Sunday, December 19, 2010

ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆಗಳು ಡಿಲೀಟ್ ಆದವು...

ಈಗೊಂದು ಎರಡು ದಿನದ ಕೆಳಗೆ ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆಗಳನ್ನ ಡಿಲೀಟ್ ಮಾಡಿಬಿಟ್ಟೆ. ಸಾಕು ಎನ್ನಿಸಿ ಹೋಗಿತ್ತು. ತೀರ ಸಹಜವಾಗಿ ಡಿಲೀಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ದೊಡ್ಡ ಹೊರೆಯೊಂದನ್ನು ಇಳಿಸಿ ಕೊಂಡು ಸುಮ್ಮನಾಗಿಬಿಟ್ಟೆ. ನನಗೆ ನಾನೇನೂ ಅಲ್ಲಿ ಕಳೆದುಕೊಳ್ಳುವಂಥದ್ದು ಕಾಣಲಿಲ್ಲ. ನಾನೇನೋ ಡಿಲೀಟ್ ಮಾಡಿ ನಿರಮ್ಮಳವಾಗಿ ಉಳಿದುಬಿಟ್ಟೆ. ಆದರೆ ನನ್ನ ಕೆಲವು ಆಪ್ತರು ‘ಯಾಕೆ ಹಾಗೆ ಮಾಡೋಕೆ ಹೋದೆ.ಅದು ಇದ್ದರೆ ನಿನ್ನ ಗಂಟೇನು ಹೋಗುತ್ತಿತ್ತು ‘ ಎಂದೆಲ್ಲ ಹೇಳಿ ಏನೋ ಭಾರಿ ದೊಡ್ಡ ಅನಾಹುತ ಘಟಿಸಿ ಹೋಯಿತೆಂಬನ್ತೆ ತಲೆಗೊಂದು ಸಲಹೆ ನೀಡಿ ನನಗಿಂತ ಜಾಸ್ತಿ ನನ್ನ ವಿಷಯದಲ್ಲಿ ತಲೆಬಿಸಿ ಮಾಡಿಕೊಂಡು ಬಿಟ್ಟಿದ್ದರು. ಕೆಲವರಂತೂ ವೀಸಾ ಪಾಸ್ ಪೋರ್ಟ್ ನಷ್ಟೇ ಮಹತ್ವವನ್ನು ಫೇಸ್ ಬುಕ್ –ಆರ್ಕುಟ್ ಗೆ ಆರೋಪಿಸಿದರು. ಇನ್ನೂ ಕೆಲವರು ಫೇಸ್ ಬುಕ್ –ಆರ್ಕುಟ್ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದೆಂಬಂತೆ ಮಾತಾಡಿಬಿಟ್ಟರು. ಅವರ ಕಳವಳದಲ್ಲಿ ನನಗೆ ಅರ್ಥವೇ ಕಾಣಲಿಲ್ಲ. ನನ್ನ ಪಾಲಿಗೆ ಅದು ‘ಡಿಲೀಟ್’ ಆಯ್ಕೆಯ ಮೇಲೆ ಬೆರಳ ತುದಿಯ ‘ಕ್ಲಿಕ್ ‘ಅಷ್ಟೇ.

ಅಸಲಿಗೆ ನಾನು ನನ್ನ ಆರ್ಕುಟ್ ಹಾಗು ಫೇಸ್ ಬುಕ್ ಖಾತೆ ಶುರುಮಾಡಿದ್ದು ನನ್ನ ಸಿನಿಮಾ ಹವ್ಯಾಸಕ್ಕೆ ಪೂರಕವಾಗಿ. ಕೇವಲ ಕಾಂಟಾಕ್ಟ್ ಗಳ ಸಲುವಾಗಿ ಅವನ್ನೆಲ್ಲ ಶುರು ಮಾಡಿದ್ದು. ಖಾತೆ ತೆರೆದದ್ದು ವ್ಯರ್ಥವಾಗಲಿಲ್ಲ. ಹಲವಾರು ಜನಗಳ ಪರಿಚಯವಾಯಿತು. ಸಿನಿಮಾದ ವಿಷಯದಲ್ಲಿ ಆ ಪರಿಚಯಗಳು ನೆರವಿಗೆ ಬಂದವು. ಆ ಪರಿಚಯಸ್ತರೆಲ್ಲಾ ನನ್ನ ಮೊಬೈಲ್ ಲಿಸ್ಟ್ ನಲ್ಲಿ ಜಮೆಯಾಗಿದ್ದರೆ. ಈಗ ನನಗೆ ಈ ಆರ್ಕುಟ್ ಮತ್ತು ಫೇಸ್ ಬುಕ್ ಗಳ ಅವಶ್ಯಕತೆಯಿಲ್ಲ. ಯಾವ ಕಾರಣಗಳಿಗೆ ನಾನು ಅವುಗಳನ್ನ ಶುರು ಮಾಡಿದ್ದೇನೋ , ಆ ಕಾರಣಗಳೆಲ್ಲ ಈಗ ಕಾರಣಗಳಾಗಿ ಉಳಿದಿಲ್ಲ. ಅಂದುಕೊಂಡಿದ್ದು ಸಾಕಾರಗೊಂಡಿವೆ . ಈಗೀಗ ಈ ಫೇಸ್ ಬುಕ್ ಹಾಗು ಆರ್ಕುಟ್ ಕೇವಲ ಟೈಮ್ ವೇಸ್ಟಿನ ಸರಕುಗಳು. ಅಲ್ಲಿ ನನಗೆ ಯಾವ ದೊಡ್ಡ ಪ್ರೀತಿ ಹಾಗು ಖುಷಿಯ ಕಾರಣಗಳಿರಲಿಲ್ಲ. ಇದ್ದದ್ದು ಕೇವಲ ಲೆಕ್ಕಾಚಾರ. ಇನ್ಯಾಕೆ ಮುಲಾಜು? ಡಿಲೀಟ್ ಮಾಡಿಬಿಟ್ಟೆ.

ಸುಮ್ಮನೆ ಒಮ್ಮೆ ಮೇಲ್ ಚೆಕ್ ಮಾಡಲೆಂದು ಜಿ-ಮೈಲ್ ಓಪನ್ ಮಾಡಿದರೆ , ಅತ್ತ ಆರ್ಕುಟ್ ಹಾಗು ಫೇಸ್ ಬುಕ್ ಗಳು ಕೈಹಿಡಿದು ಎಳೆಯುತ್ತವೆ. ಅತ್ತ ಹೋಗಲೇ ಬೇಕು.ಹೋದ ಮೇಲೆ ಅಲ್ಲಿ ನೂರಾ ಎಂಟು ಅಪ್ಡೇಟ್ಸ್ ಗಳು . ಹಾಗೆ ಹೋಗಿ ಹೀಗೆ ಬರಲಿಕ್ಕೆ ಸಾಧ್ಯವೇ ಇಲ್ಲ. ಎಲ್ಲವನ್ನೂ ನೋಡಲೇಬೇಕು. ನೋಡಲೇಬೇಕೆಂಬ ನಿಯಮವೇನಿಲ್ಲ. ಕುತೂಹಲ ಮನುಷ್ಯ ಸಹಜ ಪ್ರಕೃತಿದತ್ತ ಗುಣ .ಬೇಕಾದ್ದು ಬೇಡದ್ದು ಎಲ್ಲವೂ ಅಲ್ಲಿ ಲಭ್ಯ. ಆದರೂ ನೋಡದೆ ಇರಲಾಗುವುದಿಲ್ಲ. ಅದು ಮನುಷ್ಯ ಸಹಜ ದೌರ್ಬಲ್ಯ. ನಡುವೆ ಹಾಳಾಗುವುದು ನಮ್ಮ ಅಮೂಲ್ಯ ಸಮಯ. ಸಮಯದ ಜೊತೆ ನಾವು. ನಮ್ಮ ಜೊತೆ ನಮ್ಮ ಕ್ರಿಯಾಶೀಲ ಸಾಧ್ಯತೆಗಳು.

ನಮ್ಮ ಮನೆಯ ಪಕ್ಕದ ಮನೆಯವರ ಜೊತೆ ಲೋಕಾಭಿರಾಮವಾಗಿ ಹರಟಿ ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲ. ನಾವಾಯಿತು ನಮ್ಮ ಪಾಡಾಯಿತು ಎಂಬುದು ಈಗಿನ ಆಧುನಿಕ ಪರಿ.ಮನೆಯ ಹತ್ತಿರದ ಬೇಕರಿಯವನನ್ನೋ , ಆಟೋ ಓಡಿಸುವವನನ್ನೋ , ಎಳ ನೀರು ಮಾರುವವನನ್ನೋ .ಪೇಪರ್ ಹಂಚುವ ಹುಡುಗನನ್ನೋ ನಾಲ್ಕು ಮಾತು ಪ್ರೀತಿಯಿಂದ .ಆಪ್ತತೆಯಿಂದ ಮಾತಾಡುವ, ಕಷ್ಟ ಸುಖ ಹೇಳಿ ಕೇಳಿ ಮಾಡುವ ಆರೋಗ್ಯವಂತ ರೂಢಿ ತುಂಬಾ ಕಡಿಮೆ. ನಮ್ಮೆದುರಿನ ಸುತ್ತ ಮುತ್ತಲನ್ನು ಬಿಟ್ಟು ಈ ಫೇಸ್ ಬುಕ್ ಹಾಗು ಆರ್ಕುಟ್ ಓಪನ್ ಮಾಡಿಕೊಂಡು ‘ ಹಾಯ್ ಊಟ ಆಯ್ತಾ. ತಿಂಡಿ ಆಯ್ತಾ .ಏನ್ ತಿಂದ್ರಿ.ಗುಡ್ ಮಾರ್ನಿಂಗ್.ಗುಡ್ ನೈಟ್ .’ ಕೇಳಿಕೊಂಡು ಹೇಳಿಕೊಂಡು ಯಾರೋ ಮುಖವೇ ಕಾಣದವರ ಜೊತೆ ಗಾಳಿ ಗೋಪುರ ಕಟ್ಟುವುದರಲ್ಲಿ ಯಾವ ಪುರುಷಾರ್ಥವಿದೆ ?

ಇನ್ನು ನನಗೆ ಸಮಸ್ಯೆಯಾಗಿ ಕಾಡಿದ್ದು ಈ ಹ್ಯಾಕರ್ಸ್ . ಎರಡು ವಾರದ ಕೆಳಗೆ ನನ್ನ ಫೇಸ್ ಬುಕ್ ಖಾತೆ ಹ್ಯಾಕ್ ಆಗಿ ಹೋಗಿತ್ತು. ನೋಡಿದರೆ ಯಾರೋ ಮುಂಬೈ ಆಸುಪಾಸಿನ ಪ್ರದೇಶದಿಂದ ನನ್ನ ಖಾತೆಗೆ ಕನ್ನ ಹಾಕಿದ್ದಾರೆಂಬ ಮಾಹಿತಿ ಸಿಕ್ಕಿತು. ಈ ಸೋಷಿಯಲ್ ನೆಟ್ವರ್ಕಿಂಗ್ ತಾಣಗಳಲ್ಲಿ ಎಲ್ಲರಿಗೂ ‘ ಫ್ರೆಂಡ್ಸ್ ‘ ಎಂಬ ಹಣೆಪಟ್ಟಿ. ಕಾಲೆಳೆಯುವವರು, ಹಿತ ಶತ್ರುಗಳು , ಈ ಹ್ಯಾಕರ್ಸ್ ಕುಲದ ಕಳ್ಳರು ಎಲ್ಲರೂ ‘ಫ್ರೆಂಡ್ಸ್’. ಇದರ ಉಪಯೋಗ ಎಷ್ಟಿದೆಯೋ , ಬೇಡದ ತಲೆಬಿಸಿಯ ಸಂಗತಿಗಳೂ ಕೂಡ ಅಷ್ಟೇ ಇವೆ. ನಾನು ನನ್ನ ಪಾಲಿನ ಉಪಯೋಗ ಪಡೆದುಕೊಂಡು ತಲೆಬಿಸಿಯ ಸಾಧ್ಯತೆಯನ್ನ ಫೇಸ್ ಬುಕ್ ಹಾಗು ಆರ್ಕುಟ್ ಜೊತೆ ಡಿಲೀಟ್ ಮಾಡಿಬಿಟ್ಟೆ. ಈ ಸೋಷಿಯಲ್ ನೆಟ್ವರ್ಕಿಂಗ್ ತಾಣಗಳ ಗೀಳಿಗೆ ಬಿದ್ದು ನನ್ನನ್ನು ನಾನು ಕಳೆದುಕೊಳ್ಳುವ ಅಪಾಯದಿಂದ ಸಕಾಲದಲ್ಲಿ ಪಾರಾದೆ. ಇವೆಲ್ಲ ಕೇವಲ ಟೈಮ್ ಪಾಸು ,ಮನರಂಜನೆ ; ಇದರಲ್ಲೇನಿದೆ ತಲೆಕೆಡಿಸಿಕೊಳ್ಳುವ ಸಂಗತಿಯೆಂದು ನಾವು ಸಮಜಾಯಿಷಿ ನೀಡಬಹುದು.ಆದರೆ ಒಂದು ಹಂತದ ನಂತರ ಇವೆಲ್ಲ ಚಟವಾಗಿ, ಗೀಳಾಗಿ ಬದಲಾಗುತ್ತವೆ ಎಂಬುದು ಕಟು ಸತ್ಯ.

ಆರ್ಕುಟ್ ನಲ್ಲಿ ನೂರೈವತ್ತು , ಅತ್ತ ಫೇಸ್ ಬುಕ್ಕನಲ್ಲಿ ಹತ್ತಿರ ಹತ್ತಿರ ನಾನೂರು ಮಂದಿ ಒಂದು ‘ಡಿಲೀಟ್’ ಜೊತೆ ಕ್ಷಣದಲ್ಲಿ ಖಾಲಿಯಾಗಿ ಹೋದರು ನನ್ನ ಜಗತ್ತಿನಿಂದ. ಅನಾಮಿಕನಾಗಿ , ಅದೃಶ್ಯನಾಗಿ ಯಾರ ಕೈಗೂ ಸಿಕ್ಕದೆ ನನ್ನ ಪಾಡಿಗೆ ನಾನು ಬದುಕುವಲ್ಲಿನ ಸುಖವನ್ನ ನಾನೀಗ ಮನಸಾರ ಅನುಭವಿಸುತ್ತಿದ್ದೇನೆ. ಸಂತೆಯೊಳಗೆ ದಿವ್ಯವಾದ ಏಕಾಂತದ ಸುಖ ನನ್ನ ಪಾಲಿಗೆ. ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕೆಂಬ ವಿವೇಚನೆಯನ್ನ ಸಮರ್ಥವಾಗಿ ಬಳಸಿಕೊಂಡ ತೃಪ್ತಿ ನನಗಿದೆ.

ಫೇಸ್ ಬುಕ್ ಹಾಗು ಆರ್ಕುಟ್ ಖಾತೆಗಳು ಡಿಲೀಟ್ ಆಗಿ ಹೋದವು. ನನಗೀಗ ನನ್ನ ಇಷ್ಟದ ಹಾಡು ಕೇಳಲಿಕ್ಕೆ, ಪುಸ್ತಕ ಓದಲಿಕ್ಕೆ , ಬರೆಯಲಿಕ್ಕೆ , ಹೊಸಾ ಕನಸು ಕಾಣಲಿಕ್ಕೆ ನನ್ನ ದಿನದ ಸಮಯದ ಖಾತೆಗೆ ಹೆಚ್ಚುವರಿಯಾಗಿ ಒಂದಿಷ್ಟು ಸಮಯಗಳು ಜಮೆಯಾಗುತ್ತಿವೆ. ಬಯಲಾಗಿದ್ದು ಸಾಕಾಗಿದೆ. ನನ್ನ ಅವಕಾಶದ ಮಿತಿಯಲ್ಲಿ ಮುಗಿಲಾಗಬೇಕು.

ನನ್ನ ಉದಾಹರಣೆ ನಿಮ್ಮದೂ ಆಗಬೇಕಿಲ್ಲ. ನನ್ನದೇ ಆದ ಒಂದು ಲೆಕ್ಕಾಚಾರದಲ್ಲಿ ,ಒಂದು ನಿರ್ದಿಷ್ಟ ಕಾರ್ಯ ಸಿದ್ಧಿಯ ಸಲುವಾಗಿ ನಾನು ಫೇಸ್ ಬುಕ್ ಹಾಗು ಆರ್ಕುಟ್ ಅಂಗಳಕ್ಕೆ ಕಾಲಿಟ್ಟದ್ದು. ನನ್ನ ಕೆಲಸವಾಯಿತು. ಫೇಸ್ ಬುಕ್ ಹಾಗು ಆರ್ಕುಟ್ ಡಿಲೀಟ್ ಆದವು. ಇನ್ನೊಂದು ಹೊಸಾ ಲೆಕ್ಕಾಚಾರ ಶುರುವಾಗುವ ತನಕ ನನಗೂ ಈ ಫೇಸ್ ಬುಕ್ ಹಾಗು ಆರ್ಕುಟ್ ಗಳಿಗೂ ಸಂಬಂಧವೇ ಇಲ್ಲ. ಇವೆಲ್ಲ ನನ್ನ ಬದುಕಿನ ಭಾಗಗಳು. ಆದರೆ ಇವುಗಳೇ ಬದುಕಲ್ಲ. ಇವೆಲ್ಲ ಇಲ್ಲದೆಯೂ ನಾನು ಬದುಕಬಲ್ಲೆ.ಇದು ನನ್ನ ಅಭಿಪ್ರಾಯ, ನನ್ನ ಅನುಭವ. ಅಷ್ಟೇ :) :).

21 comments:

ಶಾಂತಲಾ ಭಂಡಿ (ಸನ್ನಿಧಿ) said...

ಹೀಗೆ ಆರ್ಕುಟ್, ಫೇಸ್ ಬುಕ್ ಅಕೌಂಟುಗಳನ್ನು ಡಿಲೀಟ್ ಮಾಡಿಕೊಂಡು ಅನಾಮಿಕವಾಗಿ ಆನಂದಿಸುವ ಮನಸ್ಸುಗಳಿಗೆ ಸುಮಾರು ೪೦೦ ಪೇಜಿನ ಒಂದು ಕಾದಂಬರಿ ಬರೆಯೋವಷ್ಟು ಸಾಮರ್ಥ್ಯ ಇರುತ್ತದೆ ಅಂತ ಈ ಹಿಂದಿನ ಉದಾಹರಣೆಗಳು ಹೇಳಿವೆ :-)

ಮಹೇಶ ಭಟ್ಟ said...

ನೀವು ಅದೇ ಸಮಯದ ಕೆಲವಂಶವನ್ನು ಇಲ್ಲಿಯೂ ಕಳೆಯಬಹುದು http://blogs.jnanakosha.org ಕನ್ನಡದ ನೂರಾರು ಬ್ಲಾಗುಗಳು ಒಂದೇ ಕಡೆಯಲ್ಲಿ

ಮನಸಿನ ಮಾತುಗಳು said...

Hmm...No comments tammayya...:-)

aadre ne matte facebokkige bande batte....bekadre challengu?....;-)

ವಿ.ರಾ.ಹೆ. said...

ಬ್ಲಾಗ್ ಮಾತ್ರ ಯಾಕ್ ಬಿಟ್ಟಿದೀರಿ, ಅದ್ನೂ ಜೈ ಅನ್ನಿಸಿಬಿಡಿ. :)

ಕನ್ನಡಬ್ಲಾಗ್ ಲಿಸ್ಟ್ KannadaBlogList said...

ನೀವು ಮಾಡಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಇದು ಮಾತ್ರ ಸತ್ಯ ಇಂದು ನಾವೇಲ್ಲಾ gadgetಗಳ ದಾಸರಾಗುತ್ತಿದ್ದೇವೆ. ಉತ್ತಮ ಬರಹ, ಬರೆಯುವುದನ್ನು ಮುಂದುವರೆಸಿ...
Type kannada sms in mobile download free software @ http://Paninikeypad.com This software also avble for PC.

ಸಾಗರದಾಚೆಯ ಇಂಚರ said...

ನೀವು ಡಿಲೀಟ್ ಮಾಡಿ ಆರ್ಕುಟ್ FACEBOOK ವೇಸ್ಟ್ ಅನ್ನೋದು ತಪ್ಪು
ಆರ್ಕುಟ್ ಮತ್ತು FACEBOOK ಗಳಿಂದಾಗಿ ನಮಗೆ ಆಗ್ತಾ ಇರೋ ಲಾಭ ತುಂಬಾನೇ ಇದೆ
ನಂಗೆ ಮೊದಲು ಹಾಂಗ್ ಕಾಂಗ್ ಹೋದಾಗ ಭಾರತೀಯರು ಸಿಕ್ಕಿದ್ದೇ ಇದರಿಂದ.
ನಂತರ ಸ್ವೀಡನ್ನಿಗೆ ಬಂದಾಗಲೂ ಆರ್ಕುಟ್ ತುಂಬಾ ಸಹಾಯ ಮಾಡಿದೆ
ಹಿತ ಮಿತ ಆಗಿದ್ದರೆ ಎಲ್ಲವೂ ಚೆನ್ನ
ಅಲ್ಲವೇ?

ಗೌತಮ್ ಹೆಗಡೆ said...

@ಶಾಂತಲತ್ತಿಗೆ

ಇದ್ಯಾವ್ದು ಬ್ರ್ಯಾಂಡ್ ನ್ಯೂ ಹೊಸಾ ಹುಳ ? :) ಹ್ಮಂ ಹೌದು. ನಾಲ್ಕು ನೂರು ಖಾಲಿ ಖಾಲಿ ಪೇಜಿನ ರೋಚಕ ಸಸ್ಪೆನ್ಸ್ ಕಾದಂಬರಿ. ಅದ್ಕೆಂತ್ ಬಿಡು.ಬರೆದ್ರೆ ಆತು. ಬಟ್ ಅದಕ್ಕೆ ಮುನ್ನುಡಿ ನೀನೇ ಬರಿಯವು. ಮುನ್ನುಡಿ ಕೂಡ ಖಾಲಿ ಖಾಲಿ ಇರವ್ವು. ಮೊದ್ಲೇ ಹೇಳ್ತಾ ಇದ್ದಿ .ಆಮೇಲೆ ಹೇಳೇ ಇಲ್ಲೇ ಹೇಳಡ ಪ್ರಿಂಟ್ ಗೆ ಹೋಗ ಟೈಮ್ ಗೆ .ಸಿಕ್ಕಪಟ್ಟೆ ಪ್ರಾಬ್ಲಂ ಆಕ್ತು ;)

ಗೌತಮ್ ಹೆಗಡೆ said...

@ಮಹೇಶ್ ಭಟ್

ಖಂಡಿತ.ಓದಲಿಕ್ಕೆ ಸಿಗುತ್ತೆ ನನಗೆ ಬೇಕಾದ್ದು ಅಂದ್ರೆ ಖಂಡಿತ ಬರ್ತೇನೆ ನನ್ನ ಪಾಲಿನ ಸಮಯದಲ್ಲಿ :)

ಗೌತಮ್ ಹೆಗಡೆ said...

@ ದಿವ್ಯಾ

ಅಯ್ಯೋ ಅಕ್ಕ ತಮ್ಮನ ಮಧ್ಯ ಈ ಥರದ ಚಾಲೆಂಜು ಎಲ್ಲ ಬೇಕಾ ? ನೀ ಚಾಲೆಂಜು ಹಾಕದು ಅವಶ್ಯಕತೆ ಇತ್ತಿಲ್ಲೇ.ನಾನೇ ಹೇಳಿದ್ದಿ ಅವಶ್ಯಕತೆ ಕಂಡ್ರೆ ಮತ್ತೆ ಫೇಸ್ ಬುಕ್ ಅಂಡ್ ಆರ್ಕುಟ್ ಗೆ ಬರ್ತಿ ಹೇಳಿ :)

ಬಟ್ ನೀ ಹಿಂಗೆಲ್ಲ ಮಾಡಲಾಗ.ನೋ ಕಾಮೆಂಟ್ಸ್ ಹೇಳಿ ಮೊದಲಿಗೆ , ಆಮೇಲೆ ಚಾಲೆಂಜು ಹಾಕಿ ಬತ್ತಿ ಇಟ್ಟಿಕೆ ಹೊದ್ಯಲೇ :)

ಗೌತಮ್ ಹೆಗಡೆ said...

@ ವಿಕಾಸಣ್ಣ

ಅಯ್ಯೋ ಗುರುವೇ ಎಂತಕ್ಕಪ ನಿಂಗೆ ಈ ಬುದ್ಧಿ.ಕೆಲವಷ್ಟು ಮುಚ್ಚಲಕ್ಕು.ಎಲ್ಲದನ್ನೂ ಮುಚ್ಚಿದರೆ ಜೀವನ ಹೆಂಗೆ ? ;)

ಸದ್ಯ ಬ್ಲಾಗ್ ನನ್ನ ಕ್ರಿಯಾಶೀಲವಾಗಿ ಇಟ್ಟಿದ್ದು.ಖುಷಿ ಇದ್ದು .ಪ್ರೀತಿ ಇದ್ದು. ಖುಷಿ ಪ್ರೀತಿ ಮಣ್ಣು ಮಸಿ ಎಲ್ಲ ಖಾಲಿ ಆಗಿ ಲೆಕ್ಕಾಚಾರ ಶುರುವಾದ ದಿನ ಬ್ಲಾಗ್ ಕೂಡ ಬಂದ್ ಮಾಡ್ತಿ .

ಆಮೇಲೆ ನಿನ್ನ ಹತ್ರ ಬರ್ತಿ. ಇಬ್ರು ಸೇರಿ ಮಠ ಶುರು ಮಾಡನ..;)

ಗೌತಮ್ ಹೆಗಡೆ said...

@ ಕನ್ನಡ ಬ್ಲಾಗ್ ಲಿಸ್ಟ್

ನನ್ನ ಮಾತನ್ನು ಬೆಂಬಲಿಸಿದ್ದೀರಿ.ಧನ್ಯವಾದ :)

ಆದರೆ ನೀವು ಯಾರು ಅಂತ ಹೇಳೇ ಇಲ್ಲ.ಉತ್ತರ ಬೇಕಿತ್ತು :)

ಗೌತಮ್ ಹೆಗಡೆ said...

@ ಗುರು ಮೂರ್ತಿ ಹೆಗಡೆ

ನಾನು ಲೇಖನದ ಲಾಸ್ಟ್ ಗೆ ಹೇಳಿದ್ದಿ. ಇದು ನನ್ನ ಅನುಭವ ಹಾಗು ನನ್ನ ಅಭಿಪ್ರಾಯ ಹೇಳಿ.ನಾನು ಹೇಳಿದ್ದು ಎಲ್ಲರಿಗೂ ಅನ್ವಯಿಸದಿಲ್ಲೇ. ಅದು ನಂಗೆ ಮಾತ್ರ.

ನಿಂಗೆ ಉಪಯೋಗ ಆಜು ಹೇಳಿದ್ದೆ.ಸರಿ.ನಾನು ಕೆಲವಷ್ಟು ಉಪಯೋಗ ತಗಂಜಿ.ಉಪಯೋಗ ಇಲ್ಲೇ ಹೇಳೇ ಇಲ್ಲೇ. ನಂಗೆ ಇಲ್ಲೇ ಇನ್ಮೇಲೆ ಉಪಯೋಗ ಹೇಳಿದ್ದು ಅಷ್ಟೇ :)

ashwath said...

ಗೌತಮ್,

ಖರೆಯಾ ನೋಡು,ಗಂಡ ವಿದೇಶಕ್ಕೆ ಹೋಗಿ ಎನ್ ಕೈಗೊಂದು ಲ್ಯಾಪ್ ಟಾಪ್ ಬಂದ್ಮೆಲೆ ಎಂಗೂ ಈ ಆರ್ಕುಟ್ ಚಟ ಅಂಟಿದ್ದು.


ಕುಸುಮಾ ಸಾಯಿಮನೆ

ಗೌತಮ್ ಹೆಗಡೆ said...

@ಕುಸುಮಾ ಸಾಯಿಮನೆ

ಹ್ಮಂ ನಿಂಗೆ ಅಂತು ಗೊತಾತಲೇ .ನೀನು ಬಚಾವು.ನಿನ್ನ ಪುಣ್ಯ :)
ಗೊತಾಗ್ದೆ ಕಳೆದು ಹೋಗ್ತಾ ಇರವು ಸುಮಾರು ಜನ ಇದ್ದ .:)

ಕನ್ನಡಬ್ಲಾಗ್ ಲಿಸ್ಟ್ KannadaBlogList said...
This comment has been removed by the author.
ಕಾವ್ಯ ಸುಗಂಧ said...

neevu madiddu thappendu heluvudilla..
yakandre nanu ee hantakke bandiddene...
idella miti meeridare chatavaagi biduttade..adu sathya...
nanu kooda ella delete madiddene.. adakkagiye neevu madiddu thappenisuttilla...

chennagi barediddeeri... ishtavaythu..

VENU VINOD said...

he he ....bahala gatti nirdhaara..
naanoo omme orkut account delete maadidde, matthe 6 tingala nantara shuru hachchi kondiddene. eega addict agilla sadya..elladrallu olithu ide, keduku ide, adillade santhoshavaagiralu saadhya ide, nimma new age sanyaasakke nanna shubha haaraike :)

ಗೌತಮ್ ಹೆಗಡೆ said...

@ಕಾವ್ಯ ಸುಗಂಧ

ಧನ್ಯವಾದ .ಪ್ರತಿಕ್ರಿಯಿಸಿದ್ದಕ್ಕೆ ಹಾಗು ಮೆಚ್ಚಿದ್ದಕ್ಕೆ :)

ಗೌತಮ್ ಹೆಗಡೆ said...

@ ವೇಣು ವಿನೋದ

ನಮಸ್ತೆ ಸರ್. ಅಪರೂಪಕ್ಕೆ ನಿಮ್ಮ ಮುಖ ಕಾಣುತ್ತಿದ್ದೇನೆ ಇಲ್ಲಿ ಹಾಗು ನಿಮ್ಮ ಬ್ಲಾಗಿನಲ್ಲಿ ..

ಎದುರಿಗೆ ಇದ್ರೆ ಮನಸ್ಸು ತಡಿಯಲ್ಲ.ನಿಮ್ಮ ರೀತಿಯೇ ಮತ್ತೆ ಅದಕ್ಕೆ ಅಂಟಿಕೊಂಡು ಬಿಡ್ತೇನೆ.ಅದಕ್ಕೆ ಡಿಲೀಟ್ ಡಿಲೀಟ್:)

ಮತ್ತೆ ಸನ್ಯಾಸಕ್ಕೆ ಶುಭ ಹಾರೈಸಿದ್ದೀರಿ. ತಪ್ಪು ಸ್ವಾಮೀ ತಪ್ಪು. ಇದು ಸನ್ಯಾಸ ಅಲ್ಲ. ಏಕಾಂತವನ್ನ ಹದವಾಗಿ ಕಾಪಿಟ್ಟುಕೊಳ್ಳುವ
ರಸಿಕತೆ :)

Ananda_KMR said...

ಹೌದು ನಿಜ ....ನಾನು ಕೂಡ ನನ್ನ facebook ಅಕೌಂಟ್ ಡಿಲೀಟ್ ಮಾಡಿಬಿಟ್ಟೆ

guru said...

ಸತ್ಯವಾದ ಮಾತು ಲೇಖಕರದು ..ನಮ್ಮ ಮನೆ ಅಕ್ಕ ಪಕ್ಕದವರನ್ನು ಸರಿಯಾಗಿ ಮಾತಾಡಿಸೋ ಸೌಜನ್ಯ ವಿರೋದಿಲ್ಲ ಮುಖ ನೋಡದೆ ಇರೋ ವ್ಯಕ್ತಿಗೆ ಅಪ್ತವಗಿರಲು ಹೋಗ್ತಿವೆ ..ಅದರಲ್ಲಿ ಜೊತೆಗೆ ಉದ್ದದ ಬಾಷಣಗಳು ಬೇರೆ ..ಸ್ವಾಮಿ ವಿವೇಕ ನಂದರ ನುಡಿಗಳ ಹಾಗೂ ಎಲ್ಲ ಮಹನೀಯರ ಹಾಗೂ ಎಲ್ಲ ಮಹನೀಯರ ಪುಂಕ ನು ಪುಂಕ ಗಳ ಉಪದೇಶ ಬೇರೆ ಆದರೆ ನಾವು ನಡೆದು ಕೊಳ್ಳುತೀವ ಬರಿ ಆತ್ಮ ವಂಚನೆ ..