Friday, June 5, 2009

ಚಂದ್ರಿ

ಇವಳು ಚಂದ್ರಿ
ಚಂದ್ರಿ ಬಾಳು ಎಲ್ಲರಂತಲ್ಲ.
ಯಾರದೋ ತೊಗಲ ತೆವಲಿಗೆ
ಅನಿವಾರ್ಯ ಸಂಗಮಕ್ಕೆ
ಹಾರೈಕೆಯಿರದ ಅವ್ವನ ನಿರ್ಭಾವುಕ
ಒಡಲಲ್ಲಿ
ಹತಭಾಗ್ಯ ಪಿಂಡವಾಗಿ
ಈ ಜಗಕೆ ವಿಸರ್ಜನೆಯಾದವಳು ಚಂದ್ರಿ.
ಹುಟ್ಟೇ ಸೋಲಾದವಳು ಚಂದ್ರಿ .
ಅಪ್ಪ ಯಾರೆಂದು ತಿಳಿದಿಲ್ಲ.
ಅವ್ವನಿಗೇ ಅದು ಬೇಕಿರಲಿಲ್ಲ.
ಮಸಕು ಮಸಕು ಅರೆಜೀರ್ಣ
ಗುಡಿಸಲ ನಿರ್ವಿಕಾರ ಕತ್ತಲಲ್ಲಿ
ಯಾರದೋ ಅಪರಿಚಿತ ಛಾಯೆ,
ದಿನಕೆ ಹಲವಾರು ಹೊಸ್ತಿಲ ದಾಟೋ
ಅಪ್ಪನಂಥಹ ಆಕೃತಿಗಳು,
ಬಂದು ಹೋಗುವವರೇ ಬಂಧು ಬಳಗ.
ಎಲ್ಲವ ಅಚ್ಚರಿ ಕಂಗಳಲಿ
ನೋಡಿ ಬೆಳೆದವಳು,
ಅದುವೆ ಬಾಳೆಂದುಕೊಂಡಳು ಚಂದ್ರಿ.

ವರುಷ ಹದಿನಾರಕ್ಕೆ ಚಂದ್ರಿ ತಬ್ಬಲಿ.
ಅರಿಯದ ವ್ಯಾಧಿಗೆ ಅವ್ವ ತುತ್ತಾದಳು.
ಅವ್ವನ ಬಾಳೀಗ ಚಂದ್ರಿಯದು!
ಅವ್ವನ ಪಾಡೇ ಈಗ ಇವಳದು.
ಚಂದ್ರಿಗೀಗ ಇಳಿಸಂಜೆ.
ಸುಕ್ಕುಮುಕ್ಕು ದೇಹ,ಇಂಗಿದೆದೆ.
ಭಾವವೇ ಇರದ ನಿರ್ಜೀವ ಶೂನ್ಯ ನೋಟ;
ಆಕೆಗೀಗ ಅವ್ವನಂಥದೇ
ಎಂಥದೋ ಕಾಯಿಲೆ.
ಸಾವೊಂದೇ ಅವಳಿಗೀಗ ಸಂಜೀವಿನಿ.
ಹುಟ್ಟೇ ಸೋಲಾದ ಚಂದ್ರಿಗೆ
ಸಾವು ಗೆಲುವಾದೀತೆ?...........

2 comments:

sunaath said...

ಭಾವನೆಗೆ ತಕ್ಕ ಪದಪುಂಜಗಳನ್ನು ನಿರ್ಮಿಸುವ ಸಾಮರ್ಥ್ಯ ನಿಮಗಿದೆ. ಉದಾಹರಣೆಗೆ: ಹತಭಾಗ್ಯ ಪಿಂಡ, ನಿರ್ವಿಕಾರ ಕತ್ತಲು ಇತ್ಯಾದಿ.
ಕವನರಚನೆಯಲ್ಲಿ ನೀವು ಯಶಸ್ಸನ್ನು ಕಾಣುವಿರಿ.

ಶಾಂತಲಾ ಭಂಡಿ said...

ಗೌತಮ...
ಸಾಲುಗಳಲ್ಲಿನ ಗಡಸುತನ ಇಷ್ಟವಾಯಿತು. ಇಂಥ ಸಾಲುಗಳೊಳಗೆ ಗಟ್ಟಿತನವಿದ್ದಾಗಲೇ ಅವಕ್ಕೊಂದು ಅರ್ಥ.
ಗಟ್ಟಿಯಾಗಿ ಕೂಗಿ ಹೇಳಬೇಕಾದಂಥ ಸಾಲುಗಳೂ ನಾ ಬರೆದಾಗ ಮೆತ್ತಗೇ ಇರುತ್ತವೆ, ಇಂಥ ಗಟ್ಟಿತನವನ್ನು ಸಾಲುಗಳೊಳಗೆ ತುಂಬಲು ನನ್ನಿಂದ ಸಾಧ್ಯವಾಗುವುದೇ ಇಲ್ಲ.

ಇಂಥದೇ ಜನರ ಬದುಕ ಬವಣೆಯ ನೆನೆದು ನನ್ನ ಬ್ಲಾಗಲ್ಲಿ ಒಂದು ಬರಹ ಬರೆದಿದ್ದೆ. ಆದರಲ್ಲಿ ಆ ಹೆಣ್ಣಿಗೆ ಹೆಸರಿಲ್ಲ ಮತ್ತು ಅವಳು ಚೆಂದ್ರಿಯಂಥದೇ ಇನ್ನೊಂದು ಮುಖದ ಹೆಣ್ಣು. ಬಿಡುವಿದ್ದಾಗ ಓದು, ಅಂದರೆ ಸಧ್ಯಕ್ಕಲ್ಲ,ಈ ತಿಂಗಳ ಕೊನೆಯಲ್ಲಿ ಬರಲಿರುವ ಎಗ್ಸಾಮ್ಸ್ ಎಲ್ಲ ಮುಗಿಯಲಿ.