Sunday, March 27, 2011

ಆಸ್ತಿಕತೆ -ನಾಸ್ತಿಕತೆ . ಭಾವನೆ ಹಾಗು ತರ್ಕ .

ನನ್ನ ರೂಮಿನ ಎದುರು ಟೆರೆಸ್ ನ ಒಂದು ತುದಿಯಿಂದ ಇನ್ನೊಂದು ತುದಿಗೆ ರೂಮ್ ಬಾಗಿಲಿಗೆ ಸಮಾನಾಂತರವಾಗಿ ಎಳೆದು ಕಟ್ಟಿರುವ ನಾಲ್ಕು ತಂತಿಗಳಿವೆ. ನಾನು .ನನ್ನ ತಮ್ಮ , ನಮ್ಮ ಮನೆ ಮಾಲೀಕರ ಮನೆಯ ಮಂದಿ, ಜೊತೆಗೆ ಇನ್ನೆರಡು ಬಾಡಿಗೆದಾರರ ಕುಟುಂಬ ;ಹೀಗೆ ಎಲ್ಲರ ಬಟ್ಟೆಯೂ ನೇತಾಡಿ ಒಣಗುವುದು ಅದೇ ಆ ನಾಲ್ಕು ತಂತಿಗಳ ಮೇಲೆ. ನಮ್ಮ ರೂಮಿನ ಬಾಗಿಲು ತೆರೆದು ಟೆರೆಸ್ ಮೆಟ್ಟಿಲ ಕಡೆ ಹೋಗಬೇಕೆಂದರೆ ಈ ನಾಲ್ಕು ತಂತಿಗಳ ಅಡಿಯಲ್ಲೇ ಸಾಗಿ ಹೋಗಬೇಕು. ಕೆಲವೊಮ್ಮೆ ತಂತಿಗಳ ಮೇಲೆ ಒಣಗಲಿಕ್ಕೆ ಹಾಕಿದ ಬಟ್ಟೆಗಳಿದ್ದರೆ ಅವುಗಳನ್ನು ಸರಿಸಿಯೋ ಅಥವಾ ಎತ್ತಿಯೋ ಜಾಗ ಮಾಡಿಕೊಂಡು ಹೋಗಬೇಕು. ಬಟ್ಟೆಗಳೆಂದರೆ ಅಲ್ಲಿ ಸೀರೆ , ಲಂಗ, ಪಂಚೆ , ಅಂಗಿ -ಚಡ್ಡಿ , ಗಂಡಸರ ಬನಿಯನ್ನು .ಹೆಂಗಸರ ಬನಿಯನ್ನು , ಟವೆಲ್ಲು ಇತ್ಯಾದಿ ಇತ್ಯಾದಿ.

ಆವತ್ತು ಸಂಜೆ ಟೆರೆಸ್ ಕಡೆಯಿಂದ ಮೆಟ್ಟಿಲಿಳಿದು ಕೆಳಗೆ ಗೇಟ್ ಕಡೆ ಹೋಗುತ್ತಿದ್ದೆ. “ ಸ್ವಲ್ಪ ನಿಲ್ಲಿ ” ಎಂದು ಯಾರೋ ಕೂಗಿದಂತಾಯಿತು. ನೋಡಿದರೆ ಪಕ್ಕದ ಕಿಟಕಿಯಲ್ಲಿ ಕೆಳಗಿನ ಮನೆ ಆಂಟಿ ಕಂಡರು. ಕರೆದದ್ದು ಯಾಕೆಂದು ಕೇಳುವ ಮುಂಚೆಯೇ ಆಂಟಿ “ ನಿಮ್ಮ ರೂಮಿನಲ್ಲಿ ಒಂದು ದೊಡ್ಡ ಸ್ಟೂಲ್ ಇದೆಯಂತಲ್ಲ. ಓನರ್ ಹೇಳಿದ್ರು. ಸ್ವಲ್ಪ ಕೊಡಿ ಅದನ್ನ. ನಮ್ ಮನೆವ್ರು ಬರ್ತಾರೆ ಕೊಟ್ಟು ಕಳ್ಸಿ ” ಎಂದು, “ ರೀ ಹೋಗ್ರಿ” ಎಂದು ಅಂಕಲ್ ಗೆ ಹೇಳಿದರು. “ ಸರಿ ಆಂಟಿ.ಬೇಕರಿಗೆ ಹೊರಟಿದ್ದೇನೆ.ಹತ್ತು ನಿಮಿಷ ಅಷ್ಟೇ. ಟೀ ಕುಡಿದು ಬಂದು ಸ್ಟೂಲು ಕೊಡುತ್ತೇನೆ” ಎಂದೆ .

ಕೊನೆಗೆ ಟೀ ಮುಗಿಸಿ ರೂಮ್ ಕಡೆ ಬಂದೆ. ನನ್ನ ದಾರಿಯನ್ನೇ ಕಾಯುತ್ತ ಆಂಟಿಯ ಗಂಡ ಅಂಕಲ್ ನನ್ನ ರೂಮ್ ಎದುರು ನಿಂತಿದ್ದರು. ನಾನು ರೂಮ್ ಒಳಗೆ ಬಂದು ಸ್ಟೂಲ್ ತೆಗೆದುಕೊಂಡು ಬಾಗಿಲ ಬಳಿ ನಿಂತು “ ತಗೋಳಿ ಅಂಕಲ್ ಸ್ಟೂಲು” ಎಂದೆ. ಅಂಕಲ್ ಹುಳಿಹುಳಿಯಾಗಿ ನಗುತ್ತಾ ಯಾವುದೋ ಹಿಂಜರಿಕೆಯಲ್ಲಿ ಸುಮ್ಮನೆ ನಿಂತಿದ್ದರು. “ ಏನ್ ಅಂಕಲ್, ಹಾಗೆ ನಿಂತ್ಗೊಂಡ್ ಬಿಟ್ರಿ.ತಗೊಳ್ಳಿ ಸ್ಟೂಲು.ಕೊಡಿ ಆಂಟಿ ಗೆ ” ಎಂದೆ. ಹುಳಿ ಹುಳಿಯಾಗಿ ನಗುತ್ತಲೇ “ ಹ್ಯಾಗ್ರಿ ಆ ಕಡೆ ಹೋಗೋದು ಈ ದೊಡ್ಡ ಸ್ಟೂಲು ತಗೊಂಡು. ಹೋಗೋ ದಾರಿಯಲ್ಲೇ ಬಟ್ಟೆ ಒಣಗಲಿಕ್ಕೆ ಹಾಕಿದ್ದಾರೆ ” ಎಂದು ಕೊಂಚ ಗಂಭೀರರಾದರು. “ ಅಯ್ಯೋ ಅಂಕಲ್. ಅದಕ್ಯಾಕೆ ಅಷ್ಟು ತಲೆಬಿಸಿ. ಇಲ್ಲಿ ನೋಡಿ. ಎಷ್ಟು ಸಿಂಪಲ್ ” ಎಂದು ಎದುರಿದ್ದ ತಂತಿಯ ಮೇಲಿನ ಸೀರೆ ಸರಿಸಿ , ಮುಂದೆ ಎದುರಾದ ಇನ್ನೊಂದು ತಂತಿಯ ಮೇಲಿದ್ದ ಒಣಗಿದ್ದ ಲಂಗವನ್ನ ಎತ್ತಿ ದಾರಿ ಮಾಡಿಕೊಂಡು, ಸ್ಟೂಲ್ ಹಿಡಿದುಕೊಂಡು ಟೆರೆಸ್ ಮೆಟ್ಟಿಲಿನ ಕಡೆ ಅನಾಯಾಸವಾಗಿ ದಾಟಿಕೊಂಡು ಬಂದು, ಯಾವುದೋ ದೊಡ್ಡ ಸಾಹಸ ಮಾಡಿದವನಂತೆ ಹೆಮ್ಮೆಯಿಂದ ಬೀಗುತ್ತ ಅಂಕಲ್ ಮುಖ ನೋಡಿದೆ. ಅಂಕಲ್ ಪೂರ್ತಿ ಗಂಭೀರರಾಗಿಬಿಟ್ಟಿದ್ದರು.:( :(

“ಅದು ಹ್ಯಾಗ್ರಿ ಸೀರೆ ಲಂಗ ಎತ್ತಿ ದಾರಿ ಮಾಡ್ಕೊಂಡು ಹೋದ್ರಿ? ಹಾಗೆಲ್ಲ ಬಟ್ಟೆ ಕೆಳಗೆ ನುಸೀಬಾರದ್ರೀ. ಗ್ರೌಂಡ್ ಫ್ಲೋರ್ ಮನೆವ್ರ ಬಟ್ಟೆ ಕಣ್ರೀ ಅದು. ಅವರದ್ದು ಯಾವ್ದೋ ಜಾತಿ. ಸೀರೆ ಲಂಗದ ಕೆಳಗೆ ನುಸದ್ರೆ ಅವರ ಕಾಲ್ ಕೆಳಗೆ ನುಸದಂಗೆ ಆಗುತ್ತೇರಿ. ನಮ್ಮದೇ ಜಾತಿಯವರ ಸೀರೆ ಲಂಗ ಆದರೆ ಪರವಾಗಿಲ್ಲ. ಹೇಗೋ ಅಡ್ಜಸ್ಟ್ ಮಾಡ್ಕೋ ಬಹುದು ನಮ್ಮವರದೇ ಲಂಗ ಸೀರೆ ಅಂದ್ಕೊಂಡು. ಹೋಗಿ ಹೋಗಿ ಯಾವ್ದೋ ಜಾತಿ ಜನರ ಕಾಲ್ ಕೆಳಗೆ ನುಸೀಬೇಕೇನ್ರಿ. ನೀವೂ ನಮ್ಮ ಜಾತಿಯವರೇ . ನಿಮಗಿನ್ನೂ ಸಣ್ಣ ವಯಸ್ಸು .ಇವೆಲ್ಲ ಸೂಕ್ಷ್ಮ ನಿಮಗೆ ಗೊತ್ತಾಗೋಲ್ಲ - ಎಂದು ನನ್ನ ಮುಖ ನೋಡಿದರು. “ ಅದೆಲ್ಲ ಸರಿ ಅಂಕಲ್. ನೀವು ಹ್ಯಾಗೆ ಈ ಬಟ್ಟೆಗಳನ್ನ ದಾಟಿ ಟೆರೆಸ್ ಮೆಟ್ಟಿಲು ಕಡೆಯಿಂದ ನನ್ನ ರೂಮ್ ಬಾಗಿಲೆದುರು ಬಂದ್ರಿ ?” ಎಂದು ನಾನು ಪ್ರಶ್ನೆಯಾದೆ. ಈಗ ಅಂಕಲ್ ಮುಖ ಹೆಮ್ಮೆಯಿಂದ ಅಗಲವಾಯಿತು ತಾವೆಷ್ಟು ಜಾಣರು ಎಂಬ ಭಾವದಲ್ಲಿ . “ಅಲ್ಲಿ ನೋಡ್ರಿ. ಟೆರೆಸ್ ಆ ಕಡೆ ಮೂಲೆಯಲ್ಲಿ ಒಂದು ಗ್ಯಾಪ್ ಇದೆ. ಅಲ್ಲಿಂದ ಹೇಗೋಬಂದೆ ” ಎಂದು ಟೆರೆಸ್ ನ ಮತ್ತೊಂದು ಮೂಲೆಯ ಕಡೆ ಕೈ ಮಾಡಿ ತೋರಿಸಿದರು. ಅಲ್ಲಿ ಒಣಗಲು ಹಾಕಿದ್ದ ಬಟ್ಟೆಗಳ ಸಾಲಿನಲ್ಲಿ ಒಂದು ಹೆಂಗಸರ ಬನಿಯನ್ನು ಹಾಗು ಒಂದು ಜೀರ್ಣವಾದ ಗಂಡಸರ ಚಡ್ಡಿಯ ನಡುವೆ ಅಂಕಲ್ ಹೇಳಿದ ಎರಡು ಅಡಿಯ ‘ ಗ್ಯಾಪ್ ಕಾಣಿಸಿತು. ಸೀರೆ ಲಂಗದ ಕೆಳಗೆ ನುಸುಳಿದ್ರೆ ‘ ಕಾಲ್ ಕೆಳಗೆ ನುಸ್ದಂಗೆ ’ ಎಂದು ಅಂಕಲ್ ಹೇಳಿದ್ದರಲ್ಲ. ಈ ಹೆಂಗಸರ ಬನಿಯನ್ನು ಹಾಗು ಜೀರ್ಣವಾದ ಗಂಡಸರ ಚಡ್ಡಿಯ ನಡುವೆ ಅಂಕಲ್ ಹೇಳಿದ ‘ನುಸಿಯುವ’ ಮಾತನ್ನು ಹೇಗೆ ಅನ್ವಯಿಸಬೇಕೆಂಬುದು ನನಗೆ ಹೊಳೆಯಲಿಲ್ಲ. ನನ್ನ ಆ ಯೋಚನೆಗೆ ನಾನೇ ನಕ್ಕುಬಿಟ್ಟೆ.“ಯಾಕ್ರೀ ನಗ್ತೀರ?”. “ ಯಾಕೂ ಇಲ್ಲ ಅಂಕಲ್. ನಿಮ್ಮದು ತಲೆ ಅಂದ್ರೆ ತಲೆ.ನೀವು ಮಾಡಿದ ಐಡಿಯಾ ನೋಡಿ ಖುಷಿಯಾಯ್ತು.ಅಷ್ಟೇ” ಎಂದೆ. ನನ್ನ ಮಾತು ಕೇಳಿ ಅಂಕಲ್ ಗೆ ಸ್ವಲ್ಪ ಸಮಾಧಾನವಾಯ್ತು. ನನಗೆ ಆಚಾರ ,ವಿಚಾರವನ್ನ ತಿಳಿಸಿ ಮನವರಿಕೆ ಮಾಡಿಕೊಟ್ಟ ಖುಷಿ ಅವರ ಮುಖದಲ್ಲಿ ಅಗಲವಾಗಿ ಹರಡಿಕೊಂಡಿತ್ತು.

ನಾನು ಇನ್ನೂ ಏನೋ ಹೇಳಬೇಕೆಂದು ಬಾಯಿ ತೆರೆದೆ. ಅಂಕಲ್ ಗೆ ಆಗಲೇ ವಯಸ್ಸು ನಲವತ್ತರ ಮೇಲಾಗಿದೆ. ಕಟ್ಟಾ ಸಂಪ್ರದಾಯಸ್ಥರು .ಅವರ ಹಿರಿಯ ಅಣ್ಣ ಹಾಗು ಒಬ್ಬ ತಮ್ಮ ಸ್ವಾಮೀಜಿಗಳಂತೆ.ಅಂಕಲ್ ನಾಲ್ಕು ಮನೆಯ ಪೂಜೆ ಕೆಲಸಕ್ಕೆ ಪ್ರತಿ ನಿತ್ಯ ಹೋಗುತ್ತಿದ್ದವರು . ನಾನು ಹೇಳಲಿರುವ ಮಾತು ಅವರ ಮೇಲೆ ಪರಿಣಾಮ ಬೀರುವ ವಿಶ್ವಾಸ ನನಗೆ ಕಾಣಲಿಲ್ಲ. ಬಾಯಿ ತೆರೆದವನು ಬಾಯಿ ಮುಚ್ಚಿ ಸುಮ್ಮನಾಗಿಬಿಟ್ಟೆ .

ಆ ಘಟನೆ ಆದ ಮೇಲಿಂದ ಅಂಕಲ್ ಗೆ ನನ್ನ ಮೇಲೆ ವಿಶೇಷ ಪ್ರೀತಿ; ಅವರ ಧರ್ಮೋಪದೇಶಕ್ಕೆ ತಲೆದೂಗಿ ಕೋಲೆ ಬಸವನಂತೆ ತಲೆದೂಗಿದ ಕಾರಣಕ್ಕೆ. ಅದಾಗಿ ಸ್ವಲ್ಪ ದಿನದ ನಂತರ ನನ್ನ ರೂಮಿಗೆ ಬರುವ ದಾರಿಯಲ್ಲಿ ಅಂಕಲ್ ಎದುರಾದರು. “ ಸ್ವಲ್ಪ ನಿಲ್ಲಿ ಇವ್ರೇ. ದೇವರಿಗೆ ವಿಶೇಷ ಪೂಜೆ ಮಾಡಿದ್ದೇನೆ .ಪ್ರಸಾದ ತಂದುಕೊಡ್ತೇನೆ” ಎಂದು ಎರಡು ಬಾಳೆಹಣ್ಣು ತಂದು ಕೊಟ್ಟರು. ನನ್ನ ಬಲಗೈ ಮುಂದೆ ಮಾಡಿ ಬಾಳೆಹಣ್ಣು ತೆಗೆದುಕೊಂಡೆ. ಎಡಗೈ ನಲ್ಲಿ ಊಟಕ್ಕೆಂದು ತಂದಿದ್ದ ಪಾರ್ಸೆಲ್ ಇತ್ತು. ಅದರಲ್ಲಿ ಇದ್ದದ್ದು ಒಂದು ರಾಗಿ ಮುದ್ದೆ ಹಾಗು ಎರಡು ಮೊಟ್ಟೆ. ಅಂಕಲ್ ನಂಬುವ ದೇವರಲ್ಲಿ ನನ್ನದೊಂದು ಕ್ಷಮೆ ಕೋರಿ ನಾಸ್ತಿಕನಾದ ನಾನು ರೂಮಿಗೆ ಬಂದು ಬಿಟ್ಟೆ.

ರೂಮಿಗೆ ಬಂದವನು ನಾನು ತಂದಿದ್ದ ಊಟದ ಪಾರ್ಸೆಲ್ ಹಾಗು ಅಂಕಲ್ ಕೊಟ್ಟ ಬಾಳೆಹಣ್ಣುಗಳನ್ನ ದೂರ ದೂರವೇ ಇಟ್ಟೆ. ರಾಗಿ ಮುದ್ದೆ ಹಾಗು ಮೊಟ್ಟೆಯ ಊಟದ ಜೊತೆ ಬಾಳೆಹಣ್ಣು ತಿನ್ನಲಿಲ್ಲ. ಕೊನೆಗೆ ರಾತ್ರಿ ಎರಡು ಘಂಟೆಗೆ ಮಲಗುವ ಸಮಯಕ್ಕೆ ಬಾಳೆಹಣ್ಣು ತಿಂದು ಮಲಗಿದೆ. ನಾನು ನಾಸ್ತಿಕ ನಿಜ. ಆದರೆ ಆಸ್ತಿಕರ ನಂಬಿಕೆಯನ್ನ ಅಗೌರವದಿಂದ ಕಾಣುವ ಹಕ್ಕು ನನಗಿಲ್ಲ. ನನ್ನ ಅಭಿಪ್ರಾಯವನ್ನ ವ್ಯಕ್ತಪಡಿಸುವ ಹಕ್ಕು ನನಗಿದೆ. ಆದರೆ ನನ್ನ ಅಭಿಪ್ರಾಯವನ್ನ ಯಾರ ಮೇಲೂ ಹೇರುವ ಹಕ್ಕು ನನಗಿಲ್ಲ. ಅಂಕಲ್ ಬೆಳೆಸಿಕೊಂಡು ಬಂದ ಅತಿರೇಕದ ಜಾತಿ ಪ್ರೇಮವಾಗಲಿ, ಬಾಲಿಶ ಚಿಂತನೆಯ ಕ್ರಮವಾಗಲಿ ; ಅವು ಏನೇ ಇರಲಿ. ಆದರೆ ಅವರು ನನಗೆ ಬಾಳೆಹಣ್ಣು ಕೊಡುವಾಗ ಅವರ ಮನಸ್ಸಿನಲ್ಲಿದ್ದುದು ‘ ದೇವರ ಪ್ರಸಾದ. ಹುಡುಗನಿಗೆ ಒಳ್ಳೇದಾಗಲಿ - ಎಂಬ ಭಾವನೆ ಮಾತ್ರ. ಆ ಕಾರಣಕ್ಕೆ ದೇವರನ್ನು ನಂಬದ ನಾನು ಅಂಕಲ್ ಕೊಟ್ಟ ಬಾಳೆಹಣ್ಣುಗಳನ್ನ ಭಕ್ತಿಯಿಂದ ತಿಂದೆ. ಭಾವನೆ ಬಾಳೆಹಣ್ಣಿನ ತಿರುಳಿದ್ದಂತೆ. ಇಲ್ಲಿ ತರ್ಕ ಸಿಪ್ಪೆಯಂತೆ. ಭಾವನೆ ಮುಖ್ಯವಾಗಬೇಕಾದ ಜಾಗದಲ್ಲಿ ತರ್ಕ ಯಾಕೆ? ನಾನು ಹಣ್ಣು ತಿಂದು ಸಿಪ್ಪೆಯನ್ನ ಎಸೆದು ನಿರಮ್ಮಳವಾಗಿ ದೈವಾನುಗ್ರಹದಲ್ಲಿ ಮಲಗಿಬಿಟ್ಟೆ.:) :)

17 comments:

ಮನಸಿನ ಮಾತುಗಳು said...

Nice write up tammayya..:-)

ವಿ.ರಾ.ಹೆ. said...

ಗುಡ್..
ಜೊತೆಗೆ ಮೊಟ್ಟೆ (ಮಾಂಸ ಕೂಡ) ತಿಂದು, ಯಾವುದೇ ಬಟ್ಟೆಯನ್ನಾದರೂ ಎತ್ತಿ 'ವಿಶ್ವಮಾನವ'ನಾದೆ ಅಂದುಕೊಳ್ಳುವುದು(ಅಂದುಕೊಂಡಿದ್ದರೆ) ಕೂಡ ಅಷ್ಟೇ ಬಾಲಿಶ ಎಂಬುದು ನನ್ನಭಿಪ್ರಾಯ. ಕೊನೆಯ ಸಾಲುಗಳು ತುಂಬಾ ಸರಿಯೆನಿಸಿತು..

ಗೌತಮ್ ಹೆಗಡೆ said...

@ ದಿವ್ಯ ಹೆಗ್ಡೆ

ಥ್ಯಾಂಕ್ಸ್ ಅಕ್ಕಯ್ಯ :)

ಗೌತಮ್ ಹೆಗಡೆ said...

@ ವಿಕಾಸಣ್ಣ

ಅಯ್ಯೋ ಗುರುವೇ ನನಗೆ ಅಂಥಾ ಭ್ರಮೆಗಳು ಪುಣ್ಯಕ್ಕೆ ಸದ್ಯ ಇಲ್ಲೇ. ವಿಶ್ವಮಾನವ ಇತ್ಯಾದಿ ಇತ್ಯಾದಿ ಸುಡುಗಾಡು ಸುನ್ಟಿ. ಮೊಟ್ಟೆ ನಂಗೆ ಜೀರ್ಣ ಆಗ್ತು , ಏನು ತೊಂದರೆ ಕೊಡಲ್ಲೇ. ಆ ಕಾರಣಕ್ಕೆ ತಿಂತಿ ನನ್ನ ಖುಷಿಗೆ . ಮೊಟ್ಟೆ ಮಾಂಸ ತಿಂದು ವಿಶ್ವಮಾನವ ಆಗಕ್ಕೆ ಹೆಂಗು ಸಣ್ಣ ಬುದ್ಧಿ ದೊಡ್ಡ ಜನಗಳು,ಉರುಫ್ ಬುದ್ಧಿಜೀವಿಗಳು ಇದ್ದ. ನಾವು ಸಣ್ಣವರು .ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಅಷ್ಟೇ ನಮಗೆ ಗೊತ್ತಿರದು .

ಇನ್ನು ಅಂಕಲ್ ದು ಕೆಲವಷ್ಟು ತಪ್ಪು ಇತ್ತು. ಬಟ್ ನಾನು ಕೊನೆಗೆ ಹೈಲೈಟ್ ಮಾಡಿದ್ದು ಅವರ ಪ್ರೀತಿ ಹಾಗು ಕಾಳಜಿನ ಹಾಗು ಭಾವನೆನ . ನಾನು ಲಂಗ ಎತ್ತಿದ್ದು ಸರಿ ಅಂತ ನಾನು ಒತ್ತಿ ಒತ್ತಿ ಹೇಳೇ ಇಲ್ಲೇ. ಬರಹದ ಧ್ವನಿಯಲ್ಲಿ ಭಾವನೆ ಇದ್ದು, ಪ್ರೀತಿ ಇದ್ದು. ಮತ್ಯಾವ ದೊಡ್ಡಸ್ತಿಕೆ ಇಲ್ಲೇ ಗುರುವೇ :);)


ಇಲ್ಲಿ ನಾನು ಹೇಳಕ್ಕೆ ಹೊರಟಿರೋದು ಭಾವನೆ ಹಾಗು ತರ್ಕದ ಬಗ್ಗೆ .
ಥ್ಯಾಂಕ್ಸ್ ಸರ್ ಪ್ರತಿಕ್ರಿಯೆ ನೀಡಿದ್ದಕ್ಕೆ ;)

ವಿ.ರಾ.ಹೆ. said...

"ಅಂಕಲ್ ದು ಕೆಲವಷ್ಟು ತಪ್ಪು ಇತ್ತು."

nothing wrong, ಮೊಟ್ಟೆ ತಿನ್ನುವುದು ಹೇಗೆ ನಿನ್ನ ಆಯ್ಕೆಯೋ ಅದೇ ರೀತಿ ಯಾರದೋ ಬಟ್ಟೆ ಕೆಳಗೆ ನುಸುಳದಿರುವುದು ಅವರ ನಂಬಿಕೆ/ಆಯ್ಕೆ. ಕಾರಣಗಳು ಹಲವಿರಬಹುದು. ಅದು ಅವರ ಖುಷಿಗೆ! but.... ಒಟ್ಟಾರೆ ಬರಹದ ಸಾರಾಂಶವನ್ನು ಒಪ್ಪುತ್ತೇನೆ. (ಅಲ್ಲಿ ವಿಶ್ವಮಾನವ ಪದ ಕೇವಲ ಸಾಂದರ್ಭಿಕ ಬಳಕೆಗೆ ಮಾತ್ರ!).

ಗೌತಮ್ ಹೆಗಡೆ said...

@ vikaasanna

yes sir. now i agree my mistake and correct my views. i think now i am ' VISHWAMAANAVA' in true sense hahaa

Sushrutha Dodderi said...

ನಂಗೆ ಈ ಬರಹದ ಶೈಲಿ ನಿನ್ನ ಉಳಿದ ಬರಹಗಳಿಗಿಂತ ಭಿನ್ನವಾಗಿದ್ದು, ಲಲಿತವಾಗಿದ್ದು ಅನ್ನಿಸ್ಚು. ಮನಿಗ್ ಬಾ ಒಂದ್ಸಲ, ಆಮ್ಲೆಟ್ ಮಾಡನ. ;)

ಬೈದಿವೇ, ಇದೇನಯ್ಯಾ ಇದು 'ಹೆಂಗಸರ ಬನಿಯನ್ನು'?! ;)

ಹಿತ್ತಲಮನೆ said...

Cool one ! :-)

ಶಾಂತಲಾ ಭಂಡಿ (ಸನ್ನಿಧಿ) said...

ಗೌತಮ...

ನೋಡಕ್ ಹೋದ್ರೆ ಬರೇ ಒಣಗ್ಸಿರೋ ಬಟ್ಟೆ. ಒಣಗಾಕಿರೋ ಬಟ್ಟೆಗೆ ಭಾವನೆಗಳು ಮೆತ್ಕೊಂಡು ಓದೋಕೆ ಇಷ್ಟವಾಗತ್ತೆ.
ಹಿಂಗೆಯೇ ಯಾರಿಗೂ ನೋವಾಗ್ದಿರೋ ಹಾಗೆ ಬಿಂದಾಸಾಗಿ ಬರ್ದುಬಿಡ್ಬೇಕು ನಿನ್ನಂಗೆ.
ಇಷ್ಟವಾಯ್ತು, ಬರೀತಿರು.

ಪ್ರೀತಿಯಿಂದ,
-ಶಾಂತಲಾ ಭಂಡಿ

ಗೌತಮ್ ಹೆಗಡೆ said...

@ sushrutha dodderi

ಆಮ್ಲೆಟ್ ತಿನ್ನಕ್ಕೆ ರೂಂ ತನಕ ಬಂದ್ರೆ ಹೋಗಿ ಬಂದು ಖರ್ಚೇ ಸುಮಾರು ಆಗೊಗ್ತಲ್ಲ :) ಆದರು ಸಾಧ್ಯವಾದರೆ ನಾವು ಬರ್ತೇವೆ ತಮ್ಮ ಆಮಂತ್ರಣವನ್ನ ಮನ್ನಿಸಿ ;)

ಮತ್ತೆ ಹೆಂಗಸರ ಬನಿಯನ್ನು ಅಂದ್ರೆ ಬಿ ಇಂದ ಸ್ಟಾರ್ಟ್ ಆಗ್ತು ಎ ಇಂದ ಎಂಡ್ ಆಗ್ತು.ಮಧ್ಯ ಆರ್ ಇರ್ತು .ಇದಕ್ಕೂ ಜಾಸ್ತಿ ಬಿಡಿಸಿ ಹೇಳಕ್ಕೆ ಆಗಲ್ಲೆ.. ಸ್ವಲ್ಪ ಸಂಕೋಚ ನಾಚ್ಕೆ ಎಲ್ಲ ಆಗಿ ಬನಿಯನ್ನು ಹೇಳಿ ಕರೆದಿದ್ದು. ;)

ಥ್ಯಾಂಕ್ಸ್ ಫಾರ್ ಪ್ರತಿಕ್ರಿಯೆ

ಗೌತಮ್ ಹೆಗಡೆ said...

@hittila mane


ಥ್ಯಾಂಕ್ಸ್ ಗಿರೀಶ್ ಮಾವ :)

ಗೌತಮ್ ಹೆಗಡೆ said...

@shantala bhandi

ಥ್ಯಾಂಕ್ಸ್ ಅತ್ತಿಗೆ :)

ಹ್ಮ್ಮ್ ಮತೆಂತ ಮಾಡದೆ ? ನಾನು ನನ್ನಂಗೆ ಬರಿಯದೆಯಾ .ಬೇರೆ ದಾರಿನೇ ಇಲ್ಲೇ . ನಿನ್ನಂಗೆ ಬರಿಯವು ಹೇಳಿ ಬರಿಯಕ್ಕೆ ಹೊರಟರೆ ಆಗ ಕೆಲ್ಸನಾ ಅದು? :)

ಗೌತಮ್ ಹೆಗಡೆ said...

@ನನಗೆ ನಾನೇ ............



ಎಲ್ಲೋ ಮಳೆಯಾಗಿ ಇಲ್ಲಿ ತಂಗಾಳಿ ಬೀಸ್ತಾ ಇದ್ದಾ ? ಅಥವಾ ಎಲ್ಲೋ ಬಿರುಗಾಳಿ ಆಗಿ ಇಲ್ಲಿ ಮಳೆ ಆಗ್ತಾ ಇದ್ದಾ ಹೇಳಿ ನಂಗೆ ಗೊತಾಗ್ತಾ ಇಲ್ಲೇ ;) ;) ಕಾಮೆಂಟ್ಸ್ ಹಿಂದಿನ ಮರ್ಮವೇ ಅರ್ಥ ಆಗ್ತಾ ಇಲ್ಲೇ :) ಫಸ್ಟ್ ಟೈಮ್ ಹಿಂಗೆಲ್ಲ ಆಗ್ತಾ ಇದ್ದು .ಇಂಥ ಯೋಚನೆ ಬರ್ತಾ ಇದ್ದು ;);)

HEMCHANDRA said...

sakhat anubhava / anubhaava

Kanthi said...

ninna writingu jotege charche mast iddu...

ದಾರಿ ತಪ್ಪಿದವನು .. said...

Sakkatthagide Guru.. !! Nan hesru vijay antha.. baryodu ondu geelu.. Ishtapattu, kashta aadru barithini.. please visit my blof..
http://vijayharihara.wordpress.com

ದಾರಿ ತಪ್ಪಿದವನು .. said...

Sakkatthagide Guru.. !! Nan hesru vijay antha.. baryodu ondu geelu.. Ishtapattu, kashta aadru barithini.. please visit my blof..
http://vijayharihara.wordpress.com