ನಿಮಿಷ ಸ್ನಾನಕ್ಕೆಂದು ಬಿಡುತ್ತಿದ್ದರು. ನಂತರ ತಿಂಡಿ.ಆಮೇಲೆ ರೂಂ ಕ್ಲೀನಿಂಗು.ನಂತರ ಮತ್ತೆ ಅರ್ಧ ಘಂಟೆ ಪ್ರಾರ್ಥನೆ ಹಾಗು ಭಜನೆ.ನಂತರ ರೆಗ್ಯುಲರ್ ಕ್ಲಾಸ್ಸಸ್ಸು.ನಡುವೆ ಒಂದು ಊಟವೆಂಬ ವಿರಾಮ. ಮತ್ತೆ ಕ್ಲಾಸ್ಸಸ್ಸು. ಸಂಜೆ ನಾಲ್ಕೂವರೆಗೆ ಒಂದು ಸಣ್ಣ ತಿಂಡಿ.ನಂತರ ಆರರ ತನಕ ಆಟದ ಸಮಯ. ಆಟ ಮುಗಿಸಿ ಬಂದರೆ ಮತ್ತೆ ಮುಕ್ಕಾಲು ಘಂಟೆಯ ಸಂಜೆಯ ಭಜನೆ ಹಾಗು ಪ್ರಾರ್ಥನೆ, ನಂತರ ಮತ್ತೆ ಸ್ಟಡಿ ಅವರ್ಸ್.ನಡುವೆ ನಿಗದಿತ ಸಮಯಕ್ಕೆ ಒಂದು ಊಟ.ಮತ್ತೆ ಸ್ಟಡಿ ಅವರ್ಸ್ ರಾತ್ರಿ ಹತ್ತೂವರೆಗೆ ಮಲಗುವ ತನಕ.
ಹೀಗೆ ಅಲ್ಲಿ ಎಲ್ಲವೂ ಕ್ರಮಬದ್ಧ.ತುಂಬಾ ಶಿಸ್ತು. ಈವತ್ತು ಹತ್ತು ಘಂಟೆ ಹತ್ತು ನಿಮಿಷಕ್ಕೆ ಎಲ್ಲಿದ್ದೇನೋ ನಾಳೆ ಕೂಡ ಹತ್ತು ಘಂಟೆ ಹತ್ತು ನಿಮಿಷಕ್ಕೆ ಅಲ್ಲೇ ಇರುತ್ತಿದ್ದೆ.ಈವತ್ತು ನಿನ್ನೆಯಂತೆ.ನಾಳೆ ಈವತ್ತಿನಂತೆ.ಅಲ್ಲಿ ಇದ್ದದ್ದು ಮೂರು ವರುಷವಾದರೂ ಪ್ರತಿಯೊಂದು ದಿನವೂ ಒಂದೇ ತೆರನಾಗಿತ್ತು..ಅಲ್ಲಿ ಗಟ್ಟಿಯಾಗಿ ನಗುವಂತಿರಲಿಲ್ಲ.ದೊಡ್ಡ ಧ್ವನಿಯಲ್ಲಿ ಮಾತಾಡುವಂತಿರಲಿಲ್ಲ. ವಿಪರೀತ ಶಿಕ್ಷೆ. ದಿನದ ನಮ್ಮ ಎಲ್ಲ ಚಟುವಟಿಕೆಯ ಮೇಲೂ ಕಣ್ಗಾವಲು. ಒಂದು ಬಗೆಯ ಭಯದಲ್ಲೇ ನನ್ನ ಆ ದಿನಗಳು ಕಳೆದು ಹೋದವು.ಅಲ್ಲಿನ ಶಿಸ್ತು ನಿಜಕ್ಕೂ ಮಾದರಿ ಹಾಗು ಆದರ್ಶಪ್ರಾಯ. ಆದರೆ ನನ್ನ ಆ ವಯಸ್ಸಿಗೆ ಅವೆಲ್ಲ ಅತಿರೇಕದಂತೆ ಕಾಣುತ್ತಿದ್ದವು. ನನ್ನ ಆ ವಯಸ್ಸಿಗೆ ಹೇಗಿರಬೇಕಿತ್ತೋ ಹಾಗೆ ಇರಲು ಆಗಲೇ ಇಲ್ಲ. ನಾನು ತುಂಬಾ ಕಳೆದುಕೊಂಡೆ.
ಇಷ್ಟೆಲ್ಲಾ ಕಳೆದುಕೊಂಡರೂ ಕೆಲವಷ್ಟು ವಿಷಯಕ್ಕೆ ನಾನು ಅಳಿಕೆಯ ಶಾಲೆಗೆ ಋಣಿಯಾಗಿರಲೇಬೇಕು. ಎಲ್ಲಿ ಏನನ್ನು ಕಳೆದುಕೊಂಡಿದ್ದೆವೋ ಅದನ್ನು ಅಲ್ಲೇ ಪಡೆಯುವುದು, ಅದು ಸಾಧ್ಯವಾಗದಿದ್ದರೆ ಅದರ ಬದಲಿಗೆ ಇನ್ನೇನೋ ಹುಡುಕಿಕೊಂಡು ಕಷ್ಟದಲ್ಲೇ ಸುಖವನ್ನ ಕಾಣುವುದು ಅನಿವಾರ್ಯ ಕರ್ಮ. ಅದು ಎಲ್ಲ ಆಯ್ಕೆಯ ಅವಕಾಶಗಳ ಬಾಗಿಲು ಮುಚ್ಚಿದಾಗ ಉಳಿಯುವ ಕೊನೆಯ ಆಯ್ಕೆ. ನನ್ನ ಕಷ್ಟ ಏನೇ ಇರಲಿ. ಹೊರ ಜಗತ್ತಿನಲ್ಲಿ ಅಲ್ಲಿ ಓದಿದ್ದೇನೆ ಎಂಬ ಕಾರಣಕ್ಕೆ ನನಗೆ ಒಂದಷ್ಟು ಗೌರವ ಸಿಕ್ಕಿದೆ. ನಾನು ಅವನ್ನೆಲ್ಲ ನನಗೆ ಬೇಡದಿದ್ದರೂ ಮನೆಯವರ ಮುಖ ನೋಡಿಕೊಂಡು ತಣ್ಣಗೆ ಒಂದು ಸಣ್ಣ ಜೀವವಿಲ್ಲದ ಮಂದಹಾಸದೊಡನೆ ಇಲ್ಲಿತನಕವೂ ಸ್ವೀಕರಿಸುತ್ತಲೇ ಬಂದಿದ್ದೇನೆ. ಈ ಗೌರವವೆಂಬ ಬೇಡದ ಖುಷಿಯನ್ನ, ಋಣದ ಭಾರವನ್ನ ಬದಿಗಿಟ್ಟರೆ ಅಲ್ಲಿ ಇನ್ನೊಂದಿಷ್ಟು ಜೀವನದ ಕೊನೆಯ ಕ್ಷಣದ ತನಕ ನೆನಪಿಗೆ ತಂದುಕೊಂಡು ಖುಷಿ ಪಡಬಹುದಾದ ಸಂಗತಿಗಳಿವೆ.
ಆ ಖುಷಿಯ ಸರಣಿಯ ಸರತಿಯಲ್ಲಿ ಮೊದಲಿಗೆ ಜಿಮ್ ಕಾರ್ಬೆಟ್ ನ ‘ದಿ ಮ್ಯಾನ್ ಈಟರ್ ಆಫ್ ರುದ್ರಪ್ರಯಾಗ’ ಸಿಗುತ್ತೆ.ನಂತರ ‘ದಿ ಮ್ಯಾನ್ ಈಟರ್ ಆಫ್ ಖೂಮಾಯೂನ್’ . ಕಾರ್ಬೆಟ್ ಬರಹದ ಅನುವಾದವನ್ನ ಕನ್ನಡದಲ್ಲಿ ಮಾಡಿದ್ದಾರೆ ಎಂಬ ಕಾರಣಕ್ಕೆ ತೇಜಸ್ವಿ ಹತ್ತಿರವಾಗುತ್ತಾರೆ. ಮುಂದೆ ತಿರುಗಿ ಇಂಗ್ಲಿಷ್ ಪುಸ್ತಕವನ್ನ ಓದಲು ಮನಸ್ಸು ಬಾರದಷ್ಟು ನನ್ನನ್ನು ತೇಜಸ್ವಿ ಆವರಿಸಿಕೊಳ್ಳುತ್ತಾರೆ. ತೇಜಸ್ವಿ ಅಪ್ಪ ಬರೆದದ್ದು ಎಂಬ ಕಾರಣಕ್ಕೆ ಕುವೆಂಪು ಸಮಗ್ರ ಸಾಹಿತ್ಯದ ಎರಡು ದೈತ್ಯ ಸಂಪುಟಗಳು ಓದಿಸಿಕೊಳ್ಳುತ್ತೆ. ಕುವೆಂಪು ಜೊತೆ ಉಳಿದ ಜ್ಞಾನ ಪೀಠ ಪಡೆದವರನ್ನ ಹೋಲಿಕೆ ಮಾಡಿ ನೋಡುವ ಕುತೂಹಲದ ಕಾರಣಕ್ಕೆ ಬೇಂದ್ರೆ ಸಾಹಿತ್ಯ, ಮಾಸ್ತಿಯವರ ಚಿಕವೀರ ರಾಜೇಂದ್ರ ಹಾಗು ಒಂದಿಷ್ಟು ಸಣ್ಣ ಕಥೆಗಳು, ಕಾರಂತರ ಸಮಗ್ರ ಸಾಹಿತ್ಯದ ಒಂದಿಷ್ಟು ಸಂಪುಟಗಳು ಓದಿಸಿ ಕೊಳ್ಳುತ್ತೆ. ಇವರೆಲ್ಲ ಒಂದು ಸುತ್ತು ಆಗಿ ಹೋಗಿ ರಾಜರತ್ನಂ ‘ರತ್ನನ್ ಪದಗಳ ಜೊತೆ ಎದುರಾಗುತ್ತಾರೆ. ಬೀ.ಚಿ ಸಿಗುತ್ತಾರೆ.ಡಿ.ವಿ.ಜಿ. ಸಿಗುತ್ತಾರೆ.ಅವರ ಮಗ ಬಿ.ಜಿ.ಎಲ್ .ಸ್ವಾಮೀ ಸಿಗುತ್ತಾರೆ. ನಡುವೆ ಎಲ್ಲೋ ಆ ಶಾಲೆಯ ಅದ್ಭುತವಾದ ಲೈಬ್ರರಿಯ ಪುಸ್ತಕಗಳ ಸಾಲಿನಲ್ಲಿ ಜಿ.ಟಿ.ನಾರಾಯಣ ರಾವ್ ಅವರ ‘ ಐನ್ ಸ್ಟೇಯ್ನ್ ‘ ಪುಸ್ತಕ ಸಿಗುತ್ತೆ. ಅವರ ಜೊತೆ ಒಂದಿಷ್ಟು ಕಾಲ ಪತ್ರ ವ್ಯವಹಾರದ ಭಾಗ್ಯ ನನ್ನದಾಗುತ್ತೆ. ಅವರು ‘ಮಗು ‘ ಎಂದು ಸಂಬೋಧಿಸಿ ಪತ್ರವನ್ನ ಶುರುಮಾಡಿ ,ನನ್ನ ಎಲ್ಲ ಪ್ರಶ್ನೆಗಳಿಗೆ ಕೊಂಚವೂ ಅಸಡ್ಡೆ ತೋರದೆ ಉತ್ತರಿಸುತ್ತಾರೆ. ನಾನು ಖುಷಿಯಾಗುತ್ತೇನೆ. ಜಿ.ಟಿ.ಎನ್ ಅವರ ವಿಜ್ಞಾನದ ದಾರಿಯ ಜಾಡಿನಲ್ಲಿ ಮುಂದೆ ನಾಗೇಶ್ ಹೆಗ್ಡೆ ಸಿಗುತ್ತಾರೆ. ಆಗ ಓದಿದ್ದರಲ್ಲಿ ನನಗೆ ಅರ್ಥವಾದದ್ದೆಷ್ಟು ಎಂಬುದು ನನಗೆ ಗೊತ್ತಿಲ್ಲ. ಆದರೆ ಅಷ್ಟು ಹೊತ್ತಿಗೆ ಕನ್ನಡವೆಂಬ ಅಮಲು ತಲೆಗೇರಿ ನಾನು ಒಂದು ಬಗೆಯ ಗುಂಗಿಗೆ ಈಡಾಗಿ ಕವನ ಬರೆಯಲು ಶುರುವಿಟ್ಟುಕೊಂಡು ಆರೋಗ್ಯಕರ ಅರೆ ಹುಚ್ಚನಾಗಿದ್ದೆ.. ಆ ಹುಚ್ಚು ಈಗ ಪರಿಹಾರವೇ ಕಾಣದಷ್ಟು ಮಟ್ಟಕ್ಕೆ ಆವರಿಸಿ ಇಹವ ಮರೆಸುವ ನಶೆಯಾಗಿ ಪೂರ್ಣ ಹುಚ್ಚು ಪ್ರಾಪ್ತಿಯಾಗಿದೆ. .ಇನ್ನೇನು ಬೇಕು?
(ಇನ್ನೂ ತುಂಬಾ ಇದೆ.ಇದು ಪೀಠಿಕೆಯಷ್ಟೇ )
3 comments:
All the best friend
Aadru aa tarahada jeevana shistannu kalisutte embudu nanna bhavane..
hmmmm.... hingella iddu kathe.. bega madve aagi hendti kai adge undu, sukhavaagiru maraya.. hostel vaasa, room vaasa ella mugili bega hel wish madte..n yavaglu huchcha aage iru..
Post a Comment