ಒಂದೇ ಗುಟುಕಿನಲ್ಲಿ
ನೀರನ್ನು ಕುಡಿದು ,ಮಡಿಕೆಯನ್ನು ವೃದ್ಧ ಜೀವದ ಕೈಗಿತ್ತ ಅನಂತ ಸ್ವಲ್ಪ ಹೊತ್ತು ಸುಮ್ಮನೆ ಆಲದ
ಮರದ ಕೆಳಗೆ ಹೋಗಿ ಕುಳಿತುಬಿಟ್ಟ.’ ನಿನಗಾಗೆ ಕಾಯ್ತಾ ಇದ್ದೆ .ನೀ ಬರೋದು ಕೊಂಚ ತಡವಾಗಿ ಹೋಯಿತು ‘
ಎಂಬ ವೃದ್ಧನ ಮಾತು ಅವನಲ್ಲಿ ಅಲೆಯಲೆಯಾಗಿ ಸುಳಿಯುತ್ತಿತ್ತು. ಆಲದ ಮರದ ನೆರಳಲ್ಲಿ ಹಾಗೆ ಯೋಚನೆಗೆ ಬಿದ್ದು
ಕುಳಿತಿದ್ದ ಅನಂತನನ್ನು ನೋಡುತ್ತಿದ್ದ ವೃದ್ಧ
ಜೀವದ ನೆರಿಗೆ ಮುಖದಲ್ಲಿ ಅಲೌಕಿಕವಾದ ಮಂದಹಾಸ ಪ್ರತಿ ನೆರಿಗೆಯಲ್ಲೂ ಎದ್ದು ಕಾಣುತ್ತಿತ್ತು.
ಸುಮ್ಮನೆ ಕುಳಿತಿದ್ದ ಅನಂತ ಎದ್ದ.ಎದ್ದವನು ನೇರವಾಗಿ
ವೃದ್ಧನ ಬಳಿ ಬಂದು ಅಪಾದಮಸ್ತಕವಾಗಿ ನೋಡಿದ.’ ನೀನ್ಯಾರು? .ನನಗಾಗಿಯೇ ಕಾಯ್ತಾ ಇದ್ದೆ ಅಂದೆಯಲ್ಲ.
ಯಾವ ಕಾರಣಕ್ಕೆ? ‘ ಎಲ್ಲ ನಿನ್ನ ಇಶಾರೆಯಂತೆಯೇ ನಡೆದಿದೆ ಎಂಬಂತೆ ಮಾತನಾಡಿದೆಯಲ್ಲ ? ಏನು
ಇದೆಲ್ಲ ‘ . ವೃದ್ಧ ನಕ್ಕ. ‘ನಾನು ನಿನಗೆ ಏನೂ ಅಲ್ಲ. ನಿನಗಾಗಿಯೇ ಕಾಯ್ತಾ ಇದ್ದದ್ದು ನಿಜ.
ಕಾರಣ ನಾನು ಹೇಳುವುದಲ್ಲ .ಸಮಯ ಕಳೆದಂತೆ ನಿನಗೆ ಎಲ್ಲ ತಿಳಿಯುತ್ತೆ. ಎಲ್ಲ ನಡೆದದ್ದು ಅವನ
ಇಶಾರೆಯಂತೆ.ಇಲ್ಲಿ ನನ್ನದೇನೂ ಇಲ್ಲ’ ಎಂದು ಹೇಳಿ ಮತ್ತೆ ಅನಂತನ ಕಣ್ಣಲ್ಲಿ ದೊಡ್ಡ ಪ್ರಶ್ನೆಯಾಗಿ
ಬಿಟ್ಟ. ಅನಂತನಿಗೆ ಮುಂದೇನು ಹೇಳುವುದು ಎನ್ನುವುದೇ ತಿಳಿಯಲಿಲ್ಲ. ವೃದ್ಧನ ಮಾತು , ಅವನ
ಮುಖದಲ್ಲಿದ್ದ ಮಾತಿಗೆ ನಿಲುಕದ ದಿವ್ಯ ಪ್ರಶಾಂತತೆ , ಆ ಗುಡಿಸಲು ,ಆ ಆಲದ ಮರ ,ಅಲ್ಲಿನ ಪರಿಸರ
ಎಲ್ಲವೂ ಸೇರಿ ಅನಂತನಿಗೆ ಇನ್ಯಾವುದೋ ಲೋಕಕ್ಕೆ ಹೋಗಿ ತಲುಪಿಕೊಂಡಂತೆ ಎಂಬಂತೆ ಅನ್ನಿಸತೊಡಗಿತು.
ದೊಡ್ಡದೊಂದು ಉಸಿರೆಳೆದುಕೊಂಡು ಅನಂತ ಒಮ್ಮೆ ತಾನು ಮನೆ ಬಿಟ್ಟು ಬಂದ ದಾರಿಯ ಕಡೆ
ನೋಡಿದ. ಹಾಗೆ ನೋಡುತ್ತಿದ್ದಂತೆಯೇ ಅನಂತ ನಿಧಾನವಾಗಿ ಬೆವರ ತೊಡಗಿದ. ತಾನು ಬಂದ ದಾರಿಯ ಚಹರೆಯೇ
ಬದಲಾಗಿ ಹೋಗಿತ್ತು.ಅಲ್ಲಿ ಕೆಸರು ಹೊಳೆ ಕಾಣಲಿಲ್ಲ. ಅಷ್ಟು ಎತ್ತರದ ಭವ್ಯವಾದ ಹುಲಿದೇವನ ಗುಡ್ಡ
ಅಲ್ಲಿರಲಿಲ್ಲ. ಅನಂತ ಕಷ್ಟಪಟ್ಟು ಪದ ಪದಕ್ಕೂ ಬರಬಿದ್ದವನಂತೆ ತಡವರಿಸುತ್ತಾ ತೊದಲುತ್ತ ‘ ಅಜ್ಜಾ
ಅಲ್ಲಿ ಕೆಸರು ಹೊಳೆಯಿತ್ತಲ್ಲ .ಅದರಾಚೆ ದೊಡ್ಡ ಗುಡ್ಡವೊಂದು ಇತ್ತಲ್ಲ .ಎಲ್ಲ
ಏನಾಯಿತು.ಏನಿದೆಲ್ಲ. ನನ್ನ ಬುದ್ಧಿಗೆ ಇದ್ಯಾವುದೂ ನಿಲುಕುತ್ತಿಲ್ಲ’ ಎಂದು ವೃದ್ಧನ ಬಳಿ ಬಂದು
ಅವನ ಕಾಲಿಗೆ ಬಿದ್ದುಬಿಟ್ಟ. ಹಾಗೆ ಕಾಲಿಗೆ ಬಿದ್ದವನ ಪ್ರಜ್ಞೆ ತಪ್ಪಿ ಹೋಯಿತು .
ಪ್ರಜ್ಞೆ ಬಂದಾಗ ವೃದ್ಧನ ಬೆಚ್ಚಗಿನ ಹಸ್ತ ಅವನ
ತಲೆಯನ್ನು ನೇವರಿಸುತ್ತಿತ್ತು. ಗಾಢ ರಾತ್ರಿ. ‘ಅಜ್ಜಾ ,ಆ ಗುಡ್ಡ ..ಆ ಹೊಳೆ ‘ ಎಂದು ಮತ್ತೆ
ಇನ್ನೇನೋ ಹೇಳಲು ಅನಂತ ಅನುವಾದ.’ ಮಲಗು ಮಗಾ.ತುಂಬಾ ಆಘಾತಕ್ಕೆ ಈಡಾಗಿದ್ದೀಯ.ಈಗ ಅವೆಲ್ಲ ಬೇಡ. ಬೆಳಗಾಗಲಿ’ ಎಂದ. ಅನಂತನ ಕಣ್ಣಲ್ಲಿ ನೀರಿತ್ತು. ‘ಅಜ್ಜಾ ‘ ಎಂದಷ್ಟೇ ಹೇಳಿ ವೃದ್ಧನ ಕೈಯನ್ನು
ತನ್ನ ಎರಡೂ ಕೈಗಳಿಂದ ಮೆದುವಾಗಿ ಹಿಡಿದುಕೊಂಡ. ಅಷ್ಟೇ. ಅದಾವುದೋ ಮಾಯೆಯಲ್ಲಿ ನಿದಿರೆ
ಅನಂತನನ್ನು ಆವರಿಸಿಕೊಂಡಿತು.ಅಂದಿನ ಆ ನಿದಿರೆಯಲ್ಲಿ
ಎಂದೂ ಕಂಡಿರದ ಕನಸುಗಳು ಬಂದು ಹೋದವು. ಅನಂತ ಒಂದು ದೊಡ್ಡ ಸಾಗರದ ಮೇಲೆ ನಡೆದುಕೊಂಡು
ಹೋಗುತ್ತಿದ್ದ. ದೂರ ದಿಗಂತದಲ್ಲಿ ಕೆಂಪಾಗಿ ಹೊಳೆಯುತ್ತಿದ್ದ ಸೂರ್ಯನನ್ನ ತನ್ನ ಬೊಗಸೆಯಲ್ಲಿ
ಹಿಡಿದುಕೊಂಡಿದ್ದ. ನಡು ನಡುವೆ ಹಾರಿ ಹಾರಿ ಹೋದಂತೆ ,ತೇಲಿಕೊಂಡು ಹೋದಂತೆ , ಉಸಿರುಗಟ್ಟಿ ಜೀವವೇ
ಹೋದಂತೆ ,ಯಾವುದೋ ಕಾಡಿನಲ್ಲಿ ದಾರಿ ತಪ್ಪಿಹೋದಂತೆ, ಒಂದಕ್ಕೊಂದು ಸಂಬಂಧವಿಲ್ಲದ .ಒಂದಕ್ಕಿಂತ
ಒಂದು ಅಪರೂಪವಾದ ಸಂಗತಿಗಳು ಆ ರಾತ್ರಿಯ ಕನಸುಗಳಲ್ಲಿ ಹಾದು ಹೋದವು. ಅನಂತ ದೇಹ ಹಾಗು ಬುದ್ಧಿ ದಣಿದು
ನಿದಿರೆಯಲ್ಲಿ ಕಳೆದು ಹೋಗಿದ್ದವು. ಸುಪ್ತ ಮನಸ್ಸು ಮಾತ್ರ ತಾನು ಕನಸುಗಳಲ್ಲಿ ಕಂಡ ಹೊಸ ಜಗತ್ತನ್ನು
ಕಂಡು ಬೆರಗುಗೊಳ್ಳುತ್ತಿತ್ತು. ಕನಸಲ್ಲಿ ಕಂಡದ್ದೆಲ್ಲವೂ ಮನದ ಒಳ ಮನೆಯ ತಿಜೋರಿಯಲ್ಲಿ ಭದ್ರವಾಗಿ
ಜಮೆಯಾದವು. ಹಳೆಯ ಕಸವೆಲ್ಲ ಖಾಲಿಯಾದವು.ಮನಸ್ಸು ಹೊಸತೊಂದು ಬದುಕಿಗೆ ಅಣಿಯಾಗಿ ನಿಂತಿತ್ತು .ಬಾಗಿಲೇ
ಇರದ ಗುಡಿಸಲೊಳಗೆ ಬೆಳಗಿನ ಜಾವದ ಚಳಿಗಾಳಿ ತೇಲಿ ಬಂದು ಮಲಗಿದ್ದ ಅನಂತನನ್ನ ತಾಕಿ ಎಬ್ಬಿಸಿತು.
ಯಾವತ್ತೂ ಒಂಭತ್ತು ಘಂಟೆಗೆ ಮುಂಚೆ ಎದ್ದವನಲ್ಲ.
ಎಳೆಯ ಜಾವದ ದೈವೀಕವಾದ ಸೊಬಗನ್ನ ಎಂದೂ ಅನುಭವಕ್ಕೆ ತಂದುಕೊಂಡವನಲ್ಲ ಅನಂತ. ಗುಡಿಸಲಿಂದ ಕಣ್ಣುಜ್ಜಿಕೊಳ್ಳುತ್ತಾ
ಹೊರಗೆ ಬಂದವನಿಗೆ ಹೊಸ ಜಗತ್ತು ಕಂಡಿತ್ತು. ಅಜ್ಜ ಗುಡಿಸಲಿನ ಸುತ್ತ ಮುತ್ತ ಇದ್ದ ನಾನಾ ರೀತಿಯ ಗಿಡ,ಬಳ್ಳಿ
.ಮರಗಳ ಎಲೆಯನ್ನು ಕಿತ್ತು ಪುಟ್ಟ ಬಿದಿರಿನ ಬುಟ್ಟಿಯಲ್ಲಿ ತುಂಬಿಕೊಳ್ಳುತ್ತಿದ್ದ. ಆತ ಹುಡುಕಿ
ಹುಡುಕಿ ಇಂಥದ್ದೇ ಗಿಡದ ,ಮರದ ಅಥವಾ ಬಳ್ಳಿಯ ಎಲೆಗಳನ್ನು ಹೆಕ್ಕಿಕೊಳ್ಳುತ್ತಿರಲಿಲ್ಲ. ಅಲ್ಲಿ
ಇದ್ದ ಎಲ್ಲದರಿಂದಲೂ ಎಲೆಗಳನ್ನು ಕೀಳುತ್ತಿದ್ದ. ಅನಂತ ಸುಮ್ಮನೆ ಕುತೂಹಲದಿಂದ ಅಜ್ಜನನ್ನೇ ನೋಡುತ್ತಿದ್ದ.
ಕೊನೆಗೆ ತಾನು ಬುಟ್ಟಿಯಲ್ಲಿ ತುಂಬಿಕೊಂಡು ಬಂದ ಎಲ್ಲ ರೀತಿಯ ಎಲೆಗಳನ್ನೂ ಗುಡಿಸಲ ಮುಂದಿನ ಕಪ್ಪು
ಬಂಡೆಯ ಮೇಲೆ ಸುರಿದು ಜಜ್ಜಿ ನುಣ್ಣಗೆಮಾಡಿ,
ಪುಟ್ಟ ಮಡಿಕೆಯಲ್ಲಿ ಹಾಗೆ ನುಣ್ಣಗೆ ಮಾಡಿಕೊಂಡ ಎಲೆಗಳ ಮಿಶ್ರಣವನ್ನ ಹಾಕಿ ,ಮೇಲೊಂದಿಷ್ಟು ನೀರು ಹಾಕಿ ಗಟ ಗಟನೆ
ಕುಡಿದು ತೃಪ್ತಿಯ ನಗೆ ನಕ್ಕ.
ಅಜ್ಜನ ಈ ಎಲೆಯ ಪಾನೀಯದ ಹಿಂದಿರುವ ಮರ್ಮ ಏನೆಂದು ಅನಂತ
ಅಜ್ಜನ ಹತ್ತಿರ ತುಂಬಾ ಕುತೂಹಲದಿಂದ ಕೇಳಿದ. ‘ ಇದು ಪ್ರಕೃತಿಯನ್ನ ಅದು ಹೇಗಿದೆಯೋ ಹಾಗೆಯೇ
ನಮ್ಮದಾಗಿಸಿಕೊಳ್ಳುವ ಕ್ರಿಯೆ. ಅದು ಬೇರೆ .ಇದು ಬೇರೆ ಎಂಬ ಬೇಲಿಯನ್ನ ದಾಟಿ ಏಕ ಭಾವದಲ್ಲಿ ಎಲ್ಲವನ್ನೂ
ನೋಡುವ ಕ್ರಮ. ಈಗ ನೋಡು ನಾನು ತಂದ ಬುಟ್ಟಿಯಲ್ಲಿ ಒಂದಿಷ್ಟು ಒಳ್ಳೆಯ ಹಾಗು ಒಂದಿಷ್ಟು ಕೆಟ್ಟ
ಜಾತಿಯ ಎಲೆಗಳೂ ಇದ್ದವು. ಅವನ್ನೆಲ್ಲ ಸೇರಿಸಿ ಅರೆದ ಮೇಲೆ ಅಲ್ಲಿ ಎಲೆ ಎಂಬುದು ಹೋಗಿ ಕೇವಲ ಪ್ರಕೃತಿ ಎಂಬುದು ಮಾತ್ರವೇ
ಉಳಿಯಿತು. ಅರ್ಥವಾಯಿತಾ ? ಸ್ವಲ್ಪ ಜಾಸ್ತಿಯಾಯಿತು ಅಲ್ವಾ ಬುದ್ಧಿಜೀವಿಗಳ ಒಣ ಮಾತಿನಂತೆ. ನನಗೆ
ಗೊತ್ತು ನಿನ್ನ ವಯಸ್ಸಿಗೆ ನಾನು ಹೇಳಿದ್ದು ಅಜೀರ್ಣವಾಯಿತೆಂದು. ಇನ್ನೊಂದು ನಿಜ ಹೇಳ್ತೀನಿ ಕೇಳು
ಸಾದಾಸೀದ ಮಾತಿನಲ್ಲಿ. ನನಗೆ ಮಲಬದ್ಧತೆ ಬಿಟ್ಟೂ ಬಿಡದೆ ಹುಟ್ಟಿನಿಂದಲೂ. ನನ್ನ ಅಪ್ಪ ಅದ್ಯಾವುದೋ
ಹಠಯೋಗಿಯ ಪರಮ ಭಕ್ತನಾಗಿದ್ದ. ಆ ಯೋಗಿಯಿಂದ ಈ
ಎಲೆಯ ಪಾನೀಯದ ಮಹಿಮೆಯನ್ನ ಅಪ್ಪ ತಿಳಿದುಕೊಂಡದ್ದು. ಅಪ್ಪನಿಗೂ ನನ್ನಂತೆಯೇ ಮಲಬದ್ಧತೆ.
ಅಪ್ಪನಿಂದ ಮಲಬದ್ಧತೆ ಕೊನೆಗೆ ಅವನಿಂದಲೇ ಅದಕ್ಕೆ ಪರಿಹಾರದ ಮಾರ್ಗವೂ ಸಿಕ್ಕಿತು ‘ಎಂದು ಹೇಳಿ
ಅಜ್ಜ ದೊಡ್ಡದಾಗಿ ನಕ್ಕ. ಅಷ್ಟು ಹೊತ್ತು ಅಜ್ಜನ ಒಗಟಿನಂಥ ಮಾತುಗಳು ಅರ್ಥವಾಗದೆ ಕಂಗಾಲಾಗಿ
ಕುಳಿತಿದ್ದ ಅನಂತ ಮಲಬದ್ಧತೆಯ ಉಪಕಥೆಯನ್ನ ಕೇಳಿ ಅಜ್ಜನೊಡನೆ ತಾನೂ ನಕ್ಕ.
ಈ ನಗುವಿನ ನಡುವೆಯೇ ತಟ್ಟನೆ ಅನಂತ ಗಂಭೀರನಾಗಿಬಿಟ್ಟ. ‘ಅಜ್ಜ
ಆ ಕೆಸರು ಹೊಳೆ ,ಆ ಹುಲಿದೇವನ ಗುಡ್ಡ ನಾನು ಇಲ್ಲಿಗೆ ಬರುವಾಗ ಇತ್ತು.ಈಗ ಅವು ಅಲ್ಲಿಲ್ಲ .ಎಲ್ಲಿ
ಹೋದವು.ಏನಾಯಿತು ? ‘ ಎಂದು ಪ್ರಶ್ನೆ ಮಾಡಿ ಸುಮ್ಮನಾಗಿಬಿಟ್ಟ. ಅಜ್ಜ ಈಗ ಇನ್ನೂ ದೊಡ್ಡದಾಗಿ ನಕ್ಕ.
‘ ನಮ್ಮ ಜನರು ಪಾಪದವರು. ಯಾವುದನ್ನೂ ದಾಟಲಿಕ್ಕೆ .ಮೀರಲಿಕ್ಕೆ ಆಗದ ಮಂದಿ.ಇದ್ದಲ್ಲೇ ಇದ್ದು
ಕೊನೆಗೊಂದು ದಿನ ಮಣ್ಣಾಗಿ ಹೋಗ್ತಾರೆ. ನಿನ್ನ ಅದೃಷ್ಟ ನೆಟ್ಟಗಿತ್ತು. ಹುಲಿದೇವನ ಗುಡ್ಡ ದಾಟಿ
.ಕೆಸರು ಹೊಳೆಯನ್ನೂ ದಾಟಿ ಈಚೆ ತೀರವನ್ನ ತುಪಿಕೊಂಡು ಬಿಟ್ಟೆ. ಇಷ್ಟು ದಿನ ಆ ಹುಲಿದೇವನ ಗುಡ್ಡವನ್ನ
ದಾಟಿದವರು ಯಾರೂ ಇರಲಿಲ್ಲ.ಆ ಕಾರಣಕ್ಕೆ ಆ ಗುಡ್ಡ ಅಲ್ಲಿತ್ತು. ನೀನು ದಾಟಿಬಿಟ್ಟೆ .ಅದಕ್ಕೆ ಈಗ ಅದು
ಅಲ್ಲಿಲ್ಲ. ಆದರೆ ನಿನ್ನ ಊರಿನ ಮಂದಿಯ ಪಾಲಿಗೆ ಆ ಹುಲಿದೇವನ ಗುಡ್ಡ ಇಂದಿಗೂ ಹಾಗೆಯೇ ಇದೆ. ಇದು ಬರಿಯ ಗುಡ್ಡವಲ್ಲ. ನಮಗೆ ನಾವೇ ಕಟ್ಟಿಕೊಂಡ
ಗೋಡೆ. ‘ ಅರ್ಥವಾಯಿತಾ ಸ್ವಲ್ಪವಾದರೂ ಎಂದ.
‘ಅದು ಸರಿ .ಆದರೆ ಈ
ಕಥೆಯಲ್ಲಿ ಹೊಳೆ ಯಾಕೆ ಬಂತು ? ‘ ಅನಂತ ಮತ್ತೊಂದು ಪ್ರಶ್ನೆ ಮುಂದಿಟ್ಟ. ‘ಈವತ್ತಿಗೆ ಇಷ್ಟು
ಸಾಕು .ನಾನೂ ಎಷ್ಟೂ ಅಂತ ಕಥೆ ಕಟ್ಟಿ ಹೇಳಲಿ. ವಯಸ್ಸು ಬೇರೆ ಆಯಿತು. ಸ್ವಲ್ಪ ಸುಧಾರಿಸ್ಕೋ ಬೇಕು
.ಗುಡ್ಡದ ಕಥೆ ನೀನು ಕೇಳಿದ್ದಿ ಅಷ್ಟೇ..ಆದರೆ ನಿನಗಿನ್ನೂ ಅದರ ಪೂರ್ತಿ ಹೂರಣ ದಕ್ಕಿಲ್ಲ.
ಯೋಚನೆಗೆ ಬೀಳು. ಇನ್ನೊಂದಿಷ್ಟು ಪ್ರಶ್ನೆಗಳು ಹುಟ್ಟಬೇಕು ನಿನ್ನಲ್ಲಿ. ಸ್ವಲ್ಪ ಕಾಯಿ.
ನೀನಿನ್ನೂ ಎಳೆಯ ಕಾಯಿ.ಪ್ರಶ್ನೆ ಹುಟ್ಟಿ ನೀನು ಮಾಗಬೇಕು. ಗುಡ್ಡ ದಾಟಿ ಬಂದವನಿಗೆ ಬಾಯಾರಿಕೆಯಾದರೂ
ಕೆಸರು ಹೊಳೆಯ ನೀರಿಗೆ ಬಾಯಿ ಒಡ್ಡದೆ ತಾಳ್ಮೆಯಿಂದ ಹೊಳೆಯನ್ನು ದಾಟಿ ನನ್ನ ಗುಡಿಸಲ ತನಕ
ಬಂದೆ.ಅದೇ ತಾಳ್ಮೆ ಇಲ್ಲೂ ಇರಲಿ J J J
No comments:
Post a Comment