Sunday, November 21, 2010

ಹಾಸ್ಟೆಲ್ ಚಿತ್ರಗಳು - ೧

ಷಣ್ಮುಗಂ.....

ಕಾಲೇಜ್ ಕ್ಯಾಂಪಸ್ಸಿನ ಗೇಟ್ ಬಳಿ ಹೋಗುತ್ತಿದ್ದಂತೆ ಆತ “ ನಮಸ್ತೆ ಸರ್ ‘ ಎಂದು ಎದುರಾಗುತ್ತಾನೆ ಒಂದು ಪರಿಶುದ್ಧ ಮಂದಹಾಸದೊಡನೆ . ಆತ ಕ್ಯಾಂಪಸ್ ಸೆಕ್ಯೂರಿಟಿ ಗಾರ್ಡ್ ಷಣ್ಮುಗಂ . ಅದು ಹೇಳಿ ಕೇಳಿ ಎಂ.ಬಿ.ಎ ಕಾಲೇಜು. ಮ್ಯಾನೇಜ್ ಮೆಂಟ್ ವಾತಾವರಣದಲ್ಲಿ ನಿಮಗೆ ಎಲ್ಲಿ ಹೋದರೂ ನಗುಮುಖಗಳು ಎದುರಾಗುತ್ವೆ. ಎಲ್ಲವೂ ಬಲವಂತದ ಬಸಿರು ಹಡೆದ ನಗುವಿನ ಮುಖವಾಡಗಳು. ಎದುರು ಸಿಕ್ಕಾಗ ಅತೀ ಎಂಬಷ್ಟು ನಯವಾಗಿ ನಕ್ಕು ಹಾಯ್ ಹೇಳಿ ಮರುಕ್ಷಣವೇ ಮಲಬದ್ಧತೆ ಪೀಡಿತರ ರೀತಿ ಮುಖ ಮಾಡಿಕೊಂಡು ಹೋಗಿಬಿಡುತ್ತಾರೆ . ನಮ್ಮ ಷಣ್ಮುಗಂ ಹಾಗಲ್ಲ. ಬಿಸಿಲೆ ಬರಲಿ ಮಳೆಯೇ ಇರಲಿ ಆತ ಸದಾ ಮನಸಾರ ಹಸನ್ಮುಖ. ಗೇಟ್ ಬಳಿ ಯಾವಾಗ ಬಂದರೂ ಅಲ್ಲೊಂದು ಕಪ್ಪು ಹಿನ್ನೆಲೆಯಲ್ಲಿ ಅರಳಿದ ಬೆಳ್ಳಿ ನಗೆಯೊಂದು ಸ್ವಾಗತಿಸಲು ಕಾದಿರುತ್ತೆ. ನನ್ನ ಯೋಚನೆಗಳು .ಹಳವಂಡಗಳು ಏನೇ ಇರಲಿ ಷಣ್ಮುಗಂ ಎದುರಾದಾಗ ನಾನು ಎಲ್ಲವನ್ನೂ ಮರೆತು ಬಿಡುತ್ತೇನೆ. ಅವನು ಕಾಣುತ್ತಿದ್ದಂತೆ ನನಗೆ ಅರಿವಿಲ್ಲದೆ ನಾನು ಒಂದು ಮಂದಹಾಸವಾಗುತ್ತೇನೆ. ಷಣ್ಮುಗಂ ಸಮ್ಮುಖದಲ್ಲಿ ನನ್ನ ಸಣ್ಣತನಗಳೂ ನನ್ನಿಂದ ಸ್ವಲ್ಪ ಕಾಲ ದೂರವಾಗಿ ಬಿಡುತ್ತೆ. ನಾನು ತುಂಬಾ ಒಳ್ಳೆಯವನು . ಎಲ್ಲರೂ ಒಳ್ಳೆಯವರು.ಜಗತ್ತು ತುಂಬಾ ಒಳ್ಳೆಯದೆಂದು ಅನ್ನಿಸಿಬಿಡುತ್ತೆ.

ಷಣ್ಮುಗಂ ಕೋಲಾರದವನು. ಮೂಲದಲ್ಲಿ ತಮಿಳಿಗ. ಬೆಂಗಳೂರಿಗೆ ಬಂದು ಕೆಲವು ವರ್ಷವಾಯಿತಷ್ಟೇ .ಮೊದಲು ಕೋಲಾರದ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದವನು ಗಣಿ ಮುಚ್ಚಿ ಹೋದ ಮೇಲೆ ಬೇರೆ ದಾರಿ ಕಾಣದೆ ಬೆಂಗಳೂರಿನ ಹಾದಿ ಹಿಡಿದಿದ್ದ . ಕೊನೆಗೆ ಯಾವುದೋ ಒಂದು ‘ಸೆಕ್ಯೂರಿಟಿ ಏಜನ್ಸಿ ‘ ಸೇರಿ ಏಜನ್ಸಿ ಪರವಾಗಿ ನನ್ನ ಕಾಲೇಜ್ ನಲ್ಲಿ ಸೆಕ್ಯೂರಿಟಿ ಕೆಲಸಕ್ಕಿದ್ದ. ಅವನೇ ಹೇಳಿದಂತೆ ಕೋಲಾರದವರು ತುಂಬಾ ಮಂದಿ ಹೀಗೆ ಅವನಂತೆಯೇ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಾರಂತೆ.ಎಲ್ಲರೂ ಅವನಂತೆಯೇ ಮುಚ್ಚಿದ ಗಣಿಯ ಅಡಿಯಲ್ಲಿ ದಿಕ್ಕೆಟ್ಟವರೇ. ಈಗ ಇಲ್ಲಿ ಬೆಂಗಳೂರಿಗೆ ಬಂದು ಹೊಟ್ಟೆಪಾಡಿಗೊಂದು ದಾರಿ ಮಾಡಿಕೊಂಡಿದ್ದರು. ಷಣ್ಮುಗಂ ಅಪ್ಪನ ಕಾಲದಿಂದಲೂ ಕೋಲಾರದ ಗಣಿ ಅವರ ಅನ್ನದ ಮೂಲ. ಗಣಿ ಮುಚ್ಚಿ ಹೋಗುವ ಮುಂಚೆ ಸಮಾರು ಮೂವತ್ತು ವರುಷ ಷಣ್ಮುಗಂ ಅಲ್ಲಿ ಕೆಲಸ ಮಾಡಿದ್ದ. ಕೆಲವೊಮ್ಮೆ ಆ ದಿನಗಳ ಬಗ್ಗೆ ಹೇಳುವಾಗ ಷಣ್ಮುಗಂ ನಡು ನಡುವೆ ಸುಮ್ಮನಾಗಿಬಿಡುತ್ತಿದ್ದ . “ ಏನ್ ಮಾಡದು ಸರ್. ದುಡಿಮೆಗೆ ಏನಾರ ಮಾಡ್ಲೆಬೇಕಲ್ಲ ‘ ಎಂದು ಮತ್ತೆ ಮೌನ ಮುರಿದು ಎಂದಿನ ಶುದ್ಧ ನಗೆಯಾಗುತ್ತಿದ್ದ ..

ಅದೊಂದು ದಿನ ಗೇಟ್ ಬಳಿ ಷಣ್ಮುಗಂ ಎದುರಾದ . ನೆತ್ತಿ ಮೇಲೆ ನಡು ಮಧ್ಯಾಹ್ನ ಸುಡುತ್ತಿತ್ತು. ಎಂದಿನಂತೆ ಷಣ್ಮುಗಂ ತನ್ನ ಲಾಂಛನವಾದ ಮಂದಹಾಸದೊಂದಿಗೆ “ ಊಟ ಆಯ್ತಾ ಸಾರ್ “ ಎಂದು ಆಪ್ತವಾಗಿ ಕೇಳಿದ. ‘ಆಯ್ತು ಸರ್ .ಈಗಷ್ಟೇ ಆಯ್ತು.ನಿಮ್ದಾಯ್ತಾ “ ಎಂದು ನಾನು ಕೇಳಿದೆ.. “ ಇಲ್ಲಾ ಸರ್ .ಈವತ್ತಿಂದ ನಮಗೆ ಊಟ ಕೊಡೋಲ್ವಂತೆ ಹಾಸ್ಟೆಲ್ ಮೆಸ್ಸ್ ನಿಂದ. ಕ್ಯಾಂಪಸ್ ಮ್ಯಾನೇಜರ್ ಹೇಳಿದಾರೆ. ಹೊರಗೆಲ್ಲಾದ್ರು ಊಟಕ್ಕೆ ಹೋಗ್ಬೇಕು ಸಾರ್ “ ಎಂದ. ಷಣ್ಮುಗಂ ಮುಖದಲ್ಲಿ ಮಂದಹಾಸ ಹಾಗೆ ಇತ್ತು .ಆದರೆ ಎಂದಿನ ಹೊಳಪು ನನಗೆ ಅಲ್ಲಿ ಕಾಣಲಿಲ್ಲ. ‘ಯಾಕಂತೆ. ನಿಮಗ್ಯಾಕೆ ಕೊಡೋಲ್ವಂತೆ “ ಎಂದೆ. ‘ ಏನೋ ಗೊತ್ತಿಲ ಸರ್. ಊಟ ತರೋಕೆ ಹೋಗಿದ್ದೆ.ಕ್ಯಾಂಪಸ್ ಮ್ಯಾನೇಜರ್ ಊಟ ಕೊಡಲ್ಲ ಇನ್ಮೇಲೆ ಅಂತ ಹೇಳಿ ಕಳ್ಸಿದ್ದಾರೆ .ರೂಲ್ಸ್ ಪ್ರಕಾರ ನಮಗೆ ಊಟ ಇಲ್ವಂತೆ “ ಎಂದು ಷಣ್ಮುಗಂ ವಿಷಾದದಲ್ಲಿ ನಕ್ಕ. “ ನಿಮ್ಮ ಸಂಬಳ ಎಷ್ಟು ಸಾರ್.ಈಗೆನ್ಮಾಡ್ತೀರಿ ಊಟ ಸಿಗಲ್ಲ ಅಂದ್ಮೇಲೆ “ ಎಂದೆ. ಷಣ್ಮುಗಂ “ ಮೂರೂವರೆ ಸಾವ್ರ ಸಾರ್. ಮತ್ತೇನು ಮಾಡದು? ಹೋಟ್ಲು ಗೆ ಹೋಗದು.ಹದಿನೈದು ರೂಪಾಯಿಗೆ ಫಸ್ಟ್ ಕ್ಲಾಸ್ ರೈಸ್ ಬಾತ್ ಸಿಗುತ್ತೆ.ತಿನ್ನದು ಬರ್ತಾ ಇರೋದು ಅಷ್ಟೆಯಾ “ ಎಂದು ಅವನ ಹೊಟ್ಟೆಯ ಮಡಿಕೆಗಳೆಲ್ಲ ಕುಲುಕುವಂತೆ ನಕ್ಕ. “ ಹೀಗೆ ನೀವು ಹೊರಗೆ ಊಟ ಮಾಡಿದ್ರೆ ನಿಮ್ಮ ಸಂಬಳದಲ್ಲಿ ಏನು ಉಳಿಯುತ್ತೆ .ತಿಂಗಳಿಗೆ ಎಷ್ಟು ಉಳಿಯುತ್ತೆ ಮನೆಗೆ ಕೊಡಲಿಕ್ಕೆ ಸಾರ್ “ ಎಂದೆ. ಅಷ್ಟು ಹೇಳುತ್ತಿದ್ದಂತೆ ಷಣ್ಮುಗಂ ಪೂರ್ತಿ ತಿಂಗಳಿನ ಆಯವ್ಯಯದ ವಿವರವನ್ನ ನನ್ನ ಮುಂದಿಟ್ಟ,

ಷಣ್ಮುಗಂ ಬೆಳಿಗ್ಗೆ ನಾಲ್ಕೂವರೆಗೆ ಎದ್ದು ಕೋಲಾರದಿಂದ ಹೊರಟು ಬಂಗಾರಪೇಟೆ ತನಕ ಹತ್ತು ರೂಪಾಯಿ ಕೊಟ್ಟು ಬಸ್ಸಿನಲ್ಲಿ ಬರುತ್ತಾನೆ. ಅಲ್ಲಿಂದ ಬೆಂಗಳೂರಿಗೆ ರೈಲಿನಲ್ಲಿ .ರೈಲಿಗೆ ನೂರಾ ಎಪ್ಪತ್ತಾರು ರೂಪಾಯಿ ಕೊಟ್ಟು ತಿಂಗಳ ಪಾಸ್ ಮಾಡಿಸಿ ಕೊಂಡಿದ್ದಾನೆ. ರೈಲ್ವೆ ಸ್ಟೇಶನ್ ನಿಂದ ಕಾಲೇಜ್ ಗೇ ಮತ್ತೆ ಹತ್ತು ರೂಪಾಯಿ ಕೊಟ್ಟು ಬಾಡಿಗೆ ಟೆಂಪೋದಲ್ಲಿ ಕಾಲೇಜ್ ತಲುಪಿಕೊಳ್ಳುತ್ತಾನೆ . ಮತ್ತೆ ತನ್ನ ಪಾಳಿಯ ಕೆಲಸ ಮುಗಿಸಿ ಸಂಜೆ ಕೋಲಾರಕ್ಕೆ ಅದೇ ಮಾರ್ಗದಲ್ಲಿ ಅಷ್ಟೇ ಖರ್ಚಿನಲ್ಲಿ ತಲುಪಿಕೊಳ್ಳುತ್ತಾನೆ .ಅಲ್ಲಿಗೆ ಒಂದು ತಿಂಗಳಿಗೆ ಷಣ್ಮುಗಂ ತನ್ನ ಪ್ರಯಾಣಕ್ಕೆ ಖರ್ಚು ಮಾಡುವುದು ಸುಮಾರು ಸಾವಿರದ ಐದು ನೂರು ರೂಪಾಯಿಗಳು . ಬಾಡಿಗೆ ಟೆಂಪೋದವರು ಕೆಲವೊಮ್ಮೆ ದುಡ್ಡು ತೆಗೆದುಕೊಳ್ಳುವುದಿಲ್ಲ ಪರಿಚಯದ ವಿಶ್ವಾಸದ ಮೇಲೆ. ಅಂಥ ಸಂದರ್ಭಗಳಲ್ಲಿ ಷಣ್ಮುಗಂ ಖರ್ಚು ಕೊಂಚ ಕಡಿಮೆಯಾಗುತ್ತೆ. ಈಗ ಮಧ್ಯಾಹ್ನ ಹೊರಗೆ ಊಟ ಮಾಡಬೇಕಾದ ಪರಿಸ್ಥಿತಿ. ಷಣ್ಮುಗಂ ಊಟಕ್ಕೆ ತೆಗೆದುಕೊಳ್ಳುವುದು ಹದಿನೈದು ರೂಪಾಯಿಯ ರೈಸ್ ಬಾತ್. ಅಲ್ಲಿಗೆ ಮತ್ತೊಂದು ಐದುನೂರು ರೂಪಾಯಿ ಸಿಗುವ ಮೂರೂವರೆ ಸಾವಿರದಲ್ಲಿ ಕಳೆದು ಹೋಯಿತು. ಅಲ್ಲಿಗೆ ಮನೆಯ ಸಲುವಾಗಿ ಉಳಿದದ್ದು ಕೇವಲ ಒಂದೂವರೆ ಸಾವಿರ.

ನಮ್ಮ ಕ್ಯಾಂಪಸ್ ಮ್ಯಾನೇಜರ್ ಗೆ ಹದಿನೈದು ಸಾವಿರ ಸಂಬಳ. ಆ ಸಂಬಳ ಆತನಿಗೆ ಲೆಕ್ಕಕ್ಕೇ ಇಲ್ಲ. ತುಂಬಾ ಶ್ರೀಮಂತ ಹಿನ್ನೆಲೆಯ ಮನುಷ್ಯ. ಟೈಮ್ ಪಾಸ್ ಸಲುವಾಗಿ ಕ್ಯಾಂಪಸ್ ಮ್ಯಾನೇಜರ್ ಕೆಲಸ. ಹತ್ತಾರು ಮನೆಗಳನ್ನ ಬಾಡಿಗೆಗೆ ಬಿಟ್ಟಿದ್ದಾನೆ.” ನಂಗೆ ಈ ಕೆಲಸದ ಅವಶ್ಯಕತೆನೇ ಇಲ್ಲ. ಸುಮ್ನೆ ಬರ್ತೀನಿ . ಎಂಭತ್ತು ಸಾವ್ರ ಕೇವಲ ಬಾಡಿಗೆನೇ ಪ್ರತಿ ತಿಂಗಳು ಬಂದು ಬೀಳುತ್ತೆ “ ಎಂದು ಸಿಕ್ಕ ಸಿಕ್ಕವರ ಬಳಿಯೆಲ್ಲಾ ಹೇಳಿ ಕೊಳ್ಳುತ್ತಾನೆ. ಅಂಥಾ ಮನುಷ್ಯ ಹಾಸ್ಟೆಲ್ ಮೆಸ್ಸ್ ನಲ್ಲಿ ಊಟಕ್ಕೆ ಕುಳಿತು ಊಟ ಕೇಳಲು ಬಂದ ಷಣ್ಮುಗಂ ಗೆ ಊಟ ಇಲ್ಲ ಎಂದು ಹೇಳಿ ಕಳಿಸುತ್ತಾನೆ. ಹಾಸ್ಟೆಲ್ ನಲ್ಲಿ ಪ್ರತಿನಿತ್ಯ ಬುಟ್ಟಿಗಟ್ಟಲೆ ಅಡುಗೆ ಹೆಚ್ಚಾಗಿ ಚೆಲ್ಲುತ್ತಾರೆ. ಹಾಗೆ ಚೆಲ್ಲುವುದರಲ್ಲಿ ನಮ್ಮ ಷಣ್ಮುಗಂ ಗೆ ಎರಡು ಮುಷ್ಟಿ ಊಟ ಕೊಟ್ಟಿದ್ದರೆ ಯಾರ ಗಂಟು ಕರಗುತ್ತಿತ್ತು? ಇಂಥ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವೇ ಸಿಗುವುದಿಲ್ಲ. “ ರೂಲ್ಸು ರೂಲ್ಸು” ಎಂದು ಹೊಟ್ಟೆ ತುಂಬಿದ ಮಂದಿ ಕೈತೊಳೆದು ಕೊಂಡುಬಿಡುತ್ತಾರೆ .

ಹಾಸ್ಟೆಲ್ ಬಿಡುವ ಸ್ವಲ್ಪ ದಿನಗಳ ಮೊದಲು ಒಂದು ಸಂಜೆ ಕ್ಯಾಂಟೀನ್ ಬಳಿ ಕುಳಿತಿದ್ದೆ. ಷಣ್ಮುಗಂ ಸರಸರನೆ ಹೆಜ್ಜೆ ಹಾಕುತ್ತಾ ನನ್ನ ಬಳಿ ಬಂದ . “ ಸರ್ ನನ್ನ ಸಂಬಳ ಒಂದು ಸಾವ್ರ ಜಾಸ್ತಿ ಆಯ್ತು .ಈಗ ನಮ್ಮನ್ನ ಕಾಲೇಜ್ ನವರೇ ಪರ್ಮನೆಂಟ್ ಕೆಲ್ಸಕ್ಕೆ ತಗೊಂಡ್ರು. ಇನ್ನು ಏಜೆನ್ಸಿ ಕಡೆಯಿಂದ ಕೆಲಸ ಮಾಡೋದಿಲ್ಲ. ಈಗ ನಾವೂ ಕಾಲೇಜ್ ಎಂಪ್ಲಾಯೀಸು. ಊಟ ಕೂಡ ಇಲ್ಲೇ ಸಿಗುತ್ತೆ “ ಎಂದ. ಷಣ್ಮುಗಂ ಖುಷಿ ಕಂಡು ನನಗೂ ಖುಷಿಯಾಯ್ತು . ಕೊನೆಗೆ ಹಾಸ್ಟೆಲ್ ಬಿಡುವಾಗ ಷಣ್ಮುಗಂ ಬೇಡ ಬೇಡವೆಂದರೂ ಹಾಸ್ಟೆಲ್ ಗೇಟ್ ನಿಂದ ಕ್ಯಾಂಪಸ್ ಗೇಟ್ ತನಕ ನನ್ನ ಲಗೇಜ್ ಗಳನ್ನ ಹೊತ್ತುಕೊಂಡು ಬಂದು ಆಟೋಕ್ಕೆ ತುಂಬಲು ನೆರವಾದ. ಆಟೋ ಕ್ಯಾಂಪಸ್ ಗೇಟ್ ದಾಟುವಾಗ ಆಟೋ ಒಳಕ್ಕೆ ಬಗ್ಗಿ “ ಬರ್ತಾ ಇರಿ ಸರ್.ನಾನು ಇನ್ನು ಇಲ್ಲೇ ಇರ್ತೀನಿ. “ ಎಂದು ಅವನ ಎಂದಿನ ಶುದ್ಧ ಮಂದಹಾಸದೊಡನೆ ಬೀಳ್ಕೊಟ್ಟ .ನನಗೆ ಮಾತೇ ಹೊರಡಲಿಲ್ಲ .

ಸದ್ಯ ಮಾರ್ಕ್ಸ್ ಕಾರ್ಡ್ ತರಲಿಕ್ಕೆ ಮತ್ತೆ ಕಾಲೇಜ್ ಗೆ ಹೋಗಬೇಕು. ಮತ್ತೆ ಷಣ್ಮುಗಂ ಸಿಗುತ್ತಾನೆ. ಅವನ ಜೊತೆ ಸ್ವಲ್ಪ ಹೊತ್ತು ಹರಟಿ ಬರಬೇಕು :) :) .

4 comments:

ಸುಧೇಶ್ ಶೆಟ್ಟಿ said...

hostel chitragaLu sarani manasige hidisitu...

badukinalli yeduraaguva kelavu mukhagaLu manasinalle uLidubiduttalla....

ಗೌತಮ್ ಹೆಗಡೆ said...

ನಿಜ .ನಾನು ಮನೆ ಬಿಟ್ಟು ತುಂಬಾ ವರುಷವಾಯಿತು ವಿದ್ಯಾಭ್ಯಾಸದ ಕಾರಣಕ್ಕೆ. ಹಲವಾರು ಊರುಗಳನ್ನ .ನೂರಾರು ರೀತಿಯ ಜನಗಳನ್ನ ಕಂಡಿದ್ದೇನೆ. ನೆನಪು ಎಂಬ ಮಾತು ಬಂದಾಗ ಕೆಲವೇ ಕೆಲವರಷ್ಟೇ ಕಣ್ಣೆದುರು ಬರುತ್ತಾರೆ .ಅಪರೂಪದ ವ್ಯಕ್ತಿಗಳು ಅವರು ನನ್ನ ಪಾಲಿಗೆ :)

ಥ್ಯಾಂಕ್ಸ್ ಸುಧೇಶ್ :)

Jyoti Hebbar said...

tumba khushi aaytu...

barediro shaili tumba chennagide

Jyoti Hebbar said...

tumba khushi aaytu...

barediro shaili tumba chennagide