ಅಲ್ಲಿ ದೂರದಲ್ಲಿ ಎಲ್ಲೋ ಸೆಳೆತದ ಸೆಲೆ
ಸೆಳೆಯುತಿದೆ ವಿನಾಕಾರಣ
ಇಲ್ಲೇ ಕುಳಿತೇ ಇದ್ದ ನನ್ನನು
ಕಣ್ಮುಚ್ಚಿದರೆ ಒಳಗೆಲ್ಲೋ ಕಂಡರೂ ಕಾಣದ
ಮಸಕು ಮಸಕು ಚಿತ್ರ.
ಕಣ್ತೆರೆದರೆ ಶೂನ್ಯ ನೀಲಾಕಾಶ
ನನಸಾಗದ ಕನಸುಗಳು ಒಂದಿಷ್ಟು
ಜೊತೆಗೊಂದಿಷ್ಟು ಮಧುರ ವಿಷದಂಥ ನೆನಪು
ಉಳಿದದ್ದು ಹಗಲುಗನಸು.
ಸಾಗುವ ದಾರಿಗುಂಟ
ಒಮ್ಮೆ ಬಿಸಿಲು ಒಮ್ಮೆ ನೆರಳು
ನಡುವೆಲ್ಲೋ ಒಮ್ಮೆ
ಬಿಸಿಲು ನೆರಳು ಯಾವುದೂ ಇರದೇ
ಭರಪೂರ ಗೊಂದಲ.
ಹುಟ್ಟಿದ್ದಕ್ಕೆ ಪ್ರಾಯಶ್ಟಿತವೆಂಬಂತೆ ಬದುಕು
ಸಾಯುವತನಕ ಬದುಕಿಯೇ ಇರು
ಕ್ಷಣಕ್ಕೊಮ್ಮೆ ಸತ್ತು ಸತ್ತು ಬದುಕಿದರೂ ಸರಿಯೇ.
ಹಾಳು ಅರ್ಥವಾಗದ ತತ್ವ
ಯಾರೋ ಬೆಳಕು ಕಂಡ ಅಲೆಮಾರಿ ಹೇಳಿ ಹೋದ ನೆನಪು.
ಹೇಳಿ ಹೋದವನು ಹೋದ
ಎತ್ತ ಹೋದನೋ
ಆದರೂ ಆತ ನನ್ನಲ್ಲೇ ಉಳಿದ
ಮರಳಿ ಮರಳಿ ಪಿಸುಗುಡುವ ಗುಂಗಾಗಿ.
ಗುಂಗಲ್ಲೇ ಮೈಮರೆತು ಕುಳಿತದ್ದೇ ಬಂತು
ಸಂಜೆ ಕಳೆದು ರಾತ್ರಿ ಸುರಿವ ಹೊತ್ತು
ನಾ ಬಂದ ದಾರಿಯೂ ಕಾಣುತಿಲ್ಲ
ಅತ್ತ ಆತ ಹೋದ ದಾರಿಯೂ ....
3 comments:
ಉತ್ತಮ ಕವನ.
ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕಷ್ಟೆ!
ಎತ್ತಲೋ ಎಳೆಯುವಂತಿವೆ ಸಾಲ್ಗಳು
ಚಲೊ ಇದ್ದು ಮಾಣೀಭಾವಾ!
Post a Comment