Wednesday, December 25, 2013

ಸಭ್ಯ ಪೋಲಿ ಕವನ ...

 ಕಾಮ ನೀಲಾಂಜನವಾಗಲಿ......



ಬಂದದ್ದು ಬಂದಾಗಿದೆ
ಮರಳಿ ಹೋಗಿ ಬಿಡಲೇ
ಹುಚ್ಚು ಮನಸ್ಸು ತಡೆದಷ್ಟೂ
ತೆರೆದುಕೊಂಡು ಸೆಳೆದು ಎಳೆ ತಂದಿದೆ
ಹೊಸ್ತಿಲು ದಾಟಿ ಬಂದಾಗಿದೆ
ಬಂದ ದಾರಿಗೆ ಸುಂಕವ ತೆತ್ತೇ  ಹೋಗುವೆ
ಬರುವ ಮುನ್ನ ಇದ್ದ ಬಿಸಿಯೆಲ್ಲ ಆರಿ ಹೋಗಿದೆ
ಒಳಗೆಲ್ಲೋ ತಣ್ಣನೆ ಚಳಿ ಇಣುಕಿ
ಸಣ್ಣಗೆ ಬೆವರುತಿದೆ ಸರ್ವಾಂಗ
ಹೀಯಾಳಿಸದಿರು ದಯವಿಟ್ಟು
ತುಂಬಾ ಒಳ್ಳೆಯವನು ನಾನು ಪರಿಚಯದ ಮಂದಿಗೆ
ಆದರೂ ಹೀಗೆಲ್ಲ ಆಗುತಿದೆ
ಸಕಲ ಬಣ್ಣವ ಇದೊಂದೇ ಒಂದು ಬಣ್ಣ
ನುಂಗಿ ತೇಗಿದರೆ ಮರುಕ್ಷಣವೇ
ತೀರಾ ತೀರಾ ಕೆಟ್ಟವನು ನಾನು ಮತ್ತೆ ಆ ನನ್ನದೇ
ಪರಿಚಯದ ಮಂದಿಗೆ .

ಹೋಗು . ಸುಂಕ ತೆರುವೆ ಎಂದ ಮೇಲೆ
ನಿನ್ನ ದಾರಿ ನಿನಗೆ
ನನಗೆ ಸುಂಕ ಒಂದೇ ಸಕಲ
ಬಂದ  ದಾರಿ  ಹೋದ ದಾರಿ ಏನಾದರೆ ನನಗೇನು
ತುಂಬಾ ಎಳಸು ನೀನು
ದಾರಿ ಖರ್ಚಿಗೆ
ಒಂದಿಷ್ಟು ಕಿವಿ ಮಾತು ಹೇಳುವೆ ಕೇಳಿ ಹೋಗು

ಸಾಧ್ಯವಾದರೆ ನಿನ್ನ ಸಲುವಾಗಿ ನೀನು ಬದಲಾಗು
ಕೊನೆ ಗೊಂದು ದಿನ ನಿನ್ನ ಆ ಮಂದಿ ಕೂಡ
ಹಿಡಿದು ಬಂದಾರು ನನ್ನ ಮನೆಯ ದಾರಿ  ನಿನ್ನಂತೆಯೇ
ಅವರೂ ಒಳ್ಳೆಯವರೇ ನಿನ್ನಂತೆಯೇ
ಹಾಲು ಸಿಕ್ಕ ಕ್ಷಣ ಮುದ್ದು ಬೆಕ್ಕು ಕೂಡ
ಕಳ್ಳ ಬೆಕ್ಕೇ
ಸಿಗದಿದ್ದರೆ ಮೊದಲಿನಂತೆ ಮುದ್ದು ಬೆಕ್ಕೇ

ಅದೆಷ್ಟು  ರಾತ್ರಿಯಲಿ
ನನ್ನ ಕನಸಿಗೆ ತಂದುಕೊಂಡು
ಏನೆಲ್ಲಾ ಆಗಿ ಹೋಗಿದೆ ಹೇಳು
ಅಕಾಲದಲ್ಲಿ ಮಳೆ ಬಂದು ಸುಮ್ಮನೆ ಸೋರಿ ಹೋದಂತೆ
ಕನಸಲ್ಲಿ ಇದ್ದವಳು ಈಗ ನಿನ್ನೆದುರು ಇರುವೆ
ಕನಸು ಕಂಡವನೂ  ನೀನೆ
ಈಗ ಎದುರು ಕೂತವನೂ ನೀನೆ
ಕಾಮವನು  ಗೆಲ್ಲು ಕಾಮದಿಂದಲೇ
ಮುಳ್ಳನ್ನು ಮುಳ್ಳಿಂದಲೇ ತೆಗೆದಂತೆ
ಬಚ್ಚಿಟ್ಟರೆ ಬಲಿಯುವುದು
ಮತ್ತೆ ಮತ್ತೆ ಸೋಲು ಗೆಲ್ಲಲಾಗದೆ
ಮತ್ತದೇ ರಾತ್ರಿ ಮತ್ತದೇ ಅಕಾಲದ ಮಳೆ
ರಾಡಿ ರಾಡಿ

ಬಾ
ಎಲ್ಲ ಪಾಠವ ಹೇಳಿ ಕೊಡುವೆ
ಎಲ್ಲವ ತೆರೆದಿಡುವೆ
ಕಂಡು ಬೆರಗಾಗು
ಮತ್ತೆ ಬಾರದಿರು ನನ್ನ ಮನೆಯ ದಾರಿ ಹಿಡಿದು
ಎಲ್ಲಾದರೂ ಶುದ್ಧ ಒಲವೊಂದು  ಸಿಗಬಹುದು

ಒಲವ ದಾರಿಗೆ
ಕಾಮ ನೀಲಾಂಜನವಾಗಲಿ .
ನಿಜಕ್ಕೂ ಒಳ್ಳೆಯವನೇ ನೀನು
ನಿನಗೆ ಶುಭವಾಗಲಿ.

Sunday, December 15, 2013

ರವಿ ಅಸ್ತಂಗತನಾದ


    ಧೋ ಎಂದು ಒಂದೇ ಸಮನೆ ಮಳೆ ಸುರಿಯುತ್ತಿತ್ತು . ಮಳೆಯ ಜೊತೆ ಮನೆಗೆ ಹತ್ತಿರದಲ್ಲೇ ಇದ್ದ ಕಡಲು ಭೋರ್ಗರೆಯುತ್ತಿದ್ದ ಸದ್ದು. ಮಳೆಯ ಇರಿಚಲು ಕಿಟಕಿಗೆ ಒಂದೇ ಸಮನೆ ಬಡಿಯುತ್ತ ಸದ್ದು ಮಾಡುತ್ತಿತ್ತು. ಸುಮ್ಮನೆ ಸ್ವಲ್ಪ ಹೊತ್ತು ಕತ್ತಲೆಗೆ ಕಣ್ಣಿಟ್ಟು ಮಳೆಗೆ .ಕಡಲ ಉನ್ಮಾದಕ್ಕೆ ಕಿವಿಯಾಗಿ ಕಿಟಕಿಎದುರು  ರವಿ ನಿಂತಿದ್ದ. ನಡು ಮಳೆಗಾಲದ ಮಳೆಯಾದ್ದರಿಂದ ಮಿಂಚು ಕೂಡ ಇರಲಿಲ್ಲ.ಶುದ್ಧ ಮಳೆ ಅದೃಶ್ಯವಾಗಿ ಹುಯ್ಯುತ್ತಿತ್ತು. ಯಾವುದೊ ಅಸಹನೆಯಲ್ಲಿ ಕಿಟಕಿಯಿಂದ ಕಣ್ಣು ಕಿತ್ತು ಕಿಟಕಿಯ ಪರದೆ ಮುಚ್ಚಿ , ನಿಧಾನವಾಗಿ ಕತ್ತಲೆಯಲ್ಲೇ ಹೇಗೋ ಅಭ್ಯಾಸ ಬಲದ ಮೇಲೆ ಬೆಡ್ ರೂಮ್ ತಲುಪಿಕೊಂಡು ಮಂಚ ಏರಿ ಮುಸುಕು ಎಳೆದುಕೊಂಡ. ತಲೆಯಲ್ಲಿ ನೂರಾರು ಯೋಚನೆಗಳು. ಬದುಕಿನ ನಿನ್ನೆಯ ಪುಟಗಳೆಲ್ಲ ಚಿತ್ರವಾಗಿ ಕಣ್ಣೆದುರು ಕಾಡುತ್ತಿತ್ತು.

ಮೊದಲು ನೆನಪಾದವಳು ಅವಳು ..

   ಅವಳೆಂದರೆ  ರಶ್ಮಿ .ರವಿಯ  ಮಡದಿ. ಆಕೆ  ರವಿಯನ್ನ ತೊರೆದು ಮೂವತ್ತು ವರುಷದ ಮೇಲಾಯಿತು. ಆಗಿನ್ನೂ ರವಿಗೆ ಇಪ್ಪತ್ತೈದು ವರ್ಷ.ಆಕೆ ಅವನಿಗಿಂತ ಮೂರೇ ವಾರದಷ್ಟು ಚಿಕ್ಕವಳು. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದವರು. ಹಾಗೆ ಒಂದು ಪ್ರೇಮಕಥನ ದುರಂತ ಅಂತ್ಯ ಕಾಣಲಿಕ್ಕೆ ಮೂಲ ಈತನೇ. ಹಾಗೆಂದ ಮಾತ್ರಕ್ಕೆ ಈತ ಖಳನಾಯಕನಲ್ಲ. ವಿಫಲ ನಾಯಕನಷ್ಟೇ. ಆತ ಭಾವನೆಯ ಪ್ರತಿನಿಧಿ. ಆಕೆ ಬದುಕಿನ ಪ್ರತಿನಿಧಿ. ಕೊನೆಗೆ ಬದುಕಿಗೆ ಭಾವನೆ ಬೇಡವಾಗಿ ಹೊಸ ಬದುಕು ಅರಸಿ ಹೊರಟೇ ಹೋಯಿತು.
   
   ತುಂಬಾ ಬುದ್ಧಿವಂತನಿದ್ದ ರವಿ. ಅದ್ಭುತ ಕವಿತೆಗಳನ್ನು ಬರೆಯುತ್ತಿದ್ದ. ಚೆಂದದ ಕಥೆಗಳನ್ನ ಗೀಚುತ್ತಿದ್ದ. ಚಿಂತನೆ ಆದರ್ಶಗಳ ಹಿಂದೆ ಬಿದ್ದು  ಎಲ್ಲರ ನಡುವೆ ಎದ್ದು ಕಾಣುತ್ತಿದ್ದ. ನೋಡಲಿಕ್ಕೆ ಸುಮಾರಾಗಿಯೇ ಇದ್ದರೂ ಅವನ ಮೇಧಾವಿತನದೆದುರು ಆತನಿಗೆ ಎದುರಾದವರೆಲ್ಲ ಶರಣಾಗಿಬಿಡುತ್ತಿದ್ದರು. ಈಕೆ ಕೂಡ ಹಾಗೆ ಶರಣಾಗಿ ಹೃದಯ ಒಪ್ಪಿಸಿದವಳು. ಎಂಜಿನಿಯರಿಂಗ್ ಮೊದಲ ವರ್ಷದಲ್ಲಿ ಪ್ರೇಮ ಹುಟ್ಟಿ ಕೊನೆಯ ವರ್ಷಕ್ಕೆ ಬರುವಷ್ಟರಲ್ಲಿ ನಿಶ್ಚಿತಾರ್ಥ ಕೂಡ ಆಗಿಹೋಗಿತ್ತು. ಎಂಜಿನಿಯರಿಂಗ್ ಮುಗಿಸಿ ಕಾಲೇಜ್ ಕ್ಯಾಂಪಸ್ಸಿನಿಂದ ಹೊರಬಂದವನು ನೇರವಾಗಿ ಪ್ರತಿಷ್ಠಿತ ಕಂಪನಿಯ ಅಂಗಳಕ್ಕೆ ಕಾಲಿಟ್ಟು  ಸಾಫ್ಟ್ ವೇರ್ ಎಂಜಿನಿಯರ್ ಆಗಿಹೋಗಿದ್ದ. ಹುಡುಗಿ ಹಿರಿಹಿರಿ ಹಿಗ್ಗಿದ್ದಳು. ಮೊದಲೇ ನಿಶ್ಚಯವಾಗಿದ್ದ ಮದುವೆ ತಡವಿಲ್ಲದೆ ಜರುಗಿಹೋಯಿತು
  
ಅದೇನಾಯಿತೋ ಗೊತ್ತಿಲ್ಲ. ಕಾಲ ತನ್ನ ದಾಳ ಉರುಳಿಸಿತ್ತು.ಬದುಕು ನಿಧಾನವಾಗಿ ಹಳಿ ತಪ್ಪುವ ಹಾದಿ ಹಿಡಿದಿತ್ತು. ಇದ್ದಕ್ಕಿದ್ದಂತೆ ಒಂದು ದಿನ ರವಿ ಕೆಲಸ ಬಿಡುವ ನಿರ್ಧಾರಕ್ಕೆ ಬಂದಿದ್ದ. ದಿನ ಮನೆಯಲ್ಲಿ ರಂಪಾ ರಾಮಾಯಣ. ಹುಡುಗಿ ಅತ್ತು ಕರೆದು ,ಗೋಗರೆದು ಬೇಡಿಕೊಂಡಳು. “ ನಿನ್ನನ್ನೇ ನಂಬಿ ಪ್ರೀತಿಸಿ ಮದುವೆಯಾಗಿ ಜೊತೆಗೆ ಬಂದಾಗಿದೆ. ಇದ್ಯಾಕೆ ಈಗ ಇದ್ದಕ್ಕಿದ್ದಂತೆ ಕೆಲಸ ಬಿಡುವ ನಿರ್ಧಾರ? ಕೆಲಸ ಬಿಟ್ಟರೆ ಸಂಸಾರ ನಡೆಯೋದು ಹೇಗೆ ? ಏನಾಗಿದೆ ನಿನಗೆ ರವಿ? ಕೆಲಸ ಬಿಟ್ಟು ನೀನು ಮಾಡೋದಾದ್ರೂ ಏನು? " .ರವಿ ತಣ್ಣಗೆ ಉತ್ತರಿಸಿದ್ದನಾನು ಸಾಹಿತಿ ಆಗ್ತೇನೆ.ಕಥೆ ,ಕವಿತೆ .ಸಾಹಿತ್ಯದಲ್ಲೇ ಬದುಕು ಕಟ್ಟಿ ಕೊಳ್ತೇನೆ. ನಾನು ನಾನಾಗಿ ಬದುಕಬೇಕು. ನನ್ನದಲ್ಲದ ಕೆಲಸ ಮಾಡಿ ನನಗೂ ಸಾಕಾಗಿ ಹೋಗಿದೆ.ಎಷ್ಟು ದಿನ ಹೀಗೆ ನನಗೆ ನಾನೇ ವಂಚನೆ ಮಾಡಿಕೊಂಡು ಬದುಕಲಿ ಹೇಳು." ರಶ್ಮಿ ಕೊನೆಯ ಬಾರಿ ಕಣ್ಣೊರೆಸಿಕೊಂಡುನಿನ್ನ ನಿರ್ಧಾರ ಬದಲಾಯಿಸಲು ಸಾಧ್ಯವಾ " ಎಂದು ಕೇಳಿದ್ದಳು. ರವಿ ಉತ್ತರವನ್ನೇ ಕೊಡಲಿಲ್ಲ.ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದಸಾವಿನ ಮನೆಯ ಮೌನ ಅಲ್ಲಿ ಮೈಚಾಚಿ ಮಲಗಿತ್ತು..ರವಿ ತಲೆಯೆತ್ತಿ ನೋಡುವಷ್ಟರಲ್ಲಿ ರಶ್ಮಿ ಅಲ್ಲಿರಲಿಲ್ಲ

ಮುಂದೇನಾಯಿತು ?

   ರವಿ ಹಟಕ್ಕೆ ಬಿದ್ದ. ಮನೆಯ ಜನ, ಬಂಧುಗಳು ,ಗೆಳೆಯರು ಎಲ್ಲರಿಂದಲೂ ದೂರವಾಗಿ  ತನ್ನದೇ ಜಗತ್ತಿನಲ್ಲಿ ಉಳಿದು ಬಿಟ್ಟ.ಇನ್ನೊಂದು ಹೆಣ್ಣಿನ ಸಾಂಗತ್ಯಕ್ಕೂ ಕೈಚಾಚಲಿಲ್ಲ. ಶುದ್ಧ ಹಠಯೋಗಿಯಂತೆ ಬದುಕಿಬಿಟ್ಟ .ಶ್ರದ್ಧೆಯಿಟ್ಟು ಅವಡುಗಚ್ಚಿಕೊಂಡು ಬರೆಯುತ್ತಾ ಹೋದ. ಬರವಣಿಗೆಯೇ ಉಸಿರು ಎಂಬಂತೆ ಅದರ ಜೊತೆ ಉಸಿರಾಡಿದ. ತಪಸ್ಸು ವ್ಯರ್ಥವಾಗಲಿಲ್ಲ. ಸರಸ್ವತಿ ಒಲಿದಳು. ನಿಧಾನವಾಗಿ ರವಿಯ ಪಾಲಿನ ಇರುಳು ಕಳೆದು ಹಗಲು ಹರವಿಕೊಂಡಿತು. ರವಿ ಈಗ ಕೇವಲ ರವಿಯಾಗಿರಲಿಲ್ಲ. ಪ್ರಸಿದ್ಧ ಸಾಹಿತಿ ರವಿಯಾಗಿದ್ದ. ದುಡ್ಡು .ಖ್ಯಾತಿ ಎಲ್ಲವೂ ಅಜೀರ್ಣವಾಗುವಷ್ಟಿತ್ತು. ರವಿ ಎಲ್ಲವನ್ನೂ ಗಳಿಸಿಕೊಂಡ ಅವನಂದು ಕೊಂಡಂತೆ. ಆದರೆನಾನು ನಾನಾಗಿ ಬದುಕಬೇಕಂಬ ' ಹಂಬಲ  ಜನಪ್ರಿಯ ಸಾಹಿತಿಯಾಗುವ ಹಾದಿಯಲ್ಲಿ ಕೈಗೂಡಲೇ ಇಲ್ಲ.
     
   ರವಿ ಸಾಹಿತಿಯಾಗಿ ತಾನು ತಾನಾಗಿ ಬದುಕಬೇಕೆಂದುಕೊಂಡು ಸಾಹಿತಿಯಾದದ್ದೇನೋ ನಿಜ. ಆದರೆ ಆತ ಅವನು 'ಅವನಾಗಿ ' ಬರೆಯಲೇ ಇಲ್ಲ. ಮೊದಲು ಅವನ ಪಾಡಿಗೆ ಅವನು ಅವನದೇ ಲಹರಿಯಲ್ಲಿ ಬರೆದ. ಓದುಗರನ್ನು ತಲುಪುವಲ್ಲಿ ಸೋತ. ಕೊನೆಗೆ ಓದುಗರನ್ನು ಮೆಚ್ಚಿಸಲು ,ಜನಪ್ರಿಯತೆಯ ಸಲುವಾಗಿ ಬರೆಯಲಾರಂಭಿಸಿದ. ಜನಪ್ರಿಯತೆ ದಕ್ಕಿ ಒಂದು ಹಂತಕ್ಕೆ ಬರುವಷ್ಟರಲ್ಲಿ ಪ್ರಶಸ್ತಿ, ಪುರಸ್ಕಾರ ಮುಖ್ಯವಾಯಿತು. ಪ್ರಶಸ್ತಿಗಾಗಿಯೇ ಬರೆದಸಾಕಷ್ಟು ಲಾಬಿ ನಡೆಸಿದ. ಯಾರ್ಯಾರನ್ನೋ ಓಲೈಸಲು ಮುಂದಾಗಿ ಅವರೆದುರು ಬಾಗಿ ನಿಂತ.. ಒಮ್ಮೆ ಎಡಪಂಥೀಯನಾದ.ಒಮ್ಮೆ ಬಲಪಂಥೀಯನಾದ. ಭಾವನೆ ಕಳೆದು ಹೋಗಿ ಬುದ್ಧಿಜೀವಿಯಾದ. ಇಷ್ಟೆಲ್ಲಾ ಕಸರತ್ತಿನ ನಡುವೆನಾನು ನಾನಾಗಿ ಬದುಕಬೇಕೆಂಬ ' ಅವನ ಒಳದನಿಗೆ ಕಿವಿಯಾಗಲು ಅವನಿಗೆ ಪುರುಸೊತ್ತೇ ಆಗಲಿಲ್ಲ. ಮುಪ್ಪು ನಿಧಾನವಾಗಿ ಅಡಿಯಿಡುತ್ತಿತ್ತು. ಕಿವಿ ಮಂದವಾಗಿ ಹೊರಗಿನ ಧ್ವನಿಗಳ ಮೇಲಾಟ ಕಡಿಮೆಯಾಗುವ ಹೊತ್ತಿಗೆ ಅವನಿಗೆ ಒಳದನಿಗೆ ಕಿವಿಯಾಗುವ ಅನಿವಾರ್ಯ ಎದುರಾಗಿತ್ತು. ಕಾಲ ಮಿಂಚಿ  ಹೋಗಿತ್ತು.
  
  ನಿದಿರೆ ಬಾರದೆ ಮಂಚದ ಮೇಲೆ ಮಲಗಿದ್ದ ರವಿ ಸಣ್ಣಗೆ ಕಣ್ಣೀರಾದ. ಅಷ್ಟು ವರ್ಷ ಕಣ್ಣ ಹರವಿನಲ್ಲಿ ಮಡುಗಟ್ಟಿದ್ದ ಹಠ ಕರಗಿ ಹೋಗಿತ್ತು .ಅದೆಷ್ಟು ವರುಷವಾಗಿತ್ತು ಕಣ್ಣು ಕಣ್ಣೀರಾಗಿ ! ರಶ್ಮಿ ನೆನಪಾಗಿ ಮತ್ತೆ ಬಂದಿದ್ದಳು. ‘ಆಗ ಕೆಲಸ ಬಿಡುವ ಬದಲು ಕೆಲಸದ ಜೊತೆಜೊತೆಗೆ ಸಾಹಿತ್ಯವನ್ನೂ ಕೈಹಿಡಿದು ನಡೆಸಿಕೊಂಡು ಬರಬಹುದಿತ್ತಲ್ಲ. ಅಥವಾ ಸ್ವಲ್ಪ ವರ್ಷ  ಕೈತುಂಬಾ ಸಂಪಾದಿಸಿ ಕೊನೆಗೆ ಸಾಹಿತ್ಯದೆಡೆ ಹೊರಳಬಹುದಿತ್ತಲ್ಲ. ತಾನು ತಾನಾಗುವ ಆವೇಶದಲ್ಲಿ ರಶ್ಮಿಯನ್ನು ಕಳೆದುಕೊಂಡ ರವಿಗೆ  ಕೊನೆಗೆ ಏನೂ ಆಗದೆ ತನ್ನನ್ನು ತಾನು ಕಳೆದುಕೊಂಡೆನೆಂದು ಅನ್ನಿಸಿಹೋಯಿತು.
        
   ರವಿ ನಿಧಾನವಾಗಿ ಎದ್ದು ಕತ್ತಲಲ್ಲೇ ಎಡವುತ್ತಾ ಮನೆಯ ಬಾಗಿಲು ತೆರೆದ. ಮಳೆ ನಿಂತಿತ್ತು. ಅಂಗಳವೆಲ್ಲ ರಾಡಿ ರಾಡಿ. ಹತ್ತಿರದಲ್ಲೇ ಕಡಲು ಮೊರೆಯುತ್ತಿತ್ತು. ಕಡಲ ಸದ್ದಿನ ಜಾಡು ಹಿಡಿದು ನಡೆಯುತ್ತಾ ಹೋದ. ಈಗ ರವಿಯ ಪಾದಗಳನ್ನ ಕಡಲಿನಲೆ ತೋಯಿಸುತ್ತಿತ್ತು. ರವಿ ನಿಲ್ಲಲಿಲ್ಲ. ಕಡಲಿನಾಳಕೆ ನಡೆಯುತ್ತಲೇ ಹೋದ. ಕಡಲ ತಡಿಯ ಮರಳ ಮೇಲೆ ಕಡಲಿಗೆ ಅಭಿಮುಖವಾಗಿ ಮೂಡಿದ್ದ ರವಿಯ ಹೆಜ್ಜೆಯ ಗುರುತಿನ  ಜೊತೆಗೆ ರವಿಯನ್ನೂ ಕೂಡ ಕಡಲು ತನ್ನೊಳು ಬರಸೆಳೆದುಕೊಂಡಿತು.

ರವಿ ಅಸ್ತಂಗತನಾದ ...