Saturday, March 5, 2011

ದೊಡ್ಡೋರ್ದೆಲ್ಲಾ ದೊಡ್ಡದಲ್ಲ .....

ಕೆಲವಷ್ಟು ತೀರಾ ತೀರಾ ಸಣ್ಣದು.....

ಕ್ರಿಕೆಟ್ ಮೂರ್ಖರ ಆಟ. ಹಾಗೆಂದು ಖ್ಯಾತ ಆಂಗ್ಲ ನಾಟಕಕಾರ ಬರ್ನಾಡ್ ಷಾ ಯಾವಾಗಲೋ ಹಿಂದೊಮ್ಮೆ ಅವನ ಕಾಲದಲ್ಲಿ ಹೇಳಿದ್ದನಂತೆ. ಪ್ರೈಮರಿ ಶಾಲೆಯಲ್ಲಿ ಕ್ರಿಕೆಟ್ ದ್ವೇಷಿಯಾದ ಓರ್ವ ಮೇಷ್ಟ್ರು ನಮಗೆ ಗೊತ್ತಿಲ್ಲದ ಬರ್ನಾಡ್ ಷಾನನ್ನು ನಡುವೆ ತಂದು ಕ್ರಿಕೆಟ್ ಬಗ್ಗೆ ಬಾಯಿಗೆ ಬಂದಂತೆ ಬಯ್ದು ಕ್ರಿಕೆಟ್ ನ ಜನ್ಮ ಜಾಲಾಡಿಬಿಟ್ಟಿದ್ದರು. ಖುದ್ದು ಮೇಷ್ಟ್ರೇ ‘ಕ್ರಿಕೆಟ್ ಮೂರ್ಖರ ಆಟ ಅಂತ ಹೇಳಿಬಿಟ್ರು. ಈ ಮೇಷ್ಟರಿಗೆ ಅದ್ಯಾರೋ ಬರ್ನಾಡ್ ಷಾ ಎಂಬ ದೊಡ್ಡ ಮನುಷ್ಯನ ಬೆಂಬಲ ಬೇರೆ. ನಾವು ಸಣ್ಣವರು. ದೂಸರಾ ಉಸಿರಿಲ್ಲದೆ ವಿಧೇಯರಾಗಿ ಮೇಷ್ಟ್ರ ಮಾತಿಗೆ ಹೌದೆಂದು ತಲೆಯಲ್ಲಾಡಿಸಿದ್ದೆವು. ಅವತ್ತು ಒಂದು ದಿನ ಎಲ್ಲಿಯೂ ಕ್ರಿಕೆಟ್ ಆಡಲಿಲ್ಲ. ಮರುದಿನದಿಂದ ಆ ಮೇಷ್ಟ್ರು ವರ್ಗ ಆಗಿ ಹೋಗುವ ತನಕ ಶಾಲೆಯ ಅಂಗಳದಲ್ಲಿ ಕ್ರಿಕೆಟ್ ಆಡಲೇ ಇಲ್ಲ.

ಕ್ರಿಕೆಟ್ ಮೂರ್ಖರ ಆಟ ಎಂದು ಮೇಷ್ಟ್ರು ಹೇಳಿದ್ದರು.ಅದ್ಯಾರೋ ಬರ್ನಾಡ್ ಷಾ ಬೇರೆ ಇದೇ ಮಾತನ್ನು ಹೇಳಿದ್ದನಂತೆ. ನಾವೂ ಅದನ್ನು ಒಪ್ಪಿಕೊಂಡಾಗಿತ್ತು ಮೇಷ್ಟ್ರ ಸಮ್ಮುಖದಲ್ಲಿ. ಆದರೂ ನಮಗೆ ಕ್ರಿಕೆಟ್ ಎಂಬ ಕಣ್ಣೆದುರಿನ ಖುಷಿಯನ್ನ ತರ್ಕದ ಕಾರಣಕ್ಕೆ ದೂರವಿಡುವಲ್ಲಿ ಅರ್ಥವೇ ಕಾಣಲಿಲ್ಲ. ನಾವು ನಮ್ಮ ಪಾಡಿಗೆ ನಮ್ಮ ಕ್ರಿಕೆಟ್ ಜೊತೆ ಖುಷಿಯಾಗಿದ್ದೆವು. ಆದರೂ ಈ ‘ಕ್ರಿಕೆಟ್ ಮೂರ್ಖರ ಆಟ ಎಂಬ ಮಾತು ಆಗೊಮ್ಮೆ ಈಗೊಮ್ಮೆ ಮನಸ್ಸಿಗೆ ಬಂದು ಹೋಗುತ್ತಿತ್ತು. ಕ್ರಿಕೆಟ್ ಮೂರ್ಖರ ಆಟವೆಂದು ಹಳಿಯುತ್ತಿದ್ದ ಮೇಷ್ಟ್ರು ಇಸ್ಪೀಟು ಆಡುತ್ತಿದ್ದರು. ಇಸ್ಪೀಟು ಆಡುವವರಿಗೆ ಕ್ರಿಕೆಟ್ ಮೂರ್ಖರ ಆಟವೆಂದು ಹೇಳುವಲ್ಲಿ ಯಾವ ಹಕ್ಕಿದೆ ಎಂಬ ಯೋಚನೆ ಆ ವಯಸ್ಸಿಗೆ ಬರುತ್ತಲೇ ಇರಲಿಲ್ಲ. ಮೇಷ್ಟ್ರು ದೊಡ್ಡವರು. ಬರ್ನಾಡ್ ಷಾ ಮೇಷ್ಟ್ರಂಥ ಮೇಷ್ಟರಿಗೆ ಮಾದರಿ ಮನುಷ್ಯ. ಅಂದಮೇಲೆ ಅವನು ಇನ್ನೂ ದೊಡ್ಡವನು. ದೊಡ್ಡವರು ಹೇಳಿದ್ದೆಲ್ಲ ದೊಡ್ಡದೇ ಎಂದು ಆಗ ಚಿಕ್ಕವರಾದ ನಮ್ಮ ಭಾವನೆ.

ಈಗೀಗ ಅರ್ಥವಾಗುತ್ತಿದೆ.ದೊಡ್ಡವರು ಹೇಳಿದ್ದೆಲ್ಲ ದೊಡ್ಡದಲ್ಲ. ದೊಡ್ದವರದ್ದೆಲ್ಲ ದೊಡ್ಡದಲ್ಲ. ದೊಡ್ಡವರು ಹೇಳಿದ್ದಕ್ಕೆಲ್ಲ ಹಿಂದೆ ಮುಂದೆ ನೋಡದೆ ಗೋಣು ಹಾಕುವುದರಲ್ಲಿ ಯಾವ ದೊಡ್ದತನವೂ ಇಲ್ಲ. ಬರ್ನಾಡ್ ಷಾ ದೊಡ್ಡ ನಾಟಕಕಾರ ನಿಜ. ಆದರೆ ಕ್ರಿಕೆಟ್ ಮೂರ್ಖರ ಆಟವೆಂದು ಹೇಳುವಲ್ಲಿ ಆ ದೊಡ್ಡ ಮನುಷ್ಯನಲ್ಲಿ ಯಾವ ದೊಡ್ದತನವೂ ಕಾಣುವುದಿಲ್ಲ. ದೊಡ್ಡ ನಾಟಕಕಾರ ಎಂಬ ದೊಡ್ದಸ್ತಿಕೆಯಲ್ಲಿ ಎಲ್ಲ ವಿಷಯಗಳಲ್ಲಿ ಇದಮಿತ್ಥಂ ಎನುವಂತೆ ಮಾತನಾಡುವಲ್ಲಿ ಆತನಿಗೆ ಯಾವ ಹಕ್ಕೂ ಇಲ್ಲ. ಬರ್ನಾಡ್ ಷಾ ಗ್ರೇಟ್. ಹಾಗೆಯೇ ಅವನ ಕಾಲದಲ್ಲಿ ಆಗಿಹೋದ ಕ್ರಿಕೆಟಿನ ದಂತಕಥೆ ಡಾನ್ ಬ್ರಾಡ್ಮನ್ ಕೂಡ ಅಷ್ಟೇ ಗ್ರೇಟ್. ಇಷ್ಟು ಅರ್ಥವಾಗದ ಮೇಷ್ಟ್ರು ಕೂಡ ಈಗ ಅಷ್ಟೊಂದು ದೊಡ್ಡವರಾಗಿ ಕಾಣುವುದಿಲ್ಲ.

ಕೆಲವು ದೊಡ್ದವರೇ ಹಾಗೆ. ಕೆಲವೊಮ್ಮೆ ಒಂದಿಷ್ಟು ಸಣ್ಣತನಗಳು ಒಟ್ಟಾಗಿ ಸೇರಿ ರಾಶಿಯಾಗಿ ದೊಡ್ಡವರಾದಂತೆ ಕಾಣುತ್ತಾರೆ. ಅತ್ತ ಬರ್ನಾಡ್ ಷಾ ತನ್ನದಲ್ಲದ ಕ್ಷೇತ್ರವಾದ ಕ್ರಿಕೆಟ್ ಬಗ್ಗೆ ಹಗುರವಾಗಿ ಮಾತಾಡಿಬಿಟ್ಟ.ನಮ್ಮ ಮೇಷ್ಟ್ರು ಬರ್ನಾಡ್ ಷಾ ಹೇಳಿದ್ದನೆಂಬ ಕಾರಣಕ್ಕೆ ಹಿಂದೆ ಮುಂದೆ ನೋಡದೆ ತಮಗೆ ಕ್ರಿಕೆಟ್ ಇಷ್ಟವಿಲ್ಲ ಎಂಬ ಕಾರಣಕ್ಕೆ ಸ್ವಂತ ಬುದ್ಧಿಯನ್ನು ಬಿಟ್ಟು ತಾವೂ ಕೂಡ ಕ್ರಿಕೆಟ್ ಮೂರ್ಖರ ಆಟವೆಂದು ಹೇಳಿಬಿಟ್ಟರು. ಬರ್ನಾಡ್ ಷಾ ಬಿಡಿ. ನಾನಂತೂ ಅವನನ್ನ ನೋಡಿಲ್ಲ. ಆದರೆ ಈ ಮೇಷ್ಟರನ್ನ ನೆನಪಿಗೆ ತಂದುಕೊಂಡಾಗ ಕೊಂಚ ಖೇದವಾಗುತ್ತೆ.

ಮೇಷ್ಟರನ್ನು ನೆನಪಿಗೆ ತಂದುಕೊಂಡಾಗ ಖೇದವಾಗಲಿಕ್ಕೆ ಕಾರಣವಿದೆ. ಇಲ್ಲಿ ಮೇಷ್ಟ್ರು ಕೇವಲ ಮೇಷ್ಟರಲ್ಲ. ಅವರು ನಮ್ಮೆಲ್ಲರ ಪ್ರತಿನಿಧಿ. ನಾವು ಆರಾಧನೆಗೆ ,ಭಾವುಕತೆಗೆ ಬೀಳಬೇಕು ನಿಜ. ತೀರಾ ಅತಿಯಾದ ತರ್ಕ ಒಳ್ಳೆಯದಲ್ಲ ಎಂಬುದೂ ನಿಜ. ಆದರೆ ಯಾರೋ ಹೇಳಿದರು ಎಂಬ ಕಾರಣಕ್ಕೆ ಯಾವ ವಿಚಾರಗಳೂ ನಮ್ಮದಾಗಬಾರದು. ನಮ್ಮ ಮಾತುಗಳಿಗೆ ನಮ್ಮ ಅನುಭವಗಳೇ ಮೊದಲಿಗೆ ಆಧಾರವಾಗಬೇಕು. ಯಾರೋ ಹೇಳಿದ ವಿಚಾರ ನಮ್ಮ ಅನುಭವದಲ್ಲಿ ಸೋಸಿ ತಿಳಿಯಾಗಿ ,ಆಮೇಲೆ ಉಳಿದದ್ದು ನಮ್ಮದಾಗಬೇಕು. ಇಲ್ಲದಿದ್ದರೆ ಈ ಇಸ್ಪೀಟು ಆಡುವ ಮೇಷ್ಟ್ರು ಕ್ರಿಕೆಟನ್ನು ಮೂರ್ಖರ ಆಟವೆಂದು ನಮಗೆ ಉಪದೇಶ ಮಾಡಿದಂತೆ ಆಗುತ್ತೆ.

ದೊಡ್ಡವರು ಸರ್ವಜ್ಞರು ಎಂಬ ಭಾವನೆ ನಮ್ಮಲ್ಲಿದೆ. ಅತ್ತ ಸರ್ವಜ್ಞನಲ್ಲದಿದ್ದರೂ ಸರ್ವ ವ್ಯವಹಾರಗಳಲ್ಲಿ ಮೂಗು ತೂರಿಸದೆ ಕುಳಿತರೆ ತಮ್ಮ ದೊಡ್ಡಸ್ತಿಕೆಗೆ ಕುಂದು, ಆ ಕಾರಣಕ್ಕೆ ಮೂಗು ತೂರಿಸುವುದು ದೊಡ್ಡವರಾಗಿ ಹುಟ್ಟಿದ ತಮ್ಮ ಆಜನ್ಮಸಿದ್ಧ ಹಕ್ಕು ಎಂಬ ಅನಾದಿ ನಂಬಿಕೆ ದೊಡ್ದವರಲ್ಲಿದೆ. ದೊಡ್ಡವರೆಂಬ ನಮ್ಮ ನಂಬಿಕೆ ಗೌರವವಾಗಬೇಕೆ ಹೊರತು,ನಮ್ಮ ಸ್ವಂತ ಬುದ್ಧಿಯನ್ನ ಆಪೋಶನ ತೆಗೆದುಕೊಳ್ಳುವ ಜೀತವಾಗಬಾರದು. ಸ್ವಂತ ಬುದ್ಧಿಯನ್ನ ಬಿಟ್ಟು ಬದುಕುವುದಕ್ಕಿಂತ ದೊಡ್ಡ ಜೀತವಾದರೂ ಎಲ್ಲಿದೆ ?

ಈ ದೊಡ್ಡವರೆಂಬ ದೊಡ್ಡವರಿಂದ ಈ ಜಗತ್ತಿಗೆ ಎಷ್ಟು ಮಾರ್ಗದರ್ಶನ ಸಿಕ್ಕಿದೆಯೋ, ಅಷ್ಟೇ ದಾರಿ ತಪ್ಪಿಸುವ ಕೆಲಸವೂ ಆಗಿ ಹೋಗಿದೆ ಇತಿಹಾಸದಲ್ಲಿ . ಈಗ ನಮ್ಮ ಸುತ್ತಲಿರುವ ದೊಡ್ಡವರು ಯಾರ್ಯಾರು ಎಂದು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಧಾರ್ಮಿಕ ಮುಖಂಡರು ,ರಾಜಕೀಯದವರು, ನೂರಾರು ತತ್ವ ಸಿದ್ಧಾಂತಗಳ ಲೆಕ್ಕದಲ್ಲಿ ಹಂಚಿಹೋದ ಸಾಹಿತಿಗಳು, ಮಾಧ್ಯಮದವರು. ಇವರೆಲ್ಲರನ್ನೂ ನಾವು ಎತ್ತರದ ದೊಡ್ಡ ಸ್ಥಾನದಲ್ಲಿ ಇಟ್ಟಿದ್ದೇವೆ. ಇವರೆಲ್ಲ ನಮ್ಮನ್ನು ಮುನ್ನಡೆಸಬೇಕಾದವರು. ಆದರೆ ಈಗ ಒಬ್ಬರನ್ನೂ ನೆಚ್ಚಿಕೊಳ್ಳುವಂತಿಲ್ಲ .ಅವರಿಗೆಲ್ಲ ಅವರವರದೇ ಆದ ಸ್ವಂತ ಹಿತಾಸಕ್ತಿಗಳಿವೆ, ತಮ್ಮದೇ ಸರಿಯೆಂಬ ಒಂದಿಷ್ಟು ಹುಂಬತನಗಳಿವೆ. ಅವರ ಸುತ್ತ ಅವರೇ ಹಣೆದುಕೊಂಡು ಕುಳಿತ ಒಣ ಪ್ರತಿಷ್ಠೆಯ ಬೇಲಿಯಿದೆ.ಗೊಂದಲ, ಒಳಜಗಳ . ಹೀಗೆ ಏನೇನು ಇರಬಾರದಿತ್ತೋ ಅದೆಲ್ಲವೂ ಲೆಕ್ಕತಪ್ಪಿದೆ.

ಅವರು ನಮ್ಮನ್ನು ಮುನ್ನಡೆಸಲಿ ಎಂಬುದು ನಮ್ಮ ಆಶಯ .ಅವರ ಮುಂದಾಳತ್ವದಲ್ಲಿ ತೀರ ನಾವು ದಾರಿ ತಪ್ಪದೇ ಉಳಿದ ಶೇಷ ಸದ್ಯದ ನಮ್ಮ ಪುಣ್ಯ. ನಾವೀಗ ಜಾಣರಾಗಬೇಕು. ಸುತ್ತ ಜಗತ್ತಿನ ಸಂತೆಯಲ್ಲಿ ಅಡ್ಡಾಡಬೇಕು. ಸಕಲ ವ್ಯವಹಾರಗಳನ್ನೂ ಗಮನವಿಟ್ಟು ನೋಡಬೇಕು. ವಾಪಾಸು ಮರಳಿ ಬಂದು ತಣ್ಣಗೆ ಕುಳಿತು ಯೋಚನೆಗೆ ಬೀಳಬೇಕು. ನಮ್ಮದೇ ಆದ ಒಳ ದೃಷ್ಟಿಯಲ್ಲಿ ಹೊರಗೆ ಕಂಡ ಸಂಗತಿಗಳನ್ನು ಮತ್ತೆ ಹೊಸದಾಗಿ ಕಾಣಬೇಕು. ನಮಗೆ ನಾವೇ ಗುರುವಾಗಬೇಕು. ಈ ದೊಡ್ಡವರನ್ನ ಹಿಂಬಾಲಿಸಿ ಹೊರಟರೆ ದಾರಿ ತಪ್ಪುವುದು ಹೇಗೂ ಇದ್ದೇ ಇದೆ. ನಮ್ಮದೇ ದಾರಿಯಲ್ಲಿ ನಿಜವಾದ ಗುರಿ ಸಿಕ್ಕರೂ ಸಿಗಬಹುದು. ಇಲ್ಲವಾದರೆ ಕೊನೆಪಕ್ಷ ಸ್ವಂತ ದಾರಿಯಲ್ಲಿ ದಾರಿ ತಪ್ಪಿದ ತೃಪ್ತಿಯಾದರೂ ಉಳಿಯುತ್ತೆ. ದಾರಿ ತಪ್ಪಿಸಿಬಿಟ್ಟರು ಎಂದು ಯಾರ್ಯಾರನ್ನೋ ಹಳಿಯುತ್ತಾ ಅಲೆಯುವ ವ್ಯರ್ಥಾಲಾಪದ ದುರಂತವಾದರೂ ತಪ್ಪುತ್ತೆ. ಅಷ್ಟೇ.

2 comments:

ವಿ.ರಾ.ಹೆ. said...

ಕ್ರಿಕೆಟ್ ಆಡೋರು ಆಡ್ಸೋರು ಅಂತೂ ಮೂರ್ಖರಲ್ಲ. ಆದ್ರೆ ತಮ್ಮೆಲ್ಲಾ ಕೆಲ್ಸ ಬಿಟ್ಕಂಡು ಅದನ್ನ ನೋಡ್ತಾ ಕೂರೋರು, ಮೂರ್ಹೊತ್ತೂ ಅದ್ನೇ ತಲೆಲ್ಲಿ ತುಂಬ್ಕೊಂಡಿರೋರಂತೂ ಮೂರ್ಖರೇ ಹೌದು ;)

ಗೌತಮ್ ಹೆಗಡೆ said...

@ವಿಕಾಸಣ್ಣ

ಕ್ರಿಕೆಟ್ ಮಾತ್ರ ಅಲ್ಲ .ಮಾಡೋ ಕೆಲಸ ಬಿಟ್ಟು ಬೇರೆ ಏನೇ ಮಾಡಿದ್ರು ಅವರು ಮೂರ್ಖರೇ.
ಇಲ್ಲಿ ನನ್ನ ಟಾರ್ಗೆಟ್ ದೊಡ್ಡವರು .ಕ್ರಿಕೆಟ್ ನೆಪ ಅಷ್ಟೇ :)