Wednesday, April 20, 2011

ಹೊಳೆ......ಕಥೆ

ಅದು ನನ್ನ ಪಾಲಿಗೆ ಬರಿಯ ಹೊಳೆಯಲ್ಲ. ನನ್ನ ಪಾಲಿಗೆ ಬೆರಗು ಹಾಗು ಅಚ್ಚರಿಯ ಗುಪ್ತಗಾಮಿನಿ ಅವಳು.ಮಾತು ಮೀರಿದ ಸಂಗತಿಗಳಿಗೆಲ್ಲ ಆಕೆ ಎನ್ನ ಸಂಗಾತಿ.ನಮ್ಮೂರಿನ ಸೇತುವೆಯ ಕಟ್ಟೆಯ ಮೇಲೆ ಕುಳಿತು ಈ ಹೊಳೆಯನ್ನ ದಿಟ್ಟಿಸುತ್ತ ಕೂರುವುದು ನನ್ನ ಮಟ್ಟಿಗೆ ಅಲೌಕಿಕ ಅನುಭವ.ಅದು ಯಾವಾಗ ಮತ್ತು ಹೇಗೆ ನನ್ನ ಹಾಗು ಈ ಹೊಳೆಯ ನಂಟು ಶುರುವಾಯಿತೋ ಸರಿಯಾಗಿ ನೆನಪಿಲ್ಲ.ಚಿಕ್ಕವನಿದ್ದಾಗ ನಾ ಬರೆದ ಮೊದಮೊದಲ ಬೆಳ್ಳಕ್ಕಿಯ ಕವಿತೆ ಹುಟ್ಟಿದ್ದು ಇದೇ ಹೊಳೆಯ ಸೇತುವೆಯ ಕಟ್ಟೆಯ ಮೇಲೆ.ಮತ್ತೆ ಎಂಟನೆ ತರಗತಿಯಲ್ಲಿ ಗಣಿತದಲ್ಲಿ ನಪಾಸಾಗಿ ಅಪ್ಪನಿಂದ ಅಮ್ಮನಿಂದ ಹೊಡೆತ ತಿಂದು ಒಂದೇ ಒಂದು ಮಾತೂ ಆಡದೆ ನೇರವಾಗಿ ಬಂದು ಮನಸಾರೆ ಅತ್ತು ಹಗುರಾದದ್ದು ಇದೇ ಹೊಳೆಯ ಎದುರಲ್ಲೇ.’ನೀ ರಾಧೇ’ಎಂಬ ನನ್ನದೊಂದು ಕವನ ಓದಿ ಎದುರುಮನೆಯ ಭಟ್ಟರ ಮಗಳು ನಂಗೆ ಒಲಿದದ್ದು ಇದೇ ಹೊಳೆಯ ಸಮ್ಮುಖದಲ್ಲೇ.ಕೊನೆಗೆ ಕೊನೆವರುಷದ ಡಿಗ್ರಿ ಓದುವಾಗ ಆಕೆಯ ಮದುವೆ ನಿಕ್ಕಿಯಾಗಿ ಆಕೆ ನನ್ನನ್ನು ಒಲ್ಲೆ ಎಂದು ಕೊನೆಯ ಬಾರಿ ಮುಖತೋರಿಸಿ ಹೋಗಿದ್ದು ,ಕೇವಲ ಅವಳಿಗೆ ಮಾತ್ರ ಎಂದು ಬರೆದಿಟ್ಟಿದ್ದ ಕವಿತೆಗಳನ್ನೆಲ್ಲ ಹರಿದು ಹುಚ್ಚನಾಗಿ ಕೂತಿದ್ದು ,ಅನ್ಯಾಯವಾಗಿ ಕವಿಯಾಗಿಬಿಟ್ಟೆ ಅಂತೆಲ್ಲ ಅನ್ನಿಸಿದ್ದು ಇದೇ ಹೊಳೆಯ ಎದುರಲ್ಲೇ.

ಆಕೆಯ ಹೆಸರು ‘ಹುಚ್ಚಿ ಹೊಳೆ’.ಇಷ್ಟು ಚೆಂದದ ಹೊಳೆಗೆ ಅಂತಹ ಹೆಸರು ಯಾಕೆ ಇಟ್ಟರೋ ಎಂದು ಮೊದಲೆಲ್ಲ ಇದೇ ಹೊಳೆಯ ಎದುರೆ ಕುಳಿತು ಯೋಚಿಸುತ್ತಿದ್ದೆ.ಹೇಗೆ ನೋಡಿದರೂ ಆಕೆ ಹುಚ್ಚಿ ಎನ್ನಿಸಲಿಲ್ಲ,ನನ್ನೊಳಗಿನ ಪ್ರಶ್ನೆಗೆ ಉತ್ತರವೂ ಸಿಕ್ಕಲಿಲ್ಲ .ಕೊನೆಗೊಮ್ಮೆ ಅಪ್ಪನನ್ನೇ ಕೇಳಿದ್ದೆ.ಆಕೆಗಿದ್ದ ಮೊದಲ ಹೆಸರು ‘ಶಾಲ್ಮಲೆ ‘.ಅದು ಅಜ್ಜ ಇನ್ನೂ ಚಿಕ್ಕವರಿದ್ದಾಗಿನ ಸಮಯ.ಅಪ್ಪನಿಗೂ ಈ ಹೊಳೆಯ ಪುರಾಣ ಅಜ್ಜನೇ ಹೇಳಿದ್ದಂತೆ.ಅನಾದಿ ಕಾಲದಿಂದ ತನ್ನ ಪಾಡಿಗೆ ತಾನು ಹರಿದುಕೊಂಡು ಮಂದಗಾಮಿನಿಯಾಗಿದ್ದ ಹೊಳೆ ಅದೊಮ್ಮೆ ಒಂದು ಭೀಕರ ಮಳೆಗಾಲದಲ್ಲಿ ತನ್ನ ಪಾತ್ರವನ್ನ ಬದಲಿಸಿ ಹುಚ್ಚಾಪಟ್ಟೆ ಹರಿದು ಇಡೀ ಊರನ್ನೇ ಆಪೋಶನ ತೆಗೆದುಕೊಂಡಳಂತೆ .ಅಂದಿನಿಂತ ಆಕೆ ‘ಹುಚ್ಚಿ ಹೊಳೆ’.ಎಲ್ಲೋ ಒಮ್ಮೆ ಮಾತ್ರ ಸ್ಥಿಮಿತ ಕಳೆದುಕೊಂಡಿದ್ದಕ್ಕೆ ಆಕೆಗೆ ಶಾಶ್ವತ ಹುಚ್ಚಿ ಪಟ್ಟ ಪ್ರಾಪ್ತವಾಗಿ ಹೋಯಿತು.ಆ ವಿಷಯದಲ್ಲಿ ನನ್ನಲ್ಲಿ ಆಕೆಯೆಡೆ ಅನುಕಂಪವಿದೆ.ಒಮ್ಮೆ ಕೂಗಿ ಹೇಳಿದ್ದೆ ಕೂಡ ನೀ ಹುಚ್ಚಿಯಲ್ಲ ,ನಾವಿದ್ದೇವೆ ದೊಡ್ಡ ಹುಚ್ಚರು ಎಂದು ಹೊಳೆಯೆದುರು.ಆಕೆ ಎಂದಿನಂತೆ ನಿರ್ಲಿಪ್ತ.ಬಹುಶಃ ಅನುಕಂಪ ಆಕೆಗೆ ಬೇಕಿಲ್ಲ .ಹಾಗೆಂದು ನನ್ನಷ್ಟಕ್ಕೆ ನಾನೇ ಅಂದುಕೊಂಡು ಹೊಳೆಗೆ ವಿದಾಯ ಹೇಳಿ ಮನೆಗೆ ಮರಳಿದ್ದೆ .

ಆತ ಒಬ್ಬ ಪರಿಚಯವಾಗದೇ ಇರುತ್ತಿದ್ದರೆ ಬಹುಶಃ ಈ ದಿನ ನಾನು ಹೊಳೆಯ ನೆಪದಲ್ಲಿ ನಿಮ್ಮೆದುರು ಬರುತ್ತಲೇ ಇರಲಿಲ್ಲ.ಹೊಳೆಯಿಲ್ಲಿ ನೆಪ, ಮತ್ತೆ ಹೊಳೆಯೇ ಎಲ್ಲ ಇಲ್ಲಿ.ಆದರೆ ನಿಜವಾಗಿಯೂ ಇಂದು ನಾನು ಹೇಳಹೊರಟಿರುವುದು ಹೊಳೆಯ ಬಗ್ಗೆ ಅಲ್ಲವೇ ಅಲ್ಲ. ಆತ ನನ್ನ ಊರಿನವನೇ ಅಲ್ಲ.ಎಲ್ಲಿಂದ ಬಂದ ,ಯಾಕಾಗಿ ಬಂದ ಎಂಬುದು ಗೊತ್ತಿಲ್ಲ.ಆತ ಬಂದ ,ಪರಿಚಿತನಾದ ಮತ್ತು ಕೆಲವಷ್ಟು ವಿಷಯದಲ್ಲಿ ಅಪರಿಚಿತನಾಗೆ ಉಳಿದು ಹೋದ.ಒಂದು ವರುಷದ ಕೆಳಗೆ ಆತ ಮೊದಲ ಬಾರಿಗೆ ಇದೆ ಹೊಳೆಯ ಸೇತುವೆಯ ಮೇಲೆ ಕಾಣಿಸಿಕೊಂಡ .ಮತ್ತೆ ಪ್ರತಿದಿನ ನಾನು ನನ್ನ ಎಂದಿನ ರೂಢಿಯಂತೆ ಸಂಜೆ ಹೊಳೆಯ ಸೇತುವೆಯ ಕಡೆ ಬಂದಾಗಲೆಲ್ಲ ಆತ ಕಾಣಿಸಿಕೊಳ್ಳುತ್ತಿದ್ದ.ನಾನು ಬರುವ ಮುಂಚೆಯೇ ಬಂದವನು ಕತ್ತಲಾಗಿ ನಾನು ಹೊರಟು ನಿಂತಾಗಲೂ ಆತ ಹೊರಡುವ ಸೂಚನೆಯೇ ಇಲ್ಲವೆಂಬಂತೆ ಕೂತಿರುತ್ತಿದ್ದ.ಕೊನೆಕೊನೆಗೆ ನನಗೆ ಹೊಳೆಯ ಬಗೆಗಿನ ಅಚ್ಚರಿ ಬೆರಗಿಗಿಂತ ಈತನೇ ಹೆಚ್ಚಾಗಿ ಬಿಟ್ಟ.ಆತ ಸುಮ್ಮನೆ ಕೂರುತ್ತಿದ್ದ ಯಾವ ಭಾವವೂ ಆಗದೆ.ಅಸಲಿಗೆ ಆತ ಹೊಳೆಯೆದುರು ಕೂರುತ್ತಿದ್ದರೂ ಆತ ದಿಟ್ಟಿಸುತ್ತಿದ್ದದ್ದು ಹೊಳೆಯ ತಿರುವ ನೆತ್ತಿಯ ಮೇಲಿನ ದಿಗಂತವನ್ನ.ಆತನದು ಅಚಲ ಏಕಾಗ್ರತೆ.ಅಪರೂಪ ಎನ್ನಬಹುದಾದ ಪರಧ್ಯಾನತೆ.ಆತನದು ಅಲೌಕಿಕ ನಿರ್ಲಿಪ್ತತೆ.ಅದು ಪರಮಾನಂದದ ಪ್ರತೀಕವೋ ಅಥವಾ ವೈರಾಗ್ಯದ ಅಂತಿಮ ಘಟ್ಟವೋ ತಿಳಿದಿಲ್ಲ.ಆತ ಬಗೆಹರಿಯದ ಪ್ರಶ್ನೆಗಳ ಮೂಲ.ಎಲ್ಲದಕ್ಕೂ ಆತ ನಿರುತ್ತರಿ.ಮಹಾಮೌನಿ.

ನಾನು ಆಗಾಗ ಹಿಮಾಲಯದೆಡೆ ಟ್ರೆಕ್ಕಿಂಗ್ ಹಾಗು ಪ್ರವಾಸದ ಸಲುವಾಗಿ ಹೋಗಿ ಬರುವುದುಂಟು.ಹಿಮಾಲಯದ ತಪ್ಪಲಿನ ಕೆಲವು ಸಾಧುಗಳಲ್ಲಿ ,ಬೌದ್ಧ ಸನ್ಯಾಸಿಗಳಲ್ಲಿ ಈತನನ್ನ ಕಂಡಿದ್ದೇನೆ.ಮತ್ತೆ ಗಂಗಾನದಿಯ ತಟದ ವಯೋವೃದ್ಢ ಭಿಕ್ಷುಕರಲ್ಲೂ ಕಂಡಿದ್ದೇನೆ.ಈಗ ಈತ ಯಾವ ಬಗೆ ಎಂಬುದೇ ನನ್ನ ಪಾಲಿಗೆ ದೊಡ್ಡ ಪ್ರಶ್ನೆಯಾಗಿತ್ತು.ಹೀಗೆ ಆತ ಕಾಣಿಸಿಕೊಳ್ಳಲು ಶುರುವಾಗಿ ಒಂದು ತಿಂಗಳಾಗುತ್ತಾ ಬಂದಿತ್ತು.ಆತ ನನ್ನ ಇರುವಿಕೆಯನ್ನ ಗ್ರಹಿಸಿದ್ದಾನೆ ಎನ್ನುವುದೂ ನನಗೆ ಅನುಮಾನವಾಗಿತ್ತು.ಕೊನೆಗೆ ಒಂದು ದಿನ ನಾನೇ ಮುಂದಾಗಿ ಸ್ವಲ್ಪ ಧೈರ್ಯ ಮಾಡಿ ಆತನನ್ನ ಮಾತಾಡಿಸಿದೆ.ಆತ ಮಾತಾಡಲಿಲ್ಲ.ಕತ್ತನ್ನು ನನ್ನೆಡೆ ತಿರುಗಿಸಿ ಏನು ಎಂಬಂತೆ ನೋಡಿದ.ನೀ ಯಾರು ನಿನ್ನ ಹೆಸರೇನು ಎಂದೆ.ಆತ ನಕ್ಕ .ಯಾಕೆ ಈ ನಗು ಎಂದೆ.’ಹೆಸರೆಲ್ಲೇನಿದೆ ,ನನ್ನ ಹೆಸರು ನೀನು ಕೇಳಿ ನಾನು ಹೇಳಬೇಕು ಎಂದಾದರೆ ನನ್ನ ಹೆಸರಿಗೆ ಬೆಲೆಯೇ ಇಲ್ಲ ಬಿಡು.ನನ್ನ ಹೆಸರ ಮೇಲೆ ನಂಗೇ ಅಂತ ಮೋಹವಿಲ್ಲ .ಮತ್ತೆ ನಿನಗ್ಯಾಕೆ ಬಿಡು 'ಎಂದ ಕೊಂಚ ಭಾರವಾಗಿ ಕಾವ್ಯ ಎನ್ನಬಹುದಾದ ರೀತಿಯಲ್ಲಿ .ನಿನ್ನ ಊರು ಯಾವುದು ಏನು ನಿನ್ನ ಹಿನ್ನೆಲೆ ಎಂದೆಲ್ಲ ಮತ್ತೆ ಕೇಳಬೇಕೆನಿಸಿತು.ಕೇಳಲಿಲ್ಲ.ಒಮ್ಮೆ ಸಣ್ಣಗೆ ನಕ್ಕು ಸುಮ್ಮನಾಗಿಬಿಟ್ಟೆ.ಈಗ ಆತ ಯಾಕೆ ನಕ್ಕಿದ್ದು ಎಂದ.ಏನಿಲ್ಲ ಬಿಡು ಎಂದೆ.ಆತನೂ ನಕ್ಕ ಭುವನದ ಭಾಗ್ಯವೆಂಬಂತೆ..

ಇಷ್ಟಾದ ಮೇಲೂ ಆತ ನನ್ನೊಡನೆ ಅಷ್ಟೇನೂ ಮಾತಾಡುತ್ತಿರಲಿಲ್ಲ.ನಾನೇ ಆತನನ್ನ ಆಗೀಗ ಮಾತನಾಡಿಸುತ್ತಿದ್ದೆ.ಮೌನ ಮತ್ತು ತೆಳು ನಗೆ ಅಷ್ಟೇ ಆತನ ಬಹುತೇಕ ಪ್ರತಿಕ್ರಿಯೆ.ಕೊನೆಕೊನೆಗೆ ನಾನು ಬರೆದ ಕವಿತೆಗಳನ್ನ ತೋರಿಸಲು ಶುರುವಿಟ್ಟುಕೊಂಡೆ.ಆತ ನೋಡಿ ಸುಮ್ಮನಾಗುತ್ತಿದ್ದ.ಆದರೆ ಅದೊಂದು ದಿನ ಒಂದು ಕವಿತೆಯನ್ನ ಓದಿ ಕೆಲವು ಸಾಲುಗಳು ಹೀಗಾದರೆ ಚೆನ್ನ ಎಂದು ನಾಲ್ಕು ಸಾಲು ಬರೆದು ತೋರಿಸಿದ್ದ .ಆತ ನೀಡಿದ ಸಾಲುಗಳು ನಿಜಕ್ಕೂ ಅದ್ಭುತವಾಗಿದ್ದವು.ಈತ ವಿಚಿತ್ರ ಎಂದುಕೊಂಡಿದ್ದ ನನಗೆ ಆತ ಸಾಮಾನ್ಯನಲ್ಲ ಎಂದು ಅನ್ನಿಸಿದ್ದು ಆಗಲೇ.ನೀನು ಸಾಮಾನ್ಯನಲ್ಲ ಮಾರಾಯ ,ಕಥೆ ಕವಿತೆ ಬರೆಯೋ ರೂಢಿ ಉಂಟೋ ಎಂದು ಕೇಳಿದ್ದೆ.ಇತ್ತು ಎಂದ.ಯಾಕೆ ಬಿಟ್ಟದ್ದು ಎಂದು ನಾನು ಕೇಳಲಿಲ್ಲ.ಮತ್ತೆ ಶುರು ಮಾಡು ಎಂದೆ.ನೋಡೋಣ ಎಂದ.ಹಾಗಾದರೆ ಈ ಹೊಳೆಯನ್ನೇ ಇಟ್ಟುಕೊಂಡು ಒಂದು ಕವಿತೆ ಬರೆದುಕೊಂಡು ಬಾ ನಾಳೆ ಬರುವಾಗ ಎಂದೆ.ಆತ ಸರಿ ಎಂದ.


ಮರುದಿನ ಆತ ಬರೆದು ತಂದ ಕವಿತೆ ನೋಡಿ ನಾನು ಬೆರಗಾಗಿ ಹೋಗಿದ್ದೆ.ಆತ ಯೋಚಿಸಿದ ಧಾಟಿ ಹಾಗು ಅವನ್ನೆಲ್ಲ ಕವಿತೆಯಲ್ಲಿ ತಂದ ಪರಿ ಅಸಾಧಾರಣ ಎಂಬಂತಿತ್ತು.ಅಲ್ಲ ಮಾರಾಯ ಹೊಳೆ ನೋಡಿ ಹೀಗೂ ಯೋಚಿಸಲಿಕ್ಕೆ ಸಾಧ್ಯವ ಎಂದು ಅಚ್ಚರಿಯಿಂದ ಆತನೆಡೆ ನೋಡಿದ್ದೆ.ಹೊಳೆ ನೋಡಿ ಬರೆದದ್ದಲ್ಲ ಅದು ಎಂದನಾತ.

ಆತ ಹೊಳೆಯನ್ನ ದಾರಿಗೆ ಹೋಲಿಸಿದ್ದ.ಅದು ಅಂತಿಂಥ ದಾರಿಯಲ್ಲ!ಕೈವಲ್ಯದ ಹಾದಿ ಅದು ಕಡಲೆಂಬ ಗಮ್ಯದೆಡೆ.ಈಜಿ ಈಜಿ ನಮೆಯುವುದರಲ್ಲಿ ಏನಿದೆ ಅರ್ಥ ,ಕಸಕಡ್ಡಿಯಾಗಿ ತೇಲಿ ಹೋಗಿ ಕಡಲ ಸೇರುವುದೇ ಪಾರಮಾರ್ಥ ಎಂಬರ್ಥದಲ್ಲಿ ಬರೆದಿದ್ದ.ಕವಿತೆಯ ಕೊನೆಯ ಎರಡು ಸಾಲು ಹೀಗಿತ್ತು ನೋಡಿ .ಬದುಕೋ ಬದುಕಿನಲಿ ಏನಿದೆ?ಸಾಯೋ ಆಟದಿ ನಿಜಕ್ಕೂ ಸುಖವಿದೆ’.ನಾನಾಗ ‘ಸಾಯೋ ಆಟದಿ ನಿಜಕ್ಕೂ ಸುಖವಿದೆ.ಆದ್ರೆ ಅನುಭವಿಸಲಿಕ್ಕೆ ಉಸಿರು ಮಾತ್ರ ಇರೋಲ್ಲ ನೋಡು ಎಂದು ನಕ್ಕಿದ್ದೆ.ಆತ ಆಗ ಮಾರ್ಮಿಕವಾಗಿ ನಕ್ಕ .

ಅದಾಗಿ ಮರುದಿನವೇ ನಾನು ಹಿಮಾಲಯದೆಡೆ ಹೊರಟು ನಿಂತೆ.ಮರಳಿ ಬರಲಿಕ್ಕೆ ಒಂದು ತಿಂಗಳಾಯ್ತು.ಮರಳಿ ಬಂದವನನ್ನ ಸ್ವಾಗತಿಸಿದ್ದು ತರಹೇವಾರಿ ಊರ ವಿದ್ಯಮಾನಗಳ ಸುದ್ದಿಗಳು.ಮನೆಗೆ ಬಂದ ಮಗನೆದುರು ಅಪ್ಪ ನಾನು ಊರಿನಲ್ಲಿರದಿದ್ದ ಅಷ್ಟೂ ದಿನದ ವರದಿಯನ್ನ ಒಪ್ಪಿಸಿದ.ಅದರ ಮುಖ್ಯಾಂಶವನ್ನಷ್ಟೇ ಈಗ ನಿಮ್ಮೆದುರು ಇಡುತ್ತೇನೆ.ಮನೆಯ ಕೆಲಸದಾಕೆ ಪಾರ್ವತಿಯ ಕುಡುಕ ಗಂಡ ನಾಪತ್ತೆಯಾಗಿ ಒಂದು ತಿಂಗಳಾಯಿತಂತೆ.ಹುಚ್ಚಿ ಹೊಳೆಯ ದಡದಲ್ಲಿ ಒಂದು ಅಪರಿಚಿತ ಶವ ಸಿಕ್ಕಿತಂತೆ.ಯಾವುದೊ ಭಯೋತ್ಪಾದಕ ನಮ್ಮ ಊರಿನಲ್ಲಿ ಬಂದು ಸೇರಿಕೊಂಡಿದ್ದಾನೆ ಎಂಬ ಗುಮಾನಿಯಲ್ಲಿ ಪೊಲೀಸರು ತನಿಖೆಗೆ ಬಂದಿದ್ದರಂತೆ.ಕೊನೆಗೆ ಯಾರೂ ಸಿಗದೆ ವಾಪಾಸ್ ಹೋದರಂತೆ .ಅಪ್ಪ ಇನ್ನೂ ಏನೇನೋ ಹೇಳುವನಿದ್ದ .ಆಗಲೇ ಸಂಜೆ ಆಗುತ್ತಲಿತ್ತು.ಸರಿ ಅಪ್ಪ ಉಳಿದ್ದದ್ದನ್ನೆಲ್ಲ ಆಮೇಲೆ ಹೇಳಿ' ಎಂದು ನಾನು ಹೊಳೆಯ ಕಡೆ ಹೊರಟೆ. ತಿಂಗಳ ನಂತರ ಹೊಳೆ ಹೊಸದಾಗಿ ಕಂಡಿತು.ಸುತ್ತ ಕಣ್ಣಾಡಿಸಿದೆ.ಆತನ ಸುಳಿವೇ ಇಲ್ಲ.ಮರುದಿನ ಕೂಡ ಆತ ನಾಪತ್ತೆ.ಹುಚ್ಚಿ ಹೊಳೆಯ ಸೇತುವೆಯ ಮೇಲೆ ಆತ ಇನ್ನೆಂದೂ ಕಾಣಿಸಲೇ ಇಲ್ಲ.ಅವನ ಶೈಲಿಯಲ್ಲಿಯೇ ಹೊಸದಾಗಿ ಒಂದು ಕವಿತೆ ಬರೆದಿದ್ದೆ.ಆತನಿಗೆ ತೋರಿಸಬೇಕಿತ್ತು.ಎಂದು ಬರುತ್ತಾನೋ ಮರಳಿ .ಗೊತ್ತಿಲ್ಲ....

7 comments:

Rakesh S Joshi said...

ಚೆನ್ನಾಗಿದೆ... ಹುಚ್ಚು ಹೊಳೆ ಹುಚ್ಚು ಹಿಡ್ಸುತ್ತೆ.. :-)

Ananda_KMR said...

ನಿರೂಪಣೆ ತುಂಬ ಚೆನ್ನಾಗಿದೆ .... ಪ್ರಶಾಂತವಾದ ವಾತವರಣದಲ್ಲಿ ಹರಿಯೋ ನದಿ ಮತ್ತು ಆಕಾಶವನ್ನ ನೋಡಿದಾಗ ಮನಸ್ಸಿಗೆ ಸಿಕ್ಕೋ ಖುಷಿ ಹೇಳೋಕ್ ಆಗೋಲ್ಲ

ಆ ಅಪರಿಚಿತನ ಶೈಲಿಯಲ್ಲಿ ನೀವು ಬರ್ದಿರೋ ಕವಿತೆಯನ್ನ ಬ್ಲಾಗ್ ನಲ್ಲಿ ಹಾಕಿ ....

ದಿನಕರ ಮೊಗೇರ said...

nirUpaNaa shaili tumbaa chennaagide....

ishTa aaytu........

ಮನಸಿನಮನೆಯವನು said...

Aa eradu saalugalu nijakkoo adbhuta..

Unknown said...

neevu ardha kathe heli namage huchchu hidisidiri peethike mugiyitu mundinadu yaavaaga........

Unknown said...

nimma kathe heli namage huchchu hidisidiri. iga peethike aytu mundinadu yaavaaga......

Unknown said...

nimma kathe heli namage huchchu hidisidiri. iga peethike aytu mundinadu yaavaaga......