Sunday, February 27, 2011

ಆ ಒಂದು ದಿನದ ಡೈರಿ ...

ಸಂಕ್ರಮಣದ ಸಂಜೆಯಲಿ .ಪ್ರೇಮ ಕವಿಯ ಪಾರ್ಕಿನಲಿ...

ಕೆ.ಎಸ್.ನರಸಿಂಹಸ್ವಾಮಿ ಉದ್ಯಾನವನ. ಅದು ನನ್ನ ರೂಮಿಗೆ ಐದು ನಿಮಿಷದ ನಡಿಗೆಯ ದೂರದಲ್ಲಿದೆ. ಮನಸ್ಸಿಗೆ ಏನೋ ಹೊಸತು ಬೇಕೆಂದಾಗಲೆಲ್ಲ ಕೆ.ಎಸ್.ಎನ್ ಪಾರ್ಕಿಗೆ ಹೋಗಿ ಕೂರುತ್ತೇನೆ. ಹೆಚ್ಚಾಗಿ ಸಂಜೆ ಆರರ ನಂತರ ಹೋಗಿ ಕೊನೆಗೆ ರಾತ್ರಿ ಎಂಟು ಘಂಟೆ ತನಕ ಅಲ್ಲಿ ಕೂತು ಎದ್ದು ಬರುವುದು ನನ್ನ ರೂಢಿ.ಕೆಲವೊಮ್ಮೆ ಒಬ್ಬನೇ ಹೋಗಿ ಕೂರುತ್ತೇನೆ.ಬಹುತೇಕ ಸಮಯದಲ್ಲಿ ನನ್ನ ತಮ್ಮ ನನಗೆ ಜೊತೆ ನೀಡುತ್ತಾನೆ. ಪಾರ್ಕಿನ ಮೇನ್ ಗೇಟಿನ ಎಡಕ್ಕೆ ಪಾರ್ಕಿನ ಮೂಲೆಯಲ್ಲಿ ಒಂದು ಕಲ್ಲು ಬೆಂಚ್ ಇದೆ. ನಮಗೂ ಆ ಬೆಂಚಿಗು ಏನು ಋಣಾನುಬಂಧವೋ ಗೊತ್ತಿಲ್ಲ.ನಾವು ಹೋದಾಗಲೆಲ್ಲ ಆ ಕಲ್ಲು ಬೆಂಚು ಖಾಲಿಯಾಗಿ ಕುಳಿತು ನಮ್ಮನ್ನು ಸ್ವಾಗತಿಸುತ್ತೆ. ಈತನಕ ಒಮ್ಮೆಯೂ ನಾವು ಬೇರೆ ಬೆಂಚನ್ನು ಹುಡುಕಿಕೊಂಡು ಹೋಗುವ ಪ್ರಸಂಗ ಎದುರಾಗಿಲ್ಲ. ಅಷ್ಟರ ಮಟ್ಟಿಗೆ ಆ ಬೆಂಚ್ ನಮ್ಮ ಹೆಸರಿಗೆ ಆಗಿಹೋಗಿದೆ.

ಆ ಪಾರ್ಕಿಗೆ ಹೋಗಿ ಕುಳಿತು ಸುಮ್ಮನೆ ಸುತ್ತಲ ವ್ಯವಹಾರಗಳನ್ನ ,ತರಹೇವಾರಿ ಜನಗಳನ್ನ ಕಣ್ಣಲ್ಲಿ ತುಂಬಿಕೊಳ್ಳುವುದೇ ನಿಜಕ್ಕೂ ಖುಷಿ. ಪಾರ್ಕ್ ಎಂದರೆ ನನ್ನ ಪಾಲಿಗೆ ಸಂಜೆ ಹೊತ್ತಿನಲ್ಲಿ ಒಂದೆಡೆ ಜಮೆಯಾದ ಪುಟ್ಟ ಜಗತ್ತು. ಅದು ದೊಡ್ಡ ಜಗತ್ತಿನ ಪುಟ್ಟ ಪ್ರತಿನಿಧಿ. ಎಲ್ಲ ವಯೋಮಾನದ ,ಎಲ್ಲ ಮನೋಧರ್ಮದ ಜನಗಳು ಅಲ್ಲಿ ಸಿಗುತ್ತಾರೆ. ಒಬ್ಬಬ್ಬರೂ ಒಂದೊಂದು ವಿಶಿಷ್ಟ ಚಿತ್ರದಂತೆ ಕಾಣುತ್ತಾರೆ. ಎಲ್ಲ ಚಿತ್ರಗಳೂ ಒಂದಕ್ಕಿಂತ ಒಂದು ಭಿನ್ನ ಹಾಗು ಆಸಕ್ತಿದಾಯಕ.

ಅದು ಪ್ರೇಮ ಕವಿಯ ಪಾರ್ಕು.ಆದರೆ ಅಲ್ಲಿ ಪ್ರೇಮಿಗಳು ಕಾಣಸಿಗುವುದು ತುಂಬಾ ಕಡಿಮೆ. ಸುತ್ತ ನಾಲ್ಕು ಕಡೆ ರಸ್ತೆಯಿಂದ ಸುತ್ತುವರಿದು ನಡುವೆ ದ್ವೀಪದಂತೆ ಆ ಪಾರ್ಕಿದೆ. ಸುತ್ತ ರಸ್ತೆ ಇದೆ ಎಂದ ಮೇಲೆ ಜನಗಳು ಇದ್ದೇ ಇರುತ್ತಾರೆ. ಬಹುಶಃ ಆ ಕಾರಣಕ್ಕೆ ಪ್ರೇಮ ಕವಿಯ ಪಾರ್ಕು ಪ್ರೇಮಿಗಳ ಪಾಲಿಗೆ ಸ್ವರ್ಗವಲ್ಲ. ಆಗೊಮ್ಮೆ ಈಗೊಮ್ಮೆ ತೆಳುವಾಗಿ ಕೆಲವು ಪ್ರೇಮಿಗಳು ಕಾಣಲಿಕ್ಕೆ ಸಿಗುತ್ತಾರೆ.ಆದರೆ ಅವರೆಲ್ಲ ಬೇರೆ ಪಾರ್ಕಿನ ಪ್ರೇಮಿಗಳಿಗಿಂತ ತೀರಾ ತೀರಾ ಭಿನ್ನ. ಕೆ.ಎಸ್.ಎನ್.ಪಾರ್ಕಿನ ಪ್ರೇಮಿಗಳೆಲ್ಲ ತುಂಬಾ ಸಭ್ಯರು. ಈ ಸಭ್ಯತೆಗೆ ಕಾರಣ ಸುತ್ತ ಸುತ್ತುವರಿದು ನಿಂತ ರಸ್ತೆಗಳು ಎಂದು ನಾನು ವಿಶೇಷವಾಗಿ ಒತ್ತಿ ಹೇಳಬೇಕಿಲ್ಲ. ಕೆಲವರು ಮೂಲತಃ ಸಭ್ಯರಂತೆ ಕಾಣುತ್ತಾರೆ. ಇನ್ನು ಕೆಲವರು ಪರಿಸ್ಥಿತಿಯ ಅನಿವಾರ್ಯಕ್ಕೆ ಸಿಕ್ಕು ಸಭ್ಯರಾದ ಅವಕಾಶವಂಚಿತರು. ಕೈಗೆ ಬಂದದ್ದು ಬಾಯಿಗೆ ತಲುಪುವ ಭಾಗ್ಯವಿಲ್ಲದ ನತದೃಷ್ಟರು. ಅವರು ನಗುವಾಗಲೆಲ್ಲ ಅಳಲಾಗದೆ ನಕ್ಕಂತೆ ಕಾಣುತ್ತೆ. ಪ್ರಯತ್ನಪೂರ್ವಕವಾಗಿ ತಮ್ಮ ನಡುವೆ ಒಂದಡಿಯ ಅಂತರ ಬಿಟ್ಟು ಕೂರುವಾಗ ಅಯ್ಯೋ ಪಾಪ ಅನಿಸುತ್ತೆ. ಯಾಕೋ ಗೊತ್ತಿಲ್ಲ.ಅಂಡು ಸುಟ್ಟ ಬೆಕ್ಕು ಬೇಡವೆಂದರೂ ನೆನಪಾಗುತ್ತೆ.

ಪ್ರೇಮಿಗಳೆಲ್ಲ ಹೆಚ್ಚಾಗಿ ನನ್ನದೇ ವಯಸ್ಸಿನವರು. ನನ್ನ ಕಷ್ಟ ಸುಖಗಳೇ ಅವರದ್ದೂ ಕೂಡ .ಆ ಕಾರಣಕ್ಕೆ ಅವರು ನನಗೆ ಅರ್ಥವಾಗುತ್ತಾರೆ. ಈ ಪ್ರೇಮಿಗಳು ಕೆ.ಎಸ್.ಎನ್.ಪಾರ್ಕಿನಲ್ಲಿ ಅಲ್ಪಸಂಖ್ಯಾತರು. ಅಂಕಲ್ಗಳು .ಆಂಟಿಯಂದಿರು ,ಅಜ್ಜಂದಿರು .ಅಜ್ಜಿಯಂದಿರುಗಳು ಇಲ್ಲಿ ಬಹುಸಂಖ್ಯಾತರು. ಅವರು ನನಗೆ ಸುಲಭಕ್ಕೆ ಅರ್ಥವಾಗುವುದಿಲ್ಲ. ಆಂಟಿ ಹಾಗು ಅಂಕಲ್ಗಳ ಹಣೆಯ ಮೇಲಿನ ನೆರಿಗೆ, ಹೊಟ್ಟೆಯ ಮಡಿಕೆಗಳು, ಅಜ್ಜಂದಿರ,ಅಜ್ಜಿಯಂದಿರ ಮುಖದ ಮೇಲಿನ ಮುದುರು, ಕೆಲವೊಮ್ಮೆ ಅವರು ನೋಡುವ ಶೂನ್ಯ ನೋಟ ನನಗೆ ಅರ್ಥವಾಗುವುದಿಲ್ಲ. ಅವರ ಏದುಸಿರು.ಏದುಸಿರ ಜೊತೆ ಜೊತೆಗೆ ಬಿರುಸಾಗುತ್ತ ಹೋಗುವ ನಡಿಗೆಯ ವೇಗದ ಹಿಂದಿನ ದರ್ದು ನನಗೆ ಅರ್ಥವಾಗುವುದಿಲ್ಲ. ಇಷ್ಟು ಕಾಲ ನೆನಪಾಗದ ವ್ಯಾಯಾಮ ಈಗ ಯಾಕೆ ಅನಿವಾರ್ಯವಾಯಿತು ಎಂಬುದು ಅರ್ಥವಾಗುವುದಿಲ್ಲ. ಅಲ್ಲೇ ಕೆಲವರು ನಗೆ ಕೂಟ ಮಾಡಿಕೊಂಡಿದ್ದಾರೆ.ತುಂಬ ಗಂಭೀರವಾಗಿ ಪಾರ್ಕಿಗೆ ಬರುತ್ತಾರೆ.ಸುಖಾಸುಮ್ಮನೆ ಬಿದ್ದು ಬಿದ್ದು ನಕ್ಕಂತೆ ನಕ್ಕು ಮತ್ತೆ ಅಷ್ಟೇ ಗಂಭೀರವಾಗಿ ಮನೆಯ ದಾರಿ ಹಿಡಿಯುತ್ತಾರೆ. ಅವರು ಹಾಗೆ ನಗುವಾಗ ಅವರು ನಕ್ಕಿದ್ದು ನಿಜವಾದ ನಗುವಾ ಅಥವಾ ಅವರೊಳಗೆ ಮಡುಗಟ್ಟಿಹೋದ ಸಂಕಷ್ಟವಾ ಎಂಬುದು ಅರ್ಥವಾಗುವುದಿಲ್ಲ. ನಗುವುದನ್ನೂ .ಖುಷಿಪಡುವುದನ್ನೂ ಒಂದು ಕೆಲಸದಂತೆ ಒಂದು ನಿಗದಿತ ಸಮಯಕ್ಕೆ ಮೀಸಲಾಗಿಸುವ ಮನಸ್ಥಿತಿಯ ಲೆಕ್ಕಾಚಾರಗಳ ಹಿಂದಿನ ಸೂತ್ರ ಅರ್ಥವಾಗುವುದಿಲ್ಲ. ಕೊನೆಗೆ ಅಂಥದ್ದೊಂದು ಲೆಕ್ಕಾಚಾರಕ್ಕೆ ಕಾರಣವಾದ ನಮ್ಮ ನಡುವಿನ ವ್ಯವಸ್ಥೆ ಹೀಗೇಕಾಯಿತು ಎಂಬುದೂ ಅರ್ಥವಾಗುವುದಿಲ್ಲ. ನಾನು ಸುಮ್ಮನೆ ನೋಡುತ್ತೇನೆ. ನನ್ನ ಪರಿಮಿತಿಯಲ್ಲಿ ಯೋಚನೆಗೆ ಬೀಳುತ್ತೇನೆ.

ಎವರ್ ಗ್ರೀನ್ ಅಜ್ಜಂದಿರು

ಇಷ್ಟೆಲ್ಲಾ ಅರ್ಥವಾಗದ ಸಂಗತಿಗಳ ನಡುವೆ ಕೆಲವಷ್ಟು ಚೇತೋಹಾರಿಯಾದ ಅರ್ಥಪೂರ್ಣ ಸಂಗತಿಗಳಿವೆ. ನಾನು ಹಾಗು ನನ್ನ ತಮ್ಮ ಕೂರುವ ಬೆಂಚಿನ ಎದುರು ಒಂದಿಷ್ಟು ಬೆಂಚುಗಳಿವೆ. ಒಂದಿಷ್ಟು ಅಜ್ಜಂದಿರ ಗೆಳೆಯರ ಬಳಗ ಅಲ್ಲಿ ಖಾಯಮ್ಮಾಗಿ ಜಮೆಯಾಗಿರುತ್ತೆ. ಆ ಅಜ್ಜಂದಿರು ಪಾರ್ಕಿಗೆ ಬರುವ ಇತರ ಅಜ್ಜಂದಿರಂತೆ .ಅಂಕಲ್ಗಳಂತೆ ,ಆಂಟಿಗಳಂತೆ ಅಲ್ಲ. ಅವರು ಮುಖ ಗಂಟಿಕ್ಕಿಕೊಂಡು ಕೂತಿದ್ದನ್ನು , ಶೂನ್ಯ ನೋಟದಲ್ಲಿ ಖಾಲಿಯಾಗಿ ಕುಳಿತಿದ್ದನ್ನು ಈತನಕ ನಾನು ಒಂದು ಬಾರಿಯೂ ಕಂಡಿಲ್ಲ. ಅವರಿಗೆ ನಾನು ಎವರ್ ಗ್ರೀನ್ ಅಜ್ಜಂದಿರೆಂದು ಕರೆಯುತ್ತೇನೆ. ಅವರು ಲೋಕಾಭಿರಾಮವಾಗಿ ಹರಟುತ್ತಾರೆ. ಗಲಗಲನೆ ನಗೆಯಾಗುತ್ತಾರೆ. ಅವರ ನಡುವೆ ಚರ್ಚೆಗೆ ಬಾರದ ವಿಷಯಗಳೇ ಇಲ್ಲ. ಆಯಾ ದಿನಗಳ ಎಲ್ಲ ಪ್ರಮುಖ ವಿದ್ಯಮಾನಗಳು ಅಲ್ಲಿ ಚರ್ಚೆಯಾಗುತ್ತವೆ. ಅವರು ತಮ್ಮ ಹರಟೆಯ ನಡುವೆ ವರ್ತಮಾನದ ಜೊತೆ ಜೊತೆಗೆ ಕಳೆದ ನಿನ್ನೆಗಳನ್ನ ಎಳೆದು ತರುತ್ತಾರೆ. ಅವರನ್ನ ಆಲಿಸುತ್ತ ಕುಳಿತರೆ ನನಗೆ ತಿಳಿದುಕೊಳ್ಳಲು ತುಂಬಾ ವಿಷಯಗಳು ಸಿಗುತ್ತೆ . ಅವರನ್ನು ನೋಡುತ್ತಿದ್ದರೆ ತುಂಬಾ ಖುಷಿಯಾಗುತ್ತೆ.

ಸಂಕ್ರಮಣದ ಆ ಸಂಜೆ ....

ಅದು ಸಂಕ್ರಾಂತಿಯ ದಿನದ ಸಂಜೆ.ಅವತ್ತು ಕೂಡ ಪಾರ್ಕಿಗೆ ಹೋಗಿ ಕುಳಿತಿದ್ದೆ .ಪಾರ್ಕ್ ಎಂದಿನಂತೆ ನೂರಾರು ಚಿತ್ರಗಳ ಕೊಲಾಜ್. ಸುಮ್ಮನೆ ನೋಡುತ್ತಾ ಕುಳಿತಿದ್ದೆ. ನಡುವೆ ಹೊಸತೊಂದು ಚೆಂದದ ಚಿತ್ರ ಸೇರಿಕೊಂಡಿತು. ಎಳೆವಯಸ್ಸಿನ ಜೋಡಿಯೊಂದು ಪಾರ್ಕಿನ ಕಾಲು ಹಾದಿಯಲ್ಲಿ ವಾಕಿಂಗ್ ಹೊರಟಿತ್ತು. ಹುಡುಗಿ ತುಂಬು ಗರ್ಭಿಣಿ . ಹುಡುಗಿಯ ನಡಿಗೆಯಲ್ಲಿ ಪ್ರಯಾಸ ಕಾಣುತ್ತಿತ್ತು. ಆದರೆ ಆಕೆಯ ಮುಖದಲ್ಲಿ ತುಂಬಾ ಸಂತೋಷವಿತ್ತು. ಹುಡುಗಿ ಏನೇನೋ ಹೇಳಿಕೊಳ್ಳುತ್ತಾ ಮುಸಿ ಮುಸಿ ನಗುತ್ತಿದ್ದಳು. ಹುಡುಗ ಮಾತ್ರ ಆತಂಕದ ಗೂಡಂತೆ ಕಾಣುತ್ತಿದ್ದ. ಅವಳು ಹೇಳಿದ್ದಕ್ಕೆ .ನಕ್ಕಿದ್ದಕ್ಕೆ ಆತ ಅಷ್ಟಾಗಿ ಗಮನವನ್ನೂ ನೀಡುತ್ತಿರಲಿಲ್ಲ. ಆತ ಆಕೆಯ ತೋಳು ಹಿಡಿದು ಆಕೆಯ ಹೆಜ್ಜೆಯನ್ನೇ ಗಮನಿಸುತ್ತಾ ತುಂಬಾ ಎಚ್ಚರಿಕೆಯಿಂದ ಆಕೆಯನ್ನ ನಡೆಸಿಕೊಂಡು ಬರುವುದರಲ್ಲಿ ಮಗ್ನನಾಗಿದ್ದ. ಆಕೆ ಗರ್ಭಧರಿಸಿದ್ದು ಹುಡುಗನ ಆತಂಕವನ್ನೋ ? ಆಕೆಯ ಖುಷಿಯನ್ನೋ? ಎಂಬುದು ಅರ್ಥವಾಗಲಿಲ್ಲ. ಇವರು ಇಂದಿನಂತೆಯೇ ಮುಂದೆ ಇರುತ್ತಾರ? ಅಥವಾ ಕೆಲವು ವರುಷಗಳ ನಂತರ ಇದೇ ಪಾರ್ಕಿನಲ್ಲಿ ಉಳಿದ ಅಂಕಲ್ಗಳು ಹಾಗು ಆಂಟಿಗಳಂತೆ ಆಗಿ ಹೋಗುತ್ತಾರಾ ? ಎಂಬುದೂ ನನಗೆ ಅರ್ಥವಾಗಲಿಲ್ಲ.

ಅಷ್ಟು ಹೊತ್ತಿಗೆ ನಮ್ಮ ಎವರ್ ಗ್ರೀನ್ ಅಜ್ಜಂದಿರು ಒಬ್ಬೊಬ್ಬರಾಗಿ ಪಾರ್ಕಿಗೆ ಬಂದು ನನ್ನೆದುರಿನ ಬೆಂಚುಗಳಲ್ಲಿ ಸ್ಥಾಪಿತರಾದರು.ಎಂದಿನಂತೆ ಹರಟಿದರು.ಗಲಗಲನೆ ನಗೆಯಾದರು. ನಾನು ಎಂದಿನಂತೆ ಅವರಿಗೆ ಕಿವಿಯಾಗಿ ಕುಳಿತೆ.ಖುಷಿಪಟ್ಟೆ.ಕೊನೆಗೆ ಆ ಅಜ್ಜಂದಿರು ತಮ್ಮತಮ್ಮಲ್ಲೇ ಎಳ್ಳು ಬೆಲ್ಲ ಹಂಚಿಕೊಂಡು ಶುಭಾಶಯ ಹೇಳಿಕೊಂಡರು. ಅಲ್ಲಿ ಅರ್ಥವಾಗದ ಸಂಗತಿಗಳು ಏನೂ ಇರಲಿಲ್ಲ. ಅಲ್ಲಿದ್ದದ್ದು ಕೇವಲ ಖುಷಿ ಖುಷಿ ಹಾಗು ನನ್ನ ನಾಳೆಗಳು ಈ ಅಜ್ಜಂದಿರಂತೆಯೇ ಇರಲಿ ಎಂಬ ಹಾರೈಕೆಯಷ್ಟೇ ...

8 comments:

ಶಾಂತಲಾ ಭಂಡಿ (ಸನ್ನಿಧಿ) said...

ಗೌತಮ...
ಚೆಂದ ಉಂಟು ಬರಹ.

ಎಲ್ಲಿದೆ ಈ ಪಾರ್ಕು? ಬ್ಯಾಂಕ್ ಕಾಲೊನಿ? ಹನುಮಂತನಗರ?
ಎದ್ರಿಗೆ ಸುಟ್ಟಿದ್ದು ಜೋಳ ಮಾರ್ತಾರ ಗಾಡಿಯಲ್ಲಿ?

ಪ್ರೀತಿಯಿಂದ,
-ಶಾಂತಲಾ ಭಂಡಿ

Ashok.V.Shetty, Kodlady said...

sundara baraha..

ಗೌತಮ್ ಹೆಗಡೆ said...

@ ಶಾಂತಲತ್ತಿಗೆ

ಇದು ಎಂತು ಮಾರಾಯ್ರೇ ? ನೀವು ಉಂಟು ಗಿಂಟು ಅಂಥ ಅಂತಿದೀರಿ .ಇದು ಎಂತದು ಮಾರಾಯ್ರೇ. ಯಾರತ್ರೋ ಮಾತಾಡಿದ ಹಾಗೆ ಅನ್ನಿಸ್ತ ಉಂಟು .:)

ಹ್ಮಂ ಬ್ಯಾಂಕ್ ಕಾಲೋನಿ ಲೇ. ಆಲ್ಲೇ ಅಂದ್ರೆ ಅಲ್ಲೇ ಅಲ್ಲ. ಅಲ್ಲೇ ಹತ್ರ. ಉಳಿದದ್ದೆಲ್ಲ ನೀನು ಹೇಳ್ದಂಗೆಯಾ :)

ಚೆಂದ ಉಂಟು ಬರಹ ಎಂದಿದ್ದೀರಿ. ಆ ಕಾರಣಕ್ಕೆ ನನ್ನ ಕಡೆಯಿಂದ ಒಂದು ಥ್ಯಾಂಕ್ಸ್ ಉಂಟು :)

ಗೌತಮ್ ಹೆಗಡೆ said...

@ ಅಶೋಕ್ ಕುಡ್ಲಾಯ

ಪ್ರತಿಕ್ರಿಯೆ ನೀಡಿ ಬೆಂಬಲಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಶೋಕ್ ಅವರೆ :):)

ಅನಿಲ್ ಬೇಡಗೆ said...

ಗೌತಮ್,
ಪಾರ್ಕಿನ ಸುಂದರ ವಿವರಣೆ..
ಎವರ್ ಗ್ರೀನ್ ಅಜ್ಜಂದಿರು ಸೂಪರ್.. :)

ಸುಧೇಶ್ ಶೆಟ್ಟಿ said...

sundhara sanjegaLu :)

baraha chennagide :)

ಗೌತಮ್ ಹೆಗಡೆ said...

@ಅನಿಲ್

ಧನ್ಯವಾದ ಅನಿಲ್ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ :)

ಗೌತಮ್ ಹೆಗಡೆ said...

@ ಸುಧೇಶ್

ಧನ್ಯವಾದ ಸುಧೇಶ್ ಅವರೆ ಪ್ರತಿಕ್ರಿಯೆ ನೀಡಿ ಮೆಚ್ಚಿಗೆ ವ್ಯಕ್ತಪಡಿಸಿದ್ದಕ್ಕೆ :)