Thursday, January 13, 2011

ಛೆ..!! ಹೀಗಾಗಬಾರದಿತ್ತು ...:( :(

ಆ ದಿನಗಳು ......

ಸುಮಾರು ಹದಿನೇಳು-ಹದಿನೆಂಟು ವರುಷಗಳ ಹಿಂದಿನ ಮಾತು.ಆಗ ಊರಲ್ಲಿದ್ದುದು ಬೆರಳೆಣಿಕೆಯಷ್ಟು ಟಿ.ವಿ.ಗಳು. ನಮ್ಮ ಮನೆಯಲ್ಲೂ ಒಂದು ಟಿ.ವಿ.ಯಿತ್ತು. ಆಗ ಟಿ.ವಿ.ಯಲ್ಲಿ ಬರುತ್ತಿದ್ದುದು ದೂರದರ್ಶನ ವಾಹಿನಿಯೊಂದೆ.ಅದೊಂದು ದಿನ ಅಪ್ಪ ಹಾಗು ಊರಿನ ಹತ್ತಾರು ಜನ ಬೆಂಗಳೂರಿಗೆ ಹೊರಟು ನಿಂತಿದ್ದರು ಗುರಪ್ಪಜ್ಜನ ಮನೆ ಜೀಪಿನಲ್ಲಿ. ಅವರೆಲ್ಲಾ ಬೆಂಗಳೂರಿಗೆ ‘ಡಿಶ್’ ತರಲಿಕ್ಕೆ ದಂಡಯಾತ್ರೆಗೆ ಹೊರಟವರಂತೆ ಹೊರಟು ನಿಂತಿದ್ದರು. ಅವರು ಬೆಂಗಳೂರಿಗೆ ಹೋಗಿ ಮರಳಿ ಬರುತನಕ ಊರ ತುಂಬ ಆ ‘ಡಿಶ್’ ನದೇ ಸುದ್ದಿ. ‘ತುಂಬಾ ಚಾನೆಲ್ ನೋಡಬಹುದಂತೆ ,ಈ ಎಂಟೆನಾ ಇನ್ನು ಬೇಡವಂತೆ. ಫುಲ್ ಕ್ಲಿಯರ್ ಆಗಿ ಚಿತ್ರಗಳು ಬರುತ್ತಂತೆ ‘ ಹೀಗೆ ಆಗ ಒಂದಷ್ಟು ದಿನ ಎಲ್ಲವೂ ಡಿಶ್ ಮಯ. ಅಪ್ಪ ಹಾಗು ಅವನ ಪಡೆ ಮರಳಿ ಬೆಂಗಳೂರಿನಿಂದ ಬಂದಾಗ ಅವರನ್ನು ಊರ ಮಂದಿ ವೀರೋಚಿತವಾಗಿ ಸ್ವಾಗತಿಸಿದ್ದರು.

ನಂತರ ಬಿಡಿ ಬಿಡಿಯಾಗಿ ತಂದ ಡಿಶ್ ನ ಅವಯವಗಳನ್ನೆಲ್ಲ ‘ಮೇಲಿನ ಮನೆ ಮಹೇಶಣ್ಣನ ‘ ಮನೆಯ ಅಂಗಳದಲ್ಲಿ ಒಂದೊಂದಾಗಿ ಕ್ರಮವಾಗಿ ಜೋಡಿಸಿ ಕೊನೆಗೊಂದು ದೊಡ್ಡ ಕೊಡೆಯನ್ನಾಗಿ ಮಾಡಿ ನಿಲ್ಲಿಸಿದ್ದರು. ಮಕ್ಕಳಾದ ನಮಗೆ ಅದೊಂದು ಭಾರಿ ಅಚ್ಚರಿ. ಆ ಡಿಶ್ಶು ಮಳೆಗಾಲದಲ್ಲಿ ಜೋರು ಗಾಳಿಗೆ ಸಿಕ್ಕಿ ಉಲ್ಟಾ ಹೊಡೆದು ಕುಳಿತ ಕೊಡೆಯಂತೆ ಮಜವಾಗಿ ಕಾಣುತ್ತಿತ್ತು.ಪ್ರತಿದಿನ ಶಾಲೆಗೆ ಹೋಗುವಾಗ,ಶಾಲೆಯಿಂದ ಮರಳಿ ಬರುವಾಗ ದಾರಿಯ ಪಕ್ಕದಲ್ಲಿದ್ದ ಅದನ್ನು ನೋಡುತ್ತಾ ಸ್ವಲ್ಪ ಕಾಲ ನಮ್ಮ ಕಾಲುಗಳು ನಿಂತುಬಿಡುತ್ತಿದ್ದವು. ಈಗಲೂ ಆ ಡಿಶ್ ಎಂಬ ದೊಡ್ಡ ಉಲ್ಟಾ ಹೊಡೆದು ನಿಂತ ಕೊಡೆ ಹಾಗೇ ಇದೆ.ಅದೀಗ ಬಣ್ಣಗೆಟ್ಟಿದೆ. ಈಗ ಮನೆ ಮನೆಗೂ ಪ್ರತ್ಯೇಕವಾಗಿ ಅವರವರದೇ ಆದ ಪುಟ್ಟ ‘ಬಿಗ್ ಟಿ.ವಿ ‘ ಕೊಡೆಗಳು ಬಂದುಬಿಟ್ಟಿವೆ.

ಊರಿಗೆ ಡಿಶ್ ಬಂತು. ಪಡ್ಡೆ ಹುಡುಗರಿಗೆ ,ರಸಿಕತೆಯ ಕಾರಣಕ್ಕೆ ಹುಡುಗರಷ್ಟೇ ಆಸಕ್ತಿ ಉಳಿಸಿಕೊಂಡ ಮಧ್ಯವಯಸ್ಕರರಿಗೆ,ಕೆಲವೇ ಕೆಲವು ಬತ್ತದೆ ಉಳಿದ ವಯಸ್ಸಾದ ಮಂದಿಗೆ ನೋಡಲಿಕ್ಕೆ ಎಂ.ಟಿ.ವಿ. ಸಿಕ್ಕಿತ್ತು. ಹೆಂಗಸರಿಗೆ ಧಾರಾವಾಹಿಗಳು ಸಿಕ್ಕವು.ಆಗಷ್ಟೇ ಬೆಳಕಿಗೆ ಬರುತ್ತಿದ್ದ ಎಳೆಯ ಹುಡುಗ ಸೋನು ನಿಗಮ್ ನಡೆಸಿಕೊಡುತ್ತಿದ್ದ ‘ಸಾರೆಗಾಮ’ ವನ್ನು ಎಲ್ಲರೂ ಇಷ್ಟಪಡುತ್ತಿದ್ದರು.ಅಷ್ಟು ಕಾಲ ದೂರ ದರ್ಶನದಲ್ಲಿ ಚಂದ್ರಕಾಂತ, ಜಂಗಲ್ ಬುಕ್ಕು ನೋಡಿಕೊಂಡಿರುತ್ತಿದ್ದ ಮಕ್ಕಳಾದ ನಮಗೆ ಥ್ರಿಲ್ಲರ್ ಮಂಜು ಸಾಹಸದ ಕನ್ನಡ ಸಿನೆಮಾಗಳು,ಸಿನೆಮಾ ಹಾಡುಗಳು , ಕಾರ್ಟೂನುಗಳು ಹಾಗು ಕ್ರಿಕೆಟ್ ಸಿಕ್ಕಿತ್ತು.

ಆದರೆ ಎಲ್ಲಕ್ಕಿಂತ ಜಾಸ್ತಿ ಕ್ರಿಕೆಟ್ ಎಲ್ಲರಿಗೂ ಮುಖ್ಯವಾಗಿತ್ತು. ಆಗಿನ್ನೂ ಸ್ಟಾರ್ ಸ್ಪೋರ್ಟ್ಸ್ ಹಾಗು ಈ.ಎಸ್.ಪಿ.ಎನ್ ಗಳು ಪೇ ಚಾನೆಲ್ ಗಳಾಗಿರಲಿಲ್ಲ. ಕ್ರಿಕೆಟ್ ಯಥೇಚ್ಚವಾಗಿ ನೋಡಲಿಕ್ಕೆ ಸಿಗುತ್ತಿತ್ತು. ಮ್ಯಾಚುಗಳು ಇದ್ದ ದಿನ ಊರ ತುಂಬ ಅದರದ್ದೇ ಧ್ಯಾನ. ಮನೆಯ ಜಗುಲಿಯಲ್ಲಿ , ದೇವಸ್ಥಾನದ ಕಟ್ಟೆಯ ಮೇಲಿನ ಸಂಜೆ ವೇಳೆಯ ಬೈಠಕ್ಕಿನಲ್ಲಿ ,ಹೀಗೆ ಊರಿನವರು ಒಂದೆಡೆ ಸೇರುವ ಜಾಗದಲ್ಲೆಲ್ಲ ಕ್ರಿಕೆಟ್ ಚರ್ಚೆಯಾಗುತ್ತಿತ್ತು. ವಾದವಿವಾದಗಳು ಆಗುತ್ತಿತ್ತು. ಹಳಬರು ತಮ್ಮ ಕಾಲದ ವಿವಿಯನ್ ರಿಚರ್ಡ್ಸ್ .ಜೋಯೆಲ್ ಗಾರ್ನರ್ರು , ಮಾರ್ಷಲ್ಲು.ಪಟೌಡಿ .ಪ್ರಸನ್ನ .ಬಿ.ಎಸ್.ಚಂದ್ರಶೇಖರ್ .ಗವಾಸ್ಕರ್ .ವಿಶ್ವನಾಥು ಎಂದುಕೊಂಡು ಹಳೆಯ ಕಾಲಕ್ಕೆ ಜಾರುತ್ತಿದ್ದರು. ಟಿ.ವಿ.ಯಿಲ್ಲದ ಕಾಲದಲ್ಲಿ ಅವರ ಆಟಗಳನ್ನೆಲ್ಲ ಎಲ್ಲಿ ನೋಡಿದ್ದರೋ ದೇವರೇ ಬಲ್ಲ.ಆದರೂ ಅವರ ಬಗ್ಗೆ ಹಾಗು ಅವರ ಆಟದ ಬಗ್ಗೆ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಿದ್ದರು. ‘ಹೆಲ್ಮೆಟ್ಟು, ಗಾರ್ಡು ಇಲ್ಲದೆ ಆಡ್ತಾ ಇದ್ದ ಕಾಲ ಅದು.ಸ್ವಲ್ಪ ಎಡವಟ್ಟಾದರೂ ಬುರುಡೆ ,ಸಾಮಾನೂ ಎರಡೂ ಬಾದು. ಅದು ನಿಜವಾದ ಕ್ರಿಕೆಟ್.’ ಎಂದು ಒಂದೇ ಏಟಿಗೆ ಈಗಿನ ಕ್ರಿಕೆಟನ್ನು ಸಾರಸಗಟಾಗಿ ತಿರಸ್ಕರಿಸಿ ಮಕ್ಕಳಾಟದ ರೀತಿಯಲ್ಲಿ ಕಾಣುತ್ತಿದ್ದರು.. ‘ ಶಿರಸಿಯಲ್ಲಿ ನಡೆದ ಒಂದು ರಣಜಿ ಪಂದ್ಯದಲ್ಲಿ ಆಡಲು ವಿಶ್ವನಾಥ್ ಬಂದಿದ್ದು.ವಿಶ್ವನಾಥ್ ಮೂರು ಸಿಕ್ಸರ್ ಬಾರಿಸಿದ್ದು .ಮಿಡ್ ಆನಿನಲ್ಲಿ ಬಾರಿಸಿದ ಒಂದು ಸಿಕ್ಸರ್ ಪ್ರೇಕ್ಷಕರ ಗ್ಯಾಲರಿ ಯಲ್ಲಿ ಕುಳಿತಿದ್ದ ತಮ್ಮ ಕಾಲ ಬುಡಕ್ಕೆ ಬಂದು ಬಿದ್ದದ್ದು, ಕಾಲಬುಡಕ್ಕೆ ಬಂದು ಬಿದ್ದ ಬಾಲನ್ನು ಹೆಕ್ಕಿಕೊಟ್ಟದ್ದು ’ ಇವನ್ನೆಲ್ಲ ತುಂಬಾ ಖುಷಿಯಿಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಬುರುಡೆ ಹೋದರೆ ಹೋಗಲಿ.ಆದರೆ ಈ ‘ ಸಾಮಾನು ಬಾದು ‘ ಎಂಬ ಹಳಬರ ಒಂದೇ ಒಂದು ಮಾತಿನಿಂದ ಹಳಬರ ಕ್ರಿಕೆಟ್ಟೇ ಶ್ರೇಷ್ಠವೆಂದು ಉಳಿದ ಕಿರಿಯರು ದೂಸರಾ ಉಸಿರಿಲ್ಲದೆ ಒಪ್ಪಿಕೊಳ್ಳುತ್ತಿದ್ದರು .

ಕ್ರಿಕೆಟ್ ಕಾರಣಕ್ಕೆ ಊರಲ್ಲಿ ಹತ್ತಾರು ಗುಂಪುಗಳಿದ್ದವು.ಆಸ್ಟ್ರೇಲಿಯಾವನ್ನು ಬೆಂಬಲಿಸುವ ಗುಂಪು, ಭಾರತವನ್ನ ಬೆಂಬಲಿಸುವ ಗುಂಪು.ಪಾಕಿಸ್ತಾನವನ್ನು ಬೆಂಬಲಿಸುವ ಗುಂಪು.ಆಫ್ರಿಕಾವನ್ನು ಹಾಗು ಶ್ರೀಲಂಕಾವನ್ನು ಬೆಂಬಲಿಸುವ ಗುಂಪು.ಸಚಿನ್ ಶ್ರೇಷ್ಠ ಎಂಬ ಗುಂಪು. ಸಚಿನ್ಗಿಂತ ಬ್ರಿಯಾನ್ ಲಾರಾ ಶ್ರೇಷ್ಠ ಎಂಬ ಗುಂಪು. ಆದರೆ ಭಾರತ ಪಾಕಿಸ್ತಾನ ಮ್ಯಾಚ್ ನಡೆಯುವಾಗ ಎಲ್ಲರೂ ತಮ್ಮೆಲ್ಲ ನಿಲುವುಗಳನ್ನ ಮರೆತು ಒಟ್ಟಾಗಿ ಭಾರತವನ್ನ ಬೆಂಬಲಿಸುತ್ತಿದ್ದರು. ಆಗಿನ ವಿಶ್ವದ ಕ್ರಿಕೆಟ್ಟು ಹಾಗಿತ್ತು.ಆರಾಧಿಸಲು ಲೆಜೆಂಡ್ ಎನ್ನಬಹುದಾದ ಆಟಗಾರರ ದೊಡ್ಡ ಪಡೆಯೇ ಆಗಿತ್ತು. ಬಹುತೇಕ ಎಲ್ಲ ಟೀಮುಗಳು ಸರಿಸಮಾನವಾಗಿದ್ದವು.

ಆಗಿನ ಕ್ರಿಕೆಟ್ ವಾತಾವರಣವಾದರೂ ಹೇಗಿತ್ತು ನೋಡಿ. ಆಸ್ಟ್ರೇಲಿಯಾದಲ್ಲಿ ವಾ ಸಹೋದರರು , ಡೆವಿಡ್ ಬೂನ್ , ಶೇನ್ ವಾರ್ನ್ ,ಬೆವನ್ , ಮೆಗ್ರಾಥ್ ,ಗಿಲ್ಲಿ , ಮೈಕೆಲ್ ಸ್ಲೆಟ್ಟರ್ ಇದ್ದರು.ಭಾರತದಲ್ಲಿ ಅಜರ್ ,ಜಡೇಜಾ , ತೆಂಡೂಲ್ಕರ್,ಗಂಗೂಲಿ .ದ್ರಾವಿಡ್ ,ಕುಂಬ್ಳೆ,ಶ್ರೀನಾಥ್ ಥರದವರು, ಪಾಕಿಸ್ತಾನದಲ್ಲಿ ಸಯೀದ್ ಅನ್ವರ್ ,ಇಂಜಮಾಮ್, ವಕಾರ್ ,ಅಕ್ರಂ , ಸಕ್ಲೈನ್ ಮುಷ್ತಾಕ್ , ಅಮೀರ್ ಸೋಹೈಲ್ , ಇಜಾಜ್ ಅಹ್ಮೆದ್. ಆಫ್ರಿಕಾದಲ್ಲಿ ಗ್ಯಾರಿ ಕ್ರಸ್ಟನ್ ,ಕಾಲಿಸ್,ಪೊಲ್ಲಾಕ್ , ಹಡ್ಸನ್ , ಜಾಂಟಿ ರೋಡ್ಸ್, ಕ್ರೋನಿಯೆ, ಲ್ಯಾನ್ಸ್ ಕ್ಲುಸ್ನರ್ ,ಅಲನ್ ಡೊನಾಲ್ಡ್ , ಕಲ್ಲಿನನ್. ವೆಸ್ಟಿಂಡೀಸ್ ನಲ್ಲಿ ಲಾರಾ, ಹೂಪರ್.ಚಂದ್ರಪಾಲ್ ,ವಾಲ್ಶ್ ,ಎಂಬ್ರೂಸ್ , ಸೀಮೆನ್ಸ್ . ಶ್ರೀಲಂಕಾದಲ್ಲಿ ಸನತ್ ಜಯಸೂರ್ಯ.ಅರವಿಂದ ಡಿಸಿಲ್ವಾ , ರಣತುಂಗ , ಮುರಳೀಧರನ್ .ಕಲುವಿತರಣ ,ಅಟ್ಟಪಟ್ಟು . ಜಿಂಬಾಬ್ವೆಯ ಫ್ಲವರ್ ಸಹೋದರರು ,ಅಲಿಸ್ಟರ್ ಕ್ಯಾಂಬೆಲ್.ನ್ಯೂಜೀಲ್ಯಾಂಡ್ ನ ಹ್ಯಾರ್ರಿಸ್, ವೆಟ್ಟೋರಿ,ನಾಥನ್ ಆಸ್ಲೆ , ಕ್ರಿಸ್ ಕೈನ್ಸ್ .ಇಂಗ್ಲೆಂಡ್ ನ ಗೂಚ್, ಕುಕ್,ವಾನ್. ಎಲ್ಲರೂ ಘಟಾನುಘಟಿಗಳು. ಆರಾಧಿಸಲು ಆಗ ಅಸಂಖ್ಯ ಆಯ್ಕೆಗಳಿದ್ದವು.

ಈಗ ಏನಾಗಿದೆ ನೋಡಿ. ಸಚಿನ್.ಕಾಲಿಸ್ .ಸೆಹ್ವಾಗ್ ,ಪಾಂಟಿಂಗ್ ಬಿಟ್ಟರೆ ಇಡೀ ಕ್ರಿಕೆಟ್ಟಿನಲ್ಲಿ ಲೆಜೆಂಡ್ ಎನ್ನಬಹುದಾದ ಆಟಗಾರರು ಯಾರೂ ಕಾಣುತ್ತಿಲ್ಲ. ಅತ್ತ ಇನ್ನೊಬ್ಬ ಲೆಜೆಂಡ್ ದ್ರಾವಿಡ್ ಇದ್ದೂ ಇಲ್ಲದಂತಾಗಿ ಹೋದ. ಯಾವ ಟೀಂನಲ್ಲಿಯೂ ಹಳೆಯ ಹೊಳಪು ಉಳಿದಿಲ್ಲ. ಕ್ರಿಕೆಟ್ ಪಾಲಿಗೆ ಇದು ಕೇವಲ ಆಡಂಬರದ ದಿನಗಳು. ವೈಭವದ ದಿನಗಳು ಖಂಡಿತ ಅಲ್ಲ. ಕ್ರಿಕೆಟ್ ಈಗ ಕೇವಲ ಕೆರಳಿಸುತ್ತೆ. ಅರಳಿಸುವ ಮಾಯೆ ಎಂದೋ ಕಳೆದುಹೋಗಿದೆ.

ಕಸವಾದ ಲಾರ ಎಂಬ ಅನರ್ಘ್ಯ ರತ್ನ ಹಾಗು ಗಂಗೂಲಿಯೆಂಬ ಕಿರೀಟ ಕಳೆದುಹೋದ ರಾಜಕುಮಾರ .....

ಬ್ರಿಯಾನ್ ಲಾರಾ ಐ.ಪಿ.ಎಲ್ ಗೆ ಬರುತ್ತಾನಂತೆ ಎಂಬ ಸುದ್ದಿ ಕೇಳಿ ತುಂಬಾ ಖುಷಿಪಟ್ಟಿದ್ದೆ. ಅವನ ಫೂಟ್ ವರ್ಕ್ ನೋಡುವುದೇ ಚೆಂದ. ಸಚಿನ್ ಬಿಟ್ಟರೆ ಇನ್ಯಾರಿಗಾದರೂ ದೇವರ ಪಟ್ಟ ಕೊಡಬಹುದಾದರೆ ಅದು ಖಂಡಿತವಾಗಿ ಲಾರಾನಿಗೆ ಮೀಸಲು. ಆದರೆ ಏನಾಯಿತು ನೋಡಿ. ಹರಾಜಿನಲ್ಲಿ ಲಾರಾ ಎಂಬ ಅನರ್ಘ್ಯ ರತ್ನ ಯಾರಿಗೂ ಬೇಡವಾದ ಸರಕಾಗಿಹೋದ .ಅತ್ತ ಗಂಗೂಲಿ ಕಿರೀಟ ಕಳೆದುಕೊಂಡು ಕುಳಿತ ರಾಜಕುಮಾರ.ಗಂಗೂಲಿಯನ್ನು ಪುಕ್ಕಟೆ ಕೊಟ್ಟರೂ ಕೇಳುವವರಿಲ್ಲ . ಒಮ್ಮೆ ಅವರು ಮೆರೆದ ವೈಭವದ ದಿನಗಳು ನೆನಪಾದವು.ತುಂಬಾ ಕಷ್ಟವಾಯಿತು ಮನಸ್ಸಿಗೆ. ಈ ವ್ಯಾಪಾರಿ ಜಗತ್ತು ಇಂಥವರಿಗೆ ಎಂಥಾ ಹೀನಾಯ ವಿದಾಯ ಹೇಳಿಬಿಟ್ಟಿತು. ನನ್ನಂಥ ಮಾಮೂಲಿ ಅಭಿಮಾನಿಗೆ ಇಷ್ಟು ಬೇಸರವಾಗಿದೆ. ಇನ್ನು ಒಂದೇ ಇನ್ನಿಂಗ್ಸ್ ನಲ್ಲಿ ನಾನೂರು ರನ್ ಹೊಡೆದು ನಾಟ್ ಔಟ್ ಆಗಿ ಉಳಿದು ಬೀಗಿ ನಿಂತ ಲಾರನಿಗೆ, ಹಠಕ್ಕೆ ,ಹೋರಾಟಕ್ಕೆ ,ಆತ್ಮಗೌರವಕ್ಕೆ ಇನ್ನೊಂದು ಹೆಸರಾದ ಗಂಗೂಲಿ ಗೆ ಎಷ್ಟು ಕಷ್ಟವಾಗಿರಬೇಕು ಅರಗಿಸಿಕೊಳ್ಳಲು. ಒಂದೇ ಒಂದು ಸಮಾಧಾನವೆಂದರೆ ದ್ರಾವಿಡ್ ಈ ಬಾರಿ ಮುಖಭಂಗದಿಂದ ಪಾರಾಗಿದ್ದು.

ಈ ಬಾರಿ ಬೆಂಗಳೂರು ಟೀಂ ನ ಹೆಸರಿನಲ್ಲಿ ಮಾತ್ರ ಬೆಂಗಳೂರಿದೆ. ದ್ರಾವಿಡ್, ವಿನಯ್ ಕುಮಾರ್ ,ಉತ್ತಪ್ಪ ಬೇರೆಯವರ ಪಾಲಾದರು.ಕುಂಬ್ಳೆ ವಿದಾಯ ಹೇಳಿಬಿಟ್ಟರು. ಇನ್ನು ಯಾವ ಖುಷಿಗೆ ಬೆಂಗಳೂರು ಟೀಂಮನ್ನು ಬೆಂಬಲಿಸುವುದು ಎನ್ನುವುದೇ ತಿಳಿಯುತ್ತಿಲ್ಲ. ಅತ್ತ ಯಾರನ್ನು ವಿರೋಧಿಸುವುದೂ ಎನ್ನುವುದೂ ತಿಳಿಯುತ್ತಿಲ್ಲ. ಒಂದು ಪರ ಅಥವಾ ವಿರೋಧದ ಮನೋಭಾವ ಇಟ್ಟುಕೊಳ್ಳದೆ ನಿರ್ಭಾವುಕವಾಗಿ ಕ್ರಿಕೆಟ್ ನೋಡುವುದಾದರೂ ಹೇಗೆ ? ಹಾಗೆ ನೋಡುವುದರಲ್ಲಿ ಸ್ವಾರಸ್ಯವಾದರೂ ಎಲ್ಲಿದೆ ?

ನಾನಂತೂ ಈ ಬಾರಿ ಐ.ಪಿ.ಎಲ್ ಕಡೆ ಆಸಕ್ತಿಯನ್ನೇ ಕಳೆದುಕೊಂಡಿದ್ದೇನೆ .ಮುಂದಿರುವ ಈ ಬಾರಿಯ ವಿಶ್ವಕಪ್ಪನ್ನು ಎದುರು ನೋಡುತ್ತಿದ್ದೇನೆ. ಈ ವಿಶ್ವಕಪ್ ನಂತರ ಸಚಿನ್ ನಿವೃತ್ತಿ ತೆಗೆದುಕೊಳ್ಳುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರೇಕ್ಷಕರಾದ ನಾವು ಕ್ರಿಕೆಟ್ ವೀಕ್ಷಣೆಯಿಂದ ನಿವೃತ್ತಿ ತೆಗೆದುಕೊಳ್ಳುವ ಯೋಚನೆಯನ್ನು ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು. ಏಕೆಂದರೆ ಇನ್ನು ಮುಂದೆ ಸಚಿನ್ ಹರಾಜಿನಲ್ಲಿ ಮಾರಾಟವಾಗಿ ಬೇರೊಂದು ದೇಶದ ಪಾಲಾದರೂ ಅಚ್ಚರಿಯಿಲ್ಲ. ನಮ್ಮದೇ ಆಟಗಾರರು ನಮ್ಮನ್ನಾಳಿದ ಇಂಗ್ಲೆಂಡ್ ಪರವಾಗಿ. ನಮ್ಮ ಪಕ್ಕದ ಮಗ್ಗುಲ ಮುಳ್ಳು ಪಾಕಿಸ್ತಾನದ ಪರವಾಗಿ ಆಡಿದರೂ ಆಡಬಹುದು.ಇದು ವ್ಯವಸ್ಥೆಯ ಬಗ್ಗೆ ಕೊಂಚ ವ್ಯಂಗ್ಯವಿಟ್ಟುಕೊಂಡು ಅತಿರೇಕದಲ್ಲಿ ಹೇಳಿದ ಮಾತು.ಆದರೆ ಭವಿಷ್ಯದಲ್ಲಿ ಇದು ನಿಜವಾಗಿಬಿಡಲೂಬಹುದು. ಈ ಜಾಗತೀಕರಣದ ,ವ್ಯಾಪಾರೀಕರಣದ ಯುಗದಲ್ಲಿ ಎಲ್ಲವೂ ಸಾಧ್ಯ. ಏನು ಬೇಕಾದರೂ ಆಗಬಹುದು .ಎಲ್ಲವನ್ನೂ ನಿರ್ಲಿಪ್ತವಾಗಿ ನಿರ್ಭಾವುಕವಾಗಿ ನಾಡು, ನುಡಿ,ಸಂಸ್ಕೃತಿ ಎನ್ನುವ ಹಂಗಿರದೆ ,ಮನುಷ್ಯರನ್ನೂ ವಸ್ತುಗಳನ್ನೂ ಸಮನಾಗಿ ನೋಡುವ ಮಲ್ಯರಂಥವರು,ಬಿಸಿಸಿಐ ಬಳಗದವರು, ಉದ್ಯಮಿಗಳು ನಿಜಕ್ಕೂ ವಿಶ್ವಮಾನವರು. ಭಾವನೆ ಇಟ್ಟುಕೊಂಡು ಬದುಕುತ್ತಿರುವ ನಾವು ಕ್ಷುದ್ರ ಹುಲುಮಾನವರು.ಅಯೋಗ್ಯರು. Unfit to Survive …

7 comments:

ಸುಬ್ರಮಣ್ಯ said...

:-)

ವಿ.ರಾ.ಹೆ. said...

ಐ.ಪಿ.ಎಲ್. ಎಂಬ ವ್ಯಾಪಾರ ಶುರುವಾದಾಗಿಂದಲೇ ನಾನು ಕ್ರಿಕೆಟ್ಟಿಂದ ನಿವೃತ್ತಿಯಾಗಿಬಿಟ್ಟೆ :). ಈಗಂತೂ ವರ್ಷವಿಡೀ ಯಾವ್ದಾದ್ರೂ ಮ್ಯಾಚ್ ನೆಡೀತಾನೇ ಇರತ್ತೆ. ಆವಾಗೆಲ್ಲಾ ಕಾದು ನೋಡುತ್ತಿದ್ದಂತೆ ನೋಡಲು ಈಗ ಮನಸಾಗೋದಿಲ್ಲ. ಕ್ಲಾಸಿಕಲ್ ಕ್ರಿಕೆಟ್ಟಿಗೆ ಸಮಾಧಿ ಕಟ್ಟಿ ಆಗಿದೆ. ಯಾವುದೇ ಆದರೂ ಅತಿ ಆದಾಗ ಆಸಕ್ತಿಯೂ ಹೋಗಿಬಿಡುತ್ತದೆ.

ಸಾಗರದಾಚೆಯ ಇಂಚರ said...

IPL ಎಂಬುದು ಕೇವಲ ಆಟವಾಗಿ ಉಳಿದಿಲ್ಲ, ಅದೊಂದು ವ್ಯಾಪಾರೀ ಸಂಸ್ಥೆಯಂತಿದೆ
ಬಹುಶ: ನಾವೇ ಆಟಗಾರರನ್ನು ಆರಿಸುತ್ತಿದ್ದರೂ ಕೆಲವು ಅನುಭಾವಿಗಳಿಗೆ ಮಣೆ ಹಾಕುತ್ತಿರಲಿಲ್ಲ
ಇಲ್ಲಿ ಮಾಡಿಕೊಳ್ಳುವ ಒಪ್ಪಂದ ೩ ವರ್ಷಕ್ಕೆ. ಗಂಗೂಲಿ , ಲಾರಾ ರ ಕ್ರಿಕೆಟ್ ಮೊನಚು ಮೊದಲಿನಂತೆ ಇಲ್ಲ.
ಇನ್ನು ೩ ವರ್ಷದ ಕಾಲ ಅವರ ಕ್ರಿಕೆಟ್ ಅದೇ ಮಟ್ಟದಲ್ಲಿರುತ್ತದೆ ಎಂದು ನಂಬಲು ಸಾದ್ಯವಿಲ್ಲ
ಹೀಗಿರುವಾಗ ಯುವಕರಿಗೆ ಕೊಟ್ಟ ಅವಕಾಶ ಸರಿಯಾಗಿಯೇ ಇದೆ
ಕಳೆದ IPL ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ರನ್ನು ಅಷ್ಟೊಂದು ಹಣ ಕೊಟ್ಟು ಕೊಂಡು
ನಂತರ ಅವರ ನಿರಾಶಾದಾಯಕ ಆಟ ನೋಡಿದ್ದೇವೆ.
ಅನುಭವ ಬೇಕು ನಿಜ ಆದರೆ ಇದ್ದ ಅನುಭವ ವನ್ನು ಮೈದಾನದಲ್ಲಿ ಸರಿಯಾದ ರೀತಿಯಲ್ಲಿ ಹೊರ ಹಾಕಿದರೆ ಮಾತ್ರ ಅದಕ್ಕೆ ಬೆಲೆ
ಕೆಲವೊಮ್ಮೆ ಅಂತ ಶ್ರೇಷ್ಠ ಆಟಗಾರರನ್ನು ಬಿಟ್ಟಿದ್ದಕ್ಕೆ ನೋವಿದೆ
ಆದರೆ ಕೋಟ್ಯಾಂತರ ರೂಪಾಯಿಗಳನ್ನು ಕೊಟ್ಟು ಖರೀದಿಸುವಾಗ ಕೆಲವು ವಿಷಯಗಳನ್ನು ಗಮನಿಸಲೆಬೇಕಾಗುತ್ತದೆ. ಅಲ್ಲವೇ?

ಗೌತಮ್ ಹೆಗಡೆ said...

@ SUBRAMANYA MAAACHIKOPPA


PRATIKRIYISIDDAKKE DHANYAVAADA SIR :)

ಗೌತಮ್ ಹೆಗಡೆ said...

@ VI.RA.HE. ALIAS VIKAASANNA

ಏನ್ ಮಾಡದು ಹೇಳಪ.ಈಗೀಗ ಎಲ್ಲರೂ ಆರು ತಿಂಗಳಿಗೆ ಹುಟ್ಟುತ್ತ ಇರೋರ್ರೆ ಜಾಸ್ತಿ. ಇಂಥಾ ಕಾಲದಲ್ಲಿ ನಾವೇ ಅಬ್ನೋರ್ಮಲ್ಲು. ಒಂಭತ್ತು ತಿಂಗಳಿಗೆ ಹುಟ್ ದೋರು :)

ಟೆಸ್ಟ್ ಹಗಿ ಒನ್ ಡೇ ಬಂತು.ಈಗ ಟ್ವೆಂಟಿ ಟ್ವೆಂಟಿ :) ಮುಂದೆ ಏನಾಗುತ್ತೋ ;)

ಗೌತಮ್ ಹೆಗಡೆ said...

@ ಗುರು ಮೂರ್ತಿ ಹೆಗಡೆ

ಸರಿ ನಿಮ್ಮ ಅಭಿಪ್ರಾಯ. ಲೆಕ್ಕಾಚಾರ ಮುಖ್ಯ.ಆದರೆ ಎಲ್ಲ ಕಡೆ ಲೆಕ್ಕಾಚಾರ ಒಳ್ಳೇದಲ್ಲ.ಕ್ರಿಕೆಟ್ ನ ಇಷ್ಟೆಲ್ಲಾ ವ್ಯಾಪಾರದ ರೀತಿ ಮಾಡುವ ದರ್ದು ಇರಲಿಲ್ಲ. ಆರ್ .ಬಿ.ಐ ಕೂಡ ಈ ಬಗ್ಗೆ ತನ್ನ ಆಕ್ಷೇಪ ವ್ಯಕ್ತಪಡಿಸದೆ. ಆಟಗಾರರನ್ನ ಈ ರೀತಿ ವಸ್ತುಗಳಂತೆ ಹರಾಜು ಹಾಕುವ ಪ್ರಕ್ರಿಯೆಯನ್ನ ಪ್ರಶ್ನಿಸಿದೆ.

ಒಮ್ಮೆ ಸಾಧ್ಯವಾದರೆ ಈ ತಿಂಗಳು ೧೬ನೆ ತಾರೀಕಿನ ಪ್ರಜಾವಾಣಿ ಓದಿ. ಪುಟ ಸಂಖ್ಯೆ ೬. ನಿಮ್ಮ ಪ್ರಶ್ನೆಗೆ ತುಂಬಾ ಸಮಂಜಸವಾದ ಉತ್ತರ ಸಿಕ್ಕುತ್ತೆ .:)

ಪ್ರತಿಕ್ರಿಯೆಗೆ ಧನ್ಯವಾದ :)

ಮನಸಿನಮನೆಯವನು said...

ಗೌತಮ್ ಹೆಗಡೆ..,

ಗಂಗೂಲಿ ವಿಷಯದಲ್ಲಿ ನಂಗೂ ತುಂಬಾ ಬೇಸರವಾಗಿದೆ....
ಲಾರ,ಗೇಲ್.. ಇವರೂ ಬೇಡವಾದರೆ..??