Wednesday, November 17, 2010

ಕನ್ನಡ ಮತ್ತು ನಾನು ...ನವೆಂಬರ್ ತಿಂಗಳ ನೆಪದಲ್ಲಿ ಒಂದಿಷ್ಟು

‘ಕನ್ನಡದ ಮತ್ತು ನಾನು’ ಎಂಬ ವಿಷಯದ ಬಗ್ಗೆ ಬರೆಯ ಹೊರಟರೆ ಅದು ನಮ್ಮ ಬಗ್ಗೆ ನಾವೇ ಬರೆದುಕೊಂಡಂತೆ. ಹೇಗೆ ಮಾಡಿದರೂ ಕನ್ನಡವನ್ನ ನಮ್ಮಿಂದ ಪ್ರತ್ಯೇಕಿಸಿ ಚಿತ್ರಿಸಲು ಸಾಧ್ಯವೇ ಇಲ್ಲ. ಕನ್ನಡ ಆತ್ಮಗತ. ಆತ್ಮವನ್ನ ಹೊತ್ತು ಮೆರೆಸುವ ತೇರುಗಳು ನಾವು . ಪ್ರತ್ಯೇಕಿಸಲು ಹೊರಟರೆ ಆತ್ಮ ಮತ್ತು ತೇರು ಎರಡೂ ಅನಾಥ.

ನನ್ನ ಹಿರಿಯರು ಹವ್ಯಕ ಕನ್ನಡ ಮಾತನಾಡುವ ಹವ್ಯಕರು. ಹಾಗಾಗಿ ನಾನು ‘ಹುಟ್ಟು ಕನ್ನಡಿಗ’. ’ಹುಟ್ಟು ಕನ್ನಡಿಗ’ನಾಗಿ ಕೊಂಚ ಅತಿರೇಕದಲ್ಲಿ ಹೇಳಹೊರಟರೆ ಬಹುಶಃ ನಾನು ಅಮ್ಮನ ಹೊಟ್ಟೆಯಲ್ಲಿದ್ದಾಗ ಕಾಲು ಝಾಡಿಸಿದ್ದು ಕನ್ನಡದಲ್ಲಿಯೇ. ಅತಿರೇಕದಿಂದ ಕೊಂಚ ಕೆಳಗೆ ಭಾವುಕತೆಯಲ್ಲಿ ಹೇಳುವುದಾದರೆ ನಾನು ಮೊದಲು ಅತ್ತಿದ್ದು, ನಕ್ಕಿದ್ದು , ನಿದ್ರೆಗೆ ಜಾರಿದ್ದು. ಮೊದ ಮೊದಲು ಕನಸು ಕಂಡಿದ್ದು , ಯಾವುದೋ ದುಃಸ್ವಪ್ನಕ್ಕೆ ಬೆಚ್ಚಿ ಬೆವರಾಗಿದ್ದು, ಹಸಿವಿಗೆ ಈಡಾಗಿದ್ದು , ಹೊಟ್ಟೆ ತುಂಬಿ ತೃಪ್ತಿಯಾಗಿ ತೇಗಿದ್ದು ಹೀಗೆ ಎಲ್ಲವೂ ಕನ್ನಡದಲ್ಲಿಯೇ . ಅತಿರೇಕ ಹಾಗು ಭಾವುಕತೆಯ ಆಚೆ ಕೆಲವಷ್ಟು ಸಂಗತಿಗಳನ್ನು ಸಹಜವಾಗಿ ಹೇಳುತ್ತೇನೆ .ನೀವೂ ಅಷ್ಟೇ ಸಹಜವಾಗಿ ಕೇಳಿಸಿಕೊಳ್ಳಿ. ನಮ್ಮ ಮನೆಯಲ್ಲಿ ಎಲ್ಲರೂ ಸ್ನಾನ ಮಾಡುವುದು ‘ಬಚ್ಚಲ ಮನೆ’ ಯಲ್ಲಿ. ಅಲ್ಲಿ ‘ಮಗ್’ ಬದಲು ಚೊಂಬು ಇರುತ್ತೆ. ನೀರು ಕಾಯಿಸಲಿಕ್ಕೆ ಹಂಡೆ. ಹಂಡೆ ಕೆಳಗೆ ಬೆಂಕಿಯಿರುತ್ತೆ .ಬೆಂಕಿ ಇದ್ದಲ್ಲಿ ಈ ‘ವಾಟರ್ ಹೀಟರ್ ‘ಎಲ್ಲ ಬೇಕಾಗಲ್ಲ. .ಹಾಗಾಗಿ ನೀರು ಹೀಟ್ ಆಗೋಲ್ಲ. ಬೆಂಕಿ ಇದೆಯಲ್ಲ.ನೀರು ಕಾಯುತ್ತೆ. ಬಚ್ಚಲ ಆಚೆ ಹಿತ್ತಿಲಿದೆ.ಅದರಾಚೆ ‘ಪಾಯಿ ಖಾನೆ ‘.

ಹೀಗೆ ‘ಹುಟ್ಟು ಕನ್ನಡಿಗ’ನಾಗಿ ಹುಟ್ಟಿ ಕನ್ನಡವನ್ನೇ ಉಂಡುಟ್ಟು ಬೆಳೆದರೂ ಹುಟ್ಟಿ ತುಂಬ ವರುಷದ ತನಕ ನನ್ನ ಸುತ್ತಲಿದ್ದ ಕನ್ನಡದ ಅಸ್ತಿತ್ವ ನನಗೆ ಕಾಣಲೇ ಇಲ್ಲ. ಅಸಲಿಗೆ ‘ಕನ್ನಡ ‘ಎಂದು ಪ್ರತ್ಯೇಕವಾಗಿ ಯೋಚಿಸುವ .ಚಿಂತಿಸುವ ಪ್ರಸಂಗವೇ ನನಗೆ ಎದುರಾಗಲಿಲ್ಲ. ಏಳನೆ ತರಗತಿ ಮುಗಿಯುವ ತನಕ ಊರಲ್ಲೇ ಇದ್ದೆ ಮನೆಯವರ ಜೊತೆ. ಕೊನೆಗೆ ಎಂಟಕ್ಕೆ ದೂರದ ಕಾಸರಗೋಡಿನ ಸಮೀಪದ ಅಳಿಕೆಗೆ ಮನೆಯವರು ನನ್ನನ್ನು ವಿದ್ಯಾಭ್ಯಾಸದ ಕಾರಣಕ್ಕೆ ಕಳುಹಿಸಿಕೊಟ್ಟರು. ಅಲ್ಲಿದ್ದುದು ಇಂಗ್ಲಿಷ್ ಶಾಲೆ. ಆಗ ನನಗೆ ಕನ್ನಡದ ಬಗ್ಗೆ ಯೋಚಿಸುವ .ಚಿಂತಿಸುವ ಪ್ರಸಂಗ ಎದುರಾಯಿತು. ಹಾಗೆ ಅನಿವಾರ್ಯವಾಗಿ ‘ಹುಟ್ಟು ಕನ್ನಡಿಗನ ‘ ಒಳಗೆ ಮೊದಲ ಬಾರಿಗೆ ಕನ್ನಡಕ್ಕಾಗಿ ಮಿಡಿಯುವ ‘ಕನ್ನಡದ ಕಟ್ಟಾಳು ‘ ಹುಟ್ಟಿಕೊಂಡ.

‘ ಇಂಗ್ಲಿಷ್ ಮೀಡಿಯಂ ‘ ಶಾಲೆ. ಅಪ್ಪಿ ತಪ್ಪಿ ಕೆಮ್ಮಿದರೂ ,ಸೀನಿದರೂ ಅದು ಇಂಗ್ಲಿಷ್ ನಲ್ಲಿಯೇ ಆಗಿ ಹೋಗಬೇಕು. ಕ್ಲಾಸಿನಲ್ಲಿ ಸೈಲೆಂಟ್ ಆಗಿ ಮೌನವಾಗಿರಬೇಕು. ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಿದರೆ ಫೈನು. ಒಂದೇ ಒಂದು ಬೇರೆ ಭಾಷೆಯ ಪದ ಮಾತಾದರೂ ಅದಕ್ಕೆ ಐವತ್ತು ರೂಪಾಯಿ ಫೈನ್ ಕಟ್ಟಬೇಕು. ಇಂಗ್ಲಿಷ್ ಬಿಟ್ಟು ಉಳಿದ ಎಲ್ಲ ಭಾಷೆಗಳ ಪ್ರತಿಯೊಂದು ಪದಕ್ಕೂ ಅಲ್ಲಿ ಬೆಲೆಯಿತ್ತು. ಸುಮ್ಮನೆ ಫೈನ್ ಕಟ್ಟಿಸಿಕೊಂಡು ಬಿಡುತ್ತಿರಲಿಲ್ಲ. ಜೊತೆ ಜೊತೆಗೆ ವಿಪರೀತ ಶಿಕ್ಷೆ. ನಾನು ಲೆಕ್ಕವಿಲ್ಲದಷ್ಟು ಬಾರಿ ಫೈನ್ ಕಟ್ಟಿದ್ದೆ. ಪ್ರತಿಬಾರಿ ನಾನಾಡಿದ ಕನ್ನಡ ಪದಗಳಿಗೆ ಫೈನ್ ಕಟ್ಟಿ ವಿಪರೀತ ಶಿಕ್ಷೆಗಳಿಗೆ ಈಡಾಗುವಾಗ ನನಗೆ ಊರು ನೆನಪಾಗುತ್ತಿತ್ತು. ಮನೆಯವರು ನೆನಪಾಗುತ್ತಿದ್ದರು.ನಾನು ಕಳೆದುಕೊಂಡಿದ್ದರ ಬೆಲೆ ಫೈನ್ ಕಟ್ಟುವಾಗ ತಿಳಿಯುತ್ತಿತ್ತು.

ಕೊನೆಕೊನೆಗೆ ಈ ಫೈನು ,ಈ ಶಿಕ್ಷೆ ಎಲ್ಲವೂ ರೂಢಿಯಾಗಿ ಹೋಯಿತು. ಅಲ್ಲಿ ನನ್ನೊಡನೆ ಕನ್ನಡ ಗೆಳೆಯರ ಪುಟ್ಟ ಬಳಗವಿತ್ತು. ನಾವು ಕದ್ದು ಮುಚ್ಚಿ ಕನ್ನಡ ಮಾತಾಡಿ ಖುಷಿ ಪಡುತ್ತಿದ್ದೆವು.ಖುಷಿ ಕನ್ನಡ ಬಳಸಿದ್ದಕ್ಕಲ್ಲ . ಕದ್ದು ಮುಚ್ಚಿ ಕನ್ನಡ ಬಳಸಿ ಶಾಲೆಯ ನಿಯಮವನ್ನ ಧಿಕ್ಕರಿಸಿದ್ದಕ್ಕೆ. ಉಳಿದವರ ಕಣ್ಣಲ್ಲಿ ನಾವು ಕ್ರಾಂತಿಕಾರಿಗಳು. ಭಗತ್ ಸಿಂಗ್ ಗು ನಮಗೂ ಆಗ ಅಂಥ ವ್ಯತ್ಯಾಸವೇ ಇರಲಿಲ್ಲ. ಕಾಸರಗೋಡಿನ ಸಮೀಪವಿದ್ದ ಶಾಲೆಯದು.ಹಾಗಾಗಿ ನಾವು ಸ್ವಯಂ ಘೋಷಿತ ಗಡಿನಾಡ ಕ್ರಾಂತಿಕಾರಿಗಳು.

ಹಾಗೆ ಒಂದು ತೀರ ಸಂಕಷ್ಟದಾಯಕ ಸನ್ನಿವೇಶದಲ್ಲಿ ಇಂಗ್ಲಿಷ್ ಮೇಲಿನ ದ್ವೇಷಕ್ಕೆ ಪ್ರತೀಕಾರವಾಗಿ ನನ್ನಲ್ಲಿ ಕನ್ನಡ ಪ್ರೀತಿ ಹುಟ್ಟಿಕೊಂಡಿತು. ಮುಂದೆ ಕನ್ನಡ ಸಾಹಿತ್ಯವನ್ನ ಓದುವ ಹವ್ಯಾಸ ಜೊತೆಯಾಯಿತು. ಹವ್ಯಾಸ ಹುಚ್ಚು ಎಂಬಲ್ಲಿ ಬಂದು ನಿಂತಿತು. ಕನ್ನಡದ ಮೇಲಿನ ಪ್ರೀತಿಯಲ್ಲದ ಪ್ರೀತಿ ನಿಜವಾದ ಪ್ರೀತಿಯಾಯಿತು.

ಈಗ ಸದ್ಯ ಎಂ.ಬಿ.ಎ ಮುಗಿಸಿ ಕೆಲಸ ಹಿಡಿದು ಬೆಂಗಳೂರಿನಲ್ಲಿ ಇದ್ದೇನೆ. ಮನೆಯವರೆಲ್ಲ ಊರಲ್ಲೇ ಇದ್ದಾರಲ್ಲ.ಹಾಗಾಗಿ ಅನಿವಾರ್ಯವಾಗಿ ‘ ರೂಮ್ ‘ ಮಾಡಿದ್ದೇನೆ. ರೂಮ್ ಸ್ವಂತದ್ದಲ್ಲ .ಹಾಗಾಗಿ ‘ರೆಂಟ್ ‘ ಕಟ್ಟುತ್ತೇನೆ. ಇಲ್ಲಿ ಬಚ್ಚಲು ಮನೆಯ ಬದಲು ‘ಬಾತ್ ರೂಮ್ ‘ಇದೆ.ನೀರು ಕಾಯಿಸಲಿಕ್ಕೆ ‘ ಕಾಯಿಲ್ ‘ಇದೆ. ಹಂಡೆ ಬದಲು ಬಕೆಟ್ಟು. ಟೆರೆಸ್ ಮೇಲಿರುವ ರೂಮು.ಹಾಗಾಗಿ ಹಿತ್ತಿಲು ಇಲ್ಲ. ಹಿತ್ತಿಲೇ ಇಲ್ಲ ಎಂದ ಮೇಲೆ ಊರಿನಲ್ಲಿರುವಂತೆ ಹಿತ್ತಿಲಾಚೆ ‘ಪಾಯಿ ಖಾನೆ ‘ಯ ಪ್ರಶ್ನೆಯೇ ಇಲ್ಲ. ಪಾಯಿ ಖಾನೆಯ ಬದಲು’ ಟಾಯ್ಲೆಟ್ ‘ ಇದೆ. ಟಾಯ್ಲೆಟ್ಟು ಹಾಗು ಬಾತ್ರೂಮು ಸಯಾಮಿ ಅವಳಿಗಳು. ಒಂದು ಬಾಗಿಲು ತೆರೆದರೆ ಎರಡಕ್ಕೂ ತಲುಪಿಕೊಳ್ಳಬಹುದು. ಈ ಇಂಗ್ಲಿಷಿನ ಬಕೆಟ್ಟು. ವಾಟರ್ ಹೀಟರ್ ಕಾಯ್ಲು, ಬಾತ್ರೂಮು ,ಟಾಯ್ಲೆಟ್ಟು , ಇವೆಲ್ಲದರ ಜೊತೆ ನಾನಿನ್ನೂ ಕನ್ನಡಿಗನಾಗೇ ಇದ್ದೇನೆ. ಸ್ನಾನದ ಅಲೌಕಿಕವಾದ ಖುಷಿಯ ಘಳಿಗೆಯಲ್ಲಿ ಕನ್ನಡ ಹಾಡನ್ನೇ ಹಾಡುತ್ತೇನೆ. ಇದು ನವೆಂಬರ್ ತಿಂಗಳಾದ್ದರಿಂದ ಬಾತ್ ರೂಮ್ ಹೊರಗೂ ದನಿ ಎತ್ತರಿಸಿ ಹಾಡುತ್ತೇನೆ. ಈ ತಿಂಗಳು ಪೂರ್ತಿ ಕಡ್ಡಾಯವಾಗಿ ನಾಡು ನುಡಿಯ ಕುರಿತಾದ ಹಾಡುಗಳಷ್ಟೇ. ಆಮೇಲೆ ಒಂದು ವರ್ಷ ಚಿಂತೆಯಿಲ್ಲ. ನಿರಾಳವಾಗಿ ಬಾಯಿಗೆ ಬಂದ ಹಾಡು ಹೇಳಿಕೊಂಡು ಇರಬಹುದು.

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು.ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಕರುನಾಡ ತಾಯಿ ಸದಾ ಚಿನ್ಮಯಿ. ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ. ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ.

ಕೊನೆಯದಾಗಿ ರತ್ನನ್ ಪದಗಳನ್ನ ಅನುಕರಿಸಿ ನಾಲ್ಕು ಸಾಲು ಹೇಳಿ ನನ್ನ ಮಾತು ಮುಗಿಸ್ತೇನೆ .

ಓ ದೇವ್ರೇ

ಮುಂದಿನ್ ಜಲ್ಮ ಅನ್ನೋದ್ ಇದ್ರೆ

ನನ್ ಹುಟ್ಸು ಅಂತಾ ಕೇಳಾಕಿಲ್ಲ.

ಹುಟ್ಸು ಬಿಡು ದೇವ್ರಾಣೆ ಬೇಜಾರಿಲ್ಲ

ಆದ್ರೆ ದೇವ್ರು

ಇಂಗ್ಲೀಸ್ ಮಾತ್ರ ಕನ್ನಡ್ವಾಗೆ ಹುಟ್ಲಿ

ಕನ್ನಡಾ ಕನ್ನಡ್ ವಾಗೆ ಇರ್ಲಿ

12 comments:

ಚುಕ್ಕಿಚಿತ್ತಾರ said...

ಸು೦ದರವಾಗಿ ಬರೆದಿದ್ದೀರಿ..
ನನಗೂ ಬೆ೦ಗಳೂರಿಗೆ ಬ೦ದ ನ೦ತರ ಇಲ್ಲಿಯ ಮಿಕ್ಸ್ ನ್ ಮ್ಯಾಚ್ ಕನ್ನಡದ ನಡುವೆ ”ನನ್ನ ಕನ್ನಡ” ಕಳೆದು ಹೋಗುತ್ತಿರುವ ಅನುಭವವಾಗುತ್ತಿದೆ..!

ಧನ್ಯವಾದಗಳು.

Unknown said...

:) ಇದು ಬಹಳಷ್ಟೃ ಜನರ ನಿತ್ಯ ಸತ್ಯ :)

Dr.D.T.Krishna Murthy. said...

ಗೌತಮ್;ಬರಹ ಚೆನ್ನಾಗಿದೆ.ಅಭಿನಂದನೆಗಳು.

umesh desai said...

ಗೌತಮ್ ಈ "ಕಂಗ್ಲೀಷು"ರೋಗ ಬೇರೆ ಊರುಗಳಿಗೂ ವೇಗವಾಗಿ ಹಬ್ಬುತ್ತಿದೆ...

ಗೌತಮ್ ಹೆಗಡೆ said...

@ ಚುಕ್ಕಿ ಚಿತ್ತಾರ

ಹ್ಮಂ ನಿಜ .ಕೆಲವಷ್ಟು ವಿಶೇಷ ಕನ್ನಡ ಪದಗಳು ಬೆಂಗಳೂರಿನಲ್ಲಿ ಉಪಯೋಗಕ್ಕೆ ಬರೋಲ್ಲ . ಅನಿವಾರ್ಯ. ಆದಷ್ಟು ಕನ್ನಡ ಮಾತಾಡಿಕೊಂಡು ಇರಬೇಕು.ಆದರ್ಶ ಅಂತ ಅಲ್ಲ. ನಮ್ ಖುಷಿಗೆ :)

ಧನ್ಯವಾದ ಚುಕ್ಕಿ ಚಿತ್ತಾರ ಅವರೇ

ಗೌತಮ್ ಹೆಗಡೆ said...

@KARTIK.D.V

ನಿಜ ಕಾರ್ತಿಕ್ ಅವರೇ. ಆದಷ್ಟು ನಾವು ನಮ್ಮ ಕನ್ನಡ ಉಳಿಸ್ಕೋ ಬೇಕಷ್ಟೇ :)
ಧನ್ಯವಾದ :)

ಗೌತಮ್ ಹೆಗಡೆ said...

@ Dr.Krishnamurthy sir

ಕೃಷ್ಣಮೂರ್ತಿ ಸರ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಹಾಗು ಬೆಂಬಲಕ್ಕೆ :)

ಗೌತಮ್ ಹೆಗಡೆ said...

@umesh desai sir

ಉಮೇಶ್ ದೇಸಾಯಿ ಸರ್ ನೀವು ಹೇಳಿದ್ದು ಖರೆ .ಇಂಗ್ಲಿಷ್ ಬೇಕೇ ಬೇಕು .ಆದರೆ ನಾವು ತಲೆ ಮೇಲೆ ಹೊತ್ತು ಕೂರೋವಷ್ಟು ಅನಿವಾರ್ಯವಲ್ಲ .ಕೆಲಸದ ವೇಳೆ ಅನಿವಾರ್ಯ ಎಂದಾದಾಗ ಇಂಗ್ಲಿಷ್ ಬಳಕೆ ಮಾಡ್ಲಿ .ಆದರೆ ಮನೆಯವರ ಜೊತೆ , ಅಕ್ಕ ಪಕ್ಕದ ಕನ್ನಡದವರ ಜೊತೆ ಕನ್ನಡ ಮಾತಾಡಿಕೊಂಡು ಹಾಯಾಗಿ ಇರಬಹುದಲ್ವಾ :)

ಧನ್ಯವಾದ ಸರ್ ನಿಮ್ಮ ಪ್ರತಿಕ್ರಿಯೆಗೆ :)

Unknown said...

Goutam.. ninna lekhana chennagide.. Ella yuva janaru edanna anusarisidare kannada kannadavagi uliyalu sadhya...

Ranjita

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ನಿಮ್ಮ ಮಾತು ನಿಜ ವಿಧ್ಯಾಬ್ಯಾಸಕ್ಕೆ,ಕೆಲಸಕ್ಕೆ ಸೀಮಿತವಾಗಬೇಕಿದ್ದ ಇಂಗ್ಲಿಷ್ ಈಗ ಎಲ್ಲರಲ್ಲಿ ಹೊಸ ರೋಗ ತಂದಿದೆ ....

ಗೌತಮ್ ಹೆಗಡೆ said...

@ ranjita ನೀವು ಹೇಳಿದ್ದು ಸರಿ ರಂಜಿತ ಅವರೆ. ಸಾಧ್ಯವಾದಲ್ಲೆಲ್ಲ ಕನ್ನಡ ಬಳಸಿದರೆ ಸಾಕು. ಮತ್ತೇನೂ ಮಾಡುವುದು ಬೇಡ :)
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ :

ಗೌತಮ್ ಹೆಗಡೆ said...

@ ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ

ನಿಜ ಸರ್ ಅನಾವಶ್ಯಕವಾದ ಇಂಗ್ಲಿಷ್ ಬಳಕೆ ಅತಿಯಾಗಿ ಬಿಟ್ಟಿದೆ .ಎಲ್ಲ ಕಡೆ ಇಂಗ್ಲಿಷ್ ಬೇಕಿಲ್ಲ :)

ಧನ್ಯವಾದ ತಮ್ಮ ಪ್ರತಿಕ್ರಿಯೆಗೆ .