Sunday, March 27, 2011

ಆಸ್ತಿಕತೆ -ನಾಸ್ತಿಕತೆ . ಭಾವನೆ ಹಾಗು ತರ್ಕ .

ನನ್ನ ರೂಮಿನ ಎದುರು ಟೆರೆಸ್ ನ ಒಂದು ತುದಿಯಿಂದ ಇನ್ನೊಂದು ತುದಿಗೆ ರೂಮ್ ಬಾಗಿಲಿಗೆ ಸಮಾನಾಂತರವಾಗಿ ಎಳೆದು ಕಟ್ಟಿರುವ ನಾಲ್ಕು ತಂತಿಗಳಿವೆ. ನಾನು .ನನ್ನ ತಮ್ಮ , ನಮ್ಮ ಮನೆ ಮಾಲೀಕರ ಮನೆಯ ಮಂದಿ, ಜೊತೆಗೆ ಇನ್ನೆರಡು ಬಾಡಿಗೆದಾರರ ಕುಟುಂಬ ;ಹೀಗೆ ಎಲ್ಲರ ಬಟ್ಟೆಯೂ ನೇತಾಡಿ ಒಣಗುವುದು ಅದೇ ಆ ನಾಲ್ಕು ತಂತಿಗಳ ಮೇಲೆ. ನಮ್ಮ ರೂಮಿನ ಬಾಗಿಲು ತೆರೆದು ಟೆರೆಸ್ ಮೆಟ್ಟಿಲ ಕಡೆ ಹೋಗಬೇಕೆಂದರೆ ಈ ನಾಲ್ಕು ತಂತಿಗಳ ಅಡಿಯಲ್ಲೇ ಸಾಗಿ ಹೋಗಬೇಕು. ಕೆಲವೊಮ್ಮೆ ತಂತಿಗಳ ಮೇಲೆ ಒಣಗಲಿಕ್ಕೆ ಹಾಕಿದ ಬಟ್ಟೆಗಳಿದ್ದರೆ ಅವುಗಳನ್ನು ಸರಿಸಿಯೋ ಅಥವಾ ಎತ್ತಿಯೋ ಜಾಗ ಮಾಡಿಕೊಂಡು ಹೋಗಬೇಕು. ಬಟ್ಟೆಗಳೆಂದರೆ ಅಲ್ಲಿ ಸೀರೆ , ಲಂಗ, ಪಂಚೆ , ಅಂಗಿ -ಚಡ್ಡಿ , ಗಂಡಸರ ಬನಿಯನ್ನು .ಹೆಂಗಸರ ಬನಿಯನ್ನು , ಟವೆಲ್ಲು ಇತ್ಯಾದಿ ಇತ್ಯಾದಿ.

ಆವತ್ತು ಸಂಜೆ ಟೆರೆಸ್ ಕಡೆಯಿಂದ ಮೆಟ್ಟಿಲಿಳಿದು ಕೆಳಗೆ ಗೇಟ್ ಕಡೆ ಹೋಗುತ್ತಿದ್ದೆ. “ ಸ್ವಲ್ಪ ನಿಲ್ಲಿ ” ಎಂದು ಯಾರೋ ಕೂಗಿದಂತಾಯಿತು. ನೋಡಿದರೆ ಪಕ್ಕದ ಕಿಟಕಿಯಲ್ಲಿ ಕೆಳಗಿನ ಮನೆ ಆಂಟಿ ಕಂಡರು. ಕರೆದದ್ದು ಯಾಕೆಂದು ಕೇಳುವ ಮುಂಚೆಯೇ ಆಂಟಿ “ ನಿಮ್ಮ ರೂಮಿನಲ್ಲಿ ಒಂದು ದೊಡ್ಡ ಸ್ಟೂಲ್ ಇದೆಯಂತಲ್ಲ. ಓನರ್ ಹೇಳಿದ್ರು. ಸ್ವಲ್ಪ ಕೊಡಿ ಅದನ್ನ. ನಮ್ ಮನೆವ್ರು ಬರ್ತಾರೆ ಕೊಟ್ಟು ಕಳ್ಸಿ ” ಎಂದು, “ ರೀ ಹೋಗ್ರಿ” ಎಂದು ಅಂಕಲ್ ಗೆ ಹೇಳಿದರು. “ ಸರಿ ಆಂಟಿ.ಬೇಕರಿಗೆ ಹೊರಟಿದ್ದೇನೆ.ಹತ್ತು ನಿಮಿಷ ಅಷ್ಟೇ. ಟೀ ಕುಡಿದು ಬಂದು ಸ್ಟೂಲು ಕೊಡುತ್ತೇನೆ” ಎಂದೆ .

ಕೊನೆಗೆ ಟೀ ಮುಗಿಸಿ ರೂಮ್ ಕಡೆ ಬಂದೆ. ನನ್ನ ದಾರಿಯನ್ನೇ ಕಾಯುತ್ತ ಆಂಟಿಯ ಗಂಡ ಅಂಕಲ್ ನನ್ನ ರೂಮ್ ಎದುರು ನಿಂತಿದ್ದರು. ನಾನು ರೂಮ್ ಒಳಗೆ ಬಂದು ಸ್ಟೂಲ್ ತೆಗೆದುಕೊಂಡು ಬಾಗಿಲ ಬಳಿ ನಿಂತು “ ತಗೋಳಿ ಅಂಕಲ್ ಸ್ಟೂಲು” ಎಂದೆ. ಅಂಕಲ್ ಹುಳಿಹುಳಿಯಾಗಿ ನಗುತ್ತಾ ಯಾವುದೋ ಹಿಂಜರಿಕೆಯಲ್ಲಿ ಸುಮ್ಮನೆ ನಿಂತಿದ್ದರು. “ ಏನ್ ಅಂಕಲ್, ಹಾಗೆ ನಿಂತ್ಗೊಂಡ್ ಬಿಟ್ರಿ.ತಗೊಳ್ಳಿ ಸ್ಟೂಲು.ಕೊಡಿ ಆಂಟಿ ಗೆ ” ಎಂದೆ. ಹುಳಿ ಹುಳಿಯಾಗಿ ನಗುತ್ತಲೇ “ ಹ್ಯಾಗ್ರಿ ಆ ಕಡೆ ಹೋಗೋದು ಈ ದೊಡ್ಡ ಸ್ಟೂಲು ತಗೊಂಡು. ಹೋಗೋ ದಾರಿಯಲ್ಲೇ ಬಟ್ಟೆ ಒಣಗಲಿಕ್ಕೆ ಹಾಕಿದ್ದಾರೆ ” ಎಂದು ಕೊಂಚ ಗಂಭೀರರಾದರು. “ ಅಯ್ಯೋ ಅಂಕಲ್. ಅದಕ್ಯಾಕೆ ಅಷ್ಟು ತಲೆಬಿಸಿ. ಇಲ್ಲಿ ನೋಡಿ. ಎಷ್ಟು ಸಿಂಪಲ್ ” ಎಂದು ಎದುರಿದ್ದ ತಂತಿಯ ಮೇಲಿನ ಸೀರೆ ಸರಿಸಿ , ಮುಂದೆ ಎದುರಾದ ಇನ್ನೊಂದು ತಂತಿಯ ಮೇಲಿದ್ದ ಒಣಗಿದ್ದ ಲಂಗವನ್ನ ಎತ್ತಿ ದಾರಿ ಮಾಡಿಕೊಂಡು, ಸ್ಟೂಲ್ ಹಿಡಿದುಕೊಂಡು ಟೆರೆಸ್ ಮೆಟ್ಟಿಲಿನ ಕಡೆ ಅನಾಯಾಸವಾಗಿ ದಾಟಿಕೊಂಡು ಬಂದು, ಯಾವುದೋ ದೊಡ್ಡ ಸಾಹಸ ಮಾಡಿದವನಂತೆ ಹೆಮ್ಮೆಯಿಂದ ಬೀಗುತ್ತ ಅಂಕಲ್ ಮುಖ ನೋಡಿದೆ. ಅಂಕಲ್ ಪೂರ್ತಿ ಗಂಭೀರರಾಗಿಬಿಟ್ಟಿದ್ದರು.:( :(

“ಅದು ಹ್ಯಾಗ್ರಿ ಸೀರೆ ಲಂಗ ಎತ್ತಿ ದಾರಿ ಮಾಡ್ಕೊಂಡು ಹೋದ್ರಿ? ಹಾಗೆಲ್ಲ ಬಟ್ಟೆ ಕೆಳಗೆ ನುಸೀಬಾರದ್ರೀ. ಗ್ರೌಂಡ್ ಫ್ಲೋರ್ ಮನೆವ್ರ ಬಟ್ಟೆ ಕಣ್ರೀ ಅದು. ಅವರದ್ದು ಯಾವ್ದೋ ಜಾತಿ. ಸೀರೆ ಲಂಗದ ಕೆಳಗೆ ನುಸದ್ರೆ ಅವರ ಕಾಲ್ ಕೆಳಗೆ ನುಸದಂಗೆ ಆಗುತ್ತೇರಿ. ನಮ್ಮದೇ ಜಾತಿಯವರ ಸೀರೆ ಲಂಗ ಆದರೆ ಪರವಾಗಿಲ್ಲ. ಹೇಗೋ ಅಡ್ಜಸ್ಟ್ ಮಾಡ್ಕೋ ಬಹುದು ನಮ್ಮವರದೇ ಲಂಗ ಸೀರೆ ಅಂದ್ಕೊಂಡು. ಹೋಗಿ ಹೋಗಿ ಯಾವ್ದೋ ಜಾತಿ ಜನರ ಕಾಲ್ ಕೆಳಗೆ ನುಸೀಬೇಕೇನ್ರಿ. ನೀವೂ ನಮ್ಮ ಜಾತಿಯವರೇ . ನಿಮಗಿನ್ನೂ ಸಣ್ಣ ವಯಸ್ಸು .ಇವೆಲ್ಲ ಸೂಕ್ಷ್ಮ ನಿಮಗೆ ಗೊತ್ತಾಗೋಲ್ಲ - ಎಂದು ನನ್ನ ಮುಖ ನೋಡಿದರು. “ ಅದೆಲ್ಲ ಸರಿ ಅಂಕಲ್. ನೀವು ಹ್ಯಾಗೆ ಈ ಬಟ್ಟೆಗಳನ್ನ ದಾಟಿ ಟೆರೆಸ್ ಮೆಟ್ಟಿಲು ಕಡೆಯಿಂದ ನನ್ನ ರೂಮ್ ಬಾಗಿಲೆದುರು ಬಂದ್ರಿ ?” ಎಂದು ನಾನು ಪ್ರಶ್ನೆಯಾದೆ. ಈಗ ಅಂಕಲ್ ಮುಖ ಹೆಮ್ಮೆಯಿಂದ ಅಗಲವಾಯಿತು ತಾವೆಷ್ಟು ಜಾಣರು ಎಂಬ ಭಾವದಲ್ಲಿ . “ಅಲ್ಲಿ ನೋಡ್ರಿ. ಟೆರೆಸ್ ಆ ಕಡೆ ಮೂಲೆಯಲ್ಲಿ ಒಂದು ಗ್ಯಾಪ್ ಇದೆ. ಅಲ್ಲಿಂದ ಹೇಗೋಬಂದೆ ” ಎಂದು ಟೆರೆಸ್ ನ ಮತ್ತೊಂದು ಮೂಲೆಯ ಕಡೆ ಕೈ ಮಾಡಿ ತೋರಿಸಿದರು. ಅಲ್ಲಿ ಒಣಗಲು ಹಾಕಿದ್ದ ಬಟ್ಟೆಗಳ ಸಾಲಿನಲ್ಲಿ ಒಂದು ಹೆಂಗಸರ ಬನಿಯನ್ನು ಹಾಗು ಒಂದು ಜೀರ್ಣವಾದ ಗಂಡಸರ ಚಡ್ಡಿಯ ನಡುವೆ ಅಂಕಲ್ ಹೇಳಿದ ಎರಡು ಅಡಿಯ ‘ ಗ್ಯಾಪ್ ಕಾಣಿಸಿತು. ಸೀರೆ ಲಂಗದ ಕೆಳಗೆ ನುಸುಳಿದ್ರೆ ‘ ಕಾಲ್ ಕೆಳಗೆ ನುಸ್ದಂಗೆ ’ ಎಂದು ಅಂಕಲ್ ಹೇಳಿದ್ದರಲ್ಲ. ಈ ಹೆಂಗಸರ ಬನಿಯನ್ನು ಹಾಗು ಜೀರ್ಣವಾದ ಗಂಡಸರ ಚಡ್ಡಿಯ ನಡುವೆ ಅಂಕಲ್ ಹೇಳಿದ ‘ನುಸಿಯುವ’ ಮಾತನ್ನು ಹೇಗೆ ಅನ್ವಯಿಸಬೇಕೆಂಬುದು ನನಗೆ ಹೊಳೆಯಲಿಲ್ಲ. ನನ್ನ ಆ ಯೋಚನೆಗೆ ನಾನೇ ನಕ್ಕುಬಿಟ್ಟೆ.“ಯಾಕ್ರೀ ನಗ್ತೀರ?”. “ ಯಾಕೂ ಇಲ್ಲ ಅಂಕಲ್. ನಿಮ್ಮದು ತಲೆ ಅಂದ್ರೆ ತಲೆ.ನೀವು ಮಾಡಿದ ಐಡಿಯಾ ನೋಡಿ ಖುಷಿಯಾಯ್ತು.ಅಷ್ಟೇ” ಎಂದೆ. ನನ್ನ ಮಾತು ಕೇಳಿ ಅಂಕಲ್ ಗೆ ಸ್ವಲ್ಪ ಸಮಾಧಾನವಾಯ್ತು. ನನಗೆ ಆಚಾರ ,ವಿಚಾರವನ್ನ ತಿಳಿಸಿ ಮನವರಿಕೆ ಮಾಡಿಕೊಟ್ಟ ಖುಷಿ ಅವರ ಮುಖದಲ್ಲಿ ಅಗಲವಾಗಿ ಹರಡಿಕೊಂಡಿತ್ತು.

ನಾನು ಇನ್ನೂ ಏನೋ ಹೇಳಬೇಕೆಂದು ಬಾಯಿ ತೆರೆದೆ. ಅಂಕಲ್ ಗೆ ಆಗಲೇ ವಯಸ್ಸು ನಲವತ್ತರ ಮೇಲಾಗಿದೆ. ಕಟ್ಟಾ ಸಂಪ್ರದಾಯಸ್ಥರು .ಅವರ ಹಿರಿಯ ಅಣ್ಣ ಹಾಗು ಒಬ್ಬ ತಮ್ಮ ಸ್ವಾಮೀಜಿಗಳಂತೆ.ಅಂಕಲ್ ನಾಲ್ಕು ಮನೆಯ ಪೂಜೆ ಕೆಲಸಕ್ಕೆ ಪ್ರತಿ ನಿತ್ಯ ಹೋಗುತ್ತಿದ್ದವರು . ನಾನು ಹೇಳಲಿರುವ ಮಾತು ಅವರ ಮೇಲೆ ಪರಿಣಾಮ ಬೀರುವ ವಿಶ್ವಾಸ ನನಗೆ ಕಾಣಲಿಲ್ಲ. ಬಾಯಿ ತೆರೆದವನು ಬಾಯಿ ಮುಚ್ಚಿ ಸುಮ್ಮನಾಗಿಬಿಟ್ಟೆ .

ಆ ಘಟನೆ ಆದ ಮೇಲಿಂದ ಅಂಕಲ್ ಗೆ ನನ್ನ ಮೇಲೆ ವಿಶೇಷ ಪ್ರೀತಿ; ಅವರ ಧರ್ಮೋಪದೇಶಕ್ಕೆ ತಲೆದೂಗಿ ಕೋಲೆ ಬಸವನಂತೆ ತಲೆದೂಗಿದ ಕಾರಣಕ್ಕೆ. ಅದಾಗಿ ಸ್ವಲ್ಪ ದಿನದ ನಂತರ ನನ್ನ ರೂಮಿಗೆ ಬರುವ ದಾರಿಯಲ್ಲಿ ಅಂಕಲ್ ಎದುರಾದರು. “ ಸ್ವಲ್ಪ ನಿಲ್ಲಿ ಇವ್ರೇ. ದೇವರಿಗೆ ವಿಶೇಷ ಪೂಜೆ ಮಾಡಿದ್ದೇನೆ .ಪ್ರಸಾದ ತಂದುಕೊಡ್ತೇನೆ” ಎಂದು ಎರಡು ಬಾಳೆಹಣ್ಣು ತಂದು ಕೊಟ್ಟರು. ನನ್ನ ಬಲಗೈ ಮುಂದೆ ಮಾಡಿ ಬಾಳೆಹಣ್ಣು ತೆಗೆದುಕೊಂಡೆ. ಎಡಗೈ ನಲ್ಲಿ ಊಟಕ್ಕೆಂದು ತಂದಿದ್ದ ಪಾರ್ಸೆಲ್ ಇತ್ತು. ಅದರಲ್ಲಿ ಇದ್ದದ್ದು ಒಂದು ರಾಗಿ ಮುದ್ದೆ ಹಾಗು ಎರಡು ಮೊಟ್ಟೆ. ಅಂಕಲ್ ನಂಬುವ ದೇವರಲ್ಲಿ ನನ್ನದೊಂದು ಕ್ಷಮೆ ಕೋರಿ ನಾಸ್ತಿಕನಾದ ನಾನು ರೂಮಿಗೆ ಬಂದು ಬಿಟ್ಟೆ.

ರೂಮಿಗೆ ಬಂದವನು ನಾನು ತಂದಿದ್ದ ಊಟದ ಪಾರ್ಸೆಲ್ ಹಾಗು ಅಂಕಲ್ ಕೊಟ್ಟ ಬಾಳೆಹಣ್ಣುಗಳನ್ನ ದೂರ ದೂರವೇ ಇಟ್ಟೆ. ರಾಗಿ ಮುದ್ದೆ ಹಾಗು ಮೊಟ್ಟೆಯ ಊಟದ ಜೊತೆ ಬಾಳೆಹಣ್ಣು ತಿನ್ನಲಿಲ್ಲ. ಕೊನೆಗೆ ರಾತ್ರಿ ಎರಡು ಘಂಟೆಗೆ ಮಲಗುವ ಸಮಯಕ್ಕೆ ಬಾಳೆಹಣ್ಣು ತಿಂದು ಮಲಗಿದೆ. ನಾನು ನಾಸ್ತಿಕ ನಿಜ. ಆದರೆ ಆಸ್ತಿಕರ ನಂಬಿಕೆಯನ್ನ ಅಗೌರವದಿಂದ ಕಾಣುವ ಹಕ್ಕು ನನಗಿಲ್ಲ. ನನ್ನ ಅಭಿಪ್ರಾಯವನ್ನ ವ್ಯಕ್ತಪಡಿಸುವ ಹಕ್ಕು ನನಗಿದೆ. ಆದರೆ ನನ್ನ ಅಭಿಪ್ರಾಯವನ್ನ ಯಾರ ಮೇಲೂ ಹೇರುವ ಹಕ್ಕು ನನಗಿಲ್ಲ. ಅಂಕಲ್ ಬೆಳೆಸಿಕೊಂಡು ಬಂದ ಅತಿರೇಕದ ಜಾತಿ ಪ್ರೇಮವಾಗಲಿ, ಬಾಲಿಶ ಚಿಂತನೆಯ ಕ್ರಮವಾಗಲಿ ; ಅವು ಏನೇ ಇರಲಿ. ಆದರೆ ಅವರು ನನಗೆ ಬಾಳೆಹಣ್ಣು ಕೊಡುವಾಗ ಅವರ ಮನಸ್ಸಿನಲ್ಲಿದ್ದುದು ‘ ದೇವರ ಪ್ರಸಾದ. ಹುಡುಗನಿಗೆ ಒಳ್ಳೇದಾಗಲಿ - ಎಂಬ ಭಾವನೆ ಮಾತ್ರ. ಆ ಕಾರಣಕ್ಕೆ ದೇವರನ್ನು ನಂಬದ ನಾನು ಅಂಕಲ್ ಕೊಟ್ಟ ಬಾಳೆಹಣ್ಣುಗಳನ್ನ ಭಕ್ತಿಯಿಂದ ತಿಂದೆ. ಭಾವನೆ ಬಾಳೆಹಣ್ಣಿನ ತಿರುಳಿದ್ದಂತೆ. ಇಲ್ಲಿ ತರ್ಕ ಸಿಪ್ಪೆಯಂತೆ. ಭಾವನೆ ಮುಖ್ಯವಾಗಬೇಕಾದ ಜಾಗದಲ್ಲಿ ತರ್ಕ ಯಾಕೆ? ನಾನು ಹಣ್ಣು ತಿಂದು ಸಿಪ್ಪೆಯನ್ನ ಎಸೆದು ನಿರಮ್ಮಳವಾಗಿ ದೈವಾನುಗ್ರಹದಲ್ಲಿ ಮಲಗಿಬಿಟ್ಟೆ.:) :)

Saturday, March 19, 2011

ಗುಡ್ ನೈಟ್ ಕವನ ೪ ....

ಬರೆದ ಓಲೆಗಳಲಿ
ದುಃಖ ದುಮ್ಮಾನ ನೋವಿನ ಪದಗಳಿತ್ತು.
ಬರೆವ ಘಳಿಗೆಯಲಿ ಕಣ್ಣಂಚಲಿ ಕುಳಿತಿದ್ದ
ಮಂಜು ಮಂಜು ಹನಿಸಾಲು ನಿನಗೆಲ್ಲಿ ಕಂಡಿತ್ತು ?

ಓಲೆ ಸಿಗುವಾಗಲೆಲ್ಲ ಎಲ್ಲೆ ಮೀರಿದ
ದೈವೀಕ ಸಂತಸ ನಿನ್ನದಾಗುತ್ತಿತ್ತು
ಆದರೆ
ಕೊನೆಯ ಸಾಲು ಬರೆವ ಮುನ್ನವೇ
ಎಲ್ಲಿ ಭಾವ ಭಾರಕೆ ಕುಸಿದು ಮಲಗುವೆನೋ
ಎನುವ ಎನ್ನ ಅಸಹಾಯಕತೆ ನಿನಗೆಲ್ಲಿ ತಿಳಿದಿತ್ತು ?


ಕೆಲವಷ್ಟು ಹಾಗೆಯೇ
ಪದ ಮೀರಿದ್ದು
ಕಲ್ಪನೆಗೆ ತಾಕದ್ದು
ನಿನ್ನುಸಿರು ತಾಕುವ ಸನಿಹವೇ ಬೇಕು
ಮೆಲ್ಲಗೆ ನಿನ್ನ ಕಿವಿಯ ಬಳಿ ತುಟಿಯಿಟ್ಟು
ಎಲ್ಲ ಹೇಳಬೇಕು
ಮತ್ತೆ ನೀನು ಎನ್ನೆದೆಗೆ ತಲೆಯಿಟ್ಟು
ಎದೆಯ ಗೂಡಿನ ದನಿಗೆ ಕಿವಿಯಾಗಬೇಕು
ನೀನೇ ನಾನಾಗಬೇಕು
ನಾನು ನೀನಾಗಿ.....

Saturday, March 12, 2011

ಒಂದು ಸ್ಯಾಂಪಲ್ .............................

“ ಯಾರೋ ಹತ್ತಿರ ಬರುತ್ತಿದ್ದಾರೆ .ಹತ್ತಿರವಾದಷ್ಟೂ ಬೃಹದಾಕಾರವಾಗಿ ಬೆಳೆಯುತ್ತಿದ್ದಾರೆ. ಮುಖ ಸರಿಯಾಗಿ ಕಾಣಿಸುತ್ತಿಲ್ಲ. ಭಯ ವಿಪರೀತವಾಗಿ ಎಂಥದೋ ಒಂದು ಬಗೆಯ ಸಂಕಟ. ಓಡಿಹೋಗೋಣವೆಂದುಕೊಂಡರೆ ಸಾಧ್ಯವಾಗುತ್ತಿಲ್ಲ .ಯಾವುದೋ ಶಕ್ತಿಯ ಅಧೀನದಲ್ಲಿ ನಿಶ್ಚಲನಾದ ಅನುಭವ. ಸಹಾಯಕ್ಕೆ ಯಾರನ್ನೋ ಕೂಗುತ್ತಿದ್ದೇನೆ. ಕೂಗುತ್ತಿದ್ದರೂ ಧ್ವನಿಯೇ ಹೊರಡುತ್ತಿಲ್ಲ. ಈಗ ಆ ಆಕೃತಿ ಎದೆಯ ಮೇಲೇರಿ ಕುಳಿತು ಕತ್ತು ಹಿಚುಕುತ್ತಿದೆ. ಇನ್ನೇನು ಉಸಿರು ನಿಂತೇ ಹೋಯಿತು ಎನ್ನುವಾಗ ಎಚ್ಚರವಾಯಿತು. ಈಗ ಮೈಯೆಲ್ಲಾ ಹೂ ಹಗುರ. ಸಾವಿನ ನಂತರ ಇರಬಹುದಾದ ಶಾಂತಿಯನ್ನ ತಾಕಿ ಬಂದ ಅನುಭವ. ಬೆಳಗ್ಗಿನ ಐದರ ಜಾವದಲ್ಲಿ ವಿಧ್ಯಾಧರ ಎದ್ದು ಕುಳಿತ. ವರುಷ ಇಪ್ಪತ್ತಾದರೂ ಒಮ್ಮೆಯೂ ಹೀಗಾಗಿರಲಿಲ್ಲ. ಹೀಗಾಗಲು ಕಾರಣವೇನೆಂದು ಯೋಚನೆಗೆ ಬಿದ್ದ. ನಿದ್ರೆ ಮತ್ತೆ ಕಣ್ಣಿಗೆ ಹತ್ತಲಿಲ್ಲ. ಸುಮ್ಮನೆ ಬೋರಲಾಗಿ ಕಣ್ಣು ಬಿಟ್ಟುಕೊಂಡು ನಿಚ್ಚಳ ಬೆಳಗಿಗೆ ಎದುರು ನೋಡುತ್ತಾ ಮಲಗಿಯೇ ಇದ್ದ.

‘ ಏಯ್ ವಿದ್ಯಾಧರ ,ಘಂಟೆ ಯೋಳಾತು. ತಿಂಡಿಗೆ ಬಾರಾ. ಲೇಟ್ ಆಗಿ ಬಂದ್ರೆ ಬಿಸಿ ದೋಸೆ ಸಿಗಲ್ಲೇ ‘ ಎಂದು ಅಮ್ಮ ಅಡುಗೆ ಮನೆಯಿಂದಲೇ ಕೂಗುತ್ತಿದ್ದರು. ವಿದ್ಯಾಧರ ಕಣ್ಣು ಬಿಟ್ಟುಕೊಂಡು ಮಲಗಿದ್ದ. ಹಾಗಾಗಿ ಅಮ್ಮನ ಕೂಗು ಕಿವಿಗೆ ತಲುಪುವಲ್ಲಿ ತಡವಾಗಲಿಲ್ಲ. ಜಗುಲಿಯಲ್ಲಿ ಮಲಗಿದ್ದ ವಿದ್ಯಾಧರ ಎದ್ದು ಮುಖ ತೊಳೆವ ಶಾಸ್ತ್ರ ಮುಗಿಸಿ ಅಡುಗೆಮನೆಗೆ ಬರುವಷ್ಟರಲ್ಲಿ ಅವನಿಗಾಗಿ ಅಮ್ಮ ಮಾಡಿದ ಬಿಸಿ ದೋಸೆ ಹೊಗೆ ಹೊಗೆಯಾಗಿ ,ಕಾಯಿ ಚಟ್ನಿಯೊಂದಿಗೆ ಪ್ಲೇಟಿನಲ್ಲಿ ಕಾಯುತ್ತಿತ್ತು. ಮೆತ್ತನೆಯ ದೊಸೆಯನ್ನು ಮೃದುವಾಗಿ ಹರಿದು ಚಟ್ನಿಯೊಂದಿಗೆ ಮೆಲ್ಲಗೆ ವಿದ್ಯಾಧರ ಅನ್ಯಮನಸ್ಕನಾಗಿ ಬೆಳಿಗ್ಗೆ ಐದರ ಜಾವದಲ್ಲಿ ಕಂಡ ಕನಸಿನ ಬಗ್ಗೆಯೇ ಯೋಚಿಸುತ್ತಾ ಬಾಯಿಗಿಡುತ್ತಾ ಕುಳಿತ. ಅದೇ ಯೋಚನೆಯಲ್ಲಿಯೇ ಬಿಸಿಬಿಸಿಯಾಗಿದ್ದ ಚಹಾ ಎತ್ತಿಕೊಂಡು ತುಟಿಗಿಟ್ಟು ಹೀರಿದ.. ಹಾಗೆ ತುಟಿಗಿಟ್ಟ ಚಹಾ ತುಟಿಯಿಂದ ಹಿಡಿದು ನಾಲಿಗೆಯನ್ನೂ ಒಳಗೊಂಡು ಗಂಟಲಿನ ಶುರುವಿನ ತನಕ ಬಿಸಿ ಮುಟ್ಟಿಸಿತ್ತು. ಚಹಾ ಲೋಟ ಕೈಜಾರಿ ಗೋವಾ ಚಡ್ಡಿಯ ಅಂಚನ್ನು ಚಹಾ ಒದ್ದೆಮಾಡಿ, ಅದರಾಚೆಯ ಬೆತ್ತಲೆ ತೊಡೆಯನ್ನು ತಾಕಿ ಬಿಸಿ ಮುಟ್ಟಿಸಿ ಅಂಟಾಗಿಹೋಯಿತು. ' ಎಂಥಾ ಹುಡುಗ್ರೆನ. ಇಷ್ಟೆಲ್ಲಾ ಪರಧ್ಯಾನತೆ ಒಳ್ಳೇದಲ್ಲ. ಸ್ವಲ್ಪ ನೋಡ್ಕಂಡು ಕುಡಿಯದಲ್ದ ‘ ಎಂದು ಅಮ್ಮ ಕಿಡಿಕಿಡಿಯಾದರು ಕೊಂಚ ಸಿಟ್ಟು ಕೊಂಚ ಕಾಳಜಿಯಲ್ಲಿ. ' ಅಮ್ಮ, ಈವತ್ತು ಬೆಳಿಗ್ಗೆ ಎಂತ ಆತು ಗೊತ್ತಿದ್ದ ? ‘ ಎಂದು ವಿದ್ಯಾಧರ ಅಮ್ಮನೆಡೆ ನೋಡಿದ.’ ಎಂತ ಆತಾ ಮಾರಾಯ ಬೆಳ ಬೆಳಿಗ್ಗೆ ನಿಂಗೆ? ಅಂಥಾ ಕೆಲಸ ಎಂತ ಮಾಡಕ್ಕೆ ಹೋಗಿದ್ದೆ ? ಎದ್ದಿದ್ದೇ ಬೆಳಿಗ್ಗೆ ಯೋಳು ಘಂಟಿಗೆ .ಹ್ಮಂ ಸರಿ ಹೇಳು ' ಎಂದು ಹೇಳುತ್ತ ಅಮ್ಮ ಕಾವಲಿ ಮೇಲೆ ಮುಂದಿನ ದೋಸೆಗೆ ಹಿಟ್ಟು ಸುರಿದಳು. ' ಅಮ್ಮ .ಎಂತ ಆತು ಅಂದ್ರೆ ‘ ಎಂದು ಶುರುಮಾಡಿ ' ಹಿಂಗಿಂಗೆ ಆತು.ಇದಕ್ಕೆ ಎಂಥ ಮಾಡವು ‘ ಎಂದು ಹೇಳಿ ವಿದ್ಯಾಧರ ಐದರ ಜಾವದ ವಿದ್ಯಮಾನದ ವರದಿ ಒಪ್ಪಿಸಿ ಮುಗಿಸಿ ಮತ್ತೆ ಅಮ್ಮನ ಮುಖ ನೋಡುತ್ತಾ ಕುಳಿತ. ಅಮ್ಮನಿಂದ ಕೊಂಚ ಗಾಬರಿ ಹಾಗು ಕೊಂಚ ಅನುಕಂಪ ವಿದ್ಯಾಧರನ ನಿರೀಕ್ಷೆಯಾಗಿತ್ತು.

‘ ಹಂಗೆಲ್ಲ ಆಗ್ತಪ ಮನುಷ್ಯ ಜನ್ಮ ಅಂದ್ಮೇಲೆ. ಎಂತೋ ಕೆಟ್ಟ ಕನಸು ಆಗಿಕ್ಕು. ಅದ್ಕೆಲ್ಲ ನಿಂಗ ಹುಡುಗ್ರು ತಲೆಬಿಸಿ ಮಾಡ್ಕಂಡು ಕೂರದಲ್ಲ. ಹುಡುಗ್ರು ತಿನ್ಕಂಡು ಉಂಡ್ಕಂಡು ಅರಾಮ್ ಇರವು . ನಿಂಗೆ ಇನ್ನೊಂದು ದೋಸೆ ಬೇಕಾ? ಬೇಕಾದ್ರೆ ಮಾಡ್ಕೊಡ್ತಿ .ಇಲ್ಲೇ ಅಂದ್ರೆ ಕಾವಲಿ ತೆಗಿತಿ “ ಎಂದು ಹೇಳಿದ ಅಮ್ಮ ವಿದ್ಯಾಧರನ ನಿರೀಕ್ಷೆಗೆ ನೀರು ಹಾಕಿದ್ದರು.' ಬ್ಯಾಡ ಸಾಕು.ಇನ್ಮೇಲೆ ನಿನ್ನತ್ರೆ ಎಂತನ್ನೂ ಹೇಳಲ್ಲೇ ' ಎಂದು ಸಿಟ್ಟುಮಾಡಿಕೊಂಡು ವಿದ್ಯಾಧರ ಎದ್ದ. ' ಸ್ವಲ್ಪ ಚಟ್ನಿ ಹಂಗೇ ಇದ್ದಲ ಬಟ್ಟಲಲ್ಲಿ .ವೇಸ್ಟ್ ಮಾಡಲಾಗ.ಒಂದು ದೋಸೆ ಹಾಕ್ತಿ.ಚಟ್ನಿ ಖಾಲಿ ಮಾಡು ' ಎಂದು ಬಡಬಡಿಸಿದಳು .ವಿದ್ಯಾಧರ ತನ್ನ ಪಾಡಿಗೆ ತಾನು ಅಮ್ಮನ ಮಾತುಗಳನ್ನ ಕಿವಿಗೆ ಹಾಕಿಕೊಳ್ಳದೆ ಹೋಗಿಯೇಬಿಟ್ಟ. ಅಮ್ಮ ಅವಳ ಪಾಡಿಗೆ ಅವಳು ಒಲೆಯ ಮೇಲಿಂದ ಕಾವಲಿ ತೆಗೆದು ನೀರು ಸುರಿದಳು. ಕಾವಲಿ ಚುರು ಚುರುಗುಟ್ಟಿ ಕೊನೆಗೆ ಬುಸ್ಸೆಂದು ಹೊಗೆಯಾಯಿತು.
..........................................................


“ಒಯ್ ಸುಬ್ಬಣ್ಣ .ಬಾರಾ ಇಲ್ಲಿ . ಸ್ವಲ್ಪ ಬಂದು ಹೋಗ ಇಲ್ಲಿ. ನೋಡಿದ್ರು ನೋಡದೆ ಇದ್ದಂಗೆ ಹೋಗ್ತ್ಯಲೋ ಮಾರಾಯ. ದೊಡ್ ಮನಶ ಆಗೊಜ್ಯಪ ಈಗಿತ್ಲಾಗಿ.ಕಾಣದೆ ಅಪರೂಪ ‘ ಎಂದು ಮನೆಯ ಅಂಗಳದಲ್ಲಿದ್ದ ವಿದ್ಯಾಧರನ ಅಪ್ಪ ಸತ್ಯಣ್ಣ ರಸ್ತೆಯಲ್ಲಿ ಹೋಗುತ್ತಿದ್ದ ಸುಬ್ಬಣ್ಣನನ್ನ ಧ್ವನಿ ಎತ್ತರಿಸಿ ಕರೆದ. ಧ್ವನಿ ಬಂದಕಡೆ ತಿರುಗಿ ನೋಡಿದ ಸುಬ್ಬಣ್ಣ ಒಮ್ಮೆ ದೇಶಾವರಿಯ ನಗೆ ನಕ್ಕು , ಬಾಯಲ್ಲಿದ್ದ ಎಲೆ ಅಡಿಕೆಯನ್ನು ಸತ್ಯಣ್ಣನ ಮನೆಯ ಎದುರಿನ ಗಟಾರಕ್ಕೆ ಉಗಿದು, ಕೈಯಲ್ಲಿದ್ದ ಕೊಡೆಯನ್ನ ಮಡಚಿ ಎಡ ಕಂಕುಳಲ್ಲಿ ಇಟ್ಟುಕೊಂಡು, ಬಲಗೈಯಿಂದ ಬಾಯಿ ಒರೆಸಿಕೊಂಡು ,ಕೊನೆಗೆ ಅದೇ ಕೈಯನ್ನು ತನ್ನ ಬಿಳಿ ಪಂಚೆಗೆ ಒರೆಸಿಕೊಳ್ಳುತ್ತಾ ಸತ್ಯಣ್ಣನ ಬಳಿ ಬಂದ ....

Saturday, March 5, 2011

ದೊಡ್ಡೋರ್ದೆಲ್ಲಾ ದೊಡ್ಡದಲ್ಲ .....

ಕೆಲವಷ್ಟು ತೀರಾ ತೀರಾ ಸಣ್ಣದು.....

ಕ್ರಿಕೆಟ್ ಮೂರ್ಖರ ಆಟ. ಹಾಗೆಂದು ಖ್ಯಾತ ಆಂಗ್ಲ ನಾಟಕಕಾರ ಬರ್ನಾಡ್ ಷಾ ಯಾವಾಗಲೋ ಹಿಂದೊಮ್ಮೆ ಅವನ ಕಾಲದಲ್ಲಿ ಹೇಳಿದ್ದನಂತೆ. ಪ್ರೈಮರಿ ಶಾಲೆಯಲ್ಲಿ ಕ್ರಿಕೆಟ್ ದ್ವೇಷಿಯಾದ ಓರ್ವ ಮೇಷ್ಟ್ರು ನಮಗೆ ಗೊತ್ತಿಲ್ಲದ ಬರ್ನಾಡ್ ಷಾನನ್ನು ನಡುವೆ ತಂದು ಕ್ರಿಕೆಟ್ ಬಗ್ಗೆ ಬಾಯಿಗೆ ಬಂದಂತೆ ಬಯ್ದು ಕ್ರಿಕೆಟ್ ನ ಜನ್ಮ ಜಾಲಾಡಿಬಿಟ್ಟಿದ್ದರು. ಖುದ್ದು ಮೇಷ್ಟ್ರೇ ‘ಕ್ರಿಕೆಟ್ ಮೂರ್ಖರ ಆಟ ಅಂತ ಹೇಳಿಬಿಟ್ರು. ಈ ಮೇಷ್ಟರಿಗೆ ಅದ್ಯಾರೋ ಬರ್ನಾಡ್ ಷಾ ಎಂಬ ದೊಡ್ಡ ಮನುಷ್ಯನ ಬೆಂಬಲ ಬೇರೆ. ನಾವು ಸಣ್ಣವರು. ದೂಸರಾ ಉಸಿರಿಲ್ಲದೆ ವಿಧೇಯರಾಗಿ ಮೇಷ್ಟ್ರ ಮಾತಿಗೆ ಹೌದೆಂದು ತಲೆಯಲ್ಲಾಡಿಸಿದ್ದೆವು. ಅವತ್ತು ಒಂದು ದಿನ ಎಲ್ಲಿಯೂ ಕ್ರಿಕೆಟ್ ಆಡಲಿಲ್ಲ. ಮರುದಿನದಿಂದ ಆ ಮೇಷ್ಟ್ರು ವರ್ಗ ಆಗಿ ಹೋಗುವ ತನಕ ಶಾಲೆಯ ಅಂಗಳದಲ್ಲಿ ಕ್ರಿಕೆಟ್ ಆಡಲೇ ಇಲ್ಲ.

ಕ್ರಿಕೆಟ್ ಮೂರ್ಖರ ಆಟ ಎಂದು ಮೇಷ್ಟ್ರು ಹೇಳಿದ್ದರು.ಅದ್ಯಾರೋ ಬರ್ನಾಡ್ ಷಾ ಬೇರೆ ಇದೇ ಮಾತನ್ನು ಹೇಳಿದ್ದನಂತೆ. ನಾವೂ ಅದನ್ನು ಒಪ್ಪಿಕೊಂಡಾಗಿತ್ತು ಮೇಷ್ಟ್ರ ಸಮ್ಮುಖದಲ್ಲಿ. ಆದರೂ ನಮಗೆ ಕ್ರಿಕೆಟ್ ಎಂಬ ಕಣ್ಣೆದುರಿನ ಖುಷಿಯನ್ನ ತರ್ಕದ ಕಾರಣಕ್ಕೆ ದೂರವಿಡುವಲ್ಲಿ ಅರ್ಥವೇ ಕಾಣಲಿಲ್ಲ. ನಾವು ನಮ್ಮ ಪಾಡಿಗೆ ನಮ್ಮ ಕ್ರಿಕೆಟ್ ಜೊತೆ ಖುಷಿಯಾಗಿದ್ದೆವು. ಆದರೂ ಈ ‘ಕ್ರಿಕೆಟ್ ಮೂರ್ಖರ ಆಟ ಎಂಬ ಮಾತು ಆಗೊಮ್ಮೆ ಈಗೊಮ್ಮೆ ಮನಸ್ಸಿಗೆ ಬಂದು ಹೋಗುತ್ತಿತ್ತು. ಕ್ರಿಕೆಟ್ ಮೂರ್ಖರ ಆಟವೆಂದು ಹಳಿಯುತ್ತಿದ್ದ ಮೇಷ್ಟ್ರು ಇಸ್ಪೀಟು ಆಡುತ್ತಿದ್ದರು. ಇಸ್ಪೀಟು ಆಡುವವರಿಗೆ ಕ್ರಿಕೆಟ್ ಮೂರ್ಖರ ಆಟವೆಂದು ಹೇಳುವಲ್ಲಿ ಯಾವ ಹಕ್ಕಿದೆ ಎಂಬ ಯೋಚನೆ ಆ ವಯಸ್ಸಿಗೆ ಬರುತ್ತಲೇ ಇರಲಿಲ್ಲ. ಮೇಷ್ಟ್ರು ದೊಡ್ಡವರು. ಬರ್ನಾಡ್ ಷಾ ಮೇಷ್ಟ್ರಂಥ ಮೇಷ್ಟರಿಗೆ ಮಾದರಿ ಮನುಷ್ಯ. ಅಂದಮೇಲೆ ಅವನು ಇನ್ನೂ ದೊಡ್ಡವನು. ದೊಡ್ಡವರು ಹೇಳಿದ್ದೆಲ್ಲ ದೊಡ್ಡದೇ ಎಂದು ಆಗ ಚಿಕ್ಕವರಾದ ನಮ್ಮ ಭಾವನೆ.

ಈಗೀಗ ಅರ್ಥವಾಗುತ್ತಿದೆ.ದೊಡ್ಡವರು ಹೇಳಿದ್ದೆಲ್ಲ ದೊಡ್ಡದಲ್ಲ. ದೊಡ್ದವರದ್ದೆಲ್ಲ ದೊಡ್ಡದಲ್ಲ. ದೊಡ್ಡವರು ಹೇಳಿದ್ದಕ್ಕೆಲ್ಲ ಹಿಂದೆ ಮುಂದೆ ನೋಡದೆ ಗೋಣು ಹಾಕುವುದರಲ್ಲಿ ಯಾವ ದೊಡ್ದತನವೂ ಇಲ್ಲ. ಬರ್ನಾಡ್ ಷಾ ದೊಡ್ಡ ನಾಟಕಕಾರ ನಿಜ. ಆದರೆ ಕ್ರಿಕೆಟ್ ಮೂರ್ಖರ ಆಟವೆಂದು ಹೇಳುವಲ್ಲಿ ಆ ದೊಡ್ಡ ಮನುಷ್ಯನಲ್ಲಿ ಯಾವ ದೊಡ್ದತನವೂ ಕಾಣುವುದಿಲ್ಲ. ದೊಡ್ಡ ನಾಟಕಕಾರ ಎಂಬ ದೊಡ್ದಸ್ತಿಕೆಯಲ್ಲಿ ಎಲ್ಲ ವಿಷಯಗಳಲ್ಲಿ ಇದಮಿತ್ಥಂ ಎನುವಂತೆ ಮಾತನಾಡುವಲ್ಲಿ ಆತನಿಗೆ ಯಾವ ಹಕ್ಕೂ ಇಲ್ಲ. ಬರ್ನಾಡ್ ಷಾ ಗ್ರೇಟ್. ಹಾಗೆಯೇ ಅವನ ಕಾಲದಲ್ಲಿ ಆಗಿಹೋದ ಕ್ರಿಕೆಟಿನ ದಂತಕಥೆ ಡಾನ್ ಬ್ರಾಡ್ಮನ್ ಕೂಡ ಅಷ್ಟೇ ಗ್ರೇಟ್. ಇಷ್ಟು ಅರ್ಥವಾಗದ ಮೇಷ್ಟ್ರು ಕೂಡ ಈಗ ಅಷ್ಟೊಂದು ದೊಡ್ಡವರಾಗಿ ಕಾಣುವುದಿಲ್ಲ.

ಕೆಲವು ದೊಡ್ದವರೇ ಹಾಗೆ. ಕೆಲವೊಮ್ಮೆ ಒಂದಿಷ್ಟು ಸಣ್ಣತನಗಳು ಒಟ್ಟಾಗಿ ಸೇರಿ ರಾಶಿಯಾಗಿ ದೊಡ್ಡವರಾದಂತೆ ಕಾಣುತ್ತಾರೆ. ಅತ್ತ ಬರ್ನಾಡ್ ಷಾ ತನ್ನದಲ್ಲದ ಕ್ಷೇತ್ರವಾದ ಕ್ರಿಕೆಟ್ ಬಗ್ಗೆ ಹಗುರವಾಗಿ ಮಾತಾಡಿಬಿಟ್ಟ.ನಮ್ಮ ಮೇಷ್ಟ್ರು ಬರ್ನಾಡ್ ಷಾ ಹೇಳಿದ್ದನೆಂಬ ಕಾರಣಕ್ಕೆ ಹಿಂದೆ ಮುಂದೆ ನೋಡದೆ ತಮಗೆ ಕ್ರಿಕೆಟ್ ಇಷ್ಟವಿಲ್ಲ ಎಂಬ ಕಾರಣಕ್ಕೆ ಸ್ವಂತ ಬುದ್ಧಿಯನ್ನು ಬಿಟ್ಟು ತಾವೂ ಕೂಡ ಕ್ರಿಕೆಟ್ ಮೂರ್ಖರ ಆಟವೆಂದು ಹೇಳಿಬಿಟ್ಟರು. ಬರ್ನಾಡ್ ಷಾ ಬಿಡಿ. ನಾನಂತೂ ಅವನನ್ನ ನೋಡಿಲ್ಲ. ಆದರೆ ಈ ಮೇಷ್ಟರನ್ನ ನೆನಪಿಗೆ ತಂದುಕೊಂಡಾಗ ಕೊಂಚ ಖೇದವಾಗುತ್ತೆ.

ಮೇಷ್ಟರನ್ನು ನೆನಪಿಗೆ ತಂದುಕೊಂಡಾಗ ಖೇದವಾಗಲಿಕ್ಕೆ ಕಾರಣವಿದೆ. ಇಲ್ಲಿ ಮೇಷ್ಟ್ರು ಕೇವಲ ಮೇಷ್ಟರಲ್ಲ. ಅವರು ನಮ್ಮೆಲ್ಲರ ಪ್ರತಿನಿಧಿ. ನಾವು ಆರಾಧನೆಗೆ ,ಭಾವುಕತೆಗೆ ಬೀಳಬೇಕು ನಿಜ. ತೀರಾ ಅತಿಯಾದ ತರ್ಕ ಒಳ್ಳೆಯದಲ್ಲ ಎಂಬುದೂ ನಿಜ. ಆದರೆ ಯಾರೋ ಹೇಳಿದರು ಎಂಬ ಕಾರಣಕ್ಕೆ ಯಾವ ವಿಚಾರಗಳೂ ನಮ್ಮದಾಗಬಾರದು. ನಮ್ಮ ಮಾತುಗಳಿಗೆ ನಮ್ಮ ಅನುಭವಗಳೇ ಮೊದಲಿಗೆ ಆಧಾರವಾಗಬೇಕು. ಯಾರೋ ಹೇಳಿದ ವಿಚಾರ ನಮ್ಮ ಅನುಭವದಲ್ಲಿ ಸೋಸಿ ತಿಳಿಯಾಗಿ ,ಆಮೇಲೆ ಉಳಿದದ್ದು ನಮ್ಮದಾಗಬೇಕು. ಇಲ್ಲದಿದ್ದರೆ ಈ ಇಸ್ಪೀಟು ಆಡುವ ಮೇಷ್ಟ್ರು ಕ್ರಿಕೆಟನ್ನು ಮೂರ್ಖರ ಆಟವೆಂದು ನಮಗೆ ಉಪದೇಶ ಮಾಡಿದಂತೆ ಆಗುತ್ತೆ.

ದೊಡ್ಡವರು ಸರ್ವಜ್ಞರು ಎಂಬ ಭಾವನೆ ನಮ್ಮಲ್ಲಿದೆ. ಅತ್ತ ಸರ್ವಜ್ಞನಲ್ಲದಿದ್ದರೂ ಸರ್ವ ವ್ಯವಹಾರಗಳಲ್ಲಿ ಮೂಗು ತೂರಿಸದೆ ಕುಳಿತರೆ ತಮ್ಮ ದೊಡ್ಡಸ್ತಿಕೆಗೆ ಕುಂದು, ಆ ಕಾರಣಕ್ಕೆ ಮೂಗು ತೂರಿಸುವುದು ದೊಡ್ಡವರಾಗಿ ಹುಟ್ಟಿದ ತಮ್ಮ ಆಜನ್ಮಸಿದ್ಧ ಹಕ್ಕು ಎಂಬ ಅನಾದಿ ನಂಬಿಕೆ ದೊಡ್ದವರಲ್ಲಿದೆ. ದೊಡ್ಡವರೆಂಬ ನಮ್ಮ ನಂಬಿಕೆ ಗೌರವವಾಗಬೇಕೆ ಹೊರತು,ನಮ್ಮ ಸ್ವಂತ ಬುದ್ಧಿಯನ್ನ ಆಪೋಶನ ತೆಗೆದುಕೊಳ್ಳುವ ಜೀತವಾಗಬಾರದು. ಸ್ವಂತ ಬುದ್ಧಿಯನ್ನ ಬಿಟ್ಟು ಬದುಕುವುದಕ್ಕಿಂತ ದೊಡ್ಡ ಜೀತವಾದರೂ ಎಲ್ಲಿದೆ ?

ಈ ದೊಡ್ಡವರೆಂಬ ದೊಡ್ಡವರಿಂದ ಈ ಜಗತ್ತಿಗೆ ಎಷ್ಟು ಮಾರ್ಗದರ್ಶನ ಸಿಕ್ಕಿದೆಯೋ, ಅಷ್ಟೇ ದಾರಿ ತಪ್ಪಿಸುವ ಕೆಲಸವೂ ಆಗಿ ಹೋಗಿದೆ ಇತಿಹಾಸದಲ್ಲಿ . ಈಗ ನಮ್ಮ ಸುತ್ತಲಿರುವ ದೊಡ್ಡವರು ಯಾರ್ಯಾರು ಎಂದು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಧಾರ್ಮಿಕ ಮುಖಂಡರು ,ರಾಜಕೀಯದವರು, ನೂರಾರು ತತ್ವ ಸಿದ್ಧಾಂತಗಳ ಲೆಕ್ಕದಲ್ಲಿ ಹಂಚಿಹೋದ ಸಾಹಿತಿಗಳು, ಮಾಧ್ಯಮದವರು. ಇವರೆಲ್ಲರನ್ನೂ ನಾವು ಎತ್ತರದ ದೊಡ್ಡ ಸ್ಥಾನದಲ್ಲಿ ಇಟ್ಟಿದ್ದೇವೆ. ಇವರೆಲ್ಲ ನಮ್ಮನ್ನು ಮುನ್ನಡೆಸಬೇಕಾದವರು. ಆದರೆ ಈಗ ಒಬ್ಬರನ್ನೂ ನೆಚ್ಚಿಕೊಳ್ಳುವಂತಿಲ್ಲ .ಅವರಿಗೆಲ್ಲ ಅವರವರದೇ ಆದ ಸ್ವಂತ ಹಿತಾಸಕ್ತಿಗಳಿವೆ, ತಮ್ಮದೇ ಸರಿಯೆಂಬ ಒಂದಿಷ್ಟು ಹುಂಬತನಗಳಿವೆ. ಅವರ ಸುತ್ತ ಅವರೇ ಹಣೆದುಕೊಂಡು ಕುಳಿತ ಒಣ ಪ್ರತಿಷ್ಠೆಯ ಬೇಲಿಯಿದೆ.ಗೊಂದಲ, ಒಳಜಗಳ . ಹೀಗೆ ಏನೇನು ಇರಬಾರದಿತ್ತೋ ಅದೆಲ್ಲವೂ ಲೆಕ್ಕತಪ್ಪಿದೆ.

ಅವರು ನಮ್ಮನ್ನು ಮುನ್ನಡೆಸಲಿ ಎಂಬುದು ನಮ್ಮ ಆಶಯ .ಅವರ ಮುಂದಾಳತ್ವದಲ್ಲಿ ತೀರ ನಾವು ದಾರಿ ತಪ್ಪದೇ ಉಳಿದ ಶೇಷ ಸದ್ಯದ ನಮ್ಮ ಪುಣ್ಯ. ನಾವೀಗ ಜಾಣರಾಗಬೇಕು. ಸುತ್ತ ಜಗತ್ತಿನ ಸಂತೆಯಲ್ಲಿ ಅಡ್ಡಾಡಬೇಕು. ಸಕಲ ವ್ಯವಹಾರಗಳನ್ನೂ ಗಮನವಿಟ್ಟು ನೋಡಬೇಕು. ವಾಪಾಸು ಮರಳಿ ಬಂದು ತಣ್ಣಗೆ ಕುಳಿತು ಯೋಚನೆಗೆ ಬೀಳಬೇಕು. ನಮ್ಮದೇ ಆದ ಒಳ ದೃಷ್ಟಿಯಲ್ಲಿ ಹೊರಗೆ ಕಂಡ ಸಂಗತಿಗಳನ್ನು ಮತ್ತೆ ಹೊಸದಾಗಿ ಕಾಣಬೇಕು. ನಮಗೆ ನಾವೇ ಗುರುವಾಗಬೇಕು. ಈ ದೊಡ್ಡವರನ್ನ ಹಿಂಬಾಲಿಸಿ ಹೊರಟರೆ ದಾರಿ ತಪ್ಪುವುದು ಹೇಗೂ ಇದ್ದೇ ಇದೆ. ನಮ್ಮದೇ ದಾರಿಯಲ್ಲಿ ನಿಜವಾದ ಗುರಿ ಸಿಕ್ಕರೂ ಸಿಗಬಹುದು. ಇಲ್ಲವಾದರೆ ಕೊನೆಪಕ್ಷ ಸ್ವಂತ ದಾರಿಯಲ್ಲಿ ದಾರಿ ತಪ್ಪಿದ ತೃಪ್ತಿಯಾದರೂ ಉಳಿಯುತ್ತೆ. ದಾರಿ ತಪ್ಪಿಸಿಬಿಟ್ಟರು ಎಂದು ಯಾರ್ಯಾರನ್ನೋ ಹಳಿಯುತ್ತಾ ಅಲೆಯುವ ವ್ಯರ್ಥಾಲಾಪದ ದುರಂತವಾದರೂ ತಪ್ಪುತ್ತೆ. ಅಷ್ಟೇ.