Sunday, August 12, 2012

ಆ ಒಂದು ದಿನದ ಡೈರಿ ; ಮಾಜಿ ಡಾನ್ ಮತ್ತವನ ಸಹಚರರು ...ಅವತ್ತು ಭಾನುವಾರ. ನನ್ನ ಎಲ್ಲ ವಾರಗಳ  ಕೊನೆಯ ಎರಡು ದಿನಗಳನ್ನು ಆಗ ಸ್ಟುಡಿಯೋ ಭೇಟಿಗೆ ಮೀಸಲಿಡುತ್ತಿದ್ದೆ. ವಾರದ ಮೊದಲಿನ ಐದು ದಿನಗಳು ಕಂಪನಿಯಲ್ಲಿನ ನನ್ನ ವೃತ್ತಿಗೆ ಹಾಗು ಉಳಿದ ಇನ್ನೆರೆಡು ದಿನಗಳು ಸಿನೆಮಾ ಎಂಬ ನನ್ನ ಪ್ರವೃತ್ತಿಗೆ ಎಂಬ ಲೆಕ್ಕಾಚಾರ. ಸ್ಟುಡಿಯೋದಲ್ಲಿ ನನಗೆ ಸಿಕ್ಕ ಅಪರೂಪದ ಅನುಭವಗಳು ಅನೇಕ.ಅಂಥಹ ಅಪರೂಪದ ಅನುಭವಗಳಲ್ಲಿ ಒಂದನ್ನು ಈ ದಿನ ನಿಮ್ಮ ಮುಂದಿಡುತ್ತಿದ್ದೇನೆ.


ಆ ಭಾನುವಾರ ಕೂಡ ಎಂದಿನಂತೆ ಸ್ಟುಡಿಯೋ ಗೆ ಹೋಗಿದ್ದೆ. ಮ್ಯೂಸಿಕ್ ಡೈರೆಕ್ಟ್ರು ಯಾರೊಡನೆಯೋ ಒಂದು ಹೊಸಾ ಸಿನೆಮಾದ ಬಗ್ಗೆ ಮಾತನಾಡುತ್ತ ಕುಳಿತಿದ್ದರು.ಅಂತ ಸಮಯಗಳಲ್ಲಿ ನನಗೆ ಅಥವಾ ಇನ್ಯಾರಿಗೂ ಅವರ ರೂಮಿಗೆ ಎಂಟ್ರಿ ನಿಷಿದ್ಧ. ಆ ಸೂಕ್ಷ್ಮಗಳೆಲ್ಲ ಮೊದಲೇ ತಿಳಿದಿದ್ದರಿಂದ ನಾನು ಪಕ್ಕದ ರೂಮಿನಲ್ಲಿ ನಾನು ತಂದಿಟ್ಟುಕೊಂಡಿದ್ದ ಪೇಪರ್ ಬಿಡಿಸಿ ಓದುತ್ತಾ ಕುಳಿತೆ.ನನ್ನೆದುರಿನ ಸೋಫಾದಲ್ಲಿ ಇಬ್ಬರು ಕುಳಿತಿದ್ದರು. ನಾನು ಬಂದು ಕೂತಾಗ ಒಮ್ಮೆ ಮೇಲಿನಿಂದ ಕೆಳಗಿನ ತನಕ ನಿರ್ಭಾವುಕವಾಗಿ ನೋಡಿದರು. ನಾನೂ ಅಷ್ಟೇ ನಿರ್ಭಾವುಕವಾಗಿ ಅವರನ್ನೊಮ್ಮೆ ನೋಡಿ ಕುಳಿತಿದ್ದೆ. ಸ್ವಲ್ಪ ಸಮಯದ ನಂತರ ಆ ಇಬ್ಬರಲ್ಲಿ ಒಬ್ಬ ಸಾರ್ ಎಂದು ಬಳಿಗೆ ಬಂದ.ಏನು ಎಂದು ಕೇಳಿದೆ.ಪೇಪರ್ ಬೇಕಿತ್ತು ಒಮ್ಮೆ ಕೊಡಿ ಎಂದು ದೇಶಾವರಿ ನಗೆ ನಕ್ಕ.ನಾನೂ ನಕ್ಕು ಅದಕ್ಕೇನು ತಗೋಳಿ ಸಾರ್ ಎಂದು ಕೊಟ್ಟೆ.ಅಲ್ಲಿಗೆ ನಮ್ಮಲ್ಲಿ ಒಂದು ಬಗೆಯ ಸಲುಗೆ ಅನಾಯಾಸವಾಗಿ ಚಿಗಿತುಕೊಂಡಿತ್ತು.’ಸಾರ್ ಪೇಪರ್ ನಿಮ್ಮ ಬಳಿಯೇ ಇರಲಿ.ನಾನು ಊಟ ಮುಗಿಸಿ ಬರುತ್ತೇನೆ ಎಂದು ಎದ್ದು ಹೊರಟೆ.ಸರಿ ನೀವು ಆರಾಮವಾಗಿ ಊಟ ಮುಗಿಸಿ ಬನ್ನಿ ಬಾಸ್ .ನಾವಿಲ್ಲೇ ಇರುತ್ತೇವೆ ಎಂದು ಮತ್ತೊಮ್ಮೆ ನಕ್ಕು ಕೈ ಕುಲುಕಲು ಕೈ ಮುಂದೆ ಮಾಡಿದ. ಮೊದಲು ಅವನಿಗೆ ಕೊನೆಗೆ ಜೊತೆಗಿದ್ದ ಇನ್ನೊಬ್ಬನಿಗೂ ಕೈಕೊಟ್ಟು ನಾನು ಊಟಕ್ಕೆ ಹೊರಟೆ.

   ಊಟ ಮುಗಿಸಿ ಬರುವಷ್ಟರಲ್ಲಿ ಸ್ಟುಡಿಯೋಗೆ  ಹತ್ತಿ ಹೋಗುವ ಮೆಟ್ಟಿಲ ಬಳಿ ಒಬ್ಬ ನಿಂತಿದ್ದ.ಅವನು ಕೂಡ ಒಮ್ಮೆ ನನ್ನನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ. ಅವನ ಕಣ್ಣಲ್ಲಿ ಸಣ್ಣಗೆ ಒಂದು ಶಂಕೆ ಸುಳಿದು ಹೋಗಿದ್ದನ್ನು ಗಮನಿಸಿ ನಾನು ಮೆಟ್ಟಿಲೇರಿ ಮೇಲೆ ಬಂದುಬಿಟ್ಟೆ. ಡೈರೆಕ್ಟಾರ್ ರೂಂ ಪಕ್ಕದ,ನಾನು ಮೊದಲು ಹೇಳಿದ ರೂಮಿನೆಡೆ ಒಮ್ಮೆ ನೋಡಿದೆ.ಆ ಇಬ್ಬರು ಅಲ್ಲೇ ಇದ್ದರು.ನನ್ನನ್ನೊಮ್ಮೆ ನೋಡಿ ಕೈ ಬೀಸಿ ನಕ್ಕರು.ಮತ್ತೆ ನಾನೂ ಒಮ್ಮೆ ನಕ್ಕು ನೀರು ಕುಡಿಯಲೆಂದು ಸ್ಟುಡಿಯೋ ದ ಇನ್ನೊಂದು ಭಾಗಕ್ಕೆ ಬಂದೆ.ಅಲ್ಲಿ ಇನ್ನೊಬ್ಬ ಕಂಡ.ಆತ ಅತ್ತಿಂದಿತ್ತ ಸುಮ್ಮನೆ ಮತ್ತದೇ ನಿರ್ಭಾವುಕತೆಯಲ್ಲಿ  ಗಸ್ತು ತಿರುಗುವನಂತೆ ಓಡಾಡಿಕೊಂಡಿದ್ದ.ಆಗೊಮ್ಮೆ ಈಗೊಮ್ಮೆ ಸ್ಟುಡಿಯೋದ ಹಿಂಭಾಗದ ಜಾಗವನ್ನ ಮೇಲಿನಿಂದಲೇ ಗಮನಿಸುತ್ತಿದ್ದ.ಯಾಕೋ ಸ್ಟುಡಿಯೋ ಎಂದಿನಂತಿಲ್ಲ  ಎಂದುಕೊಂಡು ನಾನು ಮತ್ತೆ ಡೈರೆಕ್ಟಾರ್ ರೂಂ ಪಕ್ಕದ ರೂಮಿನೆಡೆ ಹೊರಟೆ.

   ಅಲ್ಲೊಂದು ಶಾಕ್ ನನಗಾಗಿ ಕಾದಿತ್ತು. ರೂಮಿಗೆ ಹೋಗುವ ಬಾಗಿಲಲ್ಲಿ ಒಬ್ಬ ನನ್ನನ್ನು ತಡೆದ. ಜೊತೆಗೆ ಅಷ್ಟು ಹೊತ್ತು ನನ್ನೆದುರು ಕುಳಿತು ನನ್ನಿಂದಲೇ ಪೇಪರ್ ತೆಗೆದುಕೊಂಡು ಓದಿದ ಆ ಇಬ್ಬರೂ ಕೂಡ ಧಾವಂತದಲ್ಲಿ ಎದ್ದು ನನ್ನ ಬಳಿ ಬಂದು ಬಿಟ್ಟರು. ಜೊತೆಗೆ ಇನ್ನಿಬ್ಬರು. ಎಲ್ಲಿದ್ದರೋ ಗೊತ್ತಿಲ್ಲ.ಅವರೂ ಬಂದು ನನ್ನ ಸುತ್ತ ನಿಂತು ಬಿಟ್ಟರು. ರೂಮ್ ಒಳಗಿನಿಂದ ಯಾವುದೋ ಒಂದು ಧ್ವನಿ ಅವರಲ್ಲಿ ಒಬ್ಬನನ್ನು ಕರೆಯಿತು.ಒಳಗೆ ಹೋಗಿ ಬಂದ ಆತ ನನ್ನನ್ನು ಒಳಗೆ ಬರುವಂತೆ ಕರೆದ. ಅಲ್ಲಿ ನನಗೆ ಇನ್ನೊಂದು ದೊಡ್ಡ ಶಾಕ್ ಕಾದಿತ್ತು.

ಅವರು ಮಾಜಿ ಡಾನ್. ನಾನು ಅವರೆದುರು ನಿಂತಿದ್ದೆ.ಹೊರಡಲಿಕ್ಕೆ ಅನುವಾಗಿ ಸ್ಟುಡಿಯೋ ರೆಕಾರ್ಡಿಂಗ್ ರೂಮಿನಿಂದ ಹೊರಬಂದು ನಾನು ಮೊದಲು ಕುಳಿತಿದ್ದ ರೂಮಿಗೆ ಬಂದು ಕೂತಿದ್ದರು.ಜೊತೆಗೆ ನನ್ನ ಡೈರೆಕ್ಟ್ರು. ‘ಯಾರು ನೀನು’ ಎಂದು ಗಂಭೀರವಾಗಿ  ಕೇಳಿದರು. ಪಕ್ಕದಲ್ಲಿದ್ದ ಡೈರೆಕ್ಟ್ರು ತಡಮಾಡದೆ ನನ್ನ ಸಹಾಯಕ್ಕೆ ಬಂದರು .’ಅವನು ನಮ್ಮವನೇ ಸಾರ್. ಹಾಡು ಬರೀತಾನೆ’ ಎಂದು ಹೇಳಿದಾಗ ಡಾನ್ ತಣ್ಣಗಾದರು.ಗಂಭೀರ ಮುಖದಲ್ಲಿ ಮಂದಹಾಸ ಮೂಡಿತು. ಬನ್ನಿ ಕೂತುಕೊಳ್ಳಿ ಎಂದು ಕೈ ಕುಲುಕಿದರು. ಅವರು ಅಷ್ಟು ಹೇಳುತ್ತಿದ್ದಂತೆ ಅಲ್ಲಿದ್ದ ಅವರ ಬೆಂಗಾವಲಿನ ಪಡೆಯ  ಅಷ್ಟೂ ಮಂದಿ ‘ಸಾರೀ ಸಾರ್’ ಎಂದು ಹೇಳಿ ನಕ್ಕು ಹೋದರು.ಈಗ ರೂಮಿನಲ್ಲಿ ನಾನು, ಡೈರೆಕ್ಟ್ರು ಮತ್ತು ಮಾಜಿ ಡಾನ್ ಅಷ್ಟೇ. ಸ್ವಲ್ಪ ಹೊತ್ತು ಅವರು ಸಿನೆಮಾದ ಹಾಡುಗಳ ಬಗ್ಗೆ ಮಾತಾಡಿಕೊಂಡರು.ನಾನು ಸುಮ್ಮನೆ ನೋಡುತ್ತಾ ಕುಳಿತಿದ್ದೆ. ಮಾತಿನ ನಡುವೆ ಕೆಲವೊಮ್ಮೆ ಮೌನ ಆಗೊಮ್ಮೆ ಈಗೊಮ್ಮೆ ಇಣುಕುತ್ತಿತ್ತು. ಜೀವನದಲ್ಲಿ ಮೊದಲ ಬಾರಿಗೆ ಮೌನಕ್ಕೆ ಇರಬಹುದಾದ ಆಳವನ್ನ,ಅರ್ಥವನ್ನ  ಅರಿವಿಗೆ ತಂದುಕೊಂಡಿದ್ದೆ. ಡೈರೆಕ್ಟ್ರು ತುಂಬಾ ವಿಧೇಯತೆಯಿಂದ ಡಾನ್ ಮಾತುಗಳನ್ನ ಕೇಳಿಸಿಕೊಳ್ಳುತ್ತಿದ್ದರು.ಡಾನ್ ಮಾತನಾಡಿದ್ದೇ ಜಾಸ್ತಿ. ಡೈರೆಕ್ಟ್ರು ಡಾನ್ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಿದ್ದರು.ಆಗೊಮ್ಮೆ ಈಗೊಮ್ಮೆ ‘ಹ್ಮ್ಮ್’ ‘ಸರಿ ಸರಿ ಸಾರ್’   ಎಂದಷ್ಟೇ ಹೇಳುತ್ತಿದ್ದರು.

  ಕೊನೆಗೆ ಡಾನ್ ಹೊರಟರು. ಅವರನ್ನು ಬೀಳ್ಕೊಡಲು ನಾನು ಹಾಗು ನಮ್ಮ ಡೈರೆಕ್ಟ್ರು ಎದ್ದು ಅವರ ಜೊತೆ ಹೊರಟೆವು.ಸ್ಟುಡಿಯೋದ ಮೊದಲನೇ ಮಹಡಿಯಿಂದ ಕೆಳಗೆ ಬರುವತನಕ ಐದು ಮಂದಿ ಮಾರಿಗೊಬ್ಬರಂತೆ  ಮೆಟ್ಟಿಲುಗಳ ಪಕ್ಕ ನಿಂತಿದ್ದರು. ಸ್ಟುಡಿಯೋ ಬಾಗಿಲಲ್ಲಿ ಇನ್ನಿಬ್ಬರು. ಡಾನ್ ಸ್ಟುಡಿಯೋ ದಿಂದ ಹೊರಬರುತ್ತಿದ್ದಂತೆ ಎಲ್ಲರೂ ಅವರ ಸುತ್ತ ಎಲ್ಲ ಕಡೆಯಿಂದ ಸುತ್ತುವರಿದು ನಿಂತರು.ನಡುವೆ ವೃತ್ತದಲ್ಲಿ ನಾನು ,ಡೈರೆಕ್ಟ್ರು ಮತ್ತು ಡಾನ್.ಹೋಗುವ ಮುನ್ನ ಒಂದಿಷ್ಟು ಲೋಕಾಭಿರಾಮದ ಮಾತಿನ ಸಮಯವದು.ಮಾತು ಸಾಗುತ್ತಿತ್ತು .ನಾನು ಸುಮ್ಮನೆ ಸುತ್ತಲೂ ಗಮನಿಸುತ್ತ ನಿಂತಿದ್ದೆ.ಸ್ಟುಡಿಯೋ ಎದುರಿನ ರಸ್ತೆಯ ಶುರುವಿನಲ್ಲಿ ಇನ್ನೊಬ್ಬ ಕಂಡ.ಆತ ಕಣ್ಣಲ್ಲಿ ಕಣ್ಣಿಟ್ಟು ಸುತ್ತಲಿನ ಜಾಗವನ್ನ ಗಮನಿಸುತ್ತಾ ನಿಂತಿದ್ದ. ನಡುವೆ ಎಲ್ಲಿಂದಲೋ ಸ್ಟುಡಿಯೋ ರಸ್ತೆಯ ಇನ್ನೊಂದು ತುದಿಯಿಂದ ಬೈಕೊಂದು ಬರ್ರನೆ ನಮ್ಮ ಹಿಂದೆ ಹೋಯಿತು.ಆಗ ನೋಡಬೇಕಿತ್ತು ಡಾನ್ ನ ಇಡೀ ಟೀಮು ಬೈಕ ಹೋದ ಕಡೆ ಧಾವಂತಕ್ಕೆ ಬಿದ್ದು ನೋಡಿದ ರೀತಿ. ಒಂದೆರೆಡು ಕ್ಷಣ ತಣ್ಣನೆಯ ಮೌನ.ಅಷ್ಟು ಜನರಿದ್ದರೂ ಸುತ್ತ ,ಇಡೀ ಆ ಪ್ರದೇಶ ನಿರ್ಜನವಾದಂತೆ ಭಾಸವಾಯಿತು.ಅದು ನಿಶ್ಚಲವಾದ ಕೊಳಕ್ಕೆ ಕಲ್ಲು ಬಿದ್ದ ಘಳಿಗೆ.ಬೈಕು ತಿರುವಿನಲ್ಲಿ ಮಾಯವಾದ ನಂತರ ಪರಿಸ್ಥಿತಿ ಮತ್ತೆ ಮರಳಿ ಮೊದಲಿನಂತಾಯಿತು.ಮೊದಲು ಡಾನ್ ನನ್ನ ಹಾಗು ಡೈರೆಕ್ಟರ ಕೈ ಕುಲುಕಿದರು.ನಂತರ ಇಡೀ   ಟೀಂ ನ ಮಂದಿ ಅದನ್ನೇ ಅನುಸರಿಸಿದರು.ಅಷ್ಟು ಮಾಡಿ  ಡಾನ್ ಮತ್ತು ಅವರ ಬಳಗ ಅಲ್ಲಿಂದ ಹೊರಟುಹೋಯಿತು.

  ಈ ಎಲ್ಲ ವಿದ್ಯಮಾನಗಳು ನನ್ನ ಕಣ್ಣೆದುರು ಕನಸಿನಂತೆ ನಡೆದು ಹೋದವು.ಸಿನೆಮಾದ ರೀಲ್ ನಲ್ಲಿ ಅಷ್ಟೇ ಕಂಡ ಸಂಗತಿಗಳು ರಿಯಲ್ ಆಗಿ ಅನುಭವಕ್ಕೆ ಬಂದವು. ಆ ಡಾನ್ ಅವರನ್ನು ಉಪೇಂದ್ರರ ಓಂ ಸಿನಿಮಾದಲ್ಲಿ ಕಂಡಿದ್ದೆ.ಈಗ ಕಣ್ಣೆದುರು. ಹುಡುಕಿಕೊಂಡು ಹೋದರೂ  ಸಿಕ್ಕದ ಅಪರೂಪದ ಅನುಭವ ಆ ದಿನ ನನ್ನದಾಯಿತು.ಇಂಥ ಅಪರೂಪದ ಅನೇಕ ಅನುಭವಗಳನ್ನ ಕೊಡಮಾಡಿದ ನನ್ನ ಸಿನೆಮಾ ಪ್ರೀತಿಗೆ ನಾನು ಯಾವತ್ತೂ ಋಣಿ J J

ಕೊನೆಗೊಂದಿಷ್ಟು ಮಾತು........

 ಅವರು ಅಷ್ಟು ದೊಡ್ಡ ಡಾನ್.ನನ್ನಂಥ ಕ್ಷುದ್ರ ಜೀವಿಗೆ ,ಎಲ್ಲಿಂದಲೋ ಬಂದು ಪಕ್ಕದಲ್ಲಿ ಹಾದುಹೋದ ಬೈಕಿನೆಡೆ ಅಷ್ಟೊಂದು ಭಯಬಿದ್ದರಲ್ಲ.ಈವತ್ತಿಗೂ ಅವನ್ನೆಲ್ಲ ನೆನೆಸಿಕೊಂಡರೆ ಒಂದು ಅನಾಯಾಸ ನಗು ನನ್ನಲ್ಲಿ ಹುಟ್ಟುತ್ತೆ.ಡಾನ್ ಬದುಕು ಒಂದು ರೀತಿ ಬಂಗಾರದ ಪಂಜರದೊಳಗಿನ ಹಕ್ಕಿಯಂತೆ. ಅಷ್ಟೇ.
  

12 comments:

ಸುಬ್ರಮಣ್ಯ said...

ಯಾರಾ ಡಾನ್? ಬೆಕ್ಕಿನ ಕಣ್ಣಿನ ರಾಜೇಂದ್ರ??

ಗೌತಮ್ ಹೆಗಡೆ said...

@ M.D.S ಅವರು ಯಾರೆಂದು ಹೇಳುವನ್ತಿದ್ದರೆ ಬರಹದಲ್ಲೇ ಹೇಳಿಬಿಡುತ್ತಿದ್ದೆ..ನಾನು ಹೇಳುವಂತಿಲ್ಲ . ಒಮ್ಮೆ ಯೋಚಿಸಿ .ಉತ್ತರ ಹೊಳೆಯುತ್ತೆ ..ಉತ್ತರ ಸಿಕ್ಕರೆ ನನಗೂ ಹೇಳಬೇಡಿ .ನಿಮ್ಮಲ್ಲೇ ಇರಲಿ :) :)

sunaath said...

ಅಬ್ಬಾ!

ವಿ.ರಾ.ಹೆ. said...

ರೋಚಕ ಅನುಭವ !

ಸುಷ್ಮಾ ಮೂಡುಬಿದಿರೆ said...

ಕುತೂಹಲಕಾರಿ ಅನುಭವ...
ಡಾನ್ ಯಾರೆಂದು ನನಗೂ ತಿಳಿಯಲಿಲ್ಲ....

ushodaya said...

who is don????????????????

ಸುಪ್ತವರ್ಣ said...

ಮುತ್ತಪ್ಪ ರೈ ಹೆಸರು ಹೇಳಲು ನೀವು ಆತನಿಗಿಂತ ಜಾಸ್ತಿ ಹೆದರುತ್ತೀರಲ್ಲ!

ಗೌತಮ್ ಹೆಗಡೆ said...

@SUPTAVARNA;


Why should i fear about the 'DON'? they will not harm anyone unless we do something harm to them. In this artile the Subject is my experience.I am the narrator. Then why should i bring the names of others.A writer should have some responsibility while writing.he should know what to write and what not.try to read with some senisibility.

ಸುಪ್ತವರ್ಣ said...

" they will not harm anyone unless we do something harm to them" ಹಾವುಗಳ ಬಗ್ಗೆ ನನ್ನಕ್ಕ ಇದೇ ಮಾತನ್ನು ಹೇಳಿದ ನೆನಪು. ಇರಲಿ ಬಿಡಿ. ತಮಾಷೆಗೆ ಬರೆದ ಕಮೆಂಟಿಗೆ ತಾವು ಇಷ್ಟೊಂದು rash ಯಾಕಾದಿರೆಂದು ನನಗರ್ಥವಾಗಲಿಲ್ಲ. ಏನೋ! ತಾವು sensibility ಇರುವ ಕವಿವರ್ಯರು. ನಮ್ಮಂಥ ಪಾಮರರಿಗೆಲ್ಲಿ ಅದು ಅರ್ಥವಾಗಬೇಕು?

ಗೌತಮ್ ಹೆಗಡೆ said...

@ suptavarna

ಸಾರ್..ನಾನು ನಿಮಗೆ ಉತ್ತರಿಸುವ ಸಂದರ್ಭದ ನನ್ನ ಮನಸ್ಥಿತಿಯೋ ಅಥವಾ ವಯಸ್ಸಿನ ಸೊಕ್ಕೋ ಗೊತ್ತಿಲ್ಲ.ನಿಮ್ಮ ಕಾಮೆಂಟ್ ನೋಡಿ ನಾನು ನಿಮಗೆ ಹಾಗೆ ಹೇಳಬಾರದಿತ್ತು ಅನ್ನಿಸಿದೆ.ನೀವು ಕುಚೋದ್ಯ ಮಾಡುತ್ತಿದ್ದೀರಿ ಎಂದುಕೊಂಡು ಹಾಗೆ ಉತ್ತರ ಕೊಟ್ಟೆ.ನೀವು ನನಗಿಂತ ದೊಡ್ಡವರು ಎಂಬ ನಂಬಿಕೆ ನನ್ನದು.ನನಗಿನ್ನೂ ಇಪ್ಪತ್ತೈದು..ಸಣ್ಣವ ನಾನು.ನನ್ನ ಸಣ್ಣತನಕ್ಕೆ ನನಗೇ ಹೇಸಿಗೆಯೆನಿಸಿದೆ..ದಯವಿಟ್ಟು ಕ್ಷಮಿಸಿ.

ಸುಪ್ತವರ್ಣ said...

ಇರ್ಲಿ ಇರ್ಲಿ...ಒಮ್ಮೊಮ್ಮೆ ಹೀಗೂ ಆಗುವುದೂ..... :-)

ದಿನಕರ ಮೊಗೇರ said...

chennaagin narrate maaDiddiri....

nanagU tiLiyalilla yaarendu..../
kutuhala iddE ide.....

well written....