ಪತ್ರ ೧ ....
ನಿನ್ನನ್ನು ಹೇಗೆ ಸಂಭೋದಿಸಲಿ ಎಂದು ತಿಳಿಯುತ್ತಿಲ್ಲ. ಆ ಕಾರಣಕ್ಕೆ ಕ್ಷಮೆ ಇದ್ದರೆ ಇರಲಿ. ಇರದಿದ್ದರೂ ಸರಿಯೇ.
ಈ ಪತ್ರವನ್ನ ನಿನಗೆ ಯಾಕಾಗಿ ಬರೆಯಬೇಕು? ಈ ಪ್ರಶ್ನೆ ಸಾವಿರ ಬಾರಿ ಕಾಡಿದೆ.ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ. ಬರೆಯಲೇ ಬೇಕೆಂದು ಅನ್ನಿಸಿದ್ದೇ ಉತ್ತರ ಎಂದುಕೊಂಡೆ. ನನ್ನ ಪತ್ರಕ್ಕೆ ಮಾರೋಲೆಯ ಹಂಗಿಲ್ಲ.ಬರೆಯುವುದಷ್ಟೇ ನನ್ನ ಕರ್ಮ. ಉಳಿದದ್ದು ನಿನ್ನ ಕರ್ಮ. ಗಮ್ಯ ಗೊತ್ತಿದ್ದರೂ ವಿಳಾಸವೇ ಇರದ ಪತ್ರವಿದು.ನೀನು ನೆಪ ಮಾತ್ರ.ಯಾರು ಬೇಕಾದರೂ ಓದಬಹುದು. ಅವರದಾಗಿಸಿಕೊಳ್ಳಬಹುದು. ಮೊದಲಿಗೆ ಅವಳು ನೆನಪಾದಳು. ಮನೆಯವರು ನೆನಪಾದರು. ನಾನು ನೆನಪಾದೆ. ಗೆಳೆಯರು .ಬಂಧುಬಳಗ, ನನ್ನವರು,ನನ್ನವರೆಂದು ಕೊಂಡವರು,ಅವರು ಇವರು ,ಏನೂ ಆಗದವರು .ಎಲ್ಲರೂ ನೆನಪಾದರು. ಕೊನೆಗೆ ‘ಜಗವೆಂಬೋ’ ನೀನು ನೆನಪಾದೆ. ಎಲ್ಲರನ್ನೂ ಒಳಗೊಳ್ಳುವ ಮಾಯೆ ನೀನು ನನ್ನನ್ನೂ ಸೇರಿಸಿ. ಆ ಕಾರಣಕ್ಕೆ ನಿನಗೇ ಈ ಪತ್ರವನ್ನ ಬರೆಯುತ್ತಿದ್ದೇನೆ. ಒಪ್ಪಿಸಿಕೋ. ಪತ್ರ ನಿನಗೆ ತಲುಪಿದರೆ ಖುಷಿಯಿಲ್ಲ. ತಲುಪುವುದೆಂಬ ನಿರೀಕ್ಷೆ ಮೊದಲೇ ಇಲ್ಲ. ಅಕಸ್ಮಾತ್ ಪತ್ರ ನಿನ್ನನ್ನು ತಲುಪಿ ನೀನು ಮಾರುತ್ತರ ಕೊಡುವ ದೊಡ್ಡ ಮನಸ್ಸು ಮಾಡಿದರೆ ನಿನ್ನ ಉತ್ತರ ಏನಿರಬಹುದೆಂಬ ‘ಕುತೂಹಲ ‘ಮಾತ್ರ ಇದ್ದೇ ಇದೆ. ಇಷ್ಟು ಪತ್ರಕ್ಕೆ ಪೀಠಿಕೆಯಾಯಿತು. ಈಗ ವಿಷಯಕ್ಕೆ ಬರುತ್ತೇನೆ.
ನಿನಗೆ ನಿನ್ನದೇ ಆದ ಸ್ವಂತ ಅಸ್ತಿತ್ವವೇ ಇಲ್ಲ.ನೀನು ಕೂಡ ನನ್ನಂತೆ,ನಮ್ಮೆಲ್ಲರಂತೆ.ನಮ್ಮೆಲ್ಲರ ಒಟ್ಟು ಮೊತ್ತ ನೀನು.ನಾವು ಬದಲಾದರೆ ನೀನೂ ಬದಲು.ನಾವು ನಿಂತ ನೀರಾದ ಘಳಿಗೆ ನೀನು ಕೆಸರು. ಆದರೆ ಎಷ್ಟು ಮಜಾ ನೋಡು.ನಾವು ಬದಲಾಗಲು ಸಿದ್ಧರೇ ಇಲ್ಲ. “ ಜಗತ್ತೇ ಹಿಂಗೆ,ಜಗತ್ತಿನಂತೆ ನಾವು.ವಾಸ್ತವ ,ವಾಸ್ತವ ಮುಖ್ಯ “ ಎಂದು ನಿನ್ನ ಕಡೆ ತೋರಿಸಿ ಜಾರಿ ಕೊಂಡು ಬಿಡುತ್ತೇವೆ.ನಾವ್ಯಾರೂ ನಾವಾಗಿ ಬದುಕುತ್ತಿಲ್ಲ. ಈಗ ಏನಾಗಿದೆ ನೋಡು. ನಾವೆಲ್ಲರೂ ಸ್ವಂತಿಕೆಯಿಲ್ಲದೆ ಬದುಕುತ್ತಿರುವ ಹೊತ್ತಿಗೆ ನೀನು ನಕಲಿಯಾಗಿ ಕಾಣುತ್ತಿದ್ದೀಯೆ. ಪಾಪ ನೀನು.ನಿನ್ನದಲ್ಲದ ತಪ್ಪಿಗೆ ನಕಲಿಯೆಂಬ ಹಣೆಪಟ್ಟಿ.ಅಸಲಿಗೆ ನೀನಾದರೂ ಏನು ಮಾಡಲು ಸಾಧ್ಯ ? ನಿನಗೆ ನಿನ್ನದೇ ಆದ ಸ್ವಂತ ಅಸ್ತಿತ್ವವೇ ಇಲ್ಲ ಎಂದಾದ ಮೇಲೆ ‘ ನಾನು ನಕಲಿಯಲ್ಲ ಅಸಲಿ ‘ ಎಂದು ಕೂಗಿ ಹೇಳಿ ನಿನ್ನ ಸ್ವಂತಿಕೆಯನ್ನ ಸಾಬೀತು ಪಡಿಸುವ ಅವಕಾಶವಾದರೂ ಎಲ್ಲಿ ? ಈ ವಿಷಯದಲ್ಲಿ ನೀನು ಅಸಹಾಯಕ. ಮೂಕ ಪ್ರೇಕ್ಷಕ. ಆ ಕಾರಣಕ್ಕೆ ನಿನ್ನ ಬಗೆಗೆ ನನ್ನಲ್ಲೊಂದು ಅನುಕಂಪವಿದೆ. ನೀನೇ ಪುಣ್ಯವಂತ. ಕೊನೆಪಕ್ಷ ನಾನಾದರೂ ಸಿಕ್ಕಿದ್ದೇನೆ ಅನುಕಂಪ ತೋರಿಸಲು. ನಮ್ಮ ಪಾಡು ನಾಯಿ ಪಾಡು. ನಮಗೆ ನಾವೇ ಸಾಂತ್ವನ .ನಮಗೆ ನಾವೇ ಎಲ್ಲ. ಸೋಲು ಇಲ್ಲಿ ಯಾರಿಗೂ ಬೇಕಿಲ್ಲ. ಮುಂದಿನ ಪೀಳಿಗೆಯ ಮಗು ಹುಟ್ಟುತ್ತಲೇ ಎದ್ದು ಓಡಲು ಶುರುವಿಟ್ಟುಕೊಂಡರೆ ಅಚ್ಚರಿಯಿಲ್ಲ. ಸಂಘರ್ಷ ಬದುಕಿನ ಭಾಗ ನಿಜ. ಆದರೆ ಈಗ ಸಂಘರ್ಷವೇ ಬದುಕು ಎಂಬಲ್ಲಿ ಬಂದು ನಿಂತಿದ್ದೇವೆ. ಕಾಯುವ ತಾಳ್ಮೆ ಇಲ್ಲ. ಇಲ್ಲಿ ಎಲ್ಲವೂ ಇನ್ಸ್ಟಂಟ್. ನಮ್ಮ ನೆರಳನ್ನೂ ನೆಚ್ಚಿಕೊಳ್ಳಲಾರದಷ್ಟು ಅಪನಂಬಿಕೆಯಲ್ಲಿ ನಾವು ಬದುಕುತ್ತಿದ್ದೇವೆ. ನಾವು ತುಂಬಾ ಪ್ರಾಕ್ಟಿಕಲ್ಲು. ನಮ್ಮ ಭಾವಕೋಶದಲ್ಲಿ ‘ನಂಬಿಕೆ ‘ಎನ್ನುವುದಕ್ಕೆ ‘ಆತ್ಮಹತ್ಯೆ ‘ಎಂಬ ಹೊಸ ಅರ್ಥವಿದೆ. ’ನಂಬಿ ಕೆಟ್ಟವರಿಲ್ಲ’ ಎಂಬ ದಾಸವಾಣಿಯಲ್ಲಿ ದಾಸರ ಆಣೆ ನಂಬಿಕೆ ಉಳಿದಿಲ್ಲ.
ಎಲ್ಲಾದರೂ ಭೋಧಿವೃಕ್ಷವಿದ್ದರೆ ತೋರಿಸು. ಬುದ್ಧನಾಗುವ ಹಂಬಲವಿಲ್ಲ. ಅಪ್ಪ ನೆಟ್ಟ ಆಲದ ಮರದಡಿ ನೇಣು ಹಾಕಿಕೊಳ್ಳುವುದಕ್ಕಿಂತ ಭೋಧಿವೃಕ್ಷದ ನೆರಳಿಗೆ ಹೋಗಿ ಕೊಂಚ ಹೊತ್ತು ವಿರಮಿಸಿ ಎದ್ದು ಬರುವುದು ವಾಸಿ. ಕೊನೆಗೆ ನೇಣು ಹಾಕಿಕೊಳ್ಳುವ ಪ್ರಸಂಗ ಎದುರಾದರೂ ಅಪ್ಪ ನೆಟ್ಟ ಆಲದ ಮರಕ್ಕಿಂತ ‘ಭೋಧಿ ವೃಕ್ಷವೇ ಮೇಲು. ಕಡೆಪಕ್ಷ ಆತ್ಮಹತ್ಯೆಯಲ್ಲಾದರೂ ಸ್ವಂತಿಕೆ ಮೆರೆದೆ ಎಂಬ ತೃಪ್ತಿ ಅಲ್ಲಿ ಸಿಗುತ್ತೆ .
ಈವತ್ತಿಗೆ ಇಷ್ಟು ಸಾಕು. ನನ್ನ ಮಾತುಗಳಿಗೆ ಕಿವಿಯಾಗಲು ನಮ್ಮಲ್ಲಿ ಯಾರಿಗೂ ಪುರುಸೊತ್ತಿಲ್ಲ. ಈ ಪತ್ರ ನಿನಗೆ ಸಿಕ್ಕು ,ನೀನು ಪುರುಸೊತ್ತು ಮಾಡಿಕೊಂಡು ಓದಿರುತ್ತೀಯ ಎನ್ನುವ ನಂಬಿಕೆ ನನ್ನದು. ಆ ನಂಬಿಕೆಯಲ್ಲಿ ಔಪಚಾರಿಕವಾಗಿ ಒಂದು ಧನ್ಯವಾದ. ಮತ್ತೆ ಸಿಗುತ್ತೇನೆ ಮುಂದಿನ ಪತ್ರದೊಂದಿಗೆ.
ಇಂತಿ ನಿನ್ನವನೇ ಆದ
ನೀನೇ ಆದ
ನಾನು
( ನಾನು ‘ಸಂಭೋದಿಸಲಿ’ ಎಂದು ಬರೆದಿದ್ದೇನೆ . ನಾನು ಬರೆದದ್ದು ಸರಿಯೋ ತಪ್ಪೋ ಎಂಬ ಗೊಂದಲ ನನಗಿದೆ. ದಯವಿಟ್ಟು ತಪ್ಪಿದ್ದರೆ ಹೇಳಿ ಮತ್ತು ಸರಿಯಾದ ಕಾಗುಣಿತ ನನಗೆ ತಿಳಿಸಿ.)
12 comments:
nimage anu pratikrisa
bekendu tiliutila
modalu
ನಾನು ನಾನಾಗಬೇಕು ...!
'ಸಂಬೋಧಿಸಲಿ'ಎನ್ನುವ ಪದ ಸರಿಯಾಗಿದೆ.ಜಗತ್ತು ಹೊರಗಿದೆ ಎನ್ನುವುದು ಸಾಮಾನ್ಯ ಅನುಭವ.ನಾನೇ ಜಗತ್ತು ಎನ್ನುವುದು ಅನುಭಾವ.ಜಗತ್ತಿನ ಗೊಂದಲಗಳೆಲ್ಲಾ ನನ್ನಲ್ಲೂ ಇವೆ.ಹಾಗಾಗಿ ನಾನೇ ಜಗತ್ತು.ದೃಷ್ಟಿಯಂತೆ ಸೃಷ್ಟಿ!ಅದಕ್ಕೇ ನಾನು ಬದಲಾದಂತೆ ನನ್ನ ಜಗತ್ತೂ ಬದಲಾಗುತ್ತದೆ ಎಂದು ತಿಳಿದವರು ಹೇಳುವುದು.ಸಣ್ಣ ಉದಾಹರಣೆ;ಬೆಳೆಗ್ಗೆ ಎದ್ದು ನೀವು ಒಳ್ಳೆಯ ಮೂಡಿನಲ್ಲಿದ್ದರೆ ಅಂದಿನ ಕೆಲಸಗಳೆಲ್ಲಾ ಸುಗಮವಾಗುತ್ತವೆ.ಅದೇ ,ಮನಸ್ಸು ಕಸಿವಿಸಿಗೊಂಡಿದ್ದರೆ ಕೆಲಸಗಳು ಕೆಡುತ್ತವೆ.ನಾವು ಒಳಗೆ ಹೇಗಿದ್ದೇವೋ ಹಾಗೇ ನಮ್ಮ ಜಗತ್ತೂ ಅನಾವರಣಗೊಳ್ಳುತ್ತಾ ಹೋಗುತ್ತದೆ.ಇದು ನನ್ನ ಅನಿಸಿಕೆ.ನಮಸ್ಕಾರ.
chennaagide...
thumba chennagide...
illi ella instant, naavu thumba practical, nija, naavu swanthikeyanna kaledukolluttiddeve. thilididdaru enoo maadallagada sthithiyalliddeve...
@ ಕನ್ನಡ ಬ್ಲಾಗ್ ಲಿಸ್ಟ್
ಧನ್ಯವಾದ.ತಮ್ಮ ಹೆಸರು ಹಾಗು ಮೂಲ ಸ್ವಲ್ಪ ಹೇಳಿ. ನಿಮ್ಮ ಜಾತಕ ನೋಡದೆ.ಏನೂ ಮಾಹಿತಿ ಸಿಕ್ಕಿಲ್ಲ :)
@ ಡಾ.ಕೃಷ್ಣಮೂರ್ತಿ ಸರ್
ನಿಜ ಸರ್ ನೀವು ಹೇಳಿದ್ದು. ಮತ್ತೆ ನಾನು ಲೇಖನದ ಕೊನೆಯಲ್ಲಿ ಇಟ್ಟ ಪ್ರಶ್ನೆಗೆ ಉತ್ತರ ನೀಡಿದ್ದೀರಿ.
ತುಂಬಾ ತುಂಬ ಧನ್ಯವಾದ ಸರ್ :)
@ ಪ್ರಕಾಶ್ ಹೆಗಡೆ
ಥ್ಯಾಂಕ್ಸ್ ಮೆಚ್ಚಿದ್ದಕ್ಕೆ :)
@ ಕಾವ್ಯ ಸುಗಂಧ
ಧನ್ಯವಾದ ಲೇಖನ ಮೆಚ್ಚಿ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ :)
sundaravaagi barediddeeri..
@ಚುಕ್ಕಿ ಚಿತ್ತಾರ
ಧನ್ಯವಾದ ಚುಕ್ಕಿ ಚಿತ್ತಾರ ಅವರೆ :)
ಪ್ರತಿ ಅಕ್ಷರವೂ ನಿಜ !!!
Post a Comment